'ಅತಿಕಾಯ' ಚಿತ್ರದಲ್ಲಿ ಅವರು ಇದುವರೆಗೂ ಕಾಣಿಸದ ರಗಡ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಅವರ ಜೋಡಿಯಾಗಿ ಪ್ರತಿಭಾವಂತ ನಟಿ ಸ್ವಾತಿಷ್ಟ ಕೃಷ್ಣನ್ ಅಭಿನಯಿಸುತ್ತಿರುವುದು ಚಿತ್ರದ ಮತ್ತೊಂದು ವಿಶೇಷ.

'ರಂಗಿತರಂಗ' ಚಿತ್ರದ ಮೂಲಕ ಸಿನಿಪ್ರಿಯರ ಮನಗೆದ್ದ ನಟ ನಿರೂಪ್ ಭಂಡಾರಿ, ಇದೀಗ ಸಂಪೂರ್ಣ ವಿಭಿನ್ನ ಗೆಟಪ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ನಾಗರಾಜ್ ಪೀಣ್ಯ ನಿರ್ದೇಶನದ 'ಅತಿಕಾಯ' ಚಿತ್ರದಲ್ಲಿ ಅವರು ಇದುವರೆಗೂ ಕಾಣಿಸದ ರಗಡ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಅವರ ಜೋಡಿಯಾಗಿ ಪ್ರತಿಭಾವಂತ ನಟಿ ಸ್ವಾತಿಷ್ಟ ಕೃಷ್ಣನ್ ಅಭಿನಯಿಸುತ್ತಿರುವುದು ಚಿತ್ರದ ಮತ್ತೊಂದು ವಿಶೇಷ.

ಧಾರವಾಡ ಮೂಲದ ಸ್ವಾತಿಷ್ಟ ಕೃಷ್ಣನ್ ಈಗಾಗಲೇ ಕನ್ನಡ, ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ತಮಿಳಿನ ಸವರಕತ್ತಿ, ವಿಕ್ರಮ್, ತೆಲುಗಿನ ಗುಂಡೇ ಕಥಾ ವಿಂಟಾರ ಹಾಗೂ ಕನ್ನಡದ ಒಂದು ಸರಳ ಪ್ರೇಮಕಥೆ, ರಕ್ಕಸಪುರದೋಳ್ ಸೇರಿದಂತೆ ಹಲವು ಚಿತ್ರಗಳ ಮೂಲಕ ಮೆಚ್ಚುಗೆ ಗಳಿಸಿರುವ ಅವರು, ಇದೀಗ 'ಅತಿಕಾಯ'ದಲ್ಲಿ ಕಥೆಯ ಪ್ರಮುಖ ಪಾತ್ರದ ಮೂಲಕ ಹೊಸ ಮೆರುಗು ತೋರಿಸಲು ಸಿದ್ಧರಾಗಿದ್ದಾರೆ.

ಇದುವರೆಗೆ ಚಾಕೊಲೇಟ್ ಬಾಯ್ ಹಾಗೂ ಲವರ್ ಬಾಯ್ ಇಮೇಜ್‌ನಲ್ಲಿ ಕಾಣಿಸಿಕೊಂಡಿದ್ದ ನಿರೂಪ್ ಭಂಡಾರಿ, ಈ ಬಾರಿ ಸಂಪೂರ್ಣ ಮಾಸ್ ಅವತಾರದಲ್ಲಿ ಅಬ್ಬರಿಸಲಿದ್ದಾರೆ. ರಕ್ತಸಿಕ್ತ ವೇಷಭೂಷಣ, ಗಟ್ಟಿಯಾದ ದೇಹಸೌಷ್ಟವ ಮತ್ತು ತೀಕ್ಷ್ಣ ವ್ಯಕ್ತಿತ್ವದ ಮೂಲಕ ಅವರು ಹೊಸ ರೂಪದಲ್ಲಿ ಪ್ರೇಕ್ಷಕರನ್ನು ಅಚ್ಚರಿಗೊಳಿಸಲಿದ್ದಾರೆ. ಪಾತ್ರಕ್ಕಾಗಿ ವಿಶೇಷ ವರ್ಕೌಟ್ ಮಾಡಿ ದೇಹವನ್ನು ರೂಪಿಸಿಕೊಂಡಿರುವ ಅವರು, ತಮ್ಮ ಡೈಲಾಗ್ ಡೆಲಿವರಿಯಲ್ಲೂ ಹೊಸ ಶೈಲಿಯನ್ನು ಅಳವಡಿಸಿಕೊಂಡಿದ್ದಾರೆ.

'ಪದೇ ಪದೇ' ಮತ್ತು 'ನಮಕ್ಹರಾಮ್' ಚಿತ್ರಗಳ ಬಳಿಕ ನಿರ್ದೇಶಕ ನಾಗರಾಜ್ ಪೀಣ್ಯ ಮತ್ತೊಮ್ಮೆ ವಿಭಿನ್ನ ಕಥೆಯೊಂದಿಗೆ ಮರಳಿದ್ದಾರೆ. ರಿಯಲಿಸ್ಟಿಕ್ ಟಚ್ ನೀಡುವ ಉದ್ದೇಶದಿಂದ ಚಿತ್ರದ ಬಹುತೇಕ ಚಿತ್ರೀಕರಣವನ್ನು ಬೆಂಗಳೂರಿನ ಜನಜಂಗುಳಿ ಪ್ರದೇಶಗಳಲ್ಲೇ ನೈಜ ವಾತಾವರಣದಲ್ಲಿ ನಡೆಸಲಾಗಿದೆ. ಸದ್ಯ ಚಿತ್ರತಂಡ ಅಂತಿಮ ಹಂತದ ಚಿತ್ರೀಕರಣಕ್ಕೆ ಸಜ್ಜಾಗಿದೆ.

ರಗಡ್ ಮತ್ತು ಮಾಸ್ ಎಂಟರ್‌ಟೈನರ್

ಚಿತ್ರದ ಬಗ್ಗೆ ಮಾತನಾಡಿರುವ ನಿರ್ದೇಶಕ ನಾಗರಾಜ್ ಪೀಣ್ಯ, "ನಿರೂಪ್ ಭಂಡಾರಿ ಈ ಪಾತ್ರಕ್ಕಾಗಿ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಅವರ ಲುಕ್, ಬಾಡಿ ಲ್ಯಾಂಗ್ವೇಜ್ ಹಾಗೂ ಡೈಲಾಗ್ ಡೆಲಿವರಿ ಎಲ್ಲವೂ ಹೊಸ ಅನುಭವ ನೀಡಲಿವೆ. ಇದೇ ರೀತಿ ಸ್ವಾತಿಷ್ಟ ಅವರ ಪಾತ್ರವೂ ಕೇವಲ ನಾಯಕಿಯ ಪಾತ್ರವಲ್ಲ; ಕಥೆಯ ಬೆಳವಣಿಗೆಯಲ್ಲಿ ಅತ್ಯಂತ ಮಹತ್ವದ ಸ್ಥಾನ ಹೊಂದಿದೆ. ಒಟ್ಟಾರೆ 'ಅತಿಕಾಯ' ಸಂಪೂರ್ಣ ರಗಡ್ ಮತ್ತು ಮಾಸ್ ಎಂಟರ್‌ಟೈನರ್ ಆಗಿರಲಿದೆ" ಎಂದು ತಿಳಿಸಿದ್ದಾರೆ.

ಎ.ಎನ್. ಮೂವಿ ಮೇಕರ್ಸ್ ಹಾಗೂ ನಿಹಾಲ್ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಜೆ. ಮಹೇಶ್ ಕುಮಾರ್ ಅರ್ಪಿಸುತ್ತಿದ್ದಾರೆ. ಹರೀಶ್ ರಾಯ್, ದಿನೇಶ್ ಮಂಗಳೂರು, ಬಿ. ಸುರೇಶ್, ಕಾಕ್ರೋಚ್ ಸುಧೀ, ವಜ್ರಧೀರ್ ಜೈನ್, ವರ್ಧನ್ ತೀರ್ಥಹಳ್ಳಿ, ಮಹಾಂತೇಶ್ ಹಾಗೂ ಜಾಕ್ ಜಾಲಿ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಉದಯಲೀಲ ಅವರ ಛಾಯಾಗ್ರಹಣ, ಶ್ರೀನಿವಾಸ್ ಪಿ. ಬಾಬು ಅವರ ಸಂಕಲನ ಮತ್ತು ಸಚಿನ್ ಬಸ್ರೂರು ಅವರ ಸಂಗೀತ ಚಿತ್ರಕ್ಕೆ ಮತ್ತಷ್ಟು ಬಲ ತುಂಬಿದೆ.