ನಟಿ ಇಳಾ ವಿಟ್ಲ 'ಪ್ರೇಮದ ಊರಲಿ' ಸಿನಿಮಾದಲ್ಲಿ ಅಜ್ಜಿಯ ಪಾತ್ರ ಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಹಿಂದೆ 'ಕಾದಂಬರಿ' ಸಿನಿಮಾದಲ್ಲಿ ಬೋಲ್ಡ್ ಪಾತ್ರಕ್ಕಾಗಿ ನಟ ರವಿಚಂದ್ರನ್ ಅವರು ಇಳಾ ಅವರನ್ನು ಕರೆಸಿದ್ದರು. ಆದರೆ, ಅವರು ತುಂಬಾ ಸಣ್ಣಗಿದ್ದ ಕಾರಣ ಆ ಅವಕಾಶ ಕೈತಪ್ಪಿದ್ದ ರೋಚಕ ಘಟನೆಯನ್ನು ನಟಿ ಹಂಚಿಕೊಂಡಿದ್ದಾರೆ.

ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ತಮ್ಮದೇ ಆದ ವಿಶಿಷ್ಟ ನಟನೆಯ ಮೂಲಕ ಗುರುತಿಸಿಕೊಂಡಿರುವ ಪ್ರತಿಭಾವಂತ ನಟಿ ಇಳಾ ವಿಟ್ಲ (Ila Vitla). ಇವರೀಗ ಮತ್ತೆ ಸುದ್ದಿಯಲ್ಲಿ ಇರೋದು ಬ್ಲಾಕ್​ ಬಸ್ಟರ್​ ಸಿನಿಮಾ ಎಂದು ಗುರುತಿಸಿಕೊಂಡಿರುವ ಪ್ರೇಮದ ಊರಲಿ ಸಿನಿಮಾ ಮೂಲಕ. ನಟಿಯಾಗುವ ಟ್ಯಾಲೆಂಟ್​ ಇರೋ ಇಳಾ ಸದ್ಯ ಚಿಕ್ಕಪುಟ್ಟ ಪಾತ್ರದಲ್ಲಿಯೇ ಸಂತೃಪ್ತಿ ಪಟ್ಟುಕೊಳ್ಳುತ್ತಿದ್ದು, ಪ್ರೇಮದ ಊರಲಿ (Premada Oorali) ಸಿನಿಮಾದಲ್ಲಿ ಇನ್ನೂ ಒಂದು ಹಂತ ಮುಂದಕ್ಕೆ ಹೋಗಿದ್ದಾರೆ. ಇಲ್ಲಿ ನಾಯಕನ ಅಪ್ಪ, ಯೇ ಮುದ್ಕಿ... ಯೇ ಮುದ್ಕಿ... ಎಂದು ಅಮ್ಮನನ್ನು ತಮಾಷೆಯಾಗಿ ಕರೆಯೋದು ಉಂಟು. ಆ ಮುದುಕಿಯ ರೋಲ್​ ಮಾಡಿರೋ ನಟಿನೇ ಇಳಾ ವಿಟ್ಲ. ಬಹುಶಃ ಈ ಸಿನಿಮಾ ನೋಡಿದವರಿಗೆ ಅಜ್ಜಿಯ ರೋಲ್​ ಮಾಡಿದ್ದು, ಇಷ್ಟು ಯಂಗ್​ ಸ್ಟಾರ್ ಎಂದು ತಿಳಿಯದೇ ಹೋಗಬಹುದು.

ಅಂದಹಾಗೆ ಗೂಗಲ್​ ದಾಖಲೆ ಪ್ರಕಾರ ನಟಿ ಇಳಾ ವಿಟ್ಲಾ ಅವರಿಗೆ ಈಗ 44 ವರ್ಷ ವಯಸ್ಸು. ಆದರೆ ನೋಡಲು ಇನ್ನೂ ಯಂಗ್​. ತಮ್ಮ ನೇರ ನುಡಿ ಹಾಗೂ ಬೋಲ್ಡ್ ವ್ಯಕ್ತಿತ್ವದಿಂದಲೇ ಸದ್ದು ಮಾಡುತ್ತಲೇ ಇರುತ್ತಾರೆ. ಈಚೆಗೆ ಅವರು, ಕೊರಗಜ್ಜನಿಗೆ ಹರಕೆ ತೀರಿಸಲು ಹೋಗಿ ಸುದ್ದಿಯಾಗಿದ್ದರು. ಕಳೆದುಹೋಗಿದ್ದ ಹೊಸ ಮೊಬೈಲ್ ಸಿಕ್ಕಿದ್ದಕ್ಕೆ ಇಳಾ ವಿಟ್ಲಾ ಅವರು ಈಗ ಹರಕೆ ತೀರಿಸಿದ್ದಾರೆ. ಬಳಿಕ ಮಾತನಾಡಿದ ಅವರು, ಕೊರಗಜ್ಜನ ಮೇಲೆ ತಮಗೆ ಇರುವ ಭಕ್ತಿ ಹಾಗೂ ನಂಬಿಕೆಯ ಬಗ್ಗೆ ವಿವರಿಸಿದ್ದರು. ಇಂತಿಪ್ಪ ಇಳಾ ಅವರು ಈಚೆಗೆ, ತಮ್ಮ ಕುತೂಹಲದ ಘಟನೆಯೊಂದನ್ನು ಶೇರ್​ ಮಾಡಿಕೊಂಡಿದ್ದರು.

ರವಿಚಂದ್ರನ್​ ಆಫರ್​!

ಅದು ಕ್ರೇಜಿಸ್ಟಾರ್​ ರವಿಚಂದ್ರನ್​ ಅವರು ಸಿನಿಮಾಕ್ಕೆ ಆಫರ್​ ಕೊಟ್ಟಿದ್ದ ರೋಚಕ ಸ್ಟೋರಿ. ಒಮ್ಮೆ ಇಳಾ ವಿಟ್ಲ ಅವರಿಗೂ ರವಿಚಂದ್ರನ್ ಅವರ ಕಚೇರಿಯಿಂದ ಬುಲಾವ್ ಬಂದಿತ್ತಂತೆ. ಅಲ್ಲಿ ಸ್ವಲ್ಪ ಬೋಲ್ಡ್​ ಪಾತ್ರ ಮಾಡಬೇಕಿತ್ತು. ಅದಕ್ಕಾಗಿ ನಟಿಯನ್ನು ಖುದ್ದು ನೋಡದಿದ್ದ ರವಿಚಂದ್ರನ್​ ಅವರನ್ನು ಕರೆದಿದ್ದರಂತೆ. ರವಿಚಂದ್ರನ್ ಅವರು ಇಳಾ ಅವರನ್ನು ಯಾವುದೋ ಫೋಟೋದಲ್ಲಿ ನೋಡಿ, ಇವರು ಸ್ವಲ್ಪ ದಪ್ಪ ಇದ್ದಾರೆ ಎಂದು ಭಾವಿಸಿ ಕರೆಸಿದ್ದರು. ಆದರೆ, ನೇರವಾಗಿ ಇಳಾ ಅವರನ್ನು ನೋಡಿದ ತಕ್ಷಣ ಕ್ರೇಜಿ ಸ್ಟಾರ್‌ಗೆ ಅಚ್ಚರಿಯಾಯಿತು. ಆದರೆ ಆಗ ಸಿಕ್ಕಾಪಟ್ಟೆ ಸಣ್ಣಗಿದ್ದ ನಟಿಯನ್ನು ನೋಡಿ ರವಿಚಂದ್ರನ್​ ಸುಸ್ತಾಗಿ ಹೋಗಿದ್ದನ್ನು ನಟಿ ನೆನಪಿಸಿಕೊಂಡಿದ್ದಾರೆ.

ನೀನು ಆ ರೋಲ್​ಗೆ ಆಗಲ್ಲ ಬಿಡಮ್ಮಾ

ರವಿಚಂದ್ರನ್ ಅವರು 'ಕಾದಂಬರಿ' ಸಿನಿಮಾದಲ್ಲಿ ನಟನೆಗಾಗಿ ಕರೆದದ್ದು. ಸಂದರ್ಶನವೊಂದರಲ್ಲಿ ಈ ವಿಷಯವನ್ನು ಹೇಳಿದ್ದ ಇಳಾ, "ಅವತ್ತು ನಾನು ಬೆಂಗಳೂರಿಗೆ ಬಂದಾಗ ಹಾಕಿರೋ ಬ್ಲೌಸ್ ಎರಡೇ ಸ್ಟಿಚ್ ಬಿಚ್ಚಿದೀನಿ ಅಷ್ಟೇ ಇರೋದು ನಾನು, ನನ್ನ ಲೈಫ್ ಅಲ್ಲಿ ನಾನಿದ್ದಿದ್ದೇ ಮೂರೇ ಕೆಜಿ!" ಎಂದು ತಮ್ಮ ಅಂದಿನ ದೇಹದಾರ್ಢ್ಯತೆಯ ಬಗ್ಗೆ ನಗುತ್ತಲೇ ವಿವರಿಸಿದ್ದರು. ನನ್ನನ್ನು ನೋಡಿ ರವಿ ಸರ್​, ಏನಮ್ಮ ಫೋಟೋದಲ್ಲಿ ಹಂಗ್ ಕಾಣ್ತಿದ್ದೀಯಾ, ಈಗ್ ನೋಡಿದ್ರೆ ಹಿಂಗ್ ಇದ್ದೀಯಾ? ಏನಿಲ್ಲ ಬಿಡಮ್ಮ ಆ ಪಾತ್ರ ನೀನ್ ಮಾಡಕ್ಕೆ ಆಗಲ್ಲ ಎಂದು ಯಾವುದೇ ಮುಚ್ಚುಮರೆಯಿಲ್ಲದೆ, ಮುಖಕ್ಕೆ ಹೊಡೆದಂತೆ ನೇರವಾಗಿ ಹೇಳಿಬಿಟ್ಟರು ಎನ್ನೋದನ್ನು ನಟಿ ನೆನಪಿಸಿಕೊಂಡಿದ್ದರು. ಇದೀಗ ಪ್ರೇಮದ ಊರಲಿ ಸಿನಿಮಾ ಮೂಲಕ ಮತ್ತೆ ಖ್ಯಾತಿ ಗಳಿಸುತ್ತಿದ್ದಾರೆ.