Sivasri Tejasvi Surya: ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ಇದೀಗ ರಮೇಶ್ ಅರವಿಂದ್ ನಟನೆಯ ಬಹುನಿರೀಕ್ಷಿತ ಸೈಕಲಾಜಿಕಲ್ ಥ್ರಿಲ್ಲರ್ ‘ದೈಜಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ! ಸದ್ಯ ಶೂಟಿಂಗ್ ಮುಗಿಸಿರುವ ಈ ಚಿತ್ರದಲ್ಲಿ ಶಿವಶ್ರೀ ಅವರ ಪಾತ್ರವೇನು? ಇವರನ್ನು ಚಿತ್ರರಂಗಕ್ಕೆ ಕರೆತಂದಿದ್ದು ಯಾರು? ಚಿತ್ರತಂಡ ನೀಡಿದ ಆ ಅನಿರೀಕ್ಷಿತ ಅಪ್‌ಡೇಟ್ ಇಲ್ಲಿದೆ ನೋಡಿ.

ಆಕಾಶ್ ಶ್ರೀವತ್ಸ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಸೈಕಲಾಜಿಕಲ್ ಥ್ರಿಲ್ಲರ್ ‘ದೈಜಿ’ ಚಿತ್ರದ ಮೂಲಕ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ, ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ಶಿವಶ್ರೀ ಚಿತ್ರರಂಗಕ್ಕೆ ಹಿನ್ನೆಲೆ ಗಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಹಿರಿಯ ನಟ ರಮೇಶ್ ಅರವಿಂದ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಕಥೆಯಲ್ಲಿ ಬರುವ ಅತ್ಯಂತ ನಿರ್ಣಾಯಕ ಹಾಗೂ ದೈವಿಕ ಭಾವದ ಹಾಡಿಗೆ ಶಿವಶ್ರೀ ಧ್ವನಿಯಾಗಿದ್ದಾರೆ. ನಿರ್ಮಾಪಕ ರವಿ ಕಶ್ಯಪ್ ಅವರ ಪತ್ನಿ ಸುಧಾ ಕಶ್ಯಪ್ ಅವರ ಸಲಹೆಯಂತೆ, ಶಾಸ್ತ್ರೀಯ ಸಂಗೀತ ಹಿನ್ನೆಲೆಯುಳ್ಳ ಶಿವಶ್ರೀ ಅವರನ್ನು ಸಂಪರ್ಕಿಸಲಾಗಿತ್ತು. ಹಾಡಿನ ಆಳವಾದ ಪರಿಕಲ್ಪನೆ ಕೇಳಿ ಮೆಚ್ಚಿದ ಅವರು ತಕ್ಷಣವೇ ಹಾಡಲು ಒಪ್ಪಿಕೊಂಡಿದ್ದಾರೆ. ವಿಶೇಷವೆಂದರೆ, ಇದೇ ಹಾಡಿನ ಮತ್ತೊಂದು ಆವೃತ್ತಿಯನ್ನು 'ಕಾಂತಾರ: ಚಾಪ್ಟರ್ 1' ಖ್ಯಾತಿಯ ಗಾಯಕ ಅಬ್ಬಿ ವಿ ಹಾಡಿದ್ದಾರೆ.

ಚಿತ್ರದಲ್ಲಿ ರಮೇಶ್ ಅರವಿಂದ್ ಅವರೊಂದಿಗೆ ದಿಗಂತ್, ರಾಧಿಕಾ ನಾರಾಯಣ್, ಅವಿನಾಶ್, ಕೆ.ಎಸ್. ಶ್ರೀಧರ್, ರಮೇಶ್ ಪಂಡಿತ್ ಹಾಗೂ ನಿಧಿ ಹೆಗಡೆ ಪ್ರಮುಖ ತಾರಾಗಣದಲ್ಲಿದ್ದಾರೆ. ಸದ್ಯ ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಸಿಜಿ (VFX) ಮತ್ತು ಸೌಂಡ್ ಮಿಕ್ಸಿಂಗ್ ಕೆಲಸಗಳು ಭರದಿಂದ ಸಾಗುತ್ತಿವೆ. ಶೀಘ್ರದಲ್ಲೇ ಹಾಡುಗಳನ್ನು ಒಂದೊಂದಾಗಿ ಬಿಡುಗಡೆ ಮಾಡಿ, ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಯೋಜನೆ ರೂಪಿಸಿದೆ.

ಒಂದೇ ಸಿನಿಮಾದಲ್ಲಿ ಮೂವರು ಘಟಾನುಘಟಿ ಸಂಗೀತ ನಿರ್ದೇಶಕರು

ಸಾಮಾನ್ಯವಾಗಿ ಸಿನಿಮಾಗಳಿಗೆ ಒಬ್ಬರೇ ಸಂಗೀತ ನಿರ್ದೇಶಕರಿರುತ್ತಾರೆ. ಆದರೆ ‘ದೈಜಿ’ ಚಿತ್ರಕ್ಕಾಗಿ ಸ್ಯಾಂಡಲ್‌ವುಡ್‌ನ ಮೂವರು ಪ್ರತಿಭಾವಂತ ಸಂಗೀತ ನಿರ್ದೇಶಕರು ಒಂದಾಗಿದ್ದಾರೆ. ಥ್ರಿಲ್ಲರ್ ಸಿನಿಮಾಗಳಿಗೆ ಬೆಸ್ಟ್ ಎನಿಸಿಕೊಂಡಿರುವ ಜೂಡಾ ಸ್ಯಾಂಡಿ, ಮೆಲೋಡಿ ಮಾಂತ್ರಿಕ ನಕುಲ್ ಅಭ್ಯಂಕರ್ ಹಾಗೂ ಕೆಜಿಎಫ್-ಸಲಾರ್ ಖ್ಯಾತಿಯ ಬಸ್ರೂರ್ ಕುಟುಂಬದ ಸಚಿನ್ ಬಸ್ರೂರು ಒಟ್ಟಾಗಿ 7 ಹಾಡುಗಳನ್ನು ಸಂಯೋಜಿಸಿರುವುದು ಈ ಆಲ್ಬಮ್ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಜೂಡಾ ಸ್ಯಾಂಡಿ ಹಿನ್ನೆಲೆ ಸಂಗೀತವನ್ನೂ ನೀಡಿದ್ದಾರೆ. ನಟ ‘ಡಾಲಿ’ ಧನಂಜಯ ಅದ್ಭುತ ಸಾಹಿತಿಯೂ ಹೌದು. ಈ ಚಿತ್ರದ ಎರಡು ಹಾಡುಗಳಿಗೆ ಧನಂಜಯ ಅವರು ಆಳವಾದ ಅರ್ಥವಿರುವ ಸಾಹಿತ್ಯ ರಚಿಸಿದ್ದಾರೆ. ಇವರು ಸಾಹಿತ್ಯ ಬರೆದಿರುವ ಎರಡು ಹಾಡುಗಳಿಗೆ ನಕುಲ್ ಅಭ್ಯಂಕರ್ ಸಂಗೀತ ನೀಡಿದ್ದು, ಅದರಲ್ಲಿ ಒಂದು ಗೀತೆಯನ್ನು ಖ್ಯಾತ ಗಾಯಕ ಸೋನು ನಿಗಮ್ ಹಾಡಿದ್ದಾರೆ. ಅಲ್ಲದೆ, ಜೂಡಾ ಸ್ಯಾಂಡಿ ಸಂಯೋಜಿಸಿರುವ ಇಂಗ್ಲಿಷ್ ಹಾಡಿಗೆ 14 ವರ್ಷದ ಬಾಲಕಿ ವಿಭಾ ಕಶ್ಯಪ್ ಧ್ವನಿ ನೀಡಿದ್ದು, 'ಭಜನ್-ರ‍್ಯಾಪ್' ಖ್ಯಾತಿಯ ಹರ್ಷದ್ ಧ್ವನಿ ಕೂಡ ಒಂದು ಹಾಡನ್ನು ಹಾಡಿದ್ದಾರೆ.

‘ದೈಜಿ’ ಶೀರ್ಷಿಕೆಯ ಹಿಂದಿರುವ ರೋಚಕತೆ

ಚಿತ್ರದ ‘ದೈಜಿ’ ಎಂಬ ವಿಶಿಷ್ಟ ಶೀರ್ಷಿಕೆಯೇ ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಕರಾವಳಿ ಭಾಗದಲ್ಲಿ (ತುಳು/ಕೊಂಕಣಿ ಭಾಷೆಯಲ್ಲಿ) ‘ದೈಜಿ’ ಎಂದರೆ ‘ಸಂಬಂಧಿಕರು’ ಅಥವಾ ‘ಕುಟುಂಬಸ್ಥರು’ ಎಂಬ ಅರ್ಥವಿದೆ. ಮತ್ತೊಂದೆಡೆ ಜಪಾನಿ ಭಾಷೆಯಲ್ಲಿ ‘ದೈಜಿ’ ಎಂದರೆ ‘ಅತ್ಯಂತ ಪ್ರಮುಖವಾದದ್ದು ಅಥವಾ ಬೆಲೆಬಾಳುವಂತದ್ದು’ ಎಂದರ್ಥ. ಸೈಕಲಾಜಿಕಲ್ ಥ್ರಿಲ್ಲರ್ ಕಥೆಗೆ ಈ ಹೆಸರು ಯಾಕೆ ಇಟ್ಟಿದ್ದಾರೆ ಎಂಬ ರಹಸ್ಯ ಚಿತ್ರಮಂದಿರದಲ್ಲೇ ಬಯಲಾಗಬೇಕಿದೆ.

ಹಿಂದೆ ಬ್ಲಾಕ್‌ಬಸ್ಟರ್ ಆದ 'ಶಿವಾಜಿ ಸುರತ್ಕಲ್' ಸೀರೀಸ್ (ಭಾಗ 1 ಮತ್ತು 2) ನಂತರ ನಟ ರಮೇಶ್ ಅರವಿಂದ್ ಹಾಗೂ ನಿರ್ದೇಶಕ ಆಕಾಶ್ ಶ್ರೀವತ್ಸ ಮತ್ತೆ ಒಂದಾಗಿರುವ ಚಿತ್ರವಿದು. ಹೀಗಾಗಿ ಸೈಕಲಾಜಿಕಲ್ ಥ್ರಿಲ್ಲರ್ 'ದೈಜಿ' ಮೇಲೆ ಸಿನಿಪ್ರಿಯರಿಗೆ ಭಾರೀ ನಿರೀಕ್ಷೆಗಳಿವೆ.