ರಾಷ್ಟ್ರೀಯ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ, ಕೊಡವ ಸಮುದಾಯದಿಂದ ಸಿನಿಮಾ ಇಂಡಸ್ಟ್ರಿಗೆ ಪ್ರವೇಶಿಸಿದ ಮೊದಲ ಮಹಿಳೆ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ಕನ್ನಡಿಗರು ಮತ್ತು ಕೊಡವ ಸಮಾಜದಿಂದ ಟೀಕೆ ವ್ಯಕ್ತವಾಗಿದೆ.

ಬೆಂಗಳೂರು (ಜು.5): ಸ್ಯಾಂಡಲ್‌ವುಡ್‌ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ನಟಿ ರಶ್ಮಿಕಾ ಮಂದಣ್ಣ ಹೊಸ ವಿವಾದ ಸೃಷ್ಟಿಸಿದ್ದಾರೆ. ಕಿರಿಕ್‌ ಪಾರ್ಟಿ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಲಗ್ಗೆ ಇಟ್ಟ ನಟಿ ರಶ್ಮಿಕಾ ಮಂದಣ್ಣ ಬಳಿಕ ಮುಟ್ಟಿದ್ದೆಲ್ಲಾ ಚಿನ್ನವಾಗಿದೆ. ಇಂದು ಅವರು ದೇಶದ ಅತ್ಯಂತ ಸುಪ್ರಸಿದ್ಧ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇಷ್ಟಿದ್ದರೂ ಕನ್ನಡಿಗರು ಮಾತ್ರ ರಶ್ಮಿಕಾ ಮಂದಣ್ಣ ಬಗ್ಗೆ ಅಷ್ಟಾಗಿ ಹೆಮ್ಮೆ ಹೊಂದಿಲ್ಲ. ಅದಕ್ಕೆ ಕಾರಣ ಸಾಕಷ್ಟಿದೆ. ಇದರ ನಡುವೆ ರಾಷ್ಟ್ರೀಯ ಚಾನೆಲ್‌ವೊಂದರಲ್ಲಿ ಮಾತನಾಡುವ ವೇಳೆ ಅವರು ನೀಡಿದ ಹೇಳಿಕೆಗೆ ಕನ್ನಡಿಗರು ಮಾತ್ರವಲ್ಲ ಅವರ ಕೊಡವ ಸಮಾಜ ಕೂಡ ಸಿಟ್ಟಾಗಿದೆ.

ಹಿರಿಯ ಪತ್ರಕರ್ತೆ ಬರ್ಖಾ ದತ್‌ ಅವರಿಗೆ ನೀಡಿದ ಸಂದರ್ಶನವೊಂದರಲ್ಲಿ ಪ್ರಶ್ನೆಗೆ ಉತ್ತರ ನೀಡುವ ವೇಳೆ, ತಾನು ಕೊಡವ ಸಮುದಾಯದಿಂದ ಸಿನಿಮಾ ಇಂಡಸ್ಟ್ರಿಗೆ ಪ್ರವೇಶಿಸಿದ ಮೊದಲ ಮಹಿಳೆ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಈಗ ಎಲ್ಲೆಡೆ ವೈರಲ್ ಆಗುತ್ತಿದ್ದು, ನಟಿಗೆ ತಮ್ಮದೇ ಸಮುದಾಯದ ಇತಿಹಾಸದ ಬಗ್ಗೆ ತಿಳಿದಿಲ್ಲವೇನು? ಎಂಬ ಟೀಕೆ ವ್ಯಕ್ತವಾಗುತ್ತಿದೆ.

ಕೂರ್ಗ್‌ನಿಂದ ರಶ್ಮಿಕಾ ಮಂದಣ್ಣ ಸಿನಿಮಾ ರಂಗಕ್ಕೆ ಬರುವ ಹಲವು ವರ್ಷಗಳ ಮುಂಚೆಯೇ ಪ್ರಸಿದ್ಧ ನಟಿ ಪ್ರೇಮಾ, ನಿಧಿ ಸುಬ್ಬಯ್ಯ, ಹರ್ಷಿಕಾ ಪೂಣಚ್ಚ, ಶುಭ್ರ ಅಯ್ಯಪ್ಪ ಸೇರಿದಂತೆ ಅನೇಕ ಕೊಡವ ವ್ಯಕ್ತಿಗಳು ಕನ್ನಡ, ತಮಿಳು, ತೆಲುಗು ಮತ್ತು ಭೋಜ್‌ಪುರಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ರಶ್ಮಿಕಾಗೆ ಈ ಎಲ್ಲರ ಹೆಸರುಗಳು ಮರೆತುಹೋಗಿದೆಯೇ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಪ್ರೇಮಾ, ನಿಧಿ ಇವರೆಲ್ಲರೂ ಕೊಡವರಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನು ರಶ್ಮಿಕಾ ಹೇಳಿಕೆ ಬಗ್ಗೆ ಸೈಲೆಂಟ್‌ ಆಗಿಯೇ ತಿರುಗೇಟು ನೀಡಿರುವ ಹಿರಿಯ ನಟಿ ಪ್ರೇಮಾ, ಖಾಸಗಿ ಟಿವಿಗೆ ನೀಡಿದ ಹೇಳಿಕೆಯಲ್ಲಿ 'ಈ ಬಗ್ಗೆ ನಾವೇನು ಮಾತನಾಡೋದು, ಜನಕ್ಕೆ ಇದರ ಬಗ್ಗೆ ಗೊತ್ತಿದೆ. ಅವರ ಹೇಳಿಕೆಯ ಬಗ್ಗೆ ಜನರೇ ಕಾಮೆಂಟ್‌ ಮಾಡಿದ್ದಾರೆ. ಕೊಡವ ಸಮಾಜದಿಂದ ಯಾರೆಲ್ಲಾ ಹೀರೋಯಿನ್ಸ್ ಆಗಿದ್ದಾರೆ ಎಂದು ಅವರೇ ತಿಳಿಸಿದ್ದಾರೆ. ನಾನೆಂಥ ಹೇಳೋದು ಇದರಲ್ಲಿ. ಅವರ ಮಟ್ಟಿಗೆ ನಾವು ಮಾತನಾಡೋದಕ್ಕೆ ಆಗೋದಿಲ್ಲ.ನಾವು ನಾವೇ, ಅವರು ಅವರೇ. ಜನ ಹೇಗೆ ಮಾತಾಡ್ತಾರೆ ಅಂತಾ ಕೂರ್ಗ್‌ ಜನಕ್ಕೆ ಗೊತ್ತಿದೆ. ನಾನು ಇಂಡಸ್ಟ್ರಿಯಲ್ಲಿ ಮಾತನಾಡೋದಕ್ಕಿಂತ ಕೆಲಸ ಮಾಡಿಕೊಂಡು ಹೋಗಿದ್ದೀನಿ. ನಾನು ಒಬ್ಬಳು ಕೆಲಸಗಾರರು. ಮುಂದೆ ಏನು ಮಾಡಬೇಕು ಅದರ ಬಗ್ಗೆ ಯೋಚನೆ ಮಾಡುತ್ತೇವೆ ಅಷ್ಟೇ. ಅವರ ಮಾತಿಗೆಲ್ಲಾ ಕಾಮೆಂಟ್‌ ಮಾಡೋವಷ್ಟು ದೊಡ್ಡ ವ್ಯಕ್ತಿಯೇನಲ್ಲ. ಜನರೇ ನನಗೆ ಪ್ರಶಸ್ತಿ ಕೊಟ್ಟಿದ್ದಾರೆ. ಮತ್ತೇನು ಬೇಕು' ಎಂದು ಹೇಳಿದ್ದಾರೆ.

'ನಾನು ಸಿನಿಮಾಕ್ಕೆ ಬಂದ ನಮ್ಮ ಸಮಾಜ ತುಂಬಾ ಪ್ರೋತ್ಸಾಹ ನೀಡಿತ್ತು. ನನಗಿಂತ ಹಿಂದೆಯೂ ತುಂಬಾ ಜನ ಬಂದಿದ್ದರು. ಹಲವು ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. ಶಶಿಕಲಾ ಎನ್ನುವವರು ಬಹಳ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಹೀರೋಯಿನ್‌ ಆಗಿ ನಾನು ಬಂದಿದ್ದು ಅಷ್ಟೇ. ಅವರು ನಮ್ಮ ಬಗ್ಗೆ ತುಂಬಾ ಹೆಮ್ಮೆಪಡ್ತಾರೆ. ಜನ ಬೆಂಬಲ ನೀಡದೇ ನಾನು ಬೆಳೆಯುತ್ತಲೇ ಇರಲಿಲ್ಲ' ಎಂದಿದ್ದಾರೆ.

ಒಂದೆಡೆ ಸಾಲು ಸಾಲು ಸಿನಿಮಾಗಳ ಯಶಸ್ಸಿನಿಂದ ಗಮನಸೆಳೆಯುತ್ತಿರುವ ರಶ್ಮಿಕಾ ಮಂದಣ್ಣ, ಮಾತನಾಡುವ ವೇಳೆ ಎಡವಟ್ಟು ಮಾಡಿಕೊಂಡಿರುವುದು ಇದು ಮೊದಲೇನಲ್ಲ. ಹಲವಾರು ವೇದಿಕೆಗಳಲ್ಲಿ ಇದೇ ರೀತಿ ಮಾತನಾಡಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.ಇದು ಅವರ ಅಭಿಮಾನಿಗಳಿಗೂ ಕೆಲವೊಮ್ಮೆ ಬೇಸರ ತಂದಿದೆ.