Asianet Suvarna News Asianet Suvarna News

ಇಂದು ‘ಪುನೀತ್‌ ಗೀತ ನಮನ’ : ಪಾಸ್‌ ಇಲ್ಲದೇ ಪ್ರವೇಶ ಇಲ್ಲ

  • ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಿಧನದ ಹಿನ್ನೆಲೆಯಲ್ಲಿ ಮಂಗಳವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಪುನೀತ್‌ ಗೀತ ನಮನ’ ಕಾರ್ಯಕ್ರಮ
  • ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ನಡೆಯುವ ಕಾರ್ಯಕ್ರಮ
sandalwood Actor Puneeth rajkumar namana Program To be held in Bengaluru snr
Author
Bengaluru, First Published Nov 16, 2021, 7:50 AM IST

 ಬೆಂಗಳೂರು (ನ.16): ಪವರ್‌ ಸ್ಟಾರ್‌ (power Star) ಪುನೀತ್‌ ರಾಜ್‌ಕುಮಾರ್‌ (Puneeth Rajkumar) ನಿಧನದ ಹಿನ್ನೆಲೆಯಲ್ಲಿ ಮಂಗಳವಾರ ಬೆಂಗಳೂರಿನ (Bengaluru) ಅರಮನೆ ಮೈದಾನದಲ್ಲಿ (Palace Ground) ‘ಪುನೀತ್‌ ಗೀತ ನಮನ’ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಪುಟದ ಸಚಿವರು, ಕನ್ನಡ ಚಿತ್ರರಂಗದ 142 ಕಲಾವಿದರು, ಹೊರ ರಾಜ್ಯದ ಹಲವು ನಟ, ನಟಿಯರು, ಗಣ್ಯರು ಸೇರಿ ಸುಮಾರು 2000 ಜನ ಭಾಗವಹಿಸುವ ನಿರೀಕ್ಷೆ ಇದೆ. ಮಧ್ಯಾಹ್ನ 3 ಗಂಟೆಯಿಂದ ಸಂಜೆ ಆರೂವರೆವರೆಗೆ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ.

ಮಧ್ಯಾಹ್ನ ಗಣ್ಯರ ಆಗಮನದ ವೇಳೆಗೆ ಸ್ಯಾಕ್ಸೋಫೋನ್‌ ವಾದನ ನಡೆಯಲಿದೆ. ಬಳಿಕ ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟಿನಿಂದ ಕೊನೆಯ ಕ್ಷಣದವರೆಗಿನ ದೃಶ್ಯಾವಳಿ ಪ್ರಸಾರವಾಗುತ್ತದೆ. ಬಳಿಕ ನಾಗೇಂದ್ರ ಪ್ರಸಾದ್‌ (Nagendra Prasad) ಅವರು ಅಪ್ಪುಗಾಗಿ ರಚಿಸಿರುವ ‘ಮುತ್ತುರಾಜ ಹೆತ್ತ ಮುತ್ತು ಎತ್ತ ಹೋದೆಯೋ’ ಎಂಬ ಸಾಲುಗಳ ಗೀತೆಯ ಪ್ರಸಾರ. ಗಾಯಕ ವಿಜಯ ಪ್ರಕಾಶ್‌ (Vijaya prakash) ಅವರು ಈ ಹಾಡಿಗೆ ದನಿಯಾಗಿದ್ದಾರೆ. ಈ ವೇಳೆ ಗಣ್ಯರು ಎದ್ದುನಿಂತು ಕ್ಯಾಂಡಲ್‌ ಹಚ್ಚುತ್ತಾರೆ. ಆ ಬಳಿಕ ಗಣ್ಯರಿಂದ ಪುಷ್ಪಾಂಜಲಿ ನಡೆಯುತ್ತದೆ. ಪ್ರತಿ ನಾಲ್ಕು ಜನ ಗಣ್ಯರ ಪುಷ್ಪ ನಮನದ ಬಳಿಕ ಗುರುಕಿರಣ್‌ ಸಾರಥ್ಯದಲ್ಲಿ ಒಂದೊಂದು ಹಾಡಿನ ಗಾಯನ ನಡೆಯುತ್ತದೆ. ಸುಮಾರು 15ಕ್ಕೂ ಹೆಚ್ಚು ಹಾಡುಗಳ ಗಾಯನ ನಡೆಯಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja bommai), ಸಚಿವ ಸಂಪುಟದ ಸದಸ್ಯರು, ರಾಜ್‌ ಕುಟುಂಬಸ್ಥರು, ಹೊರರಾಜ್ಯದಿಂದ ಕಲಾವಿದರಾದ ಪ್ರಕಾಶ್‌ ರಾಜ್‌, ಶ್ರೀಕಾಂತ್‌, ನಾಗಾರ್ಜುನ, ಆಲಿ, ವಿಶಾಲ್‌, ವಿಶಾಲ್‌, ಶರತ್‌ ಕುಮಾರ್‌, ಪ್ರಭುದೇವ್‌ ಮೊದಲಾದವರು, ಅಲ್ಲಿನ ಫಿಲಂ ಚೇಂಬರ್‌ ಪದಾಧಿಕಾರಿಗಳು ಉಪಸ್ಥಿತರಿರುತ್ತಾರೆ. ಸ್ಯಾಂಡಲ್‌ವುಡ್‌ನಿಂದ ಸುದೀಪ್‌, ಗಣೇಶ್‌, ರಮೇಶ್‌ ಅರವಿಂದ್‌, ರಮ್ಯಾ, ಹಿರಿಯ ಕಲಾವಿದರಾದ ಭಾರತಿ, ಸುಮಲತಾ, ರಾಜವಂಶಸ್ಥ ಯದುವೀರ್‌, ಚಿತ್ರೋದ್ಯಮದ ಅಂಗ ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ 2000 ಜನ ಪಾಲ್ಗೊಳ್ಳಲಿದ್ದಾರೆ.

ಪಾಸ್‌ ಇಲ್ಲದೇ ಪ್ರವೇಶ ಇಲ್ಲ: ನಾಲ್ಕು ಕಡೆ ತಪಾಸಣೆ ನಡೆಯಲಿದ್ದು, ಪಾಸ್‌ ಇಲ್ಲದೇ ಯಾರಿಗೂ ಒಳಗೆ ಪ್ರವೇಶ ಇರುವುದಿಲ್ಲ ಎಂದು ಫಿಲಂ ಚೇಂಬರ್‌ ತಿಳಿಸಿದೆ. ವಿವಿಐಪಿಗಳಿಗೆ ಒಂದು ಗೇಟ್‌ ಹಾಗೂ ವಿಐಪಿಗಳಿಗೆ ಮತ್ತೊಂದು ಗೇಟ್‌ ಮೂಲಕ ಪ್ರವೇಶ ಇರುತ್ತದೆ. ಸಾರ್ವಜನಿಕರಿಗೆ ಕಾರ್ಯಕ್ರಮಕ್ಕೆ ಪ್ರವೇಶ ಇಲ್ಲ. ವಿವಿಧ ಚಾನಲ್‌ಗಳಲ್ಲಿ ಕಾರ್ಯಕ್ರಮದ ಲೈವ್‌ ಟೆಲಿಕಾಸ್ಟ್‌ ನಡೆಯಲಿದೆ. ಕಾರ್ಯಕ್ರಮದ ಬಳಿಕ ವಿವಿಐಪಿಗಳಿಗೆ ಪಕ್ಕದ ಎ.ಸಿ. ಹಾಲ್‌ನಲ್ಲಿ ಹಾಗೂ ಇತರರಿಗೆ ಹೊರಭಾಗದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಹೊರ ಭಾಗದಲ್ಲಿ ಹತ್ತು ಕೌಂಟರ್‌ಗಳ ವ್ಯವಸ್ಥೆ ಇರಲಿದೆ.

ಪುನೀತ್ ಹೆಸರಿಡಲು ಮನವಿ : ನಗರದ ರಸ್ತೆಯೊಂದಕ್ಕೆ 'ಪುನೀತ್ ರಾಜ್ ಕುಮಾರ್ ರಸ್ತೆ' (Puneeth Rajkumar Road) ಹೆಸರು ನಾಮಕರಣ ಮಾಡಬೇಕೆಂದು ಬಿಬಿಎಂಪಿ (BBMP) ಮಾನ್ಯ ಆಡಳಿತಾಧಿಕಾರಿಗಳಿಗೆ ಹಾಗೂ ಮಾನ್ಯ ಮುಖ್ಯ ಆಯುಕ್ತರಿಗೆ ಬೆಂಗಳೂರು ದಕ್ಷಿಣ ವಿಭಾಗದ ಬಿಜೆಪಿ ಅಧ್ಯಕ್ಷರು ಮತ್ತು ಮಾಜಿ ಆಡಳಿತ ಪಕ್ಷದ ನಾಯಕರಾದ ಎನ್.ಆರ್.ರಮೇಶ್ (N.R.Ramesh) ಮನವಿ ಪತ್ರಗಳನ್ನು ಸಲ್ಲಿಸಿದ್ದಾರೆ.

ಬೆಂಗಳೂರು ಮಹಾನಗರದ 'ಕಾರ್ಡ್‌' ರಸ್ತೆಗೆ ಪುನೀತ್ ರಾಜ್‌ಕುಮಾರ್ ಅವರ ಹೆಸರಿಡುವ ಬಗ್ಗೆ ಈಗಾಗಲೇ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ 'ಕಾರ್ಡ್' ರಸ್ತೆಗೆ ಹಲವು ವರ್ಷಗಳ ಹಿಂದೆಯೇ ಜ್ಞಾನಪೀಠ ಪ್ರಶಸ್ತಿ ವಿಜೇತ ವರಕವಿ 'ದ.ರಾ.ಬೇಂದ್ರೆ ರಸ್ತೆ' (Da.Ra.Bendre Road) ಎಂದು ನಾಮಕರಣ ಮಾಡುವ ಬಗ್ಗೆ ಪಾಲಿಕೆಯ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯವನ್ನು ಕೈಗೊಳ್ಳಲಾಗಿರುತ್ತದೆಯಾದ್ದರಿಂದ, ಆ ರಸ್ತೆಗೆ ಬೇರೊಂದು ಹೆಸರನ್ನು ನಾಮಕರಣ ಮಾಡುವುದು ಸಮಂಜಸವಾಗಿರುವುದಿಲ್ಲ. 

ಹಾಗಾಗಿ 'ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್‌ನಿಂದ ಬನ್ನೇರುಘಟ್ಟ ರಸ್ತೆಯ ಮೆಗಾಸಿಟಿ ಮಾಲ್ ಜಂಕ್ಷನ್‌ವರೆಗಿನ ವರ್ತುಲ ರಸ್ತೆ'ಗೆ ಅಥವಾ 'ಬನಶಂಕರಿ ಬಸ್ ನಿಲ್ದಾಣದಿಂದ ಪ್ರಾರಂಭವಾಗಿ ಸಿಲ್ಕ್ ಬೋರ್ಡ್ ಜಂಕ್ಷನ್ ಹಾಗೂ ಮಾರತ್ತಹಳ್ಳಿ ಜಂಕ್ಷನ್ ಮೂಲಕ ಕೃಷ್ಣರಾಜಪುರದ ತೂಗು ಸೇತುವೆ'ವರೆಗೆ ಹಾದು ಹೋಗುವ ಹೊರ ವರ್ತುಲ ರಸ್ತೆಗೆ 'ಪುನೀತ್ ರಾಜ್ ಕುಮಾರ್ ರಸ್ತೆ' ಎಂದು ನಾಮಕರಣ ಮಾಡುವುದು ಸೂಕ್ತ ಎಂದು ರಮೇಶ್ ಕುಮಾರ್ ಹೇಳಿದ್ದಾರೆ.

Follow Us:
Download App:
  • android
  • ios