Ra Ra RX Kannada Movie: ಪತ್ರಕರ್ತ, ಕಲಾವಿದ ಹಾಗೂ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಯತಿರಾಜ್ ಇದೀಗ ತಮ್ಮ ಹೊಸ ಕನಸಿನ ಸಿನಿಮಾ 'ರಾ.. ರಾ.. RX' ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.

ಪತ್ರಕರ್ತ, ಕಲಾವಿದ ಹಾಗೂ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಯತಿರಾಜ್ ಇದೀಗ ತಮ್ಮ ಹೊಸ ಕನಸಿನ ಸಿನಿಮಾ 'ರಾ.. ರಾ.. RX' ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಕಾರ್ತಿಕೇಯ ಎಂಟರ್‌ಪ್ರೈಸಸ್ ಬ್ಯಾನರ್‌ನಲ್ಲಿ ವೃದ್ಧಿ ಸುನೀಲ್, ಚೇತನ್ ಟಿ.ಆರ್ ಹಾಗೂ ಚಂದ್ರಶೇಖರ್ ಎಸ್.ಎಂ ನಿರ್ಮಿಸುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು.

ಹಿರಿಯ ಛಾಯಾಗ್ರಾಹಕ ಕೆ.ಎನ್. ನಾಗೇಶ್ ಕುಮಾರ್ ಹಾಗೂ ಪತ್ರಕರ್ತ ವಿ.ಸಿ.ಎನ್. ಮಂಜು ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ನಿರ್ಮಾಪಕ ವೃದ್ಧಿ ಸುನೀಲ್ ಅವರ ಪತ್ನಿ ಪ್ರಿಯಾ ಕ್ಯಾಮೆರಾ ಚಾಲನೆ ನೀಡಿದರು. ಸಮಾರಂಭದಲ್ಲಿ ವಿಶೇಷವಾಗಿ ಆಗಮಿಸಿದ್ದ ತಾಯಂದಿರಿಂದ ಚಿತ್ರದ ಟೈಟಲ್ ಟೀಸರ್ ಅನಾವರಣಗೊಂಡಿದ್ದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಯಿತು.

ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಯತಿರಾಜ್, 'ರಾ.. ರಾ.. RX' ಮೊದಲಿಗೆ ಕಾದಂಬರಿಯಾಗಿ ಹೊರಬರಬೇಕಿದ್ದ ಕಥೆ. ಆದರೆ ಬಳಿಕ ಅದನ್ನು ಸಿನಿಮಾ ರೂಪದಲ್ಲಿ ತೆರೆಗೆ ತರಲು ನಿರ್ಧರಿಸಲಾಯಿತು ಎಂದು ತಿಳಿಸಿದರು. ಈ ಕಥೆಯನ್ನು ಸಂಗೀತ ನಿರ್ದೇಶಕ ವಿಜಯ್ ಹರಿತೃ ಅವರಿಗೆ ಹೇಳಿದಾಗ ಅವರು ನಿರ್ಮಾಪಕ ವೃದ್ಧಿ ಸುನೀಲ್ ಅವರಿಗೆ ಪರಿಚಯಿಸಿದ್ದು, ಕಥೆ ಕೇಳಿದ ತಕ್ಷಣವೇ ನಿರ್ಮಾಣಕ್ಕೆ ಮುಂದಾದರು ಎಂದು ಅವರು ವಿವರಿಸಿದರು.

ರಾಜೀವ್ ಮತ್ತು ರಾಕೇಶ್ ಎಂಬ ಇಬ್ಬರು ಆತ್ಮೀಯ ಸ್ನೇಹಿತರ ಜೀವನಯಾನದ ಸುತ್ತ ಕಥೆ ಸಾಗುತ್ತದೆ. ಅವರು RX ಬೈಕ್‌ನಲ್ಲಿ ಮಾಡುವ ಪ್ರಯಾಣ, ತಾಯಿ-ಮಗನ ಭಾವನಾತ್ಮಕ ಬಾಂಧವ್ಯ ಹಾಗೂ ಜೀವನದ ಅನಿರೀಕ್ಷಿತ ತಿರುವುಗಳು ಚಿತ್ರದ ಕಥೆಯ ಕೇಂದ್ರಬಿಂದುವಾಗಿವೆ. ಈ ಚಿತ್ರದಲ್ಲಿ RX ಬೈಕ್ ಕೂಡ ಒಂದು ಪ್ರಮುಖ ಪಾತ್ರದಂತೆ ಕಾಣಿಸಿಕೊಳ್ಳಲಿದೆ ಎಂದು ನಿರ್ದೇಶಕರು ತಿಳಿಸಿದರು.

ಒಂದೇ ಹಂತದ ಶೆಡ್ಯೂಲ್‌ನಲ್ಲಿ ಶೂಟಿಂಗ್

ಚಿತ್ರಕ್ಕಾಗಿ ಆಡಿಷನ್ ಮೂಲಕ ಹಲವು ಹೊಸ ಪ್ರತಿಭೆಗಳನ್ನು ಆಯ್ಕೆ ಮಾಡಲಾಗಿದೆ. ಬಹುತೇಕ ಕಲಾವಿದರಿಗೆ ಇದೇ ಮೊದಲ ಸಿನಿಮಾ ಎಂಬುದು ಮತ್ತೊಂದು ವಿಶೇಷ. ಇದೇ ತಿಂಗಳ 20ರಿಂದ ಮದ್ದೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಸುಮಾರು 35 ದಿನಗಳ ಒಂದೇ ಹಂತದ ಶೆಡ್ಯೂಲ್‌ನಲ್ಲಿ ಶೂಟಿಂಗ್ ಪೂರ್ಣಗೊಳಿಸುವ ಗುರಿ ಚಿತ್ರತಂಡ ಹೊಂದಿದೆ. ಚಿತ್ರಕ್ಕೆ ವಿಜಯ್ ಹರಿತೃ ಸಂಗೀತ ಸಂಯೋಜನೆ ಮಾಡುತ್ತಿದ್ದು, ದೀಪಕ್ ಛಾಯಾಗ್ರಹಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಜೊತೆಗೆ ನಿರ್ದೇಶಕ ಯತಿರಾಜ್ ಅವರು ಒಂದು ಪ್ರಮುಖ ಪಾತ್ರದಲ್ಲೂ ಅಭಿನಯಿಸುತ್ತಿದ್ದಾರೆ.

ನಿರ್ಮಾಪಕ ವೃದ್ಧಿ ಸುನೀಲ್ ಮಾತನಾಡಿ, ಉತ್ತಮ ಕಥೆಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಯತಿರಾಜ್ ಅವರ ಕಥೆ ಕೇಳಿ ತಕ್ಷಣವೇ ಸಿನಿಮಾ ನಿರ್ಮಾಣಕ್ಕೆ ಮುಂದಾದೆವು ಎಂದು ಹೇಳಿದರು. ಸಹ ನಿರ್ಮಾಪಕರಾದ ಚೇತನ್ ಟಿ.ಆರ್ ಹಾಗೂ ಚಂದ್ರಶೇಖರ್ ಕೂಡ ಚಿತ್ರದ ಕಥೆಯ ಮೇಲಿನ ವಿಶ್ವಾಸವನ್ನು ವ್ಯಕ್ತಪಡಿಸಿದರು. ಸಂಗೀತ ನಿರ್ದೇಶಕ ವಿಜಯ್ ಹರಿತೃ, ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿದ್ದು, ಅವುಗಳಲ್ಲಿ ಒಂದು ವಿಶೇಷವಾಗಿ RX ಬೈಕ್ ಕುರಿತಾಗಿಯೇ ಇರಲಿದೆ ಎಂದು ಮಾಹಿತಿ ನೀಡಿದರು.

ಧಾರಾವಾಹಿಗಳ ಮೂಲಕ ಪರಿಚಿತರಾಗಿರುವ ಅನೂಪ್ ಬೆಳ್ಳಾವಿ ಈ ಚಿತ್ರದ ಮೂಲಕ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ರಾಜೀವ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ರಾಕೇಶ್ ಪಾತ್ರದಲ್ಲಿ ಭರತ್ ಅಭಿನಯಿಸಿದ್ದಾರೆ. ನಾಯಕಿಯರಾಗಿ ಕೀರ್ತನಾ, ಐಶ್ವರ್ಯ ಹಾಗೂ ಸಹನಾ ಶ್ರೀ ನಟಿಸುತ್ತಿದ್ದು, ಹೊಸ ಪ್ರತಿಭೆಗಳ ತಂಡದೊಂದಿಗೆ 'ರಾ.. ರಾ.. RX' ವಿಭಿನ್ನ ಕಥಾಹಂದರದ ಭಾವನಾತ್ಮಕ ಫ್ಯಾಮಿಲಿ ಎಂಟರ್‌ಟೈನರ್ ಆಗಿ ಮೂಡಿಬರಲಿದೆ ಎಂಬ ವಿಶ್ವಾಸವನ್ನು ಚಿತ್ರತಂಡ ವ್ಯಕ್ತಪಡಿಸಿದೆ.