ಕಲರ್ಸ್ ಕನ್ನಡದಿಂದ ಹೊರ ಬಂದ ಬಳಿಕ ಪರಮೇಶ್ವರ್ ಗುಂಡ್ಕಲ್ ನಿರ್ದೇಶನಕ್ಕೆ ಇಳಿದಿದ್ದಾರೆ. ಸ್ಯಾಂಡಲ್ ವುಡ್ ಸ್ಟಾರ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರಾಗಿ ಸುಮಾರು 10 ವರ್ಷಗಳಿಗೂ ಅಧಿಕ ಕಾಲ ಕೆಲಸ ಮಾಡಿದ್ದ ಪರಮೇಶ್ವರ್ ಗುಂಡ್ಕಲ್ ಇತ್ತೀಚೆಗಷ್ಟೆ ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಿ ಹೊರ ಬಂದಿದ್ದಾರೆ. ಕಿರುತೆರೆ ಲೋಕದಲ್ಲಿ ದೊಡ್ಡ ಹೆಸರುಗಳಿಸಿದ್ದ ಪರಮ್ ರಾಜಿನಾಮೆ ಅನೇಕರಿಗೆ ಅಚ್ಚರಿ ಮೂಡಿಸಿತ್ತು. ಬಿಗ್ ಬಾಸ್ ಸೇರಿದಂತೆ ಅನೇಕ ದೊಡ್ಡ ರಿಯಾಲಿಟಿ ಶೋಗಳನ್ನು ನಡೆಸಿದ ಖ್ಯಾತಿ ಹೊಂದಿದ್ದ ಪರಮ್ ಕಲರ್ಸ್ ವಾಹಿನಿಯಿಂದ ಹೊರ ಬಂದು ಜಿಯೋ ಸ್ಟುಡಿಯೋಸ್ (ಕನ್ನಡ) ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅಧಿಕಾರಕ್ಕೆ ಬರುತ್ತಿದ್ದಂತೆ ಪರಮ್ ಅನೇಕ ಯೋಜನೆಗಳನ್ನು ರೂಪಿಸುತ್ತಿದ್ದಾರೆ.
ಪರಮೇಶ್ವರ್ ಗುಂಡ್ಕಲ್ ಸ್ಟುಡಿಯೋ ಮೂಲಕ ನಿರ್ಮಾಣಕ್ಕೆ ಮುಂದಾಗುತ್ತಿದ್ದಾರೆ. ಸಣ್ಣ-ಬಜೆಟ್‌ನಿಂದ ದೊಡ್ಡ-ಬಜೆಟ್ ವರೆಗೂ ಹನ್ನೆರಡು ಯೋಜನೆಗಳನ್ನು ಹೊಂದಿದ್ದಾರೆ ಎಂದು ಎನ್ನುವ ಮಾತು ಕೇಳಿಬರುತ್ತಿದೆ. ಕೇವಲ ನಿರ್ಮಾಣ ಮಾತ್ರವಲ್ಲದೇ ಪರಮೇಶ್ವರ್ ಅವರು ನಿರ್ದೇಶಕ್ಕೂ ಇಳಿದಿದ್ದಾರೆ ಎನ್ನುವ ಇಂಟ್ರಸ್ಟಿಂಗ್ ಮಾಹಿತಿ ಬಹಿರಂಗವಾಗಿದೆ. ಹೌದು ಪರಮೇಶ್ವರ್ ಗುಂಡ್ಕಲ್ ಮೊದಲ ಬಾರಿಗೆ ನಿರ್ದೇಶಕರ ಕ್ಯಾಪ್ ಧರಿಸುತ್ತಿದ್ದಾರೆ. ಸದ್ಯ ಅವರ ಬಳಿ ಇರುವ 12 ಯೋಜನೆಗಳಲ್ಲಿ ಒಂದು ಸಿನಿಮಾಗೆ ಪರಮೇಶ್ವರ್ ಅವರೇ ಅಕ್ಷನ್ ಕಟ್ ಹೇಳುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ.
ಇನ್ನೂ ವಿಶೇಷ ಎಂದರೆ ಪರಮೇಶ್ವರ್ ಗುಂಡ್ಕಲ್ ಚೊಚ್ಚಲ ಚಿತ್ರಕ್ಕೆ ಸ್ಯಾಂಡಲ್ ವುಡ್ ಖ್ಯಾತ ನಟ ಧನಂಜಯ್ ನಾಯಕನಾಗಿ ನಟಿಸಲಿದ್ದಾರೆ ಎನ್ನಲಾಗಿದೆ. ಪರಮೇಶ್ವರ್ ಅವರೇ ಬರೆದು ನಿರ್ದೇಶನ ಮಾಡುತ್ತಿರುವ ಸಿನಿಮಾ ಇದಾಗಿದೆಯಂತೆ. ಇದೊಂದು ಪಕ್ಕಾ ಕಮರ್ಷಿಯಲ್ ಎಂಟರ್‌ಟೈನರ್ ಆಗಿದ್ದು ಮೇ ತಿಂಗಳಿಂದ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ. ಅಷ್ಟೆಯಲ್ಲ ಪರಮೇಶ್ವರ್ ಮೊದಲ ಸಿನಿಗೆ ಮಲಯಾಳಂ ಖ್ಯಾತ ನಾಯಕಿ ಅನಸ್ವರ ರಾಜನ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇದು ಅನಸ್ವರ ಅವರಿಗೆ ಮೊದಲ ಕನ್ನಡ ಸಿನಿಮಾವಾಗಿದ್ದು ಸಿಕ್ಕಾಪಟ್ಟೆ ಎಕ್ಸಾಯಿಟ್ ಆಗಿದ್ದಾರಂತೆ.
ಕಲರ್ಸ್ ಕನ್ನಡ ವಾಹಿನಿ ಮುಖ್ಯಸ್ಥರ ಸ್ಥಾನಕ್ಕೆ ಪರಮ್ ರಾಜೀನಾಮೆ; 10 ವರ್ಷಗಳ ಜರ್ನಿ ನೆನೆದು ಭಾವುಕ
ಪರಮೇಶ್ವರ್ ಗುಂಡ್ಕಲ್ ಮುಂದಿನ ಯೋಜನೆಗಳ ಯಾವುದೇ ಅಧಿಕೃತ ಮಾಹಿತಿ ಬಹಿರಂಗಪಡಿಸಿಲ್ಲ. ಸದ್ಯದಲ್ಲೇ 12 ಯೋಜನೆಗಳ ಬಗ್ಗೆ ಬಹಿರಂಗ ಪಡಿಸುವ ಸಾಧ್ಯತೆ ಇದೆ, ಅಲ್ಲದೇ ತನ್ನ ನಿರ್ದೇಶನದ ಚೊಚ್ಚಲ ಸಿನಿಮಾದ ಬಗ್ಗೆಯೂ ಎಲ್ಲಾ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ.
ನಟ ಧನಂಜಯ್ ಸದ್ಯ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಹೊಯ್ಸಳ ಮೂಲಕ ಅಭಿಮಾನಿಗಳ ಮುಂದೆ ಬಂದಿರುವ ಧನಂಜಯ್ ಉತ್ತರಕಾಂಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಮ್ಯಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಜಿಯೋ ಸ್ಟುಡಿಯೋಸ್ ಸೇರಿದ ಪರಮ್; ಕಲರ್ಸ್ ಕನ್ನಡ ಬಿಟ್ಟಿದ್ದು ಯಾಕೆ?
ಕಲರ್ಸ್ ವಾಹಿನಿಯಿಂದ ಹೊರ ಬಂದ ಬಳಿಕ ಪರಮೇಶ್ವರ್ ಗುಂಡ್ಕಲ್ ಭಾವುಕ್ ಪೋಸ್ಟ್ ಹಂಚಿಕೊಂಡಿದ್ದರು. 10 ವರ್ಷಗಳ ಕಾಲದ ಕೆಲಸದ ಬಗ್ಗೆ ದೀರ್ಘ ಪೋಸ್ಟ್ ಶೇರ್ ಮಾಡಿದ್ದರು. 'ಮನಸ್ಸು ಒದ್ದೆಯಾಗಿದೆ. ಒಳ್ಳೇದು ಮಾತ್ರ ಆಗಲಿ ಅಂತ ಹಾರೈಸಬೇಡಿ. ಒಳ್ಳೆಯದು, ಕೆಟ್ಟದ್ದು, ಖುಷಿ, ದುಃಖ, ಗೆಲುವು, ಸೋಲು, ಅಸೂಯೆ, ಸಂಕಟ, ಪ್ರೀತಿ, ಆಘಾತ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಕಲಿಕೆ ಹೀಗೆ ಎಲ್ಲವೂ ಆಗಲಿ ಎಂದು ಹೇಳಿ. ಜೀವನವೇ ಆಗಲಿ ಎಂದು ಹಾರೈಸಿ. ಥ್ಯಾಂಕ್ಯೂ ವಯಾಕಾಮ್18. ಥ್ಯಾಂಕ್ಯೂ ಕಲರ್ಸ್ ಕನ್ನಡ. ಹೋಗಿ ಬರುವೆ. ನಮಸ್ಕಾರ' ಎಂದು ಬರೆದುಕೊಂಡಿದ್ದರು.
