ಅಪ್ಪುಗೆ ಭಜರಂಗಿ 2 ನೋಡುವ ಆಸೆ ಇತ್ತು: ಶಿವರಾಜ್‌ಕುಮಾರ್
ಸದಾ ಸಿನಿಮಾ ಚಟುವಟಿಕೆಗಳಲ್ಲೇ ಬ್ಯುಸಿ ಆಗಿರುತ್ತಿದ್ದ ಶಿವಣ್ಣ ಅವರು ನಟ ಪುನೀತ್ ರಾಜ್‌ಕುಮಾರ್ ಅವರ ನಿಧನದಿಂದ ಸಿನಿಮಾ ಚಟುವಟಿಕೆಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ತಮ್ಮ ನಟನೆಯ ‘ಭಜರಂಗಿ 2’ ಸಿನಿಮಾ ನೋಡಲು ಬಂದಿದ್ದರಿಂದ ಬೆಂಗಳೂರಿನ ಅನುಪಮಾ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜಾತ್ರೆ ನೆರೆದಿತ್ತು.
ಪುನೀತ್ ನಿಧನರಾಗಿ 17 ದಿನಗಳ ನಂತರ ಹೀಗೆ ಅಭಿಮಾನಿಗಳ ಜತೆ ಭಾನುವಾರ 1.30ಕ್ಕೆ ಶಿವಣ್ಣ ಅವರು ಸಿನಿಮಾ ನೋಡಿದರು. ಸಿನಿಮಾ ನೋಡುವ ಮುನ್ನ ಅನುಪಮಾ ಚಿತ್ರಮಂದಿರದ ಮುಂದೆ ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಶಿವರಾಜ್‌ಕುಮಾರ್ ಅವರು, ನಂತರ ನೆರೆದಿದ್ದ ನೂರಾರು ಮಂದಿಗೆ ತಮ್ಮ ಕೈಯಿಂದಲೇ ಅನ್ನಸಂತರ್ಪಣೆ ಮಾಡಿದರು. ಚಿತ್ರದ ನಿರ್ದೇಶಕ ಎ ಹರ್ಷ, ಚಿತ್ರದಲ್ಲಿ ಖಳನಾಯಕರಾಗಿ ನಟಿಸಿರುವ ಕಲಾವಿದರು ಸೇರಿದಂತೆ ಇಡೀ ಚಿತ್ರತಂಡ ಹಾಜರಿತ್ತು. ಸಿನಿಮಾ ನೋಡಿದ ನಂತರ ಶಿವಣ್ಣ ಅವರು ಕೆಜಿ ರಸ್ತೆಯಲ್ಲಿರುವ ಡಾ ರಾಜ್‌ಕುಮಾರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಇದೇ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಶಿವಣ್ಣ ಹೇಳಿದ್ದೇನು?
1. ಅಭಿಮಾನಿಗಳ ಜತೆ ಸಿನಿಮಾ ನೋಡಿದ್ದು ಖುಷಿ ಆಗುತ್ತಿದೆ. ನೋವಿನಲ್ಲಿರುವ ನನಗೆ ಅಭಿಮಾನಿಗಳನ್ನು ನೋಡಿ ಧೈರ್ಯ ಬಂದಿದೆ. ಯಾವುದು ಅಂದುಕೊಂಡು ಮಾಡೋಕೆ ಆಗಲ್ಲ.ಅದಾಗಿಯೇ ಒದಗಿ ಬರಬೇಕು.
'ಭಜರಂಗಿ 2' ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ: ಅಭಿಮಾನಿಗಳ ಜೊತೆ ಚಿತ್ರ ವೀಕ್ಷಿಸಿದ ಶಿವಣ್ಣ2. ಜೀವನ ಶಾಶ್ವತ ಅಲ್ಲ. ಯಾವಾಗ ಏನಾಗುತ್ತೋ ವಿಧಿಗೆ ಗೊತ್ತಿರುತ್ತದೆ. ಜೀವನ ಹೋದ ತಕ್ಷಣ ಆ ವ್ಯಕ್ತಿಯನ್ನು ನಾವು ಮರೆಯಕ್ಕೆ ಆಗಲ್ಲ. ನನ್ನ ಸೋದರ ಅಪ್ಪು ಎಲ್ಲೂ ಹೋಗಿಲ್ಲ. ನಮ್ಮ ಜತೆಗೆ, ಅಭಿಮಾನಿಗಳ ಮನಸ್ಸಿನಲ್ಲಿದ್ದಾರೆ.
ಸಿನಿಮಾ ಬಿಡುಗಡೆ ಆಗಿ ಮೂರು ವಾರ ಆಗುತ್ತಿದೆ. ಸಿನಿಮಾ ಬಿಡುಗಡೆ ದಿನ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ನೋವಿನಲ್ಲೂ ಸಿನಿಮಾ ನೋಡಲು ಎಂದು ಶಿವಣ್ಣ ಬಂದಿದ್ದು ಅವರ ಸಿನಿಮಾ ಪ್ರೀತಿ ತೋರುತ್ತದೆ. ಏನೇ ನೋವು, ಸಂಕಟ ಇದ್ದರೂ ಜನರ ಮಧ್ಯೆ ಹೋಗಬೇಕು, ಅವರ ಜತೆ ಮಾತನಾಡಬೇಕು ಎಂದು ಶಿವಣ್ಣ ಬಂದಿದ್ದರು. ಶಿವಣ್ಣ ಅವರ ಈ ನಡೆ ಎಲ್ಲರಿಗೂ ಮಾಧರಿ. ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ನಿರ್ಮಾಪಕರು ಖುಷಿ ಆಗಿದ್ದಾರೆ. 200 ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಆಗುತ್ತಿದೆ. ಶೇ.80 ರಿಂದ 90ರಷ್ಟುಪ್ರೇಕ್ಷಕರ ಹಾಜರಾತಿ ಇದೆ.- ಎ ಹರ್ಷ, ನಿರ್ದೇಶಕ
3. ಇನ್ನೂ ಭಜರಂಗಿ 2 ಚಿತ್ರದ ಬಗ್ಗೆ ಹೇಳುವುದಾದರೆ ಈ ಚಿತ್ರದಿಂದ ಯುವಜನತೆ ಕಲಿಯೋದು ಸಾಕಷ್ಟಿದೆ. ಚಿತ್ರದಲ್ಲಿ ನಿರ್ದೇಶಕ ಹರ್ಷ ಅವರು ಒಳ್ಳೆಯ ವಿಚಾರಗಳನ್ನೇ ಹೇಳಿದ್ದಾರೆ. ಕ್ವಾಲಿಟಿಯಿಂದ ಕೂಡಿರುವ ಸಿನಿಮಾ. ಇಂಥ ಚಿತ್ರದಲ್ಲಿ ನಟಿಸುವುದಕ್ಕೆ ಹೆಮ್ಮೆ ಇದೆ. ತಾಂತ್ರಿಕ ವರ್ಗದ ಶ್ರಮ ದೊಡ್ಡದು.
4. ಈ ಚಿತ್ರದಲ್ಲಿ ನನಗೆ ಇಷ್ಟವಾಗಿದ್ದು ಲೋಕಿ ಅಭಿನಯ. ಭಜರಂಗಿ ಪಾರ್ಟ್ 1 ನಲ್ಲಿ ವಿಲನ್ ಆಗಿದ್ದವರು, ಭಜರಂಗಿ 2ನಲ್ಲಿ ಸಾಫ್ಟ್ ಆಗಿ ನಟಿಸಿದ್ದಾರೆ. ಅಷ್ಟುಸಾಫ್ಟ್ ಆಗೋದು ತುಂಬಾ ಕಷ್ಟ. ಅದನ್ನು ಸಾಧಿಸಿದ್ದಾರೆ. ಚೆಲುವರಾಜ, ಪ್ರಸನ್ನ ಅವರ ನಟನೆ ಸೂಪರ್.
5. ಮನರಂಜನೆ ಜತೆಗೆ ಸಿನಿಮಾ ನೋಡುವ ಜನಕ್ಕೆ ಏನಾದರೂ ವಿಷಯ ಹೇಳಬೇಕು ಎನ್ನುವ ನಮ್ಮ ಉದ್ದೇಶ ಈಡೇರಿದೆ. ಪ್ರೀತಿಯಿಂದ ಸಿನಿಮಾ ನೋಡಿದು, ನೋಡುತ್ತಿರುವ ಎಲ್ಲರಿಗೂ ನನ್ನ ಕೃತಜ್ಞತೆಗಳು.
6. ಅಪ್ಪು ಈ ಸಿನಿಮಾ ನೋಡಕ್ಕೆ ತುಂಬಾ ಆಸೆ ಪಟ್ಟಿದ್ದ. ಬಿಡುಗಡೆ ದಿನವೇ ನೋಡಬೇಕಿತ್ತು. ಆದರೆ, ವಿಧಿ ಅದಕ್ಕೆ ಅವಕಾಶ ಕೊಡಲಿಲ್ಲ. ಈಗ ಅಪ್ಪು ಅಭಿಮಾನಿಗಳು ಬಂದು ಸಿನಿಮಾ ನೋಡುತ್ತಿದ್ದಾರೆ. ಅವರು ನೋಡಿದರೆ ಅಪ್ಪು ನೋಡಿದಂತೆಯೇ ಆಗುತ್ತದೆ. ಅಪ್ಪು ಆಸೆಯನ್ನು ಅಭಿಮಾನಿಗಳು ಈಡೇರಿಸುತ್ತಿದ್ದಾರೆ.
7. ಚಿತ್ರರಂಗದಿಂದ ನ.16ರಂದು ನಡೆಯಲಿರುವ ಪುನೀತ್ ನಮನ ಕಾರ್ಯಕ್ರಮಕ್ಕೆ ಯಾರೆಲ್ಲ ಬರುತ್ತಾರೆ ಎನ್ನುವ ಮಾಹಿತಿ ನನಗೆ ಇಲ್ಲ. ಅದು ಚಿತ್ರೋದ್ಯಮದಿಂದ ನಡೆಯುತ್ತಿರುವ ಕಾರ್ಯ. ನಮನ ಎಂದು ಹೇಳುವುದಕ್ಕೆ ಕಷ್ಟವಾಗುತ್ತದೆ. ಆದರೂ ಚಿತ್ರೋದ್ಯಮ, ನಮ್ಮ ಕುಟುಂಬ ಇದ್ದಂತೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ನಾವು ಹೋಗುತ್ತೇವೆ.
8. ನ.21ರಿಂದ ನನ್ನ ನಟನೆಯ 125ನೇ ಚಿತ್ರ ‘ವೇದ’ ಶೂಟಿಂಗ್‌ನಲ್ಲಿ ಭಾಗವಹಿಸುತ್ತೇನೆ. ಈ ಚಿತ್ರದ ಕತೆ ವಿಶೇಷವಾಗಿ ಮಹಿಳೆಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಿದ್ದೇವೆ. ತುಂಬಾ ಒಳ್ಳೆಯ ಕತೆ. ನೋವು, ಸಂಕಟಗಳ ನಡುವೆಯೂ ಜೀವನ ಸಾಗಬೇಕಿದೆ. ಎಲ್ಲರ ಜತೆಗೂಡಿ ಹೋಗಬೇಕು. ಹೀಗಾಗಿ ಸಿನಿಮಾ ಕೆಲಸಗಳನ್ನು ಶುರು ಮಾಡುತ್ತಿದ್ದೇನೆ.