'ಪ್ರೇಮದ ಊರಲಿ' ಖ್ಯಾತಿಯ ನಟಿ ತಪಸ್ವಿನಿ ಪೂಣಚ್ಚ ತಮ್ಮ ಗ್ಲಾಮರಸ್ ರೀಲ್ಸ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಇದೇ ವೇಳೆ ಅವರು ಸ್ಯಾಂಡಲ್‌ವುಡ್‌ನ ಒಪ್ಪಂದಗಳ ಕರಾಳ ಮುಖವನ್ನು ಬಹಿರಂಗಪಡಿಸಿದ ವಿಚಾರವೂ ಚರ್ಚೆಯಾಗುತ್ತಿದೆ.

ನಟಿ ತಪಸ್ವಿನಿ ಪೂಣಚ್ಚ ಎಂದರೆ ಬಹುತೇಕರಿಗೆ ತಿಳಿಯಲಿಕ್ಕಿಲ್ಲ. ಆದರೆ ಪ್ರೇಮದ ಊರಲಿ (Premada Oorali ) ಖ್ಯಾತಿಯ ರುಕ್ಮಿಣಿ ಎಂದರೆ ಎಲ್ಲರ ಗಮನ ಸೆಳೆಯುತ್ತದೆ. ಹತ್ತಿರತ್ತಿರ 2 ಕೋಟಿ ರೂಪಾಯಿ ಬಜೆಟ್​ನಲ್ಲಿ ತೆಗೆದ ಈ ಸಿನಿಮಾ ಇನ್ನಲೂ ಓಡುತ್ತಲೇ ಇದೆ. ಇದಾಗಲೇ 133 ಕೋಟಿಗೂ ಅಧಿಕ ಕಲೆಕ್ಷನ್​ ಆಗಿರುವ ಬಗ್ಗೆ ವರದಿಯಾಗಿದೆ. ಇದರ ಕೀರ್ತಿ ಇಡೀ ಚಿತ್ರ ತಂಡಕ್ಕೆ ಸಲ್ಲುತ್ತದೆಯಾದರೂ, ಇದರಲ್ಲಿ ಹೊಸ ನಟರೇ ಇದ್ದು, ಹೊಸ ನಟ-ನಟಿಯರೇ ಈ ಪರಿಯಲ್ಲಿ ಸದ್ದು ಮಾಡಿರುವುದು ದೊಡ್ಡ ಸಾಹಸವೇ ಸರಿ ಎನ್ನಲಾಗುತ್ತಿದೆ. ಅಂಥ ಹೊಸ ನಟಿಯರಲ್ಲಿ ಒಬ್ಬರು ರುಕ್ಮಿಣಿಯಾಗಿ ಪಾತ್ರ ಮಾಡಿರುವ ತಪಸ್ವಿನಿ ಪೂಣಚ್ಚ (Thapaswini Poonacha).

ನಿದ್ದೆ ಕದ್ದ ತಪಸ್ವಿನಿ

ಈ ಸಿನಿಮಾದಲ್ಲಿಯೂ ಸ್ವಲ್ಪ ಗ್ಲಾಮರಸ್​ ಆಗಿಯೇ ಕಾಣಿಸಿಕೊಂಡಿರುವ ತಪಸ್ವಿನಿ ಅವರು, ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಹಾಟ್​ ರೀಲ್ಸ್​ಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇದೀಗ ಅಂಥದ್ದೇ ಇನ್ನೊಂದು ರೀಲ್ಸ್​ ಶೇರ್​ ಮಾಡಿಕೊಂಡಿದ್ದು, ಇದಕ್ಕೆ ಕಮೆಂಟ್ಸ್​ಗಳ ಸುರಿಮಳೆಯೇ ಹರಿದು ಬಂದಿದೆ. ಅಷ್ಟಕ್ಕೂ ಪ್ರೇಮದ ಊರಲಿ ಸಿನಿಮಾ ಬಳಿಕ ಇವರಿಗೆ ಸಹಜವಾಗಿ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದ್ದು, ಅವರೀಗ ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಇದೀಗ ಇಂಗ್ಲಿಷ್​ ಹಾಡೊಂದಕ್ಕೆ ರೀಲ್ಸ್​ ಮಾಡಿ ಪಡ್ಡೆಗಳ ಹೃದಯ ಕದ್ದಿದ್ದಾರೆ.

ಇನ್ನು ನಟಿಯ ಕುರಿತು ಹೇಳುವುದಾದರೆ, ಕೊಡಗಿನ ವಿರಾಜಪೇಟೆ ಮೂಲದ ತಪಸ್ವಿನಿ ಪೂಣಚ್ಚ 2022ರಲ್ಲಿ ರಿಷಬ್ ಶೆಟ್ಟಿ ನಟನೆಯ ‘ಹರಿಕಥೆ ಅಲ್ಲ ಗಿರಿಕಥೆ’ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಆದರೆ ‘ಪ್ರೇಮದ ಊರಲಿ’ ಚಿತ್ರದಲ್ಲಿ ರುಕ್ಮಿಣಿ ಪಾತ್ರ ಅವರಿಗೆ ತುಂಬಾ ಹೆಸರು ತಂದುಕೊಟ್ಟಿತು.

ಕರಾಳ ಮುಖ ಬಹಿರಂಗ

ಈ ಹಿಂದೆ ನಟಿ, ಪಾಡ್‌ ಕಾಸ್ಟ್‌ ಒಂದರಲ್ಲಿ, ಸ್ಯಾಂಡಲ್‌ವುಡ್‌ನ ಒಪ್ಪಂದಗಳ ಕರಾಳ ಮುಖವನ್ನು ಬಹಿರಂಗಪಡಿಸಿದ್ದರು. ಸಿನಿಮಾಕ್ಕೆ ಸಹಿ ಹಾಕುವ ಮೊದಲು ಮಧುರ ಮಾತು, ನಂತರ ಬದಲಾವಣೆ; ಖ್ಯಾತಿ-ಹಣವಿದ್ದರೆ ಮಾತ್ರ ಗೌರವ ಸಿಗುತ್ತದೆ ಎಂಬ ಮನೋಭಾವ ಮೂಡಿಸಲು ಕೆಲವರು ಯತ್ನಿಸುತ್ತಾರೆ ಎಂದಿದ್ದರು. ಸ್ಯಾಂಡಲ್​ವುಡ್​ನಲ್ಲಿ ಹೊಸ ಎಂಟ್ರಿ ಬಂದಾಗ, ಕೆಲವು ನಿರ್ಮಾಪಕರು ಮತ್ತು ತಂಡದವರು ಆರಂಭದಲ್ಲಿ ತುಂಬಾ ಆತ್ಮೀಯವಾಗಿ ಮಾತನಾಡುತ್ತಾರೆ. “ನಿಮ್ಮ ಅಸಿಸ್ಟೆಂಟ್ ಮತ್ತು ಪೋಷಕರನ್ನೂ ಕರೆದುಕೊಂಡು ಬರಬಹುದು. ಈ ಪ್ರಾಜೆಕ್ಟ್ ನಿಮ್ಮದೇ,” ಎಂದೆಲ್ಲಾ ಹೇಳುತ್ತಾರೆ. ಆದರೆ ಒಪ್ಪಂದಕ್ಕೆ ಸಹಿ ಹಾಕಿದ ಕ್ಷಣದಿಂದ ಎಲ್ಲವೂ ಬದಲಾಗುತ್ತದೆ. “ಒಮ್ಮೆ ಸಹಿ ಹಾಕಿದರೆ ಅವರ ಎಲ್ಲ ಷರತ್ತುಗಳಿಗೂ ಒಪ್ಪಿಕೊಂಡಂತೆ. ನಂತರ ನಿಮ್ಮ ಕೈಯಲ್ಲಿ ಏನೂ ಉಳಿಯುವುದಿಲ್ಲ,” ಎಂದು ಹೇಳಿದ್ದರು.