Asianet Suvarna News Asianet Suvarna News

ಮನುಷ್ಯತ್ವ ಹೊಂದಿದ್ದ, ವಿನಯವನ್ನು ಧರಿಸಿದ್ದ ಪ್ರತಿಭಾವಂತ ಸಂಚಾರಿ ವಿಜಯ್

ನಾನು ಅವನಲ್ಲ ಅವಳು ಸಿನಿಮಾ ವಿದ್ಯಾ ಅವರ ಆತ್ಮಕತೆ ಆಧರಿಸಿದ ಸಿನಿಮಾ. ನಾವು ಸಿನಿಮಾ ಶುರು ಮಾಡುವ ಹೊತ್ತಿಗೆ ವಿದ್ಯಾ ಅವರು ನಮಗೆ ಒಂದು ಕಂಡಿಷನ್ ಹಾಕಿದ್ದರು. ಮುಖ್ಯಪಾತ್ರವನ್ನು ಮಂಗಳಮುಖಿಯೇ ಮಾಡಬೇಕು, ಗಂಡಸರು ಮಾಡಬಾರದು ಸರಿ ಇರಲ್ಲ ಅಂತ.

Sandalwood actor Sanchari Vijay was humble and talented says Kannada movie director BS Lingadevaru vcs
Author
Bangalore, First Published Jun 15, 2021, 3:22 PM IST

ಬಿಎಸ್ ಲಿಂಗದೇವರು,ನಿರ್ದೇಶಕ

ಅದಕ್ಕೆ ನಾವು ಮೊದಲು ವಿದ್ಯಾರನ್ನು ನೀವೇ ನಟಿಸಬಹುದಲ್ಲ ಎಂದು ಕೇಳಿದೆವು. ಆದರೆ ಆಕೆ ಮತ್ತೆ ನನಗೆ ಅದೇ ಕತೆಗೆ ಹೋಗಲು ಇಷ್ಟವಿಲ್ಲ ಎಂದ ಕಾರಣ ನಾವು ಸುಮಾರು ಮಂದಿ ಮಂಗಳಮುಖಿಯರನ್ನು ಕರೆಸಿ ಆಡಿಷನ್ ತೆಗೆದುಕೊಂಡಿದ್ದೆವು. ಕೊನೆಗೆ ಕೆಲವರನ್ನು ಆರಿಸಲಾಯಿತು. ಆಗ ಒಂದು ಸಮಸ್ಯೆ ಬಂತು. ಮಂಗಳಮುಖಿ ಪಾತ್ರವನ್ನೇನೋ ಚೆನ್ನಾಗಿ ಮಾಡುತ್ತಿದ್ದರು. ಆದರೆ ಮಂಗಳಮುಖಿ ಆಗುವುದಕ್ಕಿಂತ ಮೊದಲಿನ ಗಂಡಿನ ಪಾತ್ರವನ್ನು ಮಾಡುವುದಕ್ಕೆ ಅವರಿಂದ ಸಾಧ್ಯವಾಗುತ್ತಿರಲಿಲ್ಲ.

ಕೊನೆಗೆ ವಿದ್ಯಾರನ್ನು ಕನ್ವಿನ್ಸ್ ಮಾಡಿ ಆ ಪಾತ್ರಕ್ಕಾಗಿ ಒಬ್ಬ ಕಲಾವಿದನನ್ನು ಹುಡುಕತೊಡಗಿದೆ. ಕತೆಗಾರ ಜೋಗಿಯವರು ಒಗ್ಗರಣೆ ಸಿನಿಮಾದ ಒಂದು ಹಾಡಿನ ತುಣುಕನ್ನು ಕಳುಹಿಸಿ ಇದರಲ್ಲೊಬ್ಬ ಹುಡುಗ ಇದ್ದಾನೆ ಅವನು ಆ ಪಾತ್ರ ಮಾಡಬಹುದು ಎಂದರು. ಆ ಹುಡುಗನೇ ಸಂಚಾರಿ ವಿಜಯ್. ಪೂರ್ವಾಪರ ತಿಳಿದುಕೊಂಡ ಮೇಲೆ ಸಂಚಾರಿ ರಂಗತಂಡದ ಹುಡುಗ ಅಂತ ಗೊತ್ತಾಯಿತು. ಅವರ ಜೊತೆ ಮಾತನಾಡಿದ ಮೇಲೆ ಅವರೇ ಈ ಪಾತ್ರಕ್ಕೆ ಸೂಕ್ತ ಎಂದೂ ಅನ್ನಿಸಿತು. ಅವರ ನಟನೆ ನೋಡಿದ ಮೇಲೆ ವಿದ್ಯಾ ಅವರೂ ಸಮಾಧಾನ ಪಟ್ಟರು.

ಬಿ.ವಿಜಯ್ ಸಂಚಾರಿ ವಿಜಯ್ ಆಗಲು ಕಾರಣ ರಂಗಾಯಣ ರಘು ಪತ್ನಿ ಮಂಗಳಾ! 

ವಿಜಯ್ ನಟನೆ ಎಷ್ಟು ಚೆನ್ನಾಗಿತ್ತು ಎಂದರೆ ನಾವು ಯಾರೂ ನಿರೀಕ್ಷಿಸದ ಹಾಗೆ ರಾಷ್ಟ್ರಮಟ್ಟದ ಶ್ರೇಷ್ಠ ನಟ ಪ್ರಶಸ್ತಿ ಅವರನ್ನು ಅರಸಿಕೊಂಡು ಬಂದಿತು. ಅವರ ಹೆಸರು ಘೋಷಿಸುವ ಹೊತ್ತಿಗೆ ಖುಷಿಯಿಂದ ಕುಪ್ಪಳಿಸಿದ್ದರಂತೆ ವಿಜಯ್. ಅಲ್ಲಿಯವರೆಗೆ ನಮ್ಮಲ್ಲಿ ಬಹುತೇಕರಿಗೆ ಸಂಚಾರಿ ವಿಜಯ್ ಅನ್ನುವ ಹೆಸರು ತಿಳಿದಿರಲಿಲ್ಲ. ಬೇರೆ ಯಾರಾದರೂ ರಾಷ್ಟ್ರಪ್ರಶಸ್ತಿ ಬಂದ ತಕ್ಷಣ ಬದಲಾಗುತ್ತಿದ್ದರೇನೋ. ಆದರೆ ವಿಜಯ್ ಮೊದಲಿಗಿಂತ ಮತ್ತಷ್ಟು ವಿನಯವಂತರಾದರು. ಸರಳವಾಗಿ ಬದುಕತೊಡಗಿದರು.

Sandalwood actor Sanchari Vijay was humble and talented says Kannada movie director BS Lingadevaru vcs

ಎಷ್ಟು ಸರಳತನ ಕೋವಿಡ್ ಸಂದರ್ಭದಲ್ಲಿ ನಾನು ವಾಸಿಸುವ ಆರ್‌ಟಿ ನಗರದಲ್ಲಿರುವ ವೃದ್ಧರೊಬ್ಬರಿಗೆ ಯಾವುದೋ ಔಷಧ ಬೇಕಾಗಿತ್ತು. ಅದನ್ನು ತಿಳಿದುಕೊಂಡ ವಿಜಯ್ ಕೋಣನಕುಂಟೆಯಿಂದ ಒಬ್ಬರೇ ಔಷ ಹಿಡಿದುಕೊಂಡು ಬಂದು ಆ ವೃದ್ಧರಿಗೆ ತಲುಪಿಸಿದ್ದರು. ಅಲ್ಲಿಂದ ನಮ್ಮ ಮನೆಗೆ ಬಂದ ವಿಜಯ್‌ರನ್ನು ನೋಡಿ ನಾನು ಅಚ್ಚರಿ ಪಟ್ಟಿದ್ದೆ. ಏನ್ ವಿಜಯ್, ನೀವಿದನ್ನು ಮಾಡುತ್ತೀರಾ ಅಂತ ಕೇಳಿದ್ದಕ್ಕೆ ಹೌದು ಸಾರ್, ಮಾಡಬೇಕಲ್ಲ ಎಂದಿದ್ದರು.

ನಾವೆಲ್ಲರೂ ಮನುಷ್ಯರೇ. ಆದರೆ ಎಷ್ಟು ಜನಕ್ಕೆ ಮನುಷ್ಯತ್ವ ಇದೆ ಅನ್ನುವುದು ಮಾತ್ರ ಉತ್ತರ ಗೊತ್ತಿಲ್ಲದ ಪ್ರಶ್ನೆ. ನಮ್ಮ ಸಂಚಾರಿ ವಿಜಯ್ ಮಾತ್ರ ಮನುಷ್ಯತ್ವವೇ ತುಂಬಿಕೊಂಡಿದ್ದ ಹುಡುಗ. ಸಂಕಷ್ಟದಲ್ಲಿರುವ ಜನರ ನೆರವಿಗೆ ತಕ್ಷಣ ಧಾವಿಸುತ್ತಿದ್ದ ಹೃದಯವಂತ.

ಜನರಿಗೆ ಸಹಾಯ ಮಾಡಬೇಕೆಂದು ವಿಜಯ್ ದಿನಕ್ಕೆ 10 ಮೆಸೇಜ್ ಮಾಡುತ್ತಿದ್ದರು: ಕವಿರಾಜ್ 

ಇನ್ನು ನಾವು ಪರಕಾಯ ಪ್ರವೇಶ ಮಾಡುವ ಕಲಾವಿದರು ಎಂದ ಕೂಡಲೇ ರಾಜ್ ಕುಮಾರ್, ಅನಂತ್ ನಾಗ್ ಮುಂತಾದವರ ಹೆಸರು ಹೇಳುತ್ತೇವೆ. ಅಂಥಾ ಮೇರು ನಟರ ಸಾಲಿನಲ್ಲಿ ನಿಲ್ಲಬಹುದಾಗಿದ್ದ ನಟ ಅವರು. ಕ್ಯಾಮೆರಾ ಆನ್ ಆಗುವ ಮೊದಲು ಆರಾಮಾಗಿ ಇರುತ್ತಿದ್ದರು. ಯಾವಾಗ ಕ್ಯಾಮೆರಾ ಆನ್ ಆಯಿತೋ ಆ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡುತ್ತಿದ್ದರು. ಅಂಥಾ ತನ್ಮಯತೆ ಅವರದು. ತಾನೊಬ್ಬ ದೊಡ್ಡ ನಟ ಅನ್ನುವ ಹಮ್ಮು ಯಾವತ್ತೂ ಅವರ ಬಳಿ ಸುಳಿಯಲಿಲ್ಲ. ಭಾರಿ ಪ್ರತಿಭಾವಂತ ಎಂಬುದನ್ನು ತೋರಿಸಿಕೊಳ್ಳಲೂ ಇಲ್ಲ. ವಿನಯ ಇತ್ತು. ಒಳ್ಳೆಯತನ ಇತ್ತು. ಒಳ್ಳೆಯ ಮನಸ್ಸಿತ್ತು. ಸರಳತೆ ಎಲ್ಲಕ್ಕಿಂತ ಜಾಸ್ತಿ ಇತ್ತು.

Sandalwood actor Sanchari Vijay was humble and talented says Kannada movie director BS Lingadevaru vcs

ಅವರ ಸರಳತೆಯೇ ಬಹುಶಃ ಅವರಿಗೆ ಕಷ್ಟ ಕೊಟ್ಟಿತು ಅನ್ನಿಸುತ್ತದೆ. ಮನೆಯಿಂದ ಬೈಕಿನಲ್ಲಿ ಹೊರತು 500ಮೀ ಹೋಗಿದ್ದರೋ ಇಲ್ಲವೋ ಅಪಘಾತ ಆಗಿದೆ. ವಿಜಯ್ ಆಸ್ಪತ್ರೆ ಸೇರಿಕೊಂಡಿದ್ದಾರೆ. ಯಾವತ್ತೂ ಕಾನೂನು ಮೀರದ ಹುಡುಗ ಅವತ್ತು ದುರದೃಷ್ಟಕ್ಕೆ ಹೆಲ್ಮೆಟ್ ಹಾಕಿರಲಿಲ್ಲ ಅನ್ನುವುದೇ ಒಂದು ಕಾರಣ. ವಿಗೆ ಅಷ್ಟೇ ಸಾಕಾಯಿತು.

ನಮಗೆಲ್ಲರಿಗೂ ವಿಜಯ್ ಒಂದು ಪಾಠ ಹೇಳಿ ಹೋಗಿದ್ದಾರೆ. ಎಲ್ಲೇ ಹೋಗುವುದಾದರೂ ಹೆಲ್ಮೆಟ್ ಧರಿಸಿ. ಸೂಪರ್ ಬೈಕ್ ಓಡಿಸುವವರು, ಅದರ ಹಿಂದೆ ಕೂರುವವರು ಎಲ್ಲರೂ ಎಚ್ಚರಿಕೆ ವಹಿಸಿ.
ಈ ನಾಡು ಒಬ್ಬ ಪ್ರತಿಭಾವಂತ ನಟನನ್ನು ಮತ್ತು ಮನುಷ್ಯತ್ವ ಇರುವ ಜೀವವನ್ನು ಕಳೆದುಕೊಂಡಿದೆ. ಆದರೆ ಪ್ರತಿಭೆ ಮತ್ತು ವ್ಯಕ್ತಿತ್ವದಿಂದಾಗಿ ಸಂಚಾರಿ ವಿಜಯ್ ಬಹುಕಾಲ ನಮ್ಮ ಮನಸ್ಸಲ್ಲಿ ಉಳಿಯಲಿದ್ದಾರೆ.

ಕೈ ತುತ್ತು ಕೊಟ್ಟಿದ್ದು ನೆನಪಾಗುತ್ತೆ, ಭಾವುಕರಾದ ಸಾಕು ತಾಯಿ ಇಂದ್ರಮ್ಮ 

ಸಂಚಾರಿ ವಿಜಯ್ ಪ್ರವರ

- ಹುಟ್ಟಿದ್ದು 1983ರ ಜುಲೈ 17ರಂದು. ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ಕಢೂರು ತಾಲೂಕಿನ ಸಿಂಗಟಗೆರೆ ಹೋಬಳಿಯ ರಂಗಾಪುರ ಗ್ರಾಮ.
- ತಂದೆ ಚಿತ್ರ ಕಲಾವಿದ ಬಸವರಾಜಯ್ಯ, ತಾಯಿ ಗೌರಮ್ಮ ಜಾನಪದ ಕಲಾವಿದೆ.
- ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಕೆಐಇಟಿ ಶಿಕ್ಷಣ ಸಂಸ್ಥೆಯಲ್ಲಿ ಕೆಲವು ಸಮಯ ಅರೆಕಾಲಿಕ ಉಪನ್ಯಾಸಕರಾಗಿ ಕೆಲಸ ಮಾಡಿದ್ದರು.
- ಇವರ ಮೂಲ ಹೆಸರು ಬಿ. ವಿಜಯ್‌ಕುಮಾರ್. ಆದರೆ ಹಲವಾರು ವರ್ಷಗಳಿಂದ ಸಂಚಾರಿ ಥಿಯೇಟರ್ ರಂಗತಂಡದಲ್ಲಿ ನಟನೆ, ನಿರ್ದೇಶನ ಮಾಡಿಕೊಂಡಿದ್ದರಿಂದ ಸಂಚಾರಿ ವಿಜಯ್ ಎಂದೇ ಖ್ಯಾತರಾಗಿದ್ದರು.
- ಕರ್ನಾಟಕ ಶಾಸೀಯ ಸಂಗೀತ ಮತ್ತು ಹಿಂದೂಸ್ಥಾನಿ ಶಾಸೀಯ ಸಂಗೀತವನ್ನೂ ಅಭ್ಯಾಸ ಮಾಡಿರುವ ಇವರು ನಾಟಕಗಳಲ್ಲಿ ಮತ್ತು ರಿಯಾಲಿಟಿ ಶೋಗಳಲ್ಲಿ ಗಾಯನ ಪ್ರತಿಭೆ ಪ್ರದರ್ಶಿಸಿದ್ದರು.
- ಸಾವು ಧ್ಯೇಯಕ್ಕಿಲ್ಲ, ಸಾಂಬಸಿವ ಪ್ರಹಸನ, ಸ್ಮಶಾನ ಕುರುಕ್ಷೇತ್ರ, ಸಂತೆಯೊಳಗೊಂದು ಮನೆಯ ಮಾಡಿ, ಶೂದ್ರ ತಪಸ್ವಿ ಇತ್ಯಾದಿ ಅನೇಕ ನಾಟಕಗಳಲ್ಲಿ ನಟಿಸಿದ್ದರು. ಪಿನಾಕಿಯೋ, ಮಿಸ್‌ಅಂಡರ್‌ಸ್ಟ್ಯಾಂಡಿಂಗ್ ನಾಟಕ ನಿರ್ದೇಶನ ಮಾಡಿದ್ದರು.

Sandalwood actor Sanchari Vijay was humble and talented says Kannada movie director BS Lingadevaru vcs
- ಪಂಚರಂಗಿ ಪೋಂ ಪೋಂ, ಪಾಂಡುರಂಗ ವಿಠಲ ಇತ್ಯಾದಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದ ಇವರು ಅನೇಕ ಕಿರುಚಿತ್ರಗಳಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.
- 2011ರಿಂದ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದ ಇವರಿಗೆ ಜನಪ್ರಿಯತೆ ತಂದುಕೊಟ್ಟಿದ್ದು 2014ರಲ್ಲಿ ಮಂಗಳಮುಖಿ ಪಾತ್ರದಲ್ಲಿ ನಟಿಸಿದ್ದ ನಾನು ಅವನಲ್ಲ ಅವಳು ಸಿನಿಮಾ. 
- ಒಗ್ಗರಣೆ, ಹರಿವು, ನಾತಿಚರಾಮಿ, ವರ್ತಮಾನ, ಕೃಷ್ಣ ತುಳಸಿ, ರಿಕ್ತ ಇತ್ಯಾದಿಗಳು ಅವರ ಪ್ರಮುಖ ಸಿನಿಮಾಗಳು.
- ನಾನು ಅವನಲ್ಲ ಅವಳು ಚಿತ್ರಕ್ಕಾಗಿ 62ನೇ ರಾಷ್ಟ್ರಿಯ ಚಲನಚಿತ್ರ ಪ್ರಶಸ್ತಿ ಸಾಲಿನಲ್ಲಿ ರಾಷ್ಟ್ರಮಟ್ಟದ ಶ್ರೇಷ್ಠ ನಟ ಪ್ರಶಸ್ತಿ ಪಡೆದುಕೊಂಡಿದ್ದು ಇವರ ಜೀವಮಾನ ಸಾಧನೆ. ಅದೇ ವರ್ಷ ಸಂಚಾರಿ ವಿಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಹರಿವು ಚಿತ್ರಕ್ಕೆ ಅತ್ಯುತ್ತಮ ಕನ್ನಡ ಚಿತ್ರ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ದೊರಕಿತ್ತು.      
- ನಟನೆಯ ಆಚೆಗೆ ಕೊಡಗು ಪ್ರವಾಹ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಿದ್ದರು. ಕೋವಿಡ್ ಸಂದರ್ಭದಲ್ಲಿ ಸಾವಿರಾರು ಮಂದಿಗೆ ಅಗತ್ಯ ವಸ್ತುಗಳನ್ನು ವಿತರಿಸಿ ಜನಮೆಚ್ಚುಗೆ ಗಳಿಸಿದ್ದರು.

Follow Us:
Download App:
  • android
  • ios