ಕನ್ನಡದ ದಿಗ್ಗಜ ನಟರಾದ ಸುದೀಪ್, ಯಶ್ ಎಲ್ಲರೂ ಮುಂದಿನ ಚಿತ್ರ ಯಾವುದು, ಯಾರು ಡೈರೆಕ್ಟ್ ಮಾಡುತ್ತಾರೆ ಎಂಬುವುದು ಸ್ಪಷ್ಟವಾಗಿಲ್ಲ. ಕನ್ನಡದ ಸ್ಟಾರ್ ನಟರ ಚಿತ್ರಕ್ಕೆ ನಿರ್ದೇಶಕರು ಯಾರೆಂಬ ಸಸ್ಪೆನ್ಸ್ ಇದೆ. ಹೀಗ್ಯಾಕೆ? 

ಕನ್ನಡದ ಸೂಪರ್ ಸ್ಟಾರ್ ಯಶ್ ಮುಂದಿನ ಸಿನಿಮಾದ ನಿರ್ದೇಶಕರು ಯಾರು?
ಗೊತ್ತಿಲ್ಲ.
ಗೀತು ಮೋಹನದಾಸ್ ಹೆಸರು ಬರುತ್ತಿದೆಯಾದರೂ ಅವರು ಕನ್ನಡದವರಲ್ಲ.
ಸುದೀಪ್ ಮುಂದಿನ ಚಿತ್ರದ ನಿರ್ದೇಶನ ಯಾರದು?
ಈ ಪ್ರಶ್ನೆಗೆ ಉತ್ತರ. ವಿಜಯ್ ಕಾರ್ತಿಕೇಯ, ತಮಿಳಿನವರು.
ಈ ಎರಡು ಪ್ರಶ್ನೆಯ ನಂತರ ನೀವು ಒಮ್ಮೆ ನಮ್ಮ ಕನ್ನಡದ ಸ್ಟಾರ್‌ಗಳ ಹೆಸರನ್ನೂ ಆ ಸ್ಟಾರ್‌ಗಳಿಗೆ ಸಿನಿಮಾ ನಿರ್ದೇಶನ ಮಾಡಬಲ್ಲ ಕ್ಯಾಲಿಬರ್ ಇರುವ ನಿರ್ದೇಶಕರ ಹೆಸರನ್ನೂ ನೆನಪಿಸಿಕೊಳ್ಳಿ. ಬಹುಶಃ ನಿಮಗೆ ಹೆಸರುಗಳು ಸಿಗುವುದಿಲ್ಲ. ಅಲ್ಲಿಗೆ ಸ್ಟಾರ್‌ಗಳಿಗೆ ಸಿನಿಮಾ ನಿರ್ದೇಶಿಸಬಲ್ಲ ನಿರ್ದೇಶಕರಿಗೆ ಕನ್ನಡದಲ್ಲಂತೂ ಕೊರತೆ ಇದೆ. 

ಈ ವಿಚಾರವನ್ನು ಚರ್ಚಿಸುತ್ತಾ ಹೋಗೋಣ ಬನ್ನಿ.

ಪ್ರಸ್ತುತ ಕನ್ನಡದ ಜನಪ್ರಿಯ ನಿರ್ದೇಶಕರು ಯಾರೆಂದು ನೋಡೋಣ. ಯಶಸ್ಸಿನ ಆಧಾರದಲ್ಲಿ ಬರುವ ಮೊದಲ ಹೆಸರು ಪ್ರಶಾಂತ್ ನೀಲ್. ಸದ್ಯಕ್ಕಂತೂ ಅವರು ಕನ್ನಡ ಸಿನಿಮಾ ನಿರ್ದೇಶನ ಮಾಡುವ ಸಾಧ್ಯತೆ ಇಲ್ಲ. ವಿಕ್ರಾಂತ್ ರೋಣ ನಿರ್ದೇಶಕ ಅನೂಪ್ ಭಂಡಾರಿ ಸದ್ಯಕ್ಕೆ ಖಾಲಿ ಇದ್ದಾರೆ. ಅವರ ಸಿನಿಮಾ ಯಾವುದೂ ಆರಂಭ ಆಗಿಲ್ಲ. ಸಂತೋಷ್ ಆನಂದರಾಮ್ ಯುವ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಭಾರಿ ಸದ್ದು ಮಾಡಿದ ನಿರ್ದೇಶಕರಾದ ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಸ್ವತಃ ಅವರಿಗೇ ಕತೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಪ್ರೇಮ್ ಒಬ್ಬರು ಧ್ರುವ ಸರ್ಜಾ ಸಿನಿಮಾ ಚಿತ್ರೀಕರಣ ಮಾಡುತ್ತಿದ್ದಾರಾದರೂ, ಧ್ರುವ ಸರ್ಜಾ ಮುಂದಿನ ಚಿತ್ರದ ನಿರ್ದೇಶಕರು ಯಾರು ಎನ್ನುವುದು ಸದ್ಯಕ್ಕಂತೂ ದೊಡ್ಡ ಪ್ರಶ್ನೆ. 

ರಾಕಿ ಆರ್ಭಟಕ್ಕೆ ಥ್ರಿಲ್ ಆದ ಜಪಾನ್ ಮಂದಿ! ಎಲ್ಲಿ ನೋಡಿದರೂ ಯಶ್ ಹವಾ!

ಭಾರಿ ಕ್ಯಾಲಿಬರ್ ಇರುವ ನಿರ್ದೇಶಕ ಎನ್ನಿಸಿಕೊಂಡ ದುನಿಯಾ ಸೂರಿ ಬ್ಯಾಡ್‌ ಮ್ಯಾನರ್ಸ್ ಹಿಡಿದುಕೊಂಡು ಕೂತಿದ್ದಾರೆ. ಅವರು ಆ ಚಿತ್ರಕ್ಕೆ ಸ್ಟಾರ್‌ಗಳಿಗಿಂತ ಜಾಸ್ತಿ ಸಮಯ ತೆಗೆದುಕೊಂಡಿದ್ದಾರೆ. ಇರುವುದರಲ್ಲಿ ಯೋಗರಾಜ್ ಭಟ್‌ ಒಂದರ ಹಿಂದೊಂದು ಸಿನಿಮಾ ಮಾಡುತ್ತಿದ್ದಾರಾದರೂ ಸದ್ಯಕ್ಕೆ ಅವರ ದೊಡ್ಡ ಸಿನಿಮಾ ಎಂದು ಕರಟಕ ದಮನಕ. ಇನ್ನು ಪವನ್ ಒಡೆಯರ್, ಬಹದ್ದೂರು ಚೇತನ್ ಸೈಲೆಂಟಾಗಿದ್ದಾರೆ. ಚಿಂತನ್ ಅವರಂತೂ ಯಶ್‌ ಅ‍ವರಿಗೆ ವರ್ಷಗಟ್ಟಲೆ ಕಾದು ಕಾದು ಕೊನೆಗೆ ಭೈರತಿ ರಣಗಲ್ ಚಿತ್ರೀಕರಣ ಆರಂಭಿಸಿದ್ದಾರೆ. ಪವನ್‌ ಕುಮಾರ್‌ ಮಲಯಾಳಂ ಸಿನಿಮಾ ನಿರ್ದೇಶಿಸಿದರು. ನಂದಕಿಶೋರ್ ಮಲಯಾಳಂಗೆ ಹೋಗಿದ್ದಾರೆ. ಹೀಗೆ ಒಬ್ಬೊಬ್ಬರೇ ಒಳ್ಳೆಯ ಅವಕಾಶಗಳನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ. ಇನ್ನುಳಿದಂತೆ ಅನೇಕ ಯುವ ಪ್ರತಿಭಾವಂತರು ಅ‍ವರವರದೇ ತಂಡ ಕಟ್ಟಿಕೊಂಡು, ಅವರವರೇ ಸಿನಿಮಾ ಮಾಡಿಕೊಳ್ಳುತ್ತಿದ್ದಾರೆ. ಬಹಳಷ್ಟು ಪ್ರತಿಭಾವಂತರು ಸ್ಟಾರ್‌ಗಳ ಬಳಿಗೆ ಹೋಗುತ್ತಲೇ ಇಲ್ಲ. ಅದಕ್ಕೂ ಕಾರಣಗಳಿವೆ.

ಸ್ಟಾರ್‌ಗಳ ಸಿನಿಮಾ ನಿಭಾಯಿಸುವುದು ನಿರ್ದೇಶಕರಿಗಾಗಲಿ, ಸಣ್ಣ ನಿರ್ಮಾಪಕರಿಗಾಗಲಿ ಸುಲಭದ ಮಾತಲ್ಲ. ದೊಡ್ಡ ಬಜೆಟ್‌, ಜಾಸ್ತಿ ದಿನಗಳು, ಅಭಿಪ್ರಾಯ ಭೇದಗಳು ಎಲ್ಲವೂ ಸೇರಿಕೊಂಡು ಹೈರಾಣು ಮಾಡಿಬಿಡುತ್ತವೆ. ಹೆಚ್ಚು ಕಡಿಮೆಯಾಗಿ ಹಾಕಿದ ಬಜೆಟ್ ಬರದೇ ಇದ್ದರೆ ಚಿತ್ರರಂಗ ದೂರ ಇಟ್ಟು ಬಿಡುತ್ತದೆ. ಅದಕ್ಕೆ ದೊಡ್ಡ ಬಜೆಟ್ಟು, ದೊಡ್ಡ ಸ್ಟಾರು ಯಾರೂ ಬೇಡ ಎಂಬ ಭಾವದಲ್ಲಿರುವ ನಿರ್ದೇಶಕರೇ ಹೆಚ್ಚಿದ್ದಾರೆ. 

ಡಾರ್ಲಿಂಗ್‌ ಕೃಷ್ಣಗೆ ಧೈರ್ಯ ಇದ್ದರೆ ಮನೇಲಿ ಹೆಂಡ್ತಿ ಕಾಲೆಳೆದು ಕೂರಿಸಲಿ: ಸುದೀಪ್

ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ, ಡೇರ್‌ಡೆವಿಲ್‌ ಮುಸ್ತಾಫಾದಂತಹ ಸಿನಿಮಾಗಳು ಗೆದ್ದ ಮೇಲೆ ಹೊಸ ಹುಡುಗರ ಉತ್ಸಾಹ ಇನ್ನಷ್ಟು ಜಾಸ್ತಿಯಾಗುವುದರಲ್ಲಿ ಸಂದೇಹವೇ ಇಲ್ಲ. ಹಾಗಾಗಿ ಯುವಪ್ರತಿಭೆಗಳು (Young Talents) ಮತ್ತಷ್ಟು ಹೊಸ ತಂಡದ ಸಿನಿಮಾ ಮಾಡುತ್ತಾರೆಯೇ ಹೊರತು ಸ್ಟಾರ್‌ಗಳ ಬಳಿಗೆ ಹೋಗುವುದು ಸಂದೇಹವೇ.

ಈ ಎಲ್ಲವನ್ನೂ ಗಮನಿಸಿದರೆ ಮುಂದಿನ ದಿನಗಳಲ್ಲಂತೂ ಸ್ಟಾರ್‌ಗಳಿಗೆ ಕನ್ನಡದ ನಿರ್ದೇಶಕರು ಸಿಗುವುದು ಕಷ್ಟವೇ. ಸಿಕ್ಕರೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುವಂಥ ಸಾಮರ್ಥ್ಯ ಉಳ್ಳ ನಿರ್ದೇಶಕರು ಸಿಗಬಹುದೇ? ಉತ್ತರ ನೀವೇ ಹುಡುಕಿಕೊಳ್ಳಿ.