'ನಾ ನಿನ್ನ ಬಿಡಲಾರೆ' ಸೀರಿಯಲ್‌ನಲ್ಲಿ ಎತ್ತರದ ಕಟ್ಟಡದಿಂದ ಬಿದ್ದ ಮಾಯಾ ಪಾತ್ರಕ್ಕೆ ಏನೂ ಆಗುವುದಿಲ್ಲ. ಅಷ್ಟೇ ಅಲ್ಲದೆ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವಾಗ ಫುಲ್ ಮೇಕಪ್‌ನಲ್ಲಿ ಕಾಣಿಸಿಕೊಂಡು ನೆಟ್ಟಿಗರಿಂದ ಸಖತ್ ಟ್ರೋಲ್ ಆಗುತ್ತಿದ್ದಾಳೆ.
ಸೀರಿಯಲ್ಗಳೆಂದರೆ ಹಾಗೇ ಅಲ್ವಾ? ಕೆಲವೊಮ್ಮೆ ತೀರಾ ಹಾಸ್ಯಾಸ್ಪದ ಎನ್ನಿಸುವ ಸನ್ನಿವೇಶಗಳು ನಡೆಯುತ್ತವೆ. ಎಷ್ಟೋ ಎತ್ತರದ ಕಟ್ಟಡದಿಂದ ಬಿದ್ದರೂ ಸಾಯುವುದಿಲ್ಲ, ಇರಲಿ ಬಿಡಿ ಸಾಯಲೇಬೇಕೆಂದೇನೂ ಇಲ್ಲ. ಕೊನೆಯ ಪಕ್ಷ ಕೈಕಾಲುನೂ ಮುರಿಯಲ್ಲ. ಅದೂ ಬಿಡಿ. ಅದೃಷ್ಟ ಇದ್ದರೆ ಅದು ಕೂಡ ಆಗಬಹುದು. ಆದರೆ ತಲೆಗೆ ಚಿಕ್ಕ ಪಟ್ಟಿ ಸುತ್ತಿ ಕಳಿಸ್ತಾರೆ. ಹೋಗ್ಲಿ ಬಿಡಿ, ಅದನ್ನೂ ಅಡ್ಜಸ್ಟ್ ಮಾಡ್ಕೋಳೋನ ಎಂದ್ರೆ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬರುವಾಗ ಮುಖದ ತುಂಬಾ ಮೇಕಪ್ ಮಾಡಿ ಕಳುಹಿಸುವ ಆಸ್ಪತ್ರೆಗಳು ಎಲ್ಲಿವೆ? ಅದರ ಅಡ್ರೆಸ್ ಕೊಡಿ ಪ್ಲೀಸ್ ಎಂದು ನೆಟ್ಟಿಗರು ಕೇಳ್ತಿದ್ದಾರೆ.
ಕ್ಯೂಟ್ ದೆವ್ವ
ಇದು ನಾ ನಿನ್ನ ಬಿಡಲಾರೆ (Naa Ninna Bidalaare Serial) ಸೀರಿಯಲ್ ನೋಡಿ ಕೇಳ್ತಿರೋ ಪ್ರಶ್ನೆ. ಇದರ ಕಥೆ ಮಾಟ, ಮಂತ್ರ, ಪುನಜ್ಮನ್ಯ, ದೆವ್ವ, ಪ್ರೇತದ್ದು. ಆದರೆ ಅದರಲ್ಲಿಯೂ ಒಂಥರಾ ರೋಮಾಂಚನ ಇರುವ ಕಾರಣ ಈ ಸೀರಿಯಲ್ ಅನ್ನು ವೀಕ್ಷಕರು ಇಷ್ಟಪಟ್ಟು ನೋಡುತ್ತಿದ್ದಾರೆ. ಇದರಲ್ಲಿರುವ ಅಂಬಿಕಾ ಎನ್ನುವ ದೆವ್ವ ಕ್ಯೂಟ್ ಆಗಿದ್ದು, ತುಂಬಾ ಒಳ್ಳೆಯ ದೆವ್ವ ಆಗಿರೋ ಕಾರಣ ವೀಕ್ಷಕರಿಗೆ ಈ ಸೀರಿಯಲ್ ಸಕತ್ ಇಷ್ಟ.
ದುರ್ಗಾ ಪ್ರಶ್ನೆಗೆ ತತ್ತರ
ಇದೀಗ ಈ ಸೀರಿಯಲ್‌ನಲ್ಲಿ ಅಂಬಿಕಾ ಸಾವಿಗೆ ಮಾಯಾಳೇ ಕಾರಣ ಎನ್ನುವುದು ದುರ್ಗಾಗೆ ಬಹುತೇಕ ಖಚಿತವಾಗಿದೆ. ಅದನ್ನೇ ಪ್ರಶ್ನೆ ಮಾಡಿದ್ದಾಗ, ಇನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದುಕೊಂಡ ಮಾಯಾ ಎತ್ತರದ ಕಟ್ಟಡದಿಂದ ಬೀಳುತ್ತಾಳೆ. ಆದರೆ ಅವಳಿಗೆ ಚೂರುಪಾರು ಗಾಯ ಆಗಿದೆ ಸೀರಿಯಲ್‌ನಲ್ಲಿ. ಆಸ್ಪತ್ರೆಗೆ ಅಡ್ಮಿಟ್ ಮಾಡಿ ಈಗ ಡಿಸ್ಚಾರ್ಜ್ ಮಾಡಲಾಗಿದೆ.
ಮಾಯಾಳ ಮೇಲೆ ನೆಟ್ಟಿಗರ ಕಣ್ಣು
ಡಿಸ್ಚಾರ್ಜ್ ಮಾಡಿ ಮನೆಗೆ ಬಂದ ಮಾಯಾಳ ಮೇಲೆ ನೆಟ್ಟಿಗರ ಕಣ್ಣು ನೆಟ್ಟಿದೆ. ಇದಕ್ಕೆ ಕಾರಣ, ಮಾಯಾ ಮಾಡಿಕೊಂಡಿರುವ ಮೇಕಪ್. ತುಟಿಗೆ ಬಳಿದುಕೊಂಡಿರುವ ಲಿಪ್ಸ್ಟಿಕ್, ಐಲೈನರ್, ಐಷ್ಯಾಡೋ... ಹೀಗೆ ಫ್ರೆಷ್ ಆಗಿ ಮೇಕಪ್ ಮಾಡಿಕೊಂಡು ಶೂಟಿಂಗ್ಗೆ ಬಂದಿರೋ ಪೇಷಂಟ್ ಮಾಯಾಳ ಕ್ಯಾರೆಕ್ಟರ್ ಸಕತ್ ಟ್ರೋಲ್ ಆಗ್ತಿದೆ. ಈ ಪರಿ ಮೇಕಪ್ ಮಾಡಿ ಡಿಸ್ಚಾರ್ಜ್ ಮಾಡುವ ಆಸ್ಪತ್ರೆಯ ವಿಳಾಸವನ್ನು ಕೇಳ್ತಿದ್ದಾರೆ ನೆಟ್ಟಿಗರು. ಅಷ್ಟಕ್ಕೂ, ಸೀರಿಯಲ್ಗಳಲ್ಲಿ ಇವೆಲ್ಲಾ ಮಾಮೂಲೇ ಬಿಡಿ. ನಟ-ನಟರಿಗೆ ಮೇಕಪ್ಪೇ ಬಂಡವಾಳ. ಕೆಲವು ಸಿನಿಮಾ, ಸೀರಿಯಲ್ ನಟಿಯರನ್ನು ಮೇಕಪ್ ರಹಿತವಾಗಿ ನೋಡಿದರೆ ಅವರ ಅಭಿಮಾನಿಗಳಿಗೆ ಶಾಕ್ ಆಗುವುದೂ ಉಂಟು. ಆದ್ದರಿಂದ ಅವರ ಜೀವನವೇ ಮೇಕಪ್ ಮೇಲೆ ನಿಂತಿದೆ. ಹಾಗೆಂದು ತೀರಾ ಇಂಥ ದೃಶ್ಯಗಳಲ್ಲಿಯೂ ವಿಪರೀತ ಮೇಕಪ್ ಮಾಡಿದರೆ ನೈಜತೆ ಹೊರಟುಹೋಗುತ್ತದೆ ಎನ್ನುವುದು ಸೀರಿಯಲ್ ಪ್ರೇಮಿಗಳ ಕಳಕಳಿ! ಅದನ್ನು ಟ್ರೋಲ್ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.


