ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸೂಪರ್ ಹಿಟ್ 'ರಾಜಾಹುಲಿ' ಚಿತ್ರದ ಸಹಾಯಕ ನಿರ್ದೇಶಕರಾಗಿ ಸಿನಿಪಯಣ ಆರಂಭಿಸಿದ್ದ ಹೊನ್ನರಾಜ್, ಇದೀಗ 'ಮಿಸ್ಟರ್ ಅಂಡ್ ಮಿಸಸ್ ರಾಜಾಹುಲಿ' ಚಿತ್ರದ ಮೂಲಕ ಹೊಸ ಅಧ್ಯಾಯ ಆರಂಭಿಸಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸೂಪರ್ ಹಿಟ್ 'ರಾಜಾಹುಲಿ' ಚಿತ್ರದ ಸಹಾಯಕ ನಿರ್ದೇಶಕರಾಗಿ ಸಿನಿಪಯಣ ಆರಂಭಿಸಿದ್ದ ಹೊನ್ನರಾಜ್, ಇದೀಗ 'ಮಿಸ್ಟರ್ ಅಂಡ್ ಮಿಸಸ್ ರಾಜಾಹುಲಿ' ಚಿತ್ರದ ಮೂಲಕ ನಾಯಕ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಒಂದೇ ಚಿತ್ರದ ಮೂಲಕ ಮೂರು ಪ್ರಮುಖ ಜವಾಬ್ದಾರಿಗಳನ್ನು ಹೊತ್ತು ಚಿತ್ರರಂಗದಲ್ಲಿ ತಮ್ಮದೇ ಆದ ಗುರುತು ಮೂಡಿಸಲು ಅವರು ಮುಂದಾಗಿದ್ದಾರೆ.
ಚಿತ್ರದ ಆಡಿಯೋ ಬಿಡುಗಡೆ ಸಮಾರಂಭವು ಬೆಂಗಳೂರಿನ ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನೆರವೇರಿತು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರೆ, ಲವ್ಲಿ ಸ್ಟಾರ್ ಪ್ರೇಮ್ ವಿಶೇಷ ಅತಿಥಿಯಾಗಿ ಭಾಗವಹಿಸಿ ಚಿತ್ರದ ಹಾಡುಗಳನ್ನು ಅನಾವರಣಗೊಳಿಸಿದರು. ನಿರ್ಮಾಪಕರ ಸಂಘದ ಅಧ್ಯಕ್ಷ ಎಂ.ಜಿ. ರಾಮಮೂರ್ತಿ ಹಾಗೂ ಹಿರಿಯ ನಿರ್ಮಾಪಕ ಸಾರಾ ಗೋವಿಂದು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, "ಒಂದೇ ಸಿನಿಮಾದಲ್ಲಿ ನಾಯಕನಾಗಿ ನಟಿಸುವುದರ ಜೊತೆಗೆ ನಿರ್ದೇಶನ ಮತ್ತು ನಿರ್ಮಾಣದ ಹೊಣೆಗಾರಿಕೆಯನ್ನು ಹೊರುವುದು ಸುಲಭದ ಕೆಲಸವಲ್ಲ. ಹೊನ್ನರಾಜ್ ಅವರ ಈ ಧೈರ್ಯ ಶ್ಲಾಘನೀಯ. ಸಿನಿಮಾ ಯಶಸ್ಸು ಕಂಡು ಅವರಿಗೆ ಉತ್ತಮ ಫಲಿತಾಂಶ ತಂದುಕೊಡಲಿ," ಎಂದು ಶುಭ ಹಾರೈಸಿದರು. ನಟ ಪ್ರೇಮ್ ಕೂಡ ಹೊನ್ನರಾಜ್ ಅವರ ಪರಿಶ್ರಮವನ್ನು ಮೆಚ್ಚಿ, "ಕನಸನ್ನು ನನಸಾಗಿಸಿಕೊಳ್ಳಲು ಅವರು ಹಾಕಿರುವ ಶ್ರಮಕ್ಕೆ ಖಂಡಿತ ಪ್ರತಿಫಲ ಸಿಗಲಿ. ಸಿನಿಮಾ ಪ್ರೇಕ್ಷಕರ ಮನ ಗೆದ್ದು ಯಶಸ್ಸು ಕಾಣಲಿ," ಎಂದು ಹಾರೈಸಿದರು.
ಹಳ್ಳಿ ಸೊಗಡಿನ ಫ್ಯಾಮಿಲಿ ಎಂಟರ್‌ಟೈನರ್
ಚಿತ್ರದ ಕುರಿತು ಮಾತನಾಡಿದ ಹೊನ್ನರಾಜ್, 'ಮಿಸ್ಟರ್ ಅಂಡ್ ಮಿಸಸ್ ರಾಜಾಹುಲಿ' ಹಳ್ಳಿ ಸೊಗಡಿನ ಫ್ಯಾಮಿಲಿ ಎಂಟರ್‌ಟೈನರ್ ಆಗಿದ್ದು, ಯಶ್ ಅಭಿಮಾನಿಯಾದ ಯುವಕನ ಬದುಕಿನ ಸುತ್ತ ಕಥೆ ಸಾಗುತ್ತದೆ ಎಂದು ತಿಳಿಸಿದರು. ಸಮಾಜಸೇವೆಯ ಕನಸು ಹೊತ್ತ ನಾಯಕ ತನ್ನ ಊರಿನ ಅಭಿವೃದ್ಧಿಗಾಗಿ ಹೋರಾಡುವ ಸಂದರ್ಭದಲ್ಲಿ ಎದುರಾಗುವ ಸವಾಲುಗಳು, ಭಾವನೆಗಳು ಹಾಗೂ ಮನರಂಜನೆಯನ್ನು ಚಿತ್ರದಲ್ಲಿ ಸಮತೋಲನವಾಗಿ ಕಟ್ಟಿಕೊಡಲಾಗಿದೆ ಎಂದರು.
ಮದ್ದೂರು, ಹುಳಿಯಾರು, ಚಿಕ್ಕನಾಯಕನಹಳ್ಳಿ ಹಾಗೂ ಶ್ರೀರಂಗಪಟ್ಟಣ ಸುತ್ತಮುತ್ತ ಸುಮಾರು 65 ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ನಾಯಕಿಯಾಗಿ ಶೃತಿ ಬಬಿತ ಅಭಿನಯಿಸಿದ್ದು, ಅವರ ಪಾತ್ರವೂ ಕಥೆಯ ಪ್ರಮುಖ ಆಕರ್ಷಣೆಯಾಗಿದೆ. ಚಿತ್ರಕ್ಕೆ ಈಗಾಗಲೇ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣಪತ್ರ ಲಭಿಸಿದ್ದು, ಸೆಪ್ಟೆಂಬರ್‌ನಲ್ಲಿ ತೆರೆಗೆ ತರಲು ಚಿತ್ರತಂಡ ಸಿದ್ಧತೆ ನಡೆಸಿದೆ. ಶ್ರೀ ಸತ್ಯಲಕ್ಷ್ಮಿ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ವಿನು ಮನಸು ಸಂಗೀತ ಸಂಯೋಜಿಸಿದ್ದಾರೆ.
ಶಿವಪುತ್ರ ಛಾಯಾಗ್ರಹಣ, ಗಿರೀಶ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಮೈಸೂರು ಮಂಜುಳ, ರೇಖಾದಾಸ್, ಮಂಜಣ್ಣ, ಗಿರೀಶ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನು 'ರಾಜಾಹುಲಿ' ಚಿತ್ರದ ಅನುಭವವನ್ನು ಬೆನ್ನಿಗಿಟ್ಟುಕೊಂಡು ಹೊನ್ನರಾಜ್ ಕೈಗೊಂಡಿರುವ ಈ ಹೊಸ ಪ್ರಯತ್ನ ಸಿನಿಪ್ರಿಯರಲ್ಲಿ ಈಗಾಗಲೇ ಕುತೂಹಲ ಮೂಡಿಸಿದ್ದು, 'ಮಿಸ್ಟರ್ ಅಂಡ್ ಮಿಸಸ್ ರಾಜಾಹುಲಿ' ಸೆಪ್ಟೆಂಬರ್‌ನಲ್ಲಿ ಯಾವ ರೀತಿಯ ಪ್ರತಿಕ್ರಿಯೆ ಪಡೆಯಲಿದೆ ಎಂಬ ನಿರೀಕ್ಷೆ ಹೆಚ್ಚಿದೆ.


