‘ಪ್ರೇಮದ ಊರಲಿ’ ಸಿನಿಮಾ ಬುಕ್‌ಮೈಶೋದಲ್ಲಿ ಪ್ರತಿ ಗಂಟೆಗೆ 15 ಸಾವಿರ ಟಿಕೆಟ್ ಮಾರಾಟದ ದಾಖಲೆ ಮಾಡಿದೆ ಎಂದು ವರದಿಯಾಗಿದೆ. ಟಾಲಿವುಡ್ ನಿರ್ದೇಶಕ ಬೋಯಪತಿ ಶ್ರೀನು, ರಮೇಶ್ ಅರವಿಂದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವರ್ಷದ ಸೂಪರ್‌ ಬ್ಲಾಕ್‌ ಬಾಸ್ಟರ್‌ ಚಿತ್ರವಾಗಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ‘ಪ್ರೇಮದ ಊರಲಿ’ ಚಿತ್ರವು ಮತ್ತೊಂದು ದಾಖಲೆ ಮಾಡುತ್ತಿದೆ. ಪ್ರತಿಷ್ಠಿತ ಆನ್‌ಲೈನ್‌ ಟಿಕೆಟ್‌ ಮಾರಾಟದ ಪ್ಲಾಟ್‌ಫಾರಂ ಆಗಿರುವ ಬುಕ್‌ ಮೈ ಶೋವೊಂದರಲ್ಲೇ ಪ್ರತಿ ಗಂಟೆಗೆ 15 ಸಾವಿರ ಟಿಕೆಟ್‌ಗಳ ಮಾರಾಟ ಆಗುತ್ತಿವೆ. ಆ ಮೂಲಕ ಈ ಚಿತ್ರವು ಆನ್‌ಲೈನ್‌ ಬುಕ್ಕಿಂಗ್‌ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸುತ್ತಿದೆ.

ಈ ಚಿತ್ರ ನೋಡಿದ್ದೇ ಹೆಮ್ಮೆ

ಈ ನಡುವೆ ‘ಪ್ರೇಮದ ಊರಲಿ’ ತೆಲುಗು ವರ್ಷನ್‌ ನೋಡಿರುವ ಟಾಲಿವುಡ್‌ನ ಖ್ಯಾತ ನಿರ್ದೇಶಕ ಬೋಯಪತಿ ಶ್ರೀನು ಮಾತನಾಡಿ, ‘ನಾನು ಈಗಷ್ಟೆ ‘ಪ್ರೇಮದ ಊರಲಿ’ ಸಿನಿಮಾ ನೋಡಿದ್ದೇನೆ. ಈ ಚಿತ್ರವನ್ನು ನೋಡಿದ್ದೇನೆ ಎಂದು ಹೇಳಿಕೊಳ್ಳುವುದಕ್ಕೇ ನನಗೆ ಹೆಮ್ಮೆ ಆಗುತ್ತದೆ. ಅಷ್ಟು ಒಳ್ಳೆಯ ಸಿನಿಮಾ ಇದು. ಪ್ರತಿಯೊಬ್ಬರ ಮನಸ್ಸನ್ನು ಅಪ್ಪಿಕೊಳ್ಳುವ ಸಿನಿಮಾ ಇದು’ ಎಂದಿದ್ದಾರೆ. ‘ಅಖಂಡ’, ‘ಲೆಜೆಂಡ್‌’, ‘ಸರೈನೋಡು’, ‘ಸಿಂಹ’ ಮುಂತಾದ ಸೂಪರ್‌ ಹಿಟ್‌ ಚಿತ್ರಗಳನ್ನು ಕೊಟ್ಟ ನಿರ್ದೇಶಕ ಬೋಯಪತಿ ಶ್ರೀನು.

ನಿರ್ದೇಶಕನನ್ನು ಮೆಚ್ಚಿದ ರಮೇಶ್‌ ಅರವಿಂದ್‌

ರಮೇಶ್‌ ಅರವಿಂದ್‌ ಈ ಚಿತ್ರವನ್ನು ನೋಡಿ ನಿರ್ದೇಶಕ ಮನೋಜ್‌ ಕುಮಾರ್‌ ಅವರ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ‘ತುಂಬಾ ಚೆನ್ನಾಗಿ ಸಿನಿಮಾ ಮಾಡಿದ್ದೀರಿ. ನಿರ್ದೇಶನವಂತೂ ಸೂಪರ್‌ ಆಗಿದೆ. ಎಲ್ಲರು ಚೆನ್ನಾಗಿ ನಟಿಸಿದ್ದಾರೆ’ ಎಂದು ಸಂದೇಶ ಕಳುಹಿಸಿದ್ದಾರೆ.

ಮನೆಗೆ ಕರೆದು ಅಭಿನಂದಿಸಿದ ನಿಖಿಲ್‌

ನಿಖಿಲ್‌ ಕುಮಾರಸ್ವಾಮಿ ‘ಪ್ರೇಮದ ಊರಲಿ’ ನಿರ್ದೇಶಕ, ನಿರ್ಮಾಪಕ ಸೇರಿದಂತೆ ಚಿತ್ರತಂಡವನ್ನು ತಮ್ಮ ಮನೆಗೆ ಆಹ್ವಾನಿಸಿ ಅಭಿನಂದಿಸಿದ್ದಾರೆ. ನಿರ್ದೇಶಕ ಮನೋಜ್‌ ಕುಮಾರ್‌ ಹಾಗೂ ನಿರ್ಮಾಪಕ ದೇವೇಂದ್ರ ಅವರಿಗೆ ಕೃಷ್ಣನ ಕಂಚಿನ ಪ್ರತಿಮೆ ನೀಡಿ ಸನ್ಮಾನಿಸಿದ್ದಾರೆ.