‘ತತ್ಸಮ ತದ್ಭವ’ ಸಿನಿಮಾದ ಮೂಲಕ ವಿಮರ್ಶಕರ ಮೆಚ್ಚುಗೆ ಗಳಿಸಿದ್ದ ನಿರ್ದೇಶಕ ವಿಶಾಲ್ ಅತ್ರೇಯ, ಧ್ರುವ ಸರ್ಜಾ ಜೊತೆ ಹೊಸ ಸಿನಿಮಾಗಾಗಿ ಮಾತುಕತೆ ನಡೆಸುತ್ತಿದ್ದಾರೆ ಎಂಬ ಸುದ್ದಿ ಈ ಹಿಂದೆ ವರದಿಯಾಗಿತ್ತು.
ಕನ್ನಡ ಚಿತ್ರರಂಗದಲ್ಲಿ ತಮ್ಮ ಚೊಚ್ಚಲ ಸಿನಿಮಾದಲ್ಲೇ ಗಮನ ಸೆಳೆದಿದ್ದ ನಟಿ ನಭಾ ನಟೇಶ್ ಇದೀಗ ಮತ್ತೆ ಸ್ಯಾಂಡಲ್‌ವುಡ್‌ಗೆ ಮರಳಲು ಸಜ್ಜಾಗಿದ್ದಾರೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ನಿರ್ದೇಶಕ ವಿಶಾಲ್ ಅತ್ರೇಯ ಕಾಂಬಿನೇಷನ್‌ನಲ್ಲಿ ಮೂಡಿಬರಲಿರುವ ಹೊಸ ಸಿನಿಮಾದಲ್ಲಿ ನಭಾ ನಟೇಶ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
‘ತತ್ಸಮ ತದ್ಭವ’ ಸಿನಿಮಾದ ಮೂಲಕ ವಿಮರ್ಶಕರ ಮೆಚ್ಚುಗೆ ಗಳಿಸಿದ್ದ ನಿರ್ದೇಶಕ ವಿಶಾಲ್ ಅತ್ರೇಯ, ಧ್ರುವ ಸರ್ಜಾ ಜೊತೆ ಹೊಸ ಸಿನಿಮಾಗಾಗಿ ಮಾತುಕತೆ ನಡೆಸುತ್ತಿದ್ದಾರೆ ಎಂಬ ಸುದ್ದಿ ಈ ಹಿಂದೆ ವರದಿಯಾಗಿತ್ತು. ಇದೀಗ ಈ ಪ್ರಾಜೆಕ್ಟ್ ಅಂತಿಮಗೊಂಡಿದ್ದು, ಧ್ರುವ ಸರ್ಜಾ ಮತ್ತು ವಿಶಾಲ್ ಅತ್ರೇಯ ಇದೇ ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ.
ಸಂಪೂರ್ಣ ಮನರಂಜನೆಯ ಕಥಾಹಂದರ ಹೊಂದಿರುವ ಈ ಸಿನಿಮಾ, ಧ್ರುವ ಸರ್ಜಾ ಅವರನ್ನು ಈ ಹಿಂದೆ ಕಾಣಿಸಿಕೊಂಡಿರದ ಹೊಸ ಶೇಡ್‌ನಲ್ಲಿ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಮಾಡಲಿದೆ ಎನ್ನಲಾಗಿದೆ. ಸಾಮಾನ್ಯವಾಗಿ ತೀವ್ರ ಆ್ಯಕ್ಷನ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಧ್ರುವ ಸರ್ಜಾ, ಈ ಸಿನಿಮಾದಲ್ಲಿ ವಿಭಿನ್ನ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಚಿತ್ರದ ಪ್ರಮುಖ ಆಕರ್ಷಣೆ.
ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಟಿಜಿ ವಿಶ್ವ ಪ್ರಸಾದ್ ಈ ಸಿನಿಮಾವನ್ನು ನಿರ್ಮಿಸಲಿದ್ದಾರೆ. ಧ್ರುವ ಸರ್ಜಾ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಬಹುನಿರೀಕ್ಷಿತ ಪ್ರಾಜೆಕ್ಟ್‌ನ ಅಧಿಕೃತ ಘೋಷಣೆ ಹೊರಬರುವ ಸಾಧ್ಯತೆ ಇದೆ.
ಕನ್ನಡಕ್ಕೆ ಮರಳುತ್ತಿರುವ ನಭಾ ನಟೇಶ್
ಈ ಸಿನಿಮಾದ ಮತ್ತೊಂದು ವಿಶೇಷತೆ ಎಂದರೆ ನಭಾ ನಟೇಶ್ ಅವರ ಸ್ಯಾಂಡಲ್‌ವುಡ್ ಕಮ್‌ಬ್ಯಾಕ್. 2015ರಲ್ಲಿ ಶಿವರಾಜ್‌ಕುಮಾರ್ ಅಭಿನಯದ ಸೂಪರ್‌ಹಿಟ್ ಸಿನಿಮಾ ‘ವಜ್ರಕಾಯ’ ಮೂಲಕ ನಭಾ ನಟೇಶ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಎ. ಹರ್ಷ ನಿರ್ದೇಶನದ ಈ ಸಿನಿಮಾದಲ್ಲಿ ನಭಾ ಅವರ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಇದೇ ವೇಳೆ ಅವರಿಗೆ ‘ಪಟಾಕ ಹುಡುಗಿ’ ಎಂಬ ಜನಪ್ರಿಯ ಟ್ಯಾಗ್ ಕೂಡ ಸಿಕ್ಕಿತ್ತು.
ಬಳಿಕ ನಭಾ ನಟೇಶ್ ‘ಲೀ’ ಸಿನಿಮಾದಲ್ಲಿ ನಟಿಸಿದರು. ನಂತರ ತೆಲುಗು ಚಿತ್ರರಂಗದತ್ತ ಹೆಜ್ಜೆ ಹಾಕಿದ ಅವರು ‘ನನ್ನು ದೊಚುಕುಂದುವಟೆ’ ಮೂಲಕ ಗಮನ ಸೆಳೆದರು. ಆ ಬಳಿಕ ಪುರಿ ಜಗನ್ನಾಥ್ ನಿರ್ದೇಶನದ ‘ಇಸ್ಮಾರ್ಟ್ ಶಂಕರ್’ ಸಿನಿಮಾ ಅವರ ವೃತ್ತಿಜೀವನಕ್ಕೆ ಮತ್ತಷ್ಟು ಗುರುತನ್ನು ತಂದುಕೊಟ್ಟಿತು.
ನಂತರ ‘Solo Brathuke So Better’, ‘Disco Raja’, ‘Alludu Adhurs’, ‘Maestro’ ಮತ್ತು ‘Darling’ ಸೇರಿದಂತೆ ಹಲವು ತೆಲುಗು ಸಿನಿಮಾಗಳಲ್ಲಿ ನಭಾ ನಟೇಶ್ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ‘ನಾಗಬಂಧಂ’ ಹಾಗೂ ‘ಸ್ವಯಂಬು’ ಸಿನಿಮಾಗಳಲ್ಲೂ ನಟಿಸಿದ್ದಾರೆ. ವಿಭಿನ್ನ ಪ್ರಕಾರದ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಗುರುತನ್ನು ಅವರು ಮೂಡಿಸಿಕೊಂಡಿದ್ದಾರೆ.
ಧ್ರುವ ಸರ್ಜಾ ಜೊತೆ ಮೊದಲ ಬಾರಿಗೆ ಜೋಡಿ
ಕನ್ನಡ ಸಿನಿಮಾಗೆ ಮರಳುವ ಆಸೆಯನ್ನು ನಭಾ ನಟೇಶ್ ಈ ಹಿಂದೆಯೇ ಹಲವು ಬಾರಿ ವ್ಯಕ್ತಪಡಿಸಿದ್ದರು. ಆದರೆ ತಮಗೆ ಸೂಕ್ತವಾದ ಕಥೆಗಾಗಿ ಅವರು ಕಾಯುತ್ತಿದ್ದರು ಎನ್ನಲಾಗಿದೆ. ಇದೀಗ ನಿರ್ದೇಶಕ ವಿಶಾಲ್ ಅತ್ರೇಯ ಅವರ ಕಥೆ ನಭಾ ಅವರಿಗೆ ಇಷ್ಟವಾಗಿದ್ದು, ಈ ಸಿನಿಮಾದ ಮೂಲಕ ಅವರು ಮತ್ತೆ ಕನ್ನಡಕ್ಕೆ ಮರಳುತ್ತಿದ್ದಾರೆ. ವಿಶೇಷವೆಂದರೆ ಈ ಸಿನಿಮಾದಲ್ಲಿ ನಭಾ ನಟೇಶ್ ಇದೇ ಮೊದಲ ಬಾರಿಗೆ ಧ್ರುವ ಸರ್ಜಾ ಜೊತೆ ನಾಯಕಿಯಾಗಿ ಜೋಡಿಯಾಗುತ್ತಿದ್ದಾರೆ. ಹೀಗಾಗಿ ಧ್ರುವ ಸರ್ಜಾ ಮತ್ತು ನಭಾ ನಟೇಶ್ ಕಾಂಬಿನೇಷನ್ ಹೇಗಿರಲಿದೆ ಎಂಬ ಕುತೂಹಲ ಈಗಾಗಲೇ ಮೂಡಿದೆ.
ಸದ್ಯ ಚಿತ್ರತಂಡ ಉಳಿದ ಕಲಾವಿದರು ಹಾಗೂ ತಾಂತ್ರಿಕ ವರ್ಗದ ಆಯ್ಕೆಯಲ್ಲಿ ಬ್ಯುಸಿಯಾಗಿದೆ. ಶೀಘ್ರದಲ್ಲೇ ಸಿನಿಮಾದ ಕುರಿತು ಮತ್ತಷ್ಟು ಅಧಿಕೃತ ಮಾಹಿತಿಯನ್ನು ಚಿತ್ರತಂಡ ಹಂಚಿಕೊಳ್ಳಲಿದೆ ಎನ್ನಲಾಗಿದೆ. ಇನ್ನು ಧ್ರುವ ಸರ್ಜಾ ಮತ್ತೊಂದು ಸಿನಿಮಾದಲ್ಲೂ ನಟಿಸುತ್ತಿದ್ದು, ಈ ಚಿತ್ರಕ್ಕೆ ನಂದ ಕಿಶೋರ್ ನಿರ್ದೇಶನ ಮಾಡಲಿದ್ದಾರೆ.


