ಅಮೃತಧಾರೆ ಧಾರಾವಾಹಿಯ ಮಂದಾಕಿನಿ ಪಾತ್ರದಿಂದ ಜನಪ್ರಿಯರಾಗಿರುವ ನಟಿ ಚಿತ್ರಾ ಶೆಣೈ, 686 ಸಿನಿಮಾಗಳಲ್ಲಿ ನಟಿಸಿದ್ದಾರೆ. 10 ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ ಅವರು, ರೊಮ್ಯಾನ್ಸ್ ಮಾಡಲು ಬರುವುದಿಲ್ಲ ಎಂಬ ಕಾರಣಕ್ಕೆ ನಾಯಕಿ ಪಾತ್ರದಿಂದ ಹಿಂದೆ ಸರಿದ ವಿಷಯವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

ಬೆಂಗಳೂರು: ನಟಿ ಚಿತ್ರಾ ಶೆಣೈ ಎಂದರೆ ಈಗಿನ ಪೀಳಿಗೆಯವರಿಗೆ ಸಡನ್​ ಆಗಿ ಯಾರು ಎಂದು ತಿಳಿಯದೇ ಇರಬಹುದು. ಆದರೆ ಅಮೃತಧಾರೆ ಸೀರಿಯಲ್​ (Amruthadhaare Serial)ನಲ್ಲಿ ಮಂದಾಕಿನಿ ಅರ್ಥಾತ್​ ಭೂಮಿಕಾಳ ಅಮ್ಮನ ಪಾತ್ರ ಮಾಡಿದ ನಟಿ ಎಂದಾಕ್ಷಣ, ಅವರ ನಟನೆಯ ಬಗ್ಗೆ ಮೆಚ್ಚುಗೆ ಸೂಸುವವರೇ ಇಲ್ಲ. ಆ್ಯಕ್ಟಿಂಗ್​ ಮಾಡುತ್ತಿದ್ದಾರೆ ಎನ್ನುವ ಭಾವನೆಯೇ ಬರದೇ ಸಹಜ ನಟನೆಯಿಂದ ಫೇಮಸ್​ ಆಗಿರೋ ನಟಿ ಚಿತ್ರಾ ಶೆಣೈ ಅವರು ಇಲ್ಲಿಯವರೆಗೆ ಒಟ್ಟೂ 686 ಸಿನಿಮಾಗಳಲ್ಲಿ ನಟಿಸಿದ್ದಾರೆ ಎಂದರೆ ಬಹುಶಃ ಇದು ಎಲ್ಲರಿಗೂ ಶಾಕ್​ ಕೊಡುವಂಥದ್ದೇ. ಸುದೀಪ್​ ಅವರ ಜೊತೆಗೆ ಮಾರ್ಕ್​-2ನಲ್ಲಿ ನಟಿಸಿದ್ದ ಚಿತ್ರಾ ಶೆಣೈ ಅವರದ್ದು ಆ ಸಿನಿಮಾ 685ನೇಯದ್ದು. ಅದಾದ ಬಳಿಕ ಇನ್ನೂ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ.

ಅಂದಿನ ಘಟಾನುಘಟಿ ನಾಯಕರಾದ ಶಂಕರ್​ನಾಗ್​, ಬಾಲರಾಜ್, ಕಾಶಿನಾಥ್​, ಗುರು ಕಿರಣ್​ ಸೇರಿದಂತೆ ಹಲವು ನಟರ ಜೊತೆ 10 ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ ನಟಿ ಚಿತ್ರಾ ಶೆಣೈ ಕೊನೆಗೆ ನಾಯಕಿಯ ರೋಲ್​ನಿಂದ ಹೊರಕ್ಕೆ ಬಂದರು. ಇದಕ್ಕೆ ಕಾರಣ, ಅವರಿಗೆ ರೊಮಾನ್ಸ್​ ಮಾಡಲು ಬರುವುದಿಲ್ಲ ಎನ್ನುವುದಕ್ಕೆ! ಈ ಕುರಿತ ಎಲ್ಲಾ ವಿಷಯಗಳನ್ನು ನಟಿ ಚಿತ್ರಾ ಶೆಣೈ ಅವರು ಓಪನ್​ ಆಗಿ ನ್ಯೂಸೋ ನ್ಯೂಸ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ರಿವೀಲ್​ ಮಾಡಿದ್ದಾರೆ.

ಅರ್ಪಿತಾ ವಿನಾಯಕ ಹೆಸರಿನಲ್ಲಿ ನಾಯಕಿ

ಸಿನಿಮಾಗಳಲ್ಲಿ ಇವರು ನಟಿಸಿದ್ದು ಚಿತ್ರಾ ಶೆಣೈ ಹೆಸರಿನಿಂದ ಅಲ್ಲ ಬದಲಿಗೆ ಅರ್ಪಿತಾ ವಿನಾಯಕ ಎಂಬ ಹೆಸರಿನಲ್ಲಿ. ಇದಕ್ಕೆ ಕಾರಣ ಶಂಕರ್​ನಾಗ್​ ಎಂದಿದ್ದಾರೆ ನಟಿ ಚಿತ್ರಾ. ಆಗಿನ ಸಮಯದಲ್ಲಿ ಚಿತ್ರಾ ಎನ್ನುವ ಹೆಸರಿನವರು ತುಂಬಾ ಜನ ಇದ್ದರು. ಆದ್ದರಿಂದ ಕನ್​ಫ್ಯೂಸ್​ ಆಗಬಾರದು ಎಂದು ಬೇರೆ ಹೆಸರು ಇಟ್ಟುಕೊಳ್ಳುವಂತೆ ಅವರು ಹೇಳಿದಾಗ, ಸಜೆಸ್ಟ್​ ಮಾಡುವಂತೆ ನಾನೇ ಹೇಳಿದೆ. ಆಗ ಅವರು ಇಟ್ಟ ಹೆಸರೇ ಅರ್ಪಿತಾ ವಿನಾಯಕ ಎಂದು ನಟಿ ನೆನಪಿಸಿಕೊಂಡಿದ್ದಾರೆ.

ಅನಂತ್​ ನಾಗ್​ ಜೊತೆ ರೊಮ್ಯಾಂಟಿಕ್​ ಸೀನ್​

ನಾನು ಮುಂದುವರೆದಿದ್ದರೆ ನೂರಾರು ಸಿನಿಮಾಗಳಲ್ಲಿ ನಾಯಕಿ ಆಗುತ್ತಿದ್ದೆ. ಆದರೆ ಹಾಗೆ ಆಗಲಿಲ್ಲ. ಕೆಲವೊಂದು ಸಿನಿಮಾಮಾಡಿದಾಗ ಅದರಲ್ಲಿ ನನ್ನದು ರೊಮಾನ್ಸ್​ ಮಾಡುವ ರೋಲ್​ ಇರಲಿಲ್ಲ. ಆದ್ದರಿಂದ ಎಲ್ಲ ಸಿನಿಮಾ ಹೀಗೆ ಎಂದುಕೊಂಡು ಬಿಟ್ಟೆ. ಆದರೆ ಮುಂದೆ ಹಾಗಾಗಲಿಲ್ಲ. ರೊಮಾನ್ಸ್​ ದೃಶ್ಯ ಮಾಡಲು ನನ್ನಿಂದ ಸಾಧ್ಯವೇ ಆಗಲಿಲ್ಲ. ಇದು ನನಗೆ ಆಗದ ಮಾತು ಎಂದು ನಾಯಕಿ ಪಾತ್ರದಿಂದ ಹೊರಕ್ಕೆ ಬಂದುಬಿಟ್ಟೆ ಎಂದಿದ್ದಾರೆ ನಟಿ. ಈ ಕುರಿತು ನಟ ಅನಂತ್​ನಾಗ್​ ಅವರ ಜೊತೆ ನಡೆದ ಒಂದು ಘಟನೆಯನ್ನು ಚಿತ್ರಾ ನೆನಪಿಸಿಕೊಂಡಿದ್ದಾರೆ.

ನಟ ಅನಂತ್​ ನಾಗ್​ ಅವರ ಜೊತೆ ಒಂದು ರೊಮ್ಯಾಂಟಿಕ್​ ಸೀನ್​ ಮಾಡಬೇಕಿತ್ತು. ಅದರಲ್ಲಿ ಆಗತಾನೇ ಮದುವೆಯಾದಾಕೆ ನಾನು. ಅವರು ನನ್ನನ್ನು ಕೈಯಿಂದ ತಿರುಗಿಸಿ ಹಿಡಿದುಕೊಳ್ಳುವುದು ಅಷ್ಟೇ ಸೀನ್​. ಆದರೆ ನನಗೆ ಅದನ್ನೇ ಮಾಡಲು ಆಗಲಿಲ್ಲ. 50-60 ಟೇಕ್​ ತೆಗೆದುಕೊಳ್ಳಬೇಕಾಯ್ತು. ಎಷ್ಟೋ ಬಾರಿ ಅನಂತ್​ ಸರ್​ ಅವರ ಕಾಲನ್ನೂ ತುಳಿದುಬಿಟ್ಟಿದ್ದೆ. ನಾನೇ ತುಂಬಾ ತೊಂದರೆ ಕೊಟ್ಟೆ, ಆದರೂ ಬೇಸರ ಮಾಡಿಕೊಳ್ಳದ ಅನಂತ್​ ನಾಗ್​ ಅವರು 50-60 ಟೇಕ್​ ತೆಗೆದುಕೊಂಡರು. ಆದರೆ ಕೊನೆಗೂ ಸಾಧ್ಯವೇ ಆಗಲಿಲ್ಲ. ಆಮೇಲೆ ನನ್ನ ಬದಲಿಗೆ ನಟಿ ಮಹಾಲಕ್ಷ್ಮಿಯನ್ನು ಆ ಸಿನಿಮಾಕ್ಕೆ ಆಯ್ಕೆ ಮಾಡಲಾಯಿತು. ಅಲ್ಲಿಯೇ ನನಗೆ ಈ ರೊಮಾನ್ಸ್​ ಎಲ್ಲಾ ಬರೋದಿಲ್ಲ ಎಂದು ತಿಳಿದು ನಾಯಕಿ ಪಾತ್ರದಿಂದ ದೂರವಾಗಿಬಿಟ್ಟೆ ಎಂದಿದ್ದಾರೆ ಚಿತ್ರಾ ಶೆಣೈ.