ಶಿವರಾಜ್‌ಕುಮಾರ್ ಅವರು ಇದೇ ಜುಲೈ 12ರಂದು ತಮ್ಮ 64ನೇ ಜನ್ಮದಿನವನ್ನು ಆಚರಿಸಿಕೊಳ್ಳಲಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಜ್ಜಾಗಿದ್ದಾರೆ.

ಸ್ಯಾಂಡಲ್‌ವುಡ್‌ನ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಸೇರಿದಂತೆ ಹಲವು ಬಿರುದುಗಳಿಂದ ಕನ್ನಡಿಗರ ಹೃದಯ ಗೆದ್ದಿರುವ ಕನ್ನಡ ಚಿತ್ರರಂಗದ ಜನಪ್ರಿಯ ನಟ ಡಾ. ಶಿವರಾಜ್‌ಕುಮಾರ್ ಅವರು ಇದೇ ಜುಲೈ 12ರಂದು ತಮ್ಮ 64ನೇ ಜನ್ಮದಿನವನ್ನು ಆಚರಿಸಿಕೊಳ್ಳಲಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಜ್ಜಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಹಿನ್ನೆಲೆಯಲ್ಲಿ ಶಿವಣ್ಣ ಅಭಿಮಾನಿಗಳಲ್ಲಿ ಹೃದಯಸ್ಪರ್ಶಿ ಮನವಿಯೊಂದನ್ನು ಮಾಡಿದ್ದಾರೆ. ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹಂಚಿಕೊಂಡಿರುವ ಶಿವರಾಜ್‌ಕುಮಾರ್, "ಸಿಗೋಣ ಜುಲೈ 12ಕ್ಕೆ... ಪ್ರೀತಿ, ಅಭಿಮಾನ ಮಾತ್ರ ತಗೊಂಡು ಬನ್ನಿ" ಎಂಬ ಭಾವನಾತ್ಮಕ ಕ್ಯಾಪ್ಷನ್ ಮೂಲಕ ಅಭಿಮಾನಿಗಳನ್ನು ಆಹ್ವಾನಿಸಿದ್ದಾರೆ.

"ಕೇಕ್, ಹಾರ, ಶಾಲು ಬೇಡ... ನಿಮ್ಮ ಪ್ರೀತಿಯೇ ಸಾಕು"

ವಿಡಿಯೊದಲ್ಲಿ ಮಾತನಾಡಿರುವ ಶಿವರಾಜ್‌ಕುಮಾರ್, "ಎಲ್ಲರಿಗೂ ನಮಸ್ಕಾರ. ಜುಲೈ 12 ನನ್ನ ಹುಟ್ಟುಹಬ್ಬ. ನೀವು ಪ್ರತಿವರ್ಷದಂತೆ ಈ ಬಾರಿಯೂ ಬರ್ತೀರ ಅನ್ನೋದು ನನಗೆ ಗೊತ್ತಿದೆ. ಆದರೆ ಈ ಬಾರಿ ನನ್ನದೊಂದು ಸಣ್ಣ ಮನವಿ ಇದೆ. ಯಾವುದೇ ಉಡುಗೊರೆ ತರಬೇಡಿ. ವಿಶೇಷವಾಗಿ ಕೇಕ್, ಹಾರ, ಶಾಲು ಯಾವುದೂ ಬೇಡ. ನಿಮ್ಮೆಲ್ಲರ ಪರವಾಗಿ ನಾನೇ ಒಂದು ಕೇಕ್ ಕಟ್ ಮಾಡ್ತೀನಿ. ನಿಮ್ಮ ಪ್ರೀತಿ, ಶುಭಾಶಯಗಳೇ ನನಗೆ ದೊಡ್ಡ ಉಡುಗೊರೆ. ಎಲ್ಲರೂ ಬನ್ನಿ... ಭೇಟಿಯಾಗೋಣ... ಸಂತೋಷವಾಗಿ ಸಮಯ ಕಳೆಯೋಣ" ಎಂದು ಹೇಳಿದ್ದಾರೆ.

ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾದ ಶಿವಣ್ಣನ ಮನವಿ

ಶಿವಣ್ಣನ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಭಾವುಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. "ಅಪ್ಪು ಒಮ್ಮೆ ಹೇಳಿದ್ದರು... 'ನನಗೂ ನಮ್ಮ ಅಣ್ಣನಿಗೂ ವಯಸ್ಸೇ ಆಗಲ್ಲ.' ಹ್ಯಾಪಿ ಬರ್ತ್‌ಡೇ ಶಿವಣ್ಣ" ಎಂದು ಒಬ್ಬ ಅಭಿಮಾನಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ಹ್ಯಾಪಿ ಬರ್ತ್‌ಡೇ ದೇವ್ರು" ಎಂದು ಶುಭ ಹಾರೈಸಿದ್ದಾರೆ. ಇನ್ನೋರ್ವ ನೆಟ್ಟಿಗರ ಕಾಮೆಂಟ್ ಗಮನ ಸೆಳೆಯುವಂತಿದ್ದು, "ಸ್ಯಾಂಡಲ್‌ವುಡ್‌ನ ಹಲವು ನಟರು ಹುಟ್ಟುಹಬ್ಬದಂದು ಮನೆಯಲ್ಲಿ ಇರಲ್ಲ ಎಂದು ಹೇಳುತ್ತಾರೆ. ಆದರೆ ದೊಡ್ಡಮನೆಯ ಶಿವಣ್ಣ ಮಾತ್ರ 'ಬನ್ನಿ' ಎಂದು ಆಹ್ವಾನಿಸುತ್ತಾರೆ. ದೊಡ್ಡಮನೆಯವರು ಅನ್ನೋದು ಮನೆಗೆ ಅಲ್ಲ, ಮನಸ್ಸಿಗೆ" ಎಂದು ಬರೆದಿದ್ದಾರೆ.

ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಶಿವಣ್ಣ

ಸಿನಿಮಾ ವಿಚಾರಕ್ಕೆ ಬಂದರೆ, ಶಿವರಾಜ್‌ಕುಮಾರ್ ಸದ್ಯ ಸಾಲು ಸಾಲು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ರಾಮ್ ಚರಣ್ ಅಭಿನಯದ ಪೆದ್ದಿ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅವರು, ಸದ್ಯ 10ಕ್ಕೂ ಹೆಚ್ಚು ಸಿನಿಮಾಗಳನ್ನು ಕೈಯಲ್ಲಿ ಹೊಂದಿದ್ದಾರೆ.

ಅವುಗಳಲ್ಲಿ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರವೂ ಒಂದು. ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಜೊತೆಗೆ ನಟರಾಕ್ಷಸ ಡಾಲಿ ಧನಂಜಯ್ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಚಿತ್ರದ ಮೇಲೆ ಸಿನಿಪ್ರಿಯರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿದೆ. ಈ ನಡುವೆ, ಯಾವುದೇ ಆಡಂಬರವಿಲ್ಲದೆ "ಪ್ರೀತಿ ಮತ್ತು ಅಭಿಮಾನ ಮಾತ್ರ ಸಾಕು" ಎಂದು ಅಭಿಮಾನಿಗಳಿಗೆ ಮನವಿ ಮಾಡಿರುವ ಶಿವಣ್ಣನ ಸರಳತೆ ಮತ್ತೊಮ್ಮೆ ಕನ್ನಡಿಗರ ಮನ ಗೆದ್ದಿದೆ.