Asianet Suvarna News Asianet Suvarna News

ಸ್ಯಾಂಡಲ್‌ವುಡ್‌ನಲ್ಲಿ ಪ್ರತಿಭಾವಂತ ನಾಯಕಿಯರು ಯಾರಿದ್ದಾರೆ?: ಸಿಕ್ಕಿದೆ ಉತ್ತರ

ಒಂದು ಕಾಲದಲ್ಲಿ ಬೆಳ್ಳೆ ತೆರೆ ಮೇಲೆ ನಟಿಯರು ತಮ್ಮ ಅಮೋಘ ಅಭಿನಯನದಿಂದಲೇ ವಿಶೇಷ ಛಾಪು ಮೂಡಿಸಿದ್ದರು. ಆದರೀಗ ಎಂಥ ಪಾತ್ರವನ್ನು ಬೇಕಾದರೂ ನಿಭಾಯಿಸಬಲ್ಲ ನಟಿಯರು ಯಾರಿದ್ದಾರೆ ಎಂಬುದಕ್ಕೆ ಕನ್ನಡದ ಖ್ಯಾತ ಬರಹಗಾರ ಜೋಗಿ ಉತ್ತರಿಸಿದ್ದಾರೆ. 

Talented sandalwood actress Samyukta Horanadu Chaitra Achar Rukmini vasanth
Author
First Published Aug 31, 2023, 2:17 PM IST

- ಜೋಗಿ

ಕನ್ನಡದಲ್ಲಿ ಈಗ ಪ್ರತಿಭಾವಂತ ನಾಯಕಿಯರು ಯಾರಿದ್ದಾರೆ ಅನ್ನುವ ಪ್ರಶ್ನೆ ನಾವೆಲ್ಲ ಸೇರಿ ಮಾತಾಡುವಾಗ ಆಗಾಗ ಬರುತ್ತಿರುತ್ತದೆ. ಈ ಕಾಲದ ಹೆಚ್ಚಿನ ಸಿನಿಮಾಗಳನ್ನು ನೋಡದ ನನ್ನ ತಲೆಮಾರಿನವರು, ಈಗ ಅಂಥ ಟ್ಯಾಲೆಂಟೆಡ್ ಯಾರೂ ಇಲ್ರೀ. ಅದೆಲ್ಲ ಆ ಕಾಲಕ್ಕೆ ಆಗಿಹೋಯ್ತು. ಎಲ್. ವಿ. ಶಾರದಾ, ಆರತಿ, ಜಯಮಾಲಾ, ಜಯಂತಿ, ಕಲ್ಪನಾ, ಶ್ರುತಿ, ತಾರಾ, ಸುಧಾರಾಣಿ, ರಾಧಿಕಾ ಪಂಡಿತ್… ಹೀಗೆ ಹತ್ತಾರು ಹೆಸರಿನ ನಂತರ ಮುಂದೆ ಯಾರು ಎಂದು ಲೆಕ್ಕ ಹಾಕಿದರೆ ನಿರಾಶೆಯಾಗುತ್ತಿತ್ತು.

ಕಳೆದ ಎರಡು ವಾರ ಬ್ಯಾಕ್ ಟು ಬ್ಯಾಕ್ ನೋಡಿದ ಎರಡು ಸಿನಿಮಾಗಳಲ್ಲಿ ಮೂವರು ಉಜ್ವಲರಾಗಿ ಕಂಡರು. ಸಂಯುಕ್ತಾ ಹೊರನಾಡು ಬಗ್ಗೆ ನನಗೆ ಮೊದಲೇ ಗೊತ್ತಿತ್ತು. ಅವರ ಅಭಿನಯ ನೋಡಿದ್ದೆ. ನನ್ನನ್ನು ಚಕಿತಗೊಳಿಸಿದ್ದು ಚೈತ್ರಾ ಜೆ ಆಚಾರ್ ಮತ್ತು ರುಕ್ಮಿಣಿ ವಸಂತ್. 

ಟೋಬಿ ಚಿತ್ರದಲ್ಲಿ ಅಷ್ಟೇನೂ ಸ್ಟೀರಿಯೋಟೈಪ್ ಅಲ್ಲದ ಪಾತ್ರದಲ್ಲಿ ಚೈತ್ರಾ ಅಸಾಧಾರಣ ಪ್ರತಿಭೆ ತೋರಿದ್ದರು. ಹುಮ್ಮಸ್ಸು, ಹತಾಶೆ, ವಾತ್ಸಲ್ಯ ಮತ್ತು ದಿಗ್ಭ್ರಮೆ ತುಂಬಿದ ಹೆಣ್ಣಾಗಿ ಅವರು ಜೀವಿಸಿದ್ದನ್ನು ಮರೆಯಲಾರೆ. 

ಸಪ್ತಸಾಗರದಾಚೆ ಎಲ್ಲೋ ಚಿತ್ರದ ಪ್ರಿಯಾಳ ಪಾತ್ರವನ್ನು ರುಕ್ಮಿಣಿ ನಿಭಾಯಿಸಿದ ರೀತಿಗೆ ಬೆರಗಾಗಿ ಕೂತಿದ್ದೇನೆ. ಅದು ಕೂಡ ಕಾಂಪ್ಲಿಕೇಟೆಡ್ ಪಾತ್ರ. ಭರವಸೆ ಮತ್ತು ನಿರಾಸೆ, ಕನಸು ನಿಧಾನವಾಗಿ ಕರಗಿಹೋಗುವ ಬದುಕು, ಉತ್ಕಟ ಪ್ರೇಮವನ್ನು ಉಳಿಸಿಕೊಳ್ಳುವ ದಾರಿ ಗೊತ್ತಿರದ ಮಿಕ್ಕೆಲ್ಲ ವಿಚಾರಗಳಲ್ಲೂ ಸ್ಪಷ್ಟತೆ ಉಳ್ಳ ಹೆಣ್ಣು ಮಗಳಾಗಿ ಅವರ ಅಭಿನಯ ಮಾತುಗಳಿಗೆ ಮೀರಿದ್ದು. ಕಾಯುವ ಕಣ್ಣುಗಳಲ್ಲಿ ನಾಳೆಯ ಶೂನ್ಯವನ್ನು ತೋರಬಲ್ಲವರು ರುಕ್ಮಿಣಿ. ಈ ಇಬ್ಬರು ಪ್ರತಿಭಾವಂತರಿಗೆ ಅಭಿನಂದನೆ. ಇವರಿಗೆ ಈಗ ಬೇಕಾಗಿರುವುದು ಅವರ ಪ್ರತಿಭೆಗೆ ತಕ್ಕ ರಂಗ, ಕತೆ ಮತ್ತು ಅವರನ್ನು ಸಮರ್ಥವಾಗಿ ಪ್ರತಿಫಲಿಸಬಲ್ಲ ಕನ್ನಡಿಯಂಥ ಚಿತ್ರ.

10 ವರ್ಷ ಆದ್ಮೇಲೆ ಈಕೆ ಸಿಕ್ಕಿರುವುದು ನನ್ನ ಅದೃಷ್ಟ: ಲವ್‌ ಬಗ್ಗೆ ಹಿಂಟ್ ಕೊಟ್ಟ ರಕ್ಷಿತ್ ಶೆಟ್ಟಿ?

ಸ್ತ್ರೀ ಪ್ರಧಾನ ಚಿತ್ರಗಳೇ ಈಗ ಟ್ರೆಂಡ್:
ಸ್ತ್ರೀಪ್ರಧಾನ ಚಿತ್ರಗಳು ಈಗಿನ ಟ್ರೆಂಡ್ ಅಲ್ಲ ಅನ್ನುತ್ತಾರೆ. ಮಿಮಿ ಚಿತ್ರಕ್ಕೆ ಕೃತಿ ಸನೂನ್ ಮತ್ತು ಗಂಗೂಬಾಯಿ ಕಥಿಯಾವಾಡಿ ಚಿತ್ರಕ್ಕೆ ಅಲಿಯಾ ಭಟ್‌ ರಾಷ್ಟ್ರಪ್ರಶಸ್ತಿ ಬಂದಾಗೊಮ್ಮೆ ಅಂಥ ಸಿನಿಮಾಗಳೂ ಇವೆಯಲ್ಲ ಅನ್ನೋದು ನೆನಪಾಗುತ್ತದೆ. ನಮ್ಮಲ್ಲಿ ನಾಯಕಿಯರಿಂದ  ಬಾಕ್ಸ್ ಆಫೀಸು ತುಂಬುವುದಿಲ್ಲ ಎಂಬ ಮೂಢನಂಬಿಕೆಯಿದೆ. ಅದನ್ನು ಅನೇಕರು ಸುಳ್ಳು ಮಾಡಿದ್ದಾರೆ. ಹಿಂದೆಲ್ಲ ನಟಿ ಆರತಿಯ ಡೇಟ್ ನೋಡಿಕೊಂಡು ಅದಕ್ಕೆ ತಕ್ಕಂತೆ ಹೀರೋ ಡೇಟ್ ಬುಕ್ ಮಾಡುತ್ತಿದ್ದರು ಎಂಬ ಕತೆಗಳನ್ನೂ ಕೇಳಿದವರಿಗೆ, ಒಂದು ಕಾಲದಲ್ಲಿ ಮಹಿಳಾ ಪ್ರಧಾನ ಚಿತ್ರಗಳು ಕನ್ನಡದಲ್ಲಿ ಚೆನ್ನಾಗಿ ಓಡುತ್ತಿದ್ದವು ಎಂಬುದು ನೆನಪಿರುತ್ತದೆ. ಮಾಲಾಶ್ರೀ ಯುಗವನ್ನೂ ಚಿತ್ರರಂಗ ಮರೆಯುವಂತಿಲ್ಲ.

ಇವತ್ತಿನ ಮಹಿಳಾ ಪ್ರಧಾನ ಸಿನಿಮಾಗಳ ಕಥಾವಸ್ತು ಬೇರೆ. ಅವರನ್ನು ಕರಿಬೇವು, ಕೊತ್ತಂಬರಿ ಸೊಪ್ಪಿನ ಹಾಗೆ ಬಳಸುತ್ತಾರೆ ಎಂಬ ದೂರು ತುಂಬ ಹಳೆಯದಲ್ಲ. ಈಗಂತೂ ಕಲಾತ್ಮಕ ಚಿತ್ರ ಮಾಡುವವರು ಮಾತ್ರ ಮಹಿಳಾ ಪ್ರಧಾನ ಕತೆ ಕೈಗೆತ್ತಿಕೊಳ್ಳುತ್ತಾರೆ. ಸೂಪರ್ ಸ್ಟಾರ್ ಸಿನಿಮಾಗಳಲ್ಲಿ ಸ್ತ್ರೀ ಪಾತ್ರಗಳ ಮಹತ್ವ ಹಿಂದೆ ಇದ್ದದ್ದಕ್ಕಿಂತ ಕಡಿಮೆಯಾಗಿದೆ. ಹೀರೋ ಸಾವಿರಾರು  ಮಂದಿಯನ್ನು ಹೊಡೆದಾಗ ಚಪ್ಪಾಳೆ ತಟ್ಟುವುದಕ್ಕಷ್ಟೇ ಅದು ಸೀಮಿತವಾದಂತಿದೆ.

ರಕ್ಷಿತ್‌ ಶೆಟ್ಟಿಯಂತ ಹುಡುಗ ಸಿಕ್ಕಿದ್ರೆ, ಮದುವೆಯಾಗ್ತೀನಿ ಎಂದ ನಟಿ !

ಇವೆಲ್ಲದರ ನಡುವೆಯೂ ಛಲಬಿಡದೇ ಒಳ್ಳೆಯ ಪಾತ್ರಗಳನ್ನು ಹುಡುಕಾಡುತ್ತಾ, ಸಿಕ್ಕ ಪಾತ್ರಗಳಲ್ಲಿ ತಮ್ಮ ಪ್ರತಿಭೆ ತೋರುತ್ತಾ, ಅವಕಾಶಗಳಿಗೆ ಕಾಯುತ್ತಾ ಇರುವ ಅನೇಕ ಪ್ರತಿಭಾವಂತರಿದ್ದಾರೆ. ಸಪ್ತಮಿ ಗೌಡ, ಆಶಿಕಾ ರಂಗನಾಥ್, ಅದಿತಿ ಪ್ರಭುದೇವ, ಸಂಗೀತಾ ಶೃಂಗೇರಿ, ಅಮೃತಾ ಅಯ್ಯಂಗಾರ್, ಆರೋಹಿ ನಾರಾಯಣ್, ಅರ್ಚನಾ ಜೋಯಿಸ್ - ಮುಂತಾದವರು ತಮಗೆ ಸಿಕ್ಕಿದ ಅವಕಾಶದಲ್ಲಿ ತಮ್ಮ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಸಾಬೀತು ಮಾಡಿದ್ದಾರೆ. 

ಇದನ್ನೆಲ್ಲ, ಟೋಬಿ ಮತ್ತು ಸಪ್ತಸಾಗರದಾಚೆ ಎಲ್ಲೋ ಚಿತ್ರದ ಪಾತ್ರಗಳು ನೆನಪಿಸಿದವು. ಅಂದಹಾಗೆ ಇದು ನಟಿಯರ ಸಮಗ್ರ ಪಟ್ಟಿ ಅಲ್ಲ. ಬರೆಯುತ್ತಾ ಹೋದ ಹಾಗೆ ನೆನಪಲ್ಲಿ ಮೂಡಿದವರ ಹೆಸರುಗಳನ್ನು ಮಾತ್ರ ಬರೆದಿದ್ದೇನೆ. ನನ್ನ ಕಣ್ತಪ್ಪಿಹೋದ, ನಾನು ನೋಡದೇ ಉಳಿದ ಚಿತ್ರಗಳಲ್ಲೂ ಪ್ರತಿಭಾವಂತರು ಇದ್ದಿರಬಹುದು.

Follow Us:
Download App:
  • android
  • ios