Pichchar Review: ಎಲ್ಲಾ ಸಂಬಂಧಗಳು ಇರುವ ದೊಡ್ಡ ಕುಟುಂಬ ಬೇಕು ಎನ್ನುವ ನಾಯಕಿ, ಎಲ್ಲರಿಂದಲೂ ದೂರವಾಗಿರುವ ನಾಯಕ. ಈ ಇಬ್ಬರು ಪ್ರೀತಿಯಲ್ಲಿ ಗೆಲ್ಲುವುದಕ್ಕೆ ಏನೆಲ್ಲ ಸಾಹಸಗಳನ್ನು ಮಾಡುತ್ತಾರೆ ಎಂಬುದೇ ಚಿತ್ರದ ಕತೆ.

ಕೇಶವ

ಸಣ್ಣ ಪುಟ್ಟ ಮನಸ್ತಾಪಗಳಿಂದ ದೂರವಾಗಿರುವ ಕುಟುಂಬಗಳನ್ನು ಮರು ಜೋಡಿಸುವ ‘ಪಿಚ್ಚರ್‌’ನಲ್ಲಿ ಹಾಸ್ಯ, ಕುಟುಂಬದ ಮೌಲ್ಯಗಳು, ಪ್ರೀತಿಯ ನೆರಳು ಎಲ್ಲವೂ ಇದೆ. ಎಲ್ಲಾ ಸಂಬಂಧಗಳು ಇರುವ ದೊಡ್ಡ ಕುಟುಂಬ ಬೇಕು ಎನ್ನುವ ನಾಯಕಿ, ಎಲ್ಲರಿಂದಲೂ ದೂರವಾಗಿರುವ ನಾಯಕ. ಈ ಇಬ್ಬರು ಪ್ರೀತಿಯಲ್ಲಿ ಗೆಲ್ಲುವುದಕ್ಕೆ ಏನೆಲ್ಲ ಸಾಹಸಗಳನ್ನು ಮಾಡುತ್ತಾರೆ ಎಂಬುದೇ ಚಿತ್ರದ ಕತೆ. ನಾಟಕದ ಕಲಾವಿದರೇ ಕತೆಯ ಪ್ರಮುಖ ಪಿಲ್ಲರ್‌ಗಳು.

ಪರಸ್ಪರ ದ್ವೇಷದಿಂದ ದೂರವಾಗಿರುವ ಕುಟುಂಬಗಳನ್ನು ಒಂದು ಮಾಡುವ ತೆಲುಗು ಚಿತ್ರಗಳ ಹಳೆಯ ಸೂತ್ರದಂತೆ ‘ಪಿಚ್ಚರ್‌’ ಸಿನಿಮಾ ಕಂಡರೂ ಎಲ್ಲವೂ ಹಾಸ್ಯದ ನೆರಳಿನಲ್ಲಿ ಸಾಗುವುದರಿಂದ ಮನರಂಜನೆಗೆ ಕೊರತೆ ಇರಲ್ಲ. ಅಲ್ಲದೆ ‘ಎಲ್ಲರು ಒಂದಾಗಿ ಬಾಳೋಣ ಬನ್ನಿ’ ಎನ್ನುವ ಸಂದೇಶ ಹೊತ್ತ ಈ ಚಿತ್ರದಲ್ಲಿ ತುಳು ರಂಗಭೂಮಿಯ ದೊಡ್ಡ ತಾರಾಗಣವೇ ಇರುವುದು ಚಿತ್ರದ ಮತ್ತೊಂದು ಹೈಲೈಟ್‌.

ತನ್ನದು ದೊಡ್ಡ ಕುಟುಂಬ ಎಂದು ನಾಯಕಿಯನ್ನು ನಂಬಿಸುವ ನಾಯಕ, ಇದು ನಿದವೆಂದು ನಂಬುವ ನಾಯಕಿಗೆ ಸತ್ಯ ಗೊತ್ತಾಗಿ, ಮುಂದೆ ನಾಯಕನ ತಂದೆ ಕುಟುಂಬದ ಸಂಕಷ್ಟಗಳು ತೆರೆದುಕೊಂಡು ಅಲ್ಲಿಂದ ಏನಾಗುತ್ತದೆ ಎಂಬುದನ್ನು ಸಿನಿಮಾದಲ್ಲಿ ನೋಡಬೇಕು. ಮಾಸ್‌ ಹಾಗೂ ಮನರಂಜನೆಯೇ ಪ್ರಧಾನವಾಗಿರುವ ಈ ಚಿತ್ರದಲ್ಲಿ ಸ್ಕ್ರೀನ್‌ಪ್ಲೇ ಹಾಗೂ ಸಂಭಾಷಣೆಗಳ ಕಡೆಗೆ ಹೆಚ್ಚು ಗಮನ ಕೊಡಬೇಕಿತ್ತು ಅನಿಸುತ್ತದೆ.

ಚಿತ್ರ: ಪಿಚ್ಚರ್‌

ತಾರಾಗಣ: ನಿತ್ಯಪ್ರಕಾಶ್‌ ಬಂಟ್ವಾಳ್‌,‌ ಅಮೃತ ಸುದು, ದೇವದಾಸ್‌ ಕಾಪಿಕಾಡ್‌, ನವೀನ್‌ ಡಿ ಪಡೀಲ್‌, ಅರವಿಂದ್‌ ಬೋಳಾರ್‌

ನಿರ್ದೇಶನ: ಸಂದೀಪ್‌ ಬೆದ್ರ

ರೇಟಿಂಗ್‌: 3

ನಿತ್ಯಪ್ರಕಾಶ್‌ ಬಂಟ್ವಾಳ್‌,‌ ಅಮೃತ ಸುದು ಜೋಡಿ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿದ್ದಾರೆ. ಉಳಿದಂತೆ ದೇವದಾಸ್‌ ಕಾಪಿಕಾಡ್‌, ನವೀನ್‌ ಡಿ ಪಡೀಲ್‌, ಅರವಿಂದ್‌ ಬೋಳಾರ್‌ ಹೀಗೆ ಎಲ್ಲರು ನಗಿಸುವುದೇ ಪ್ರಮುಖ ಕೆಲಸವೆಂದು ಭಾವಿಸಿ ನಟಿಸಿದ್ದಾರೆ.