ಅಂಜನ್, ಚೈತ್ರಾ ತೋಟದ್ ನಟನೆಯ ‘ಹುಲಿಬೀರ’ ಉತ್ತರ ಕರ್ನಾಟಕದ ಗ್ರಾಮೀಣ ಬದುಕು, ಪ್ರೀತಿ, ಪಂಚಾಯಿತಿ ರಾಜಕೀಯ ಮತ್ತು ಯಲ್ಲವ್ವನ ಸುತ್ತ ಸಾಗುತ್ತದೆ. ಸಿನಿಮಾ ಹೇಗಿದೆ? ಇಲ್ಲಿದೆ ಸಂಪೂರ್ಣ ವಿಮರ್ಶೆ.

ಆರ್‌.ಕೇಶವಮೂರ್ತಿ

ಹಾಸ್ಯ ಕಾರ್ಯಕ್ರಮ ನಡೆಸಿಕೊಡಲು ಬರುವ ಪ್ರಾಣೇಶ್‌, ಹಳ್ಳಿಯ ಯುವಕನ ಕತೆ ಹೇಳುತ್ತಾರೆ. ಅಪ್ಪನ ಆಸೆಯಂತೆ ಓದಿ ವಿದ್ಯಾವಂತನಾಗದ ಯುವಕ, ಅಮ್ಮನ ಆಣೆ ಪ್ರಮಾಣಕ್ಕೆ ಕಟ್ಟು ಬಿದ್ದು ಊರು ಕುರಿ ಮಂದೆ ಹಿಂದೆ ಹೋಗುತ್ತಾನೆ, ಕುರಿ, ಕಾಡು- ಪ್ರಕೃತಿ, ಬಟಾ ಬಯಲು, ಪ್ರೀತಿಸಿದ ಹಳೆಯ ಪ್ರೇಯಸಿ, ಮದುವೆಯಾಗಲು ತುದಿಗಾಲ ಮೇಲೆ ನಿಂತಿರುವ ಹೊಸ ಪ್ರೇಯಸಿ, ಹಳ್ಳಿಯ ಪಂಚಾಯಿತಿ ರಾಜಕೀಯ... ಇಂಥ ಹತ್ತು ಹಲವು ವಿಷಯಗಳನ್ನು ಒಳಗೊಂಡ ಅಪ್ಪಟ ಉತ್ತರ ಕರ್ನಾಟಕದ ಹಿನ್ನೆಲೆಯ ಸಿನಿಮಾ ‘ಹುಲಿಬೀರ’.

ಗ್ರಾಮೀಣ ಸೊಗಡಿನ ಕತೆಯನ್ನು ಪ್ರೇಕ್ಷಕರಿಗೆ ಹತ್ತಿರವಾಗಿಸುವುದು ವೀರ್‌ಸಮರ್ಥ್‌ ಸಂಗೀತ ಮತ್ತು ಎರಡು ಜಾನಪದ ಗೀತೆಗಳು. ಕತೆ ಹಾಗೂ ಭೌಗೋಳಿಕ ಪ್ರದೇಶ ಈ ಎರಡನ್ನೂ ಪರಸ್ಪರ ಪೂರಕವಾಗಿ ಸಮರ್ಥವಾಗಿ ದುಡಿಸಿಕೊಂಡಿದ್ದಾರೆ ನಿರ್ದೇಶಕ ಮಲ್ಲಿಕಾರ್ಜುನ್‌. ಚಿತ್ರದ ನಾಯಕ ಅಂಜನ್‌, ಪಂಚಾಯಿತಿಯ ಇಬ್ಬರು ಅಧ್ಯಕ್ಷರು, ರಂಗಯಾಣ ರಘು, ನಾಯಕಿ ಪಾತ್ರಧಾರಿಗಳು... ಹೀಗೆ ಚಿತ್ರದ ಪ್ರತಿ ಪಾತ್ರವೂ ಚಿತ್ರಕಥೆಗೆ ಹೆಗಲಿನಂತೆ ರೂಪುಗೊಂಡಿರುವುದು ‘ಹುಲಿಬೀರನ’ ಶಕ್ತಿ.

ತನ್ನ ಮಗ ಓದಿ ಅಫೀಸರ್‌ ಆಗಬೇಕು ಎಂಬುದು ನಾಯಕನ ತಂದೆಯ ಆಸೆ. ಆದರೆ, ಪ್ರಾರ್ಥನೆ, ಪೂಜೆ, ಅರಿಕೆಯ ಫಲವಾಗಿ ಹುಟ್ಟುವ ಬೀರನಿಗೆ ಓದು ತಲೆಗೆ ಹತ್ತಲ್ಲ. ಯಾವಾಗಲೂ ಸ್ನೇಹಿತರು, ಗಲಾಟೆಗಳ ಜೊತೆಗೆ ಅಕ್ರಮ ಸಂಬಂಧಗಳಿಂದ ದಾರಿ ತಪ್ಪಿ ಚಿಕ್ಕಂದಿನಲ್ಲೇ ಪೋಲಿ ಬೀಳುತ್ತಾನೆ. ಬೀರನಿಗೆ ಮಾವನ ಮಗಳೆಂದರೆ ಬಲು ಪ್ರೀತಿ. ಆಕೆಗೂ ಇವನೆಂದರೆ ಪ್ರಾಣ. ಅಪ್ಪನಿಂದ ಬೈಸಿಕೊಳ್ಳುತ್ತಲೇ ಇರುವ ನಾಯಕ ಊರು ಬಿಡುವುದು ಯಾಕೆ, ಪ್ರೀತಿ ಮಾವನ ಮಗಳ ಜೊತೆಗೆ ಮದುವೆ ಆಗುತ್ತದೆಯೇ, ಬೀರ ಮೈ ಮೇಲೆ ಯಲ್ಲವ್ವ ಬರುವುದು ಯಾಕೆ ಎನ್ನುವುದು ಮುಂದಿನ ಕತೆ.

ಚಿತ್ರ: ಹುಲಿಬೀರ

ತಾರಾಗಣ: ಅಂಜನ್‌, ಚೈತ್ರಾ ತೋಟದ್‌, ವನು ಪಾಟೀಲ್‌, ರಾಜೇಂದ್ರ ಕಾರಂತ್‌, ರಂಗಯಾಣ ರಘು, ಮಲ್ಲು ಬಾಗಲಕೋಟೆ

ನಿರ್ದೇಶನ: ಮಲ್ಲಿಕಾರ್ಜುನ್‌

ರೇಟಿಂಗ್‌: 3

ಸಂಗೀತ ಮತ್ತು ಛಾಯಾಗ್ರಾಹಣ ಚಿತ್ರದ ಶಕ್ತಿಯಾಗಿ ಕೆಲಸ ಮಾಡಿದ್ದು, ನಾಯಕನ ಮೈ ಮೇಲೆ ಬರುವ ಯಲ್ಲವ್ವ, ಆ ಹುಟ್ಟಿಕೊಳ್ಳುವ ಸಾಹಸ ಚಿತ್ರದ ಹೈ ವೋಲ್ಟೇಜ್‌ ದೃಶ್ಯಕ್ಕೆ ನೋಡುಗರು ಫಿದಾ ಆಗುತ್ತಾರೆ. ಬಯಲೂರಿನ ಬೀರ ಮತ್ತು ಯಲ್ಲವ್ವನ ಈ ಚಿತ್ರವನ್ನು ನೋಡುವುದಕ್ಕೆ ಅಡ್ಡಿಯಿಲ್ಲ.