ಖ್ಯಾತ ನಟ ಸಿಹಿಕಹಿ ಚಂದ್ರು, ಅಡುಗೆಯಲ್ಲಿಯೂ ಪ್ರಸಿದ್ಧಿ ಪಡೆದಿದ್ದಾರೆ. ದರ್ಶನ್ ಅಭಿನಯದ 'ಬುಲ್ ಬುಲ್' ಚಿತ್ರೀಕರಣದ ವೇಳೆ ಬಟಾಣಿ ಕಾಳಿನ ಹಲ್ವಾ ಮಾಡಿ ಅಂಬರೀಶ್ ಮತ್ತು ದರ್ಶನ್ ತಾಯಿಗೆ ನೀಡಿದ್ದು, ಅವರು ಅಚ್ಚರಿಪಟ್ಟರು. ವಿಷ್ಣುವರ್ಧನ್ ಅವರೊಂದಿಗೆ ತಮಾಷೆಯ ಘಟನೆ ಮತ್ತು ರಾಜ್‌ಕುಮಾರ್ ಮಟನ್ ಚಾಪ್ಸ್ ಕೇಳಿದ ಪ್ರಸಂಗವನ್ನು ಚಂದ್ರು ಹಂಚಿಕೊಂಡಿದ್ದಾರೆ. ಸಸ್ಯಹಾರಿಯಾಗಿದ್ದರೂ, ಅಡುಗೆಯಲ್ಲಿನ ಅವರ ಹಾಸ್ಯಮಯ ಅನುಭವಗಳನ್ನು ನೆನಪಿಸಿಕೊಂಡಿದ್ದಾರೆ.
ಸಿಹಿಕಹಿ ಚಂದ್ರು ಕನ್ನಡ ಚಿತ್ರರಂಗದ ಖ್ಯಾತ ನಟ, ನಿದೇರ್ಶಕ ಮತ್ತು ನಿರ್ಮಾಪಕ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. 1986 -87ರ ಅವಧಿಯಲ್ಲಿ 'ಸಿಹಿಕಹಿ' ಎಂಬ ಧಾರಾವಾಹಿಯಲ್ಲಿ ನಟಿಸಿ ಫೇಮಸ್ ಆದ ಚಂದ್ರು ಅವರ ಹೆಸರಿಗೆ ಸಿಹಿಕಹಿ ಸೇರಿಕೊಂಡಿತು. ನಂತರ 1990ರಲ್ಲಿ ಗಣೇಶನ ಮದುವೆ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟು, ನಟನೆಗೆ ಕಾಲಿಟ್ಟ ಅವರು, ಇದುವರೆಗೆ ಹಲವರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಕ್ಕು ನಗಿಸಿದ್ದಾರೆ. ನಟನಿಗಿಂತಲೂ ಹೆಚ್ಚಾಗಿ ಇವರು ಗುರುತಿಸಿಕೊಂಡಿರುವುದು ಅಡುಗೆಯಿಂದಾಗಿ. ಆಧುನಿಕ ನಳ ಮಹಾರಾಜ ಎಂದೂ ಇವರನ್ನು ಹಲವರು ಕರೆಯುವುದು ಉಮಟು. ಏಕೆಂದರೆ ಅಡುಗೆ ಮಾಡುವುದರಲ್ಲಿ ಇವರು ನಿಪುಣರು. ಸ್ಟಾರ್ ಸುವರ್ಣದಲ್ಲಿ ಸುದೀರ್ಘ ಅವಧಿಯಿಂದ ಪ್ರಸಾರ ಆಗ್ತಿರೋ ಬೊಂಬಾಟ್ ಭೋಜನವೇ ಇದಕ್ಕೆ ಸಾಕ್ಷಿಯಾಗಿದೆ.
ಇದೀಗ ತಮ್ಮ ಇದೇ ಅಡುಗೆಯ ಬಗ್ಗೆ ನಡೆದ ತಮಾಷೆಯ ದಿನಗಳನ್ನು ಸಿಹಿ ಕಹಿ ಚಂದ್ರು ಅವರು ಸುದ್ದಿಮನೆ ಆಫೀಷಿಯಲ್ ಯೂಟ್ಯೂಬ್ ಚಾನೆಲ್ ಜೊತೆ ಶೇರ್ ಮಾಡಿಕೊಂಡಿದ್ದಾರೆ. ದರ್ಶನ್ ನಟಿಸಿರುವ ಬುಲ್ ಬುಲ್ ಸಿನಿಮಾದ ಶೂಟಿಂಗ್ ಸಮಯದಲ್ಲಿ ನಡೆದ ಘಟನೆ ಅದು. ಬೆಂಗಳೂರಿನ ಕನಕಪುರ ರಸ್ತೆಯ ಮನೆಯಲ್ಲಿ ಶೂಟಿಂಗ್ ನಡೆಯುತ್ತಿತ್ತು. ಮಧ್ಯಾಹ್ನ 12 ಗಂಟೆ ಮೇಲೆ ಶೂಟಿಂಗ್ ಇರುತ್ತಿತ್ತು. ದರ್ಶನ್ ಅವರು ತಮ್ಮ ಅಡುಗೆಯವರನ್ನು ಅಲ್ಲಿಯೇಇಟ್ಟುಕೊಂಡಿದ್ದರು. ನನಗೆ 12 ಗಂಟೆಯವರೆಗೆ ಏನೂ ಕೆಲಸ ಇರುತ್ತಿರಲಿಲ್ಲ. ಆದ್ದರಿಂದ ಅಡುಗೆ ಮಾಡುತ್ತಿದ್ದೆ. ಅಲ್ಲಿಯೇ ಇದ್ದ ಬಟಾಣಿ ಕಾಳಿನಿಂದ ಹಲ್ವಾ ಮಾಡಿ ಕೊಟ್ಟೆ. ಮೊದಲಿಗೆ ಅಂಬರೀಷ್ಗೆ ಕೊಟ್ಟೆ. ಯಾವುದರಲ್ಲಿ ಮಾಡಿದೆ ಹೇಳಿ ನೋಡ್ವಾ ಇದೆ. ಅವರು ಪಿಸ್ತಾ ಎಂದರು. ಆಮೇಲೆ ದರ್ಶನ್ ಅಮ್ಮ ಅವರಿಗೆ ಕೊಟ್ಟೆ. ಅವರಿಂದಲೂ ಹೇಳಲು ಆಗಲಿಲ್ಲ. ಕೊನೆಗೆ ನಾನೇ ಹೇಳಿದಾಗ ದರ್ಶನ್ ಅಮ್ಮ ಕೂಡ ಸಿಕ್ಕಾಪಟ್ಟೆ ಆಶ್ಚರ್ಯ ಪಟ್ಟುಕೊಂಡರು ಎಂದು ತಿಳಿಸಿದ್ದಾರೆ.
ಸಾಲದ ಸುಳಿಯಲ್ಲಿ ಬೀದಿಪಾಲಾದಾಗ ದೇಗುಲದಲ್ಲಿ ಪವಾಡ: ಮರುದಿನವೇ 'ಬೊಂಬಾಟ್ ಭೋಜನ'! ಸಿಹಿಕಹಿ ಚಂದ್ರು ಕಥೆ ಕೇಳಿ..
ಇದೇ ವೇಳೆ, ರಾಜ್‌ಕುಮಾರ್ ಅವರು ಮಟನ್ ಚಾಪ್ಸ್ ಮಾಡಿಕೊಡುವಂತೆ ಹೇಳಿದ ವಿಷಯ ಹಾಗೂ ವಿಷ್ಣುವರ್ಧನ್ ಜೊತೆಗಿನ ತಮಾಷೆಯ ವಿಷಯಗಳನ್ನೂ ತಿಳಿಸಿದ್ದಾರೆ. ನಾನು ಹುಟ್ಟಿದ್ದು ವೆಜಿಟೇರಿಯನ್ನಾಗಿ, ಬೆಳೆದದ್ದೂ ಹಾಗೆಯೇ. ನಾನ್ ವೆಜ್ ತಿನ್ನುವ ಯಾವ ಪ್ರಸಂಗವೂ ಬರಲಿಲ್ಲ. ಆದ್ದರಿಂದ ಅದನ್ನು ತಿನ್ನುತ್ತಿರಲಿಲ್ಲ. ಒಮ್ಮೆ, ವಿಷ್ಣುವರ್ಧನ್ ಅವರು ಹುಟ್ಟುಹಬ್ಬದಂದು ಅವರೇ ನಾನ್ವೆಜ್ ಬಡಿಸಿದರು. ನಾನು ತಿನ್ನಲ್ಲ ಎಂದೆ. ಅದು ಮತ್ಸರ ಸಿನಿಮಾ ಶೂಟಿಂಗ್ ಸಮಯವಾಗಿತ್ತು. ಸಿಗರೇಟ್ ಸೇದುತ್ತಿಯಾ ಕೇಳಿದ್ರು ಇಲ್ಲ ಎಂದೆ.. ಗುಂಡು, ಇಸ್ಪಿಟ್ ಅದೂ ಇದೂ ಯಾವುದಕ್ಕೂ ಇಲ್ಲಾ ಅಂದೆ. ಅದಕ್ಕೆ ಅವರು ತಮಾಷೆಯಾಗಿ, ಹೋಗಲೋ, ಯಾಕೋ ಇ ಇಂಡಸ್ಟ್ರಿಯಲ್ಲಿ ಇದ್ಯಾ? ನಿನ್ನಂಥ ವ್ಯಕ್ತಿಯನ್ನು ನೋಡೇ ಇಲ್ಲ ಅಂದ್ರು ತಮಾಷೆ ಮಾಡಿದ್ರು ಎನ್ನುವುದನ್ನು ಚಂದ್ರು ನೆನಪಿಸಿಕೊಂಡಿದ್ದಾರೆ.
ಒಂದು ಸಲ ಫಂಕ್ಷನ್ಗೆ ಹೋದಾಗ ಬಫೆ ಸಿಸ್ಟಮ್ ಇತ್ತು. ಹಿಂದಿನಿಂದ ಡಾ.ರಾಜ್‌ಕುಮಾರ್ ಅವರ ದನಿಯಲ್ಲಿ ಯಾರೋ, ನನಗೆ ಮಟನ್ ಚಾಪ್ಸ್ ಮಾಡಿಕೊಡಪ್ಪಾ ಅಂದ್ರು. ಯಾರೋ ರಾಜ್‌ಕುಮಾರ್ ದನಿಯಲ್ಲಿ ಮಟನ್ ಚಾಪ್ಸ್ ಕೇಳ್ತಾ ಇದ್ದಾರೆ ಎಂದುಕೊಂಡು ಬಯ್ಯೋಣ ಎಂದು ತಿರುಗಿದ್ರೆ ನಿಜವಾಗಿಯೂ ಅಲ್ಲಿ ರಾಜ್‌ಕುಮಾರ್ ಅವರೇ ನಿಂತಿದ್ದರು. ಅಯ್ಯೋ ಸರ್. ನನಗೆ ನಾನ್ವೆಜ್ ಎಲ್ಲಾ ಮಾಡಲು ಬರಲ್ಲ ಅಂದೆ. ಅದಕ್ಕೆ ಅವರು, ಇಲ್ಲಪ್ಪಾ ನನಗೆ ಬೇಕೇ ಬೇಕು, ನೀನೇ ಮಾಡಬೇಕು. ಬಾ ಹೇಳಿಕೊಡ್ತೇನೆ ಎಂದು ತಮಾಷೆ ಮಾಡಿದರು. ಅವರೇನೂ ನಿಜವಾಗಿ ಹೇಳಿರಲಿಲ್ಲ. ತಮಾಷೆ ಮಾಡಿದ್ರರಷ್ಟೇ ಎಂದು ಅಂದು ಮೇರು ನಟರು ಹೇಗೆಲ್ಲಾ ತಮಾಷೆಯ ಮೂಲಕ ಇಡೀ ಸೆಟ್ ಅನ್ನು ಖುಷಿಯಲ್ಲಿ ಇಟ್ಟಿರುತ್ತಿದ್ದರು ಎಂದು ಮೆಲುಕು ಹಾಕಿದ್ದಾರೆ.
ಮೊದ್ಲಿಗೆ ಇವಳ ನೋಡ್ದಾಗ ಒಳ್ಳೆ ಹೆಗ್ಗಣ ಇದ್ದಂಗೆ ಇದ್ದಾಳಪ್ಪಾ ಅನ್ನಿಸ್ತು: ಡಾ. ರಾಜ್ ಮಾತಲ್ಲೇ ತಮಾಷೆ ಕೇಳಿ...

