Mango Pachcha ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ, 26 ಗಂಟೆಗಳ ಶೂಟಿಂಗ್ ಅನುಭವ, ನಟನೆಯ ಮೂಲಕ ಭಾವನೆಗಳನ್ನು ಹೊರಹಾಕಿದ ಕ್ಷಣಗಳು ಹಾಗೂ ‘ಜಿಮ್ಮಿ’ ಚಿತ್ರದ ಬಗ್ಗೆ ಸಂಚಿತ್ ಸಂಜೀವ್ ಮನದಾಳದ ಮಾತು.
‘ನಾನು ಇಷ್ಟು ವರ್ಷ ಒಳಗಿಟ್ಟಿದ್ದನ್ನು ಈ ಪಾತ್ರದ ಮೂಲಕ ಹೊರಹಾಕಿದೆ ಅನ್ನಿಸುತ್ತದೆ. ಪಚ್ಚ ನನಗೆ ನನ್ನೆಲ್ಲಾ ಭಾವವನ್ನು ಹೊರಹಾಕುವ ಬಾಗಿಲಾದ. ತೆರೆದ ಬಾಗಿಲು’. ಸಂಚಿತ್ ಸಂಜೀವ್ ಮಾಡಿದ್ದು ಒಂದು ಸಿನಿಮಾ. ಆದರೆ ಅವರ ಮಾತು ಮಾತ್ರ ಸಿನಿಮಾವನ್ನೂ ಮೀರಿದ್ದು. ಅವರು ತಣ್ಣಗೆ ಮಾತನಾಡುತ್ತಾರೆ. ಆದರೆ ಸ್ಪಷ್ಟವಾಗಿ ಮಾತನಾಡುತ್ತಾರೆ. ಅವರು ಮಾತನಾಡುವಾಗ ನಗು ಇರುವುದಿಲ್ಲ, ಆದರೆ ಅವರು ಎದೆಗೆ ಗುರಿ ಇಟ್ಟು ಮಾತನಾಡುತ್ತಾರೆ.
‘ಮ್ಯಾಂಗೋ ಪಚ್ಚ’ ಸಿನಿಮಾ ನೋಡಿದವರಿಗೆ, ಅದರಲ್ಲೂ ಕ್ಲೈಮ್ಯಾಕ್ಸ್ ದೃಶ್ಯ ನೋಡಿದವರಿಗೆ ಸಂಚಿತ್ ಎಷ್ಟು ತೀವ್ರವಾಗಿ ನಟಿಸಬಲ್ಲರು ಅಂತ ಗೊತ್ತಿರುತ್ತದೆ. ಕ್ರೌರ್ಯ, ಅಸಹಾಯಕತೆ, ವಿಷಾದ, ಕೋಪ ಎಲ್ಲವೂ ಬೆರೆತ ಒಂದು ನೋಟ ಪ್ರೇಕ್ಷಕರ ಎದೆಯಲ್ಲಿ ಉಳಿಯುವಷ್ಟು ತೀವ್ರವಾಗಿ ನಟಿಸಿದ್ದಾರೆ. ಆ ಸೀನ್ ಕುರಿತು ಕೂಡ ಅಷ್ಟೇ ತಣ್ಣಗೆ ಮಾತನಾಡುತ್ತಾರೆ.
‘ಸಿನಿಮಾದ ಅತ್ಯಂತ ತೀವ್ರವಾದ ಆ ಸೀನನ್ನು ಸತತ 26 ರಿಂದ 28 ಗಂಟೆಗಳ ನಿರಂತರ ಶೂಟಿಂಗ್ ನಂತರ ಚಿತ್ರೀಕರಿಸಲಾಗಿತ್ತು. ನಾನು ಸಂಪೂರ್ಣ ದಣಿದಿದ್ದೆ. ಬಹಳ ಕಠಿಣವಾದ ಆ ದೃಶ್ಯವನ್ನು ದೀಪು ಮಾಮನೇ ಚಿತ್ರೀಕರಿಸಿದರು. ಅದೊಂದು ದೃಶ್ಯದ ಬಳಿಕ ನಾನು ಮಾನಿಟರ್ ನೋಡಲಿಲ್ಲ. ಪ್ರತಿಯೊಬ್ಬರಿಗೂ ಒಂದು ಪ್ರಯಾಣ ಇರುತ್ತದೆ. ಆ ಪ್ರಯಾಣ ಅವರಲ್ಲಿ ಸಾಕಷ್ಟು ದಣಿವು ಮೂಡಿಸಿರುತ್ತದೆ. ನಟನೆ ಎಷ್ಟು ಒಳ್ಳೆಯದು ಆ ದಣಿವು ಹೊರಹಾಕಲು ಒಂದು ಅತ್ಯುತ್ತಮ ಮಾರ್ಗ. ಯಾರೋ ಒಬ್ಬ ವ್ಯಕ್ತಿ ನಿಜ ಬದುಕಿನಲ್ಲಿ ನಿಜ ಭಾವನೆಗಳನ್ನು ಆಚೆ ಹಾಕಲು ಕಷ್ಟ ಪಡುತ್ತಿರುತ್ತಾನೆ. ಅಂಥ ವ್ಯಕ್ತಿಗೆ ನಟನೆ ಒದಗಿಬರುತ್ತದೆ. ಅವನನ್ನು ಅವನು ನಟನೆ ಮೂಲಕ ಸ್ವತಂತ್ರಗೊಳಿಸುತ್ತಾನೆ. ನನ್ನ ದಾರಿಯೂ ಹಾಗೇ ಇತ್ತು. ನಾನು ಬಹುಶಃ ಆ ದೃಶ್ಯದಲ್ಲಿ ನನ್ನನ್ನು ನಾನೇ ಹೊರಹಾಕಿದೆ. ಆ ಒಂದೂವರೆ ನಿಮಿಷಗಳ ಕಾಲ ಏನಾಯಿತು ಎಂದರೆ, ನನಗೆ ಇವತ್ತಿಗೂ ಗೊತ್ತಿಲ್ಲ. ಆ ದೃಶ್ಯದ ಬಳಿಕೆ ನಾನು ಮಾನಿಟರ್ ನೋಡಲೂ ಇಲ್ಲ. ಬಹುಶಃ ನಾನು ಹಗುರಾಗಿದ್ದೆ.’
ಒಂದು ದೊಡ್ಡಾಲದ ಮರದ ಕೆಳಗೆ ಬೆಳೆಯುವುದು ಸುಲಭವಲ್ಲ. ಎಲ್ಲರಿಗೂ ಆಲದ ಮರದ ಮೇಲೆ ಕಣ್ಣಿರುತ್ತದೆ ಹೊರತು, ಅದರ ಕೆಳಗಿರುವ ಗಿಡದ್ದಲ್ಲ. ಗಿಡ ಬೆಳೆದರೆ ನೆರಳಲ್ಲಿ ಬೆಳೆಯಿತು ಅನ್ನುತ್ತಾರೆಯೇ ಹೊರತು, ಸೂರ್ಯನ ನೆರಳಿಲ್ಲದೆ ಬೆಳೆಯುವುದು ಎಷ್ಟು ಕಷ್ಟ ಅಂತ ಹೇಳುವುದಿಲ್ಲ.ಸಂಚಿತ್ ಪ್ರಯಾಣ ಅಂಥದ್ದೇ. ಅವರು ಬಹಳ ವರ್ಷಗಳಿಂದ ಪ್ರಯತ್ನ ಪಡುತ್ತಲೇ ಇದ್ದಾರೆ. ವಿದೇಶಕ್ಕೆ ಹೋಗಿ ಸಿನಿಮಾ ನಿರ್ದೇಶನ ಕಲಿತು ಬಂದಿದ್ದಾರೆ. ಒಂದು ಅವಕಾಶಕ್ಕಾಗಿ ಬಹಳ ವರ್ಷಗಳಿಂದ ಕಾಯುತ್ತಿದ್ದರು. ಆ ಕಾಯುವಿಕೆಯ ತೀವ್ರತೆಯನ್ನೇ ಅವರು ನಟನೆಯಲ್ಲಿ ಮತ್ತು ಮಾತಿನಲ್ಲಿ ದಾಟಿಸುತ್ತಾರೆ.
- ಕಲೆ ಒಬ್ಬರಿಗೆ ಇಷ್ಟವಾಗಿದ್ದು ಮತ್ತೊಬ್ಬರಿಗೆ ಇಷ್ಟವಾಗಬೇಕು ಅಂತ ಏನೂ ಇಲ್ಲ. ನನ್ನ ಇಷ್ಟ, ನನ್ನ ಇಷ್ಟ ಅಷ್ಟೇ. ಬೇರೊಬ್ಬರದು ಅವರ ಇಷ್ಟ.
- ಅದ್ದೂರಿ ಇಂಟ್ರೊಡಕ್ಷನ್ ಸೀನ್, ದೊಡ್ಡ ದೊಡ್ಡ ಬಿಲ್ಡಪ್ ಡೈಲಾಗ್ ಯಾವುದೂ ಬೇಡ ಅನ್ನುವುದು ನನ್ನ ನಿರ್ಧಾರವಾಗಿತ್ತು. ಈಗ ಕನ್ನಡ ಪ್ರೇಕ್ಷಕರಿಗೆ ಪರಿಚಯ ಮಾತ್ರ ಆಗಿದ್ದೇನೆ, ನನ್ನ ದಾರಿ ಇನ್ನೂ ದಾರಿ ಇದೆ.
- ಚಿತ್ರರಂಗದಲ್ಲಿ ಕಥೆಗಾರರ ಪಾತ್ರ ಬಹಳ ದೊಡ್ಡದಿದೆ. ನಾವು ನಮ್ಮ ಬರಹಗಾರರನ್ನು ಗೌರವಿಸುವುದನ್ನು ಕಲಿಯಬೇಕು ಮತ್ತು ಅವರಿಗೆ ಉತ್ತಮ ಸಂಭಾವನೆ ನೀಡಬೇಕು. ಚಿತ್ರರಂಗ ಈ ನಿಟ್ಟಿನಲ್ಲಿ ಇನ್ನು ಸುದೀರ್ಘ ದೂರ ಸಾಗಬೇಕಿದೆ.
- ನನಗೆ ಭಿನ್ನವಾಗಿ ಸಿನಿಮಾ ಮಾಡಬೇಕು ಅಂತಷ್ಟೇ ಇದ್ದಿದ್ದು. ಈ ಚಿತ್ರದ ಪಾತ್ರಕ್ಕೆ ಗಟ್ಟಿತನ ಇದೆ ಅನ್ನಿಸಿತು. ಚಿತ್ರಕತೆಗೆ ಗಟ್ಟಿತನ ಇದೆ ಅನ್ನಿಸಿತು. ಅದಕ್ಕೆ ಈ ಸಿನಿಮಾ ಮಾಡಲು ಮುಂದಾದೆ.
- ಇಮ್ತಿಯಾಜ್ ಅಲಿ ನನ್ನ ಇಷ್ಟದ ನಿರ್ದೇಶಕ. ಅವರಷ್ಟು ಇಂಟೆನ್ಸ್ ಆಗಿ ಸಿನಿಮಾ ಮಾಡಲು ನಾವು ಇನ್ನೂ ದಾರ ಸಾಗಬೇಕಿದೆ. ದುನಿಯಾ ಸೂರಿ ಅವರ ‘ಇಂತಿ ನಿನ್ನ ಪ್ರೀತಿಯ’ ಆ ನಿಟ್ಟಿನಲ್ಲಿ ಬಹಳ ತೀವ್ರವಾಗಿತ್ತು.
- ನಮ್ಮಲ್ಲಿ ಪ್ರತಿಭೆ ಇಲ್ಲದಿದ್ದರೆ 100 ಕೋಟಿ ಖರ್ಚು ಮಾಡಿ ಸಿನಿಮಾ ಮಾಡಿದರೂ ಜನ ಒಪ್ಪಲ್ಲ. ಅಂತಿಮವಾಗಿ ಜನ ನಮ್ಮ ನಟನೆಯೊಂದಿಗೆ ಕನೆಕ್ಟ್ ಆಗಬೇಕು.
- ನನಗೆ ರೆಡ್ ಕಾರ್ಪೆಟ್ ಎಂಟ್ರಿ ಸಿಕ್ಕಿದೆ. ಆದರೆ ಒಳಗೆ ಬಿಡಬೇಕೋ ಬೇಡವೋ ಅಂತ ನಿರ್ಧರಿಸುವುದು ಪ್ರೇಕ್ಷಕರು.
- ನಾನು ಚಿತ್ರರಂಗಕ್ಕೆ ಬಂದಿದ್ದೇ ನಿರ್ದೇಶಕನಾಗುವುದಕ್ಕೆ. ನನ್ನ ಸಿನಿಮಾ ‘ಜಿಮ್ಮಿ’ ಮುಂದೆ ಬರಲಿದೆ.
- ಚಿತ್ರರಂಗದಲ್ಲಿ ನೀವು 5 ಒಳ್ಳೆಯ ಸಿನಿಮಾ ಮಾಡಿದರೂ, ಒಂದು ತಪ್ಪು ಸಿನಿಮಾ ನಿಮ್ಮ ಕರಿಯರ್ ಅನ್ನು 10 ವರ್ಷ ಹಿಂದಕ್ಕೆ ತಳ್ಳಬಹುದು.
ದಾರಿಯಲ್ಲಿ ಮುಂಚೂಣಿ
ಸಂಚಿತ್ ಸಂಜೀವ್ ಪ್ರತೀ ಮಾತು ಕೂಡ ತೂಕದ್ದು ಅನ್ನಿಸುತ್ತದೆ. ಅವರು ಅವರ ಮೊದಲ ಸಿನಿಮಾದಲ್ಲಿಯೇ ಕ್ಲೋಸಪ್‌ನಲ್ಲಿ ನಟಿಸಿದ್ದಾರೆ ಮತ್ತು ಎದೆ ಮಾತು ಮಾತನಾಡುತ್ತಾರೆ. ಹಾಗಾಗಿಯೇ ಅವರು ಸ್ಟಾರ್ ಆಗುವ ದಾರಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ನಾನು ಅವರ ‘ಜಿಮ್ಮಿ’ ಚಿತ್ರಕ್ಕಾಗಿ ಕಾಯುತ್ತಿದ್ದೇನೆ. ಅವರೊಳಗಿರುವ ನಿರ್ದೇಶಕನನ್ನು ಎದುರುಗೊಳ್ಳಲು ಇಷ್ಟ ಪಡುತ್ತೇನೆ.


