Boss Movie Review: ಬೆಂಗಳೂರಿನ ಮೋರಿ ಪಕ್ಕದಲ್ಲಿ ಮೃತ ದೇಹವೊಂದನ್ನು ನಾಯಿಗಳು ಕಚ್ಚಿಸುತ್ತಿರುವುದನ್ನು ಮೋರಿ ಪಕ್ಕದಲ್ಲೇ ಇದ್ದ ಅಪಾರ್ಟ್‌ಮೆಂಟ್‌ನ ಭದ್ರಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡುತ್ತಾರೆ.

ಆರ್‌. ಕೇಶವಮೂರ್ತಿ

ಬೆಂಗಳೂರಿನ ಮೋರಿ ಪಕ್ಕದಲ್ಲಿ ಮೃತ ದೇಹವೊಂದನ್ನು ನಾಯಿಗಳು ಕಚ್ಚಿಸುತ್ತಿರುವುದನ್ನು ಮೋರಿ ಪಕ್ಕದಲ್ಲೇ ಇದ್ದ ಅಪಾರ್ಟ್‌ಮೆಂಟ್‌ನ ಭದ್ರಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಪೊಲೀಸರು ಬಂದು ಆ ಹೆಣವನ್ನು ತೆಗೆದುಕೊಂಡು ಹೋಗುತ್ತಾರೆ. ಸತ್ತಿದ್ದು ಯಾರೆಂಬ ತನಿಖೆಗೆ ಮುಂದಾಗುವ ಮುನ್ನವೇ ನಾಲ್ಕು ಮಂದಿ ಹುಡುಗರು ಪಾಳ್ಯ ಪೊಲೀಸ್‌ ಠಾಣೆಗೆ ಬಂದು ‘ನಾವೇ ಈ ಕೊಲೆ ಮಾಡಿದ್ದು, ಹಣಕಾಸಿನ ವಿಚಾರಕ್ಕೆ ಆದ ಕೊಲೆ’ ಎಂದು ಪೊಲೀಸರ ಮುಂದೆ ಶರಣಾಗುತ್ತಾರೆ.

ಇದು ‘ಬಾಸ್‌’ ಸಿನಿಮಾದ ಆರಂಭದಲ್ಲೇ ಬರುವ ಕತೆ. ಇಲ್ಲಿಂದಲೇ ಇಡೀ ಸಿನಿಮಾ ಸಾಗುತ್ತದೆ. ‘ಅರೇ, ಈ ಘಟನೆಯ ಮಾಹಿತಿ ಎಲ್ಲೋ ಕೇಳಿದಂತೆ ಇದೆಯಲ್ಲ!?’ ಅಚ್ಚರಿಗೊಳ್ಳುತ್ತೀರಿ. ಯಾಕೆಂದರೆ ಇದು ಅದೇ ಬಾಸ್‌ ಬದುಕಿನಲ್ಲಿ ಸಂಭವಿಸಿದ ಘಟನೆಯನ್ನು ಆಧರಿಸಿದ ಕತೆ ಎಂಬುದರಲ್ಲಿ ಎರಡು ಮಾತಿಲ್ಲ. ಫಾರ್‌ ಎ ಚೇಂಜ್‌, ಇಲ್ಲಿ ಬಾಸ್‌ ಏನಾಗಿರುತ್ತಾರೆ ಎಂಬುದೇ ಚಿತ್ರದ ಮತ್ತೊಂದು ಟ್ವಿಸ್ಟ್‌. ಒಂದು ನೈಜ ಘಟನೆಯನ್ನು ಕಾಲ್ಪನಿಕವೆಂದು ನಂಬಿಸುವ ಪ್ರಯತ್ನದಲ್ಲಿ ಆ ಘಟನೆಯ ಮುಖ್ಯ ಪಾತ್ರಧಾರಿಗ‍ಳ ಹೆಸರುಗಳ ಜೊತೆಗೆ ಅವರ ವೃತ್ತಿಯನ್ನು ಮಾತ್ರ ಬದಲಾಯಿಸಿಕೊಂಡು ‘ಬಾಸ್‌’ ಸಿನಿಮಾ ಕಟ್ಟಿಕೊಂಡಿದ್ದಾರೆ.

ಎಲ್ಲರಿಂದಲೂ ‘ಬಾಸ್‌’ ಎಂದು ಕರೆಸಿಕೊಳ್ಳುವ ಜನಪ್ರಿಯ ಕ್ರಿಕೆಟರ್‌ ತನುಷ್‌ ಚಿತ್ರದ ನಾಯಕ. ಮೊಬೈಲ್‌ ಅಂಗಡಿಯಲ್ಲಿ ಕೆಲಸ ಮಾಡುವ ಶಿವಸ್ವಾಮಿ ಈ ಚಿತ್ರದ ದುರಂತ ನಾಯಕ. ತನುಷ್‌, ದೀಪೇಶ್‌, ವಿಜಯ್‌, ರಘು, ಶಿವಸ್ವಾಮಿ, ಜೀವನ್‌, ಹಾಸನ... ಈ ಎಲ್ಲಾ ಹೆಸರುಗಳನ್ನು ಒಂಚೂರು ಆಚೀಚೆ ಮಾಡಿದರೆ ನಿಮ್ಮ ಊಹೆಯ ಅದೇ ಬಾಸ್‌ ಈ ‘ಬಾಸ್‌’ ಚಿತ್ರದಲ್ಲಿ ‘ದರ್ಶನ’ವಾಗುತ್ತಾರೆ!

ಚಿತ್ರ : ಬಾಸ್‌

ತಾರಾಗಣ: ತನುಷ್‌ ಶಿವಣ್ಣ, ಪಾಯಲ್‌ ಚೆಂಗಪ್ಪ, ಮೋನಿಕಾ ಗೌಡ, ಸಂದೀಪ್‌, ಭಾವನಾ ಸತ್ಯ, ಲಕ್ಷ್ಮಣ್‌ ಪೂಜಾರಿ

ನಿರ್ದೇಶನ: ವಿ.ಲವ

ರೇಟಿಂಗ್‌: 3

ಹಾಗಂತ ಸೇಮ್‌ ಟು ಸೇಮ್‌ ಅದೇ ಕತೆ ಇಲ್ಲ. ಕೊನೆಯಲ್ಲಿ ‘ಬಾಸ್‌’ ಏನಾಗುತ್ತಾರೆಂಬ ಆಸಕ್ತಿಕರ ತಿರುವು ಇದೆ. ನಾಯಕನನ್ನು ‘ಲಂಬು’ ಅಂತ ಪ್ರೀತಿಯಿಂದ ಕರೆಯುವ ಬಾಸ್‌ ಪ್ರೇಯಸಿ ಆಡಿದ ಆಟ, ಪೊಲೀಸರ ಹಿಂಬಾಗಿಲಿನ ವ್ಯವಹಾರ, ಹಣಕ್ಕಾಗಿ ಬಾಸ್‌ ಸ್ನೇಹಿತರೇ ಮಾಡುವ ಪ್ಲಾನ್‌ ಏನು ಎನ್ನುವ ಮಾಹಿತಿಗಳು ಚಿತ್ರದಲ್ಲಿವೆ. ಇವುಗಳನ್ನು ನೈಜ ಘಟನೆಗೆ ಹೋಲಿಕೆ ಮಾಡೋದು ಬಿಡೋದು ಪ್ರೇಕ್ಷಕರಿಗೆ ಬಿಟ್ಟ ವಿಚಾರ.

ಕತೆಯ ಮೊದಲ ಭಾಗ ತಮಾಷೆ, ಲವಲವಿಕೆಯಿಂದ ಸಾಗಿದರೆ, ವಿರಾಮದ ನಂತರ ಶಿವಸ್ವಾಮಿ ಕೊಲೆಯ ತನಿಖೆಯ ಭಾಗ ತೆರೆದುಕೊಳ್ಳುತ್ತದೆ. ತನುಷ್‌ ಶಿವಣ್ಣ, ‘ಬಾಸ್‌’ನ ಆವರಿಸಿಕೊಂಡಿದ್ದಾರೆ. ವಂದಿತಾ ಗೌಡ ಬಾಸ್‌ ಪ್ರೇಯಸಿಯಾಗಿ ಹೆಚ್ಚು ಮಾರ್ಕ್ಸ್‌ ತೆಗೆದುಕೊಂಡಿದ್ದಾರೆ. ಬಾಸ್‌ ಧರ್ಮಪತ್ನಿಯಾಗಿ ಪಾಯಲ್‌ ಚೆಂಗಪ್ಪ ನಟನೆ ಸಹಜತೆ ಮತ್ತು ನೈಜತೆಗೆ ತೀರಾ ಹತ್ತಿರ. ಉಳಿದಿದ್ದನ್ನು ಸಿನಿಮಾದಲ್ಲೇ ನೋಡಬೇಕು.