ರಿಷಬ್ ಶೆಟ್ಟಿ ಮತ್ತು ಸಿತಾರಾ ಎಂಟರ್ಟೈನ್ಮೆಂಟ್ಸ್ ಸಹಯೋಗದಲ್ಲಿ 'ಮೋಟಾರ್ ಸೈಕಲ್ ಡೈರೀಸ್' ಎಂಬ ಹೊಸ ರೋಡ್-ಟ್ರಿಪ್ ಡ್ರಾಮಾ ಚಿತ್ರ ಘೋಷಣೆಯಾಗಿದೆ. ಶಿವ ಚಿರಂತನ ನಿರ್ದೇಶಿಸುತ್ತಿರುವ ಈ ಪ್ಯಾನ್ ಇಂಡಿಯಾ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.
ಬೆಂಗಳೂರು: ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರಿಗೆ ಕಳೆದ ಮೂರ್ನಾಲ್ಕು ವರ್ಷ ಲಕ್ ಮೇಲೆ ಲಕ್ ಕೊಟ್ಟಿದೆ. ಸದ್ಯ ಇವರು ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ ‘ಜೈ ಹನುಮಾನ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅದರ ಬಳಿಕ ಶಿವಾಜಿ ಕುರಿತಾದ ಹಿಂದಿ ಸಿನಿಮಾದಲ್ಲಿ ನಟನೆ ಮಾಡಲಿದ್ದಾರೆ. ಅದರ ಬಳಿಕ ತಮ್ಮದೇ ನಿರ್ದೇಶನದ ಹೊಸ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಟನೆ ಮಾಡಲಿದ್ದಾರೆ. ಅದು ‘ಕಾಂತಾರ: ಚಾಪ್ಟರ್ 2’ ಎನ್ನುವ ಮಾತಿದೆ. ಇವುಗಳ ನಡುವೆಯೇ, ಈಚೆಗಷ್ಟೇ ನಟ ಮತ್ತು ಕಾಂತಾರಾ ಚಾಪ್ಟರ್-1 2026 ರ ದಾದಾಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದುಕೊಂಡಿತು. ಅದಾದ ಬಳಿಕ, ಈಚೆಗಷ್ಟೇ ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಕೆಲವೇ ಕೆಲವು ವಿವಿಧ ಭಾಷೆಗಳ ಚಿತ್ರಗಳಲ್ಲಿ ಕಾಂತಾರ ಕೂಡ ಒಂದಾಗಿರುವ ಹೆಮ್ಮೆ ಇದೆ. ಹೀಗೆ ಸಕ್ಸಸ್ ಮೇಲೆ ಸಕ್ಸಸ್ ಕಾಣುತ್ತಿರುವ ನಟ ಯಶ್ ಅವರು ಇದೀಗ ಮತ್ತೊಂದು ದಾಖಲೆ ಬರೆಯಲು ಸಜ್ಜಾದಂತೆ ಕಾಣುತ್ತಿದೆ.
ಅವರ ಹೊಸ ಸಿನಿಮಾ ಪೋಸ್ಟರ್ ಬಿಡುಗಡೆಯಾಗಿದೆ. ಇದು ಮೋಟಾರ್ ಸೈಕಲ್ ಡೈರೀಸ್ (Motorcycle Diary's) ಎನ್ನುವುದಾಗಿದೆ. ರಿಷಬ್ ಶೆಟ್ಟಿ ಫಿಲ್ಮ್ಸ್ ಮತ್ತು ತೆಲುಗಿನ ಸಿತಾರಾ ಎಂಟರ್ಟೈನ್ಮೆಂಟ್ಸ್ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಪ್ರಯಾಣ ಆಧರಿತ (ರೋಡ್-ಟ್ರಿಪ್ ಡ್ರಾಮಾ) ಚಿತ್ರವಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. 'ಕಾಂತಾರ' ಹಾಗೂ 'ಕಾಂತಾರ: ಚಾಪ್ಟರ್ 1' ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಶಿವ ಚಿರಂತನ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.ಸೂರ್ಯದೇವರ ನಾಗ ವಂಶಿ ಮತ್ತು ಪ್ರಗತಿ ರಿಷಬ್ ಶೆಟ್ಟಿ ಚಿತ್ರವನ್ನು ನಿರ್ಮಿಸುತ್ತಿದ್ದು, ರಿಷಬ್ ಶೆಟ್ಟಿ ಪ್ರಸ್ತುತಪಡಿಸುತ್ತಿದ್ದಾರೆ.
ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ
ತೆರೆದುಕೊಂಡ ಪುಸ್ತಕದ ಪುಟಗಳ ನಡುವೆ ಸಾಗುವ ದಾರಿಯಲ್ಲಿ ಬೈಕ್ ಸವಾರನಿರುವ ಫಸ್ಟ್ ಲುಕ್ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಜಿ. ವಿ. ಪ್ರಕಾಶ್ ಕುಮಾರ್ ಸಂಗೀತ, ಭುವನ್ ರೆಡ್ಡಿ ಛಾಯಾಗ್ರಹಣ, ನವೀನ್ ನೂಲಿ ಸಂಕಲನ, ಧರಣಿ ಗಂಗೆಪುತ್ರ ಕಲಾ ನಿರ್ದೇಶನ ಮತ್ತು ರಘು ನಿಡುವಳ್ಳಿ ಸಂಭಾಷಣೆ ನಿರ್ವಹಿಸುತ್ತಿದ್ದಾರೆ. ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದ್ದು, ತಾರಾಗಣದ ವಿವರ ಸದ್ಯ ಘೋಷಣೆ ಆಗಲಿಲ್ಲ.
ಕೆಲ ತಿಂಗಳ ಹಿಂದೆ ಈ ಸಿನಿಮಾದ ಕುರಿತು ರಿಷಬ್ ಶೆಟ್ಟಿ ಅವರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಶೇರ್ ಮಾಡಿಕೊಂಡಿದ್ದರು. ‘ಅಧ್ಯಾಯ ಎರಡು ಇಲ್ಲಿಂದ ಶುರು’ ಎಂದು ಬರೆದುಕೊಂಡಿದ್ದರು. ಅದಾದ ಬಳಿಕ ಸಿನಿಮಾವೊಂದಕ್ಕಾಗಿ ಕಾಸ್ಟಿಂಗ್ ಕಾಲ್ ಸಹ ಮಾಡಿದ್ದರು. ಆದರೆ ಅದು ಯಾವ ಸಿನಿಮಾ ಎಂದು ತಿಳಿದಿರಲಿಲ್ಲ. ಇದೀಗ ಅದು ಇದೇ ಸಿನಿಮಾಕ್ಕೆ ಎನ್ನಲಾಗುತ್ತಿದೆ. ಬೆಂಗಳೂರು ಮತ್ತು ಕಲಬುರಗಿಗಳಲ್ಲಿ ಆಡಿಷನ್ ಅನ್ನು ರಿಷಬ್ ಶೆಟ್ಟಿ ಮಾಡಿದ್ದರು. ಇದೀಗ ಅಧಿಕೃತವಾಗಿ ಸಿನಿಮಾ ಘೋಷಣೆ ಮಾಡಲಾಗಿದ್ದು, ಪೋಸ್ಟರ್ ಹಂಚಿಕೊಂಡಿರುವ ಜೊತೆಗೆ ‘ಪ್ರತಿ ಮೈಲಿಗಲ್ಲೂ ಒಂದು ನೆನಪು, ಪ್ರತಿ ತಿರುವಲ್ಲೂ ಒಂದು ಕಥೆ’ ಎಂದು ಬರೆದುಕೊಂಡಿದ್ದಾರೆ.


