ನಿರ್ಮಾಪಕರ ಹಿತ ಕಾಯುವ ದೃಷ್ಟಿಯಿಂದ ಯುಎಫ್‌ಓ ಮತ್ತು ಕ್ಯೂಬ್‌ ಡಿಜಿಟಲ್ ಸಿನಿಮಾ ಡಿಸ್ಟ್ರಿಬ್ಯೂಷನ್‌ ಸಂಸ್ಥೆಗಳು ಸದ್ಯ ಪಡೆಯುತ್ತಿರುವ ಸೇವಾ ಶುಲ್ಕದಲ್ಲಿ ಏಳು ತಿಂಗಳ ಕಾಲ ಶೇ.50ರಷ್ಟುಶುಲ್ಕ ಕಡಿತ ಮಾಡಲು ನಿರ್ಧರಿಸಿವೆ.

ಆದರೆ ನಿರ್ಮಾಪಕರ ಸಂಘ ಈ ನಿರ್ಧಾರವನ್ನು ತಿರಸ್ಕರಿಸಿದ್ದು, ಶೇ.25 ಸೇವಾ ಶುಲ್ಕ ವಿಧಿಸಲು ಆಗ್ರಹಿಸಿದೆ. ಈ ಕುರಿತು ಯುಎಫ್‌ಓ ಮತ್ತು ಕ್ಯೂಬ್‌ ಸಂಸ್ಥೆಗೆ ಪತ್ರ ಬರೆಯಲು ನಿರ್ಮಾಪಕರು ನಿರ್ಧರಿಸಿದ್ದಾರೆ.

ಜೇಮ್ಸ್ ಸಿನಿಮಾದಲ್ಲಿ ಮತ್ತೆ ಒಂದಾಗಲಿದೆ ಪುನೀತ್‌ - ಪ್ರಿಯಾ ಆನಂದ್‌ ಜೋಡಿ

ಯುಎಫ್‌ಓ ಮತ್ತು ಕ್ಯೂಬ್‌ ಸಂಸ್ಥೆಗಳು ಪ್ರತಿ ಶೋಗೆ ನಿರ್ಮಾಪಕನಿಂದ 300 ರು. ಪಡೆಯುತ್ತಿವೆ. ವಾರಕ್ಕೆ ಒಂದು ಚಿತ್ರಮಂದಿರದಿಂದ 40ರಿಂದ 50 ಸಾವಿರ ರು.ಗಳನ್ನು ನಿರ್ಮಾಪಕ ಪಾವತಿ ಮಾಡಬೇಕಾಗುತ್ತದೆ. ಇದರಿಂದ ಎರಡು ವರ್ಷಗಳ ಕಾಲ ವಿನಾಯಿತಿ ನೀಡಬೇಕು ಎಂಬ ಮನವಿಗೆ ಯುಎಫ್‌ಓ ಮತ್ತು ಕ್ಯೂಬ್‌ ಸ್ಪಂದಿಸಿಲ್ಲ ಎಂದು ನಿರ್ಮಾಪಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಯುಎಫ್‌ಓ ಮತ್ತು ಕ್ಯೂಬ್‌ ಸಂಸ್ಥೆಗಳು ಶೇ.50 ಸೇವಾಶುಲ್ಕ ಕಡಿತ ಮಾಡಲು ಒಪ್ಪಿಕೊಂಡಿವೆ.

ಯುಎಫ್‌ಓ ಹಾಗೂ ಕ್ಯೂಬ್‌ ಸಂಸ್ಥೆಗಳ ಈ ನಿರ್ಧಾರವನ್ನು ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್‌ ಕುಮಾರ್‌ ತಿರಸ್ಕರಿಸಿದ್ದಾರೆ. ‘ನಿರ್ಮಾಪಕರು ಯಾವ ಕಾರಣಕ್ಕೂ ಇದನ್ನು ಒಪ್ಪಲ್ಲ. ನಮ್ಮ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಪ್ರದರ್ಶನ ಆದರೆ ತಾನೆ ಯುಎಫ್‌ಓ ಹಾಗೂ ಕ್ಯೂಬ್‌ನವರಿಗೆ ಜಾಹೀರಾತು ಬರುವುದು. ನಮ್ಮ ಚಿತ್ರಗಳ ನಡುವೆ ಜಾಹೀರಾತು ಹಾಕಿಕೊಂಡು, ಅದರ ಹಣವನ್ನು ಅವರು ಪಡೆಯುತ್ತಾರೆ.

ಹೊಸ ಚಿತ್ರಗಳ ಬಿಡು​ಗಡೆ ಇಲ್ಲ, ಹಳೆ ಚಿತ್ರಗಳೇ ಮತ್ತೆ ರಿಲೀಸ್‌..!

ಸಿನಿಮಾ ಪ್ರದರ್ಶನ ಮಾಡಲು ನಾವು ಶುಲ್ಕ ಕಟ್ಟಬೇಕು. ಇದು ಯಾವ ನ್ಯಾಯ. ಹೀಗಾಗಿ ಅವರ ಶೇ.50 ಭಾಗದ ಶುಲ್ಕ ವಿನಾಯಿತಿ ಯೋಜನೆಯನ್ನು ನಾವು ತಿರರಸ್ಕರಿಸುತ್ತಿದ್ದೇವೆ. ಸಂಪೂರ್ಣವಾಗಿ ಶುಲ್ಕವನ್ನೇ ತೆಗೆದುಕೊಳ್ಳಬಾರದು ಅಥವಾ ಎರಡು ವರ್ಷಗಳ ಕಾಲ ಶೇ.25ರಷ್ಟುಮಾತ್ರ ಶುಲ್ಕ ವಿಧಿಸಬೇಕು. ಇದು ನಮ್ಮ ಅಂತಿಮ ಬೇಡಿಕೆ’ ಎನ್ನುತ್ತಾರೆ ಪ್ರವೀಣ್‌ ಕುಮಾರ್‌.

280 ಮೂವಿ ರೆಡಿ: ಥಿಯೇಟರ್ ತೆರೆದರೂ ಸಿನಿಮಾ ರಿಲೀಸ್ ಸದ್ಯಕ್ಕಿಲ್ಲ

ಯುಎಫ್‌ಓ, ಕ್ಯೂಬ್‌ ಏಳು ತಿಂಗಳ ಮಟ್ಟಿಗೆ ಸೇವಾ ಶುಲ್ಕದಲ್ಲಿ ಶೇ.50ರಷ್ಟುವಿನಾಯಿತಿ ಕೊಟ್ಟಿದ್ದಾರೆ. ಇದು ನಿರ್ಮಾಪಕರಿಗೆ ಯಾವ ಕಾರಣಕ್ಕೂ ಸಾಲದು. ಕನಿಷ್ಠ ಒಂದು ವರ್ಷದ ಮಟ್ಟಿಗಾದರೂ ಶೇ.25ರಷ್ಟುಶುಲ್ಕ ವಿಧಿಸಲಿ. ಇದು ನಮ್ಮ ಮನವಿ. ಈ ನಿಟ್ಟಿನಲ್ಲಿ ನಾವು ಮತ್ತೊಮ್ಮೆ ಯೂಎಫ್‌ಓ ಹಾಗೂ ಕ್ಯೂಬ್‌ ಸಂಸ್ಥೆಗಳಿಗೆ ಪತ್ರ ಬರೆಯುತ್ತೇವೆ ಎಂದು ನಿರ್ಮಾಪಕರ ಸಂಘದ ಕಾರ್ಯದರ್ಶಿ ಕೆ. ಮಂಜು ಹೇಳಿದ್ದಾರೆ.

ಯುಎಫ್‌ಒ ಎಂದರೇನು:

ಫುಲ್ ಲೆಂಗ್ತ್ ಸಿನಿಮಾ ಹಾಗೂ ಥಿಯೇಟರ್‌ ಕಂಟೆಂಟ್‌ಗಳನ್ನು ಸ್ಯಾಟ್‌ಲೈಟ್‌ ಮೂಲಕ ಡೆಲಿವರಿ ಮಾಡುವ ಕಂಪನಿ UFO. ಇದು ಭಾರತದ ಅತ್ಯಂತ ದೊಡ್ಡ ಸಿನಿಮಾ ಡಿಸ್ಟ್ರಿಬ್ಯೂಷನ್ ನೆಟ್‌ವರ್ಕ್.