Asianet Suvarna News Asianet Suvarna News

ಕಲರ್ಸ್‌ ಕನ್ನಡ ವಾಹಿನಿ ಮುಖ್ಯಸ್ಥರ ಸ್ಥಾನಕ್ಕೆ ಪರಮ್ ರಾಜೀನಾಮೆ; 10 ವರ್ಷಗಳ ಜರ್ನಿ ನೆನೆದು ಭಾವುಕ

ಒಳ್ಳೆಯದು, ಕೆಟ್ಟದ್ದು, ಖುಷಿ, ದುಃಖ, ಗೆಲುವು, ಸೋಲು, ಅಸೂಯೆ, ಸಂಕಟ, ಪ್ರೀತಿ, ಆಘಾತ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಕಲಿಕೆ ಹೀಗೆ ಎಲ್ಲವೂ ಆಗಲಿ ಎಂದು ಹೇಳಿ ಎಂದು ದೊಡ್ಡ ಪೋಸ್ಟ್‌ ಬರೆದುಕೊಂಡ ಪರಮೇಶ್ವರ್....

Parameshwar Gundkal resigns Colors Kannada Colors Super business head post vcs
Author
First Published Apr 4, 2023, 10:49 AM IST

ಕನ್ನಡ ಜನಪ್ರಿಯ ವಾಹಿನಿ ಕಲರ್ಸ್‌ ಕನ್ನಡದ ಮುಖ್ಯಸ್ಥರಾಗಿದ್ದ ಪರಮೇಶ್ವರ ಗುಂಡ್ಕಲ್ ರಾಜೀನಾಮೆ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಅಗಿರುವ ಪರಮ್ ಭಾವುಕ ಪೋಸ್ಟ್‌ ಬರೆದುಕೊಂಡಿದ್ದಾರೆ. 

ಪರಮ್‌ ಪೋಸ್ಟ್‌:  

ನಮ್ಮ ಕಡೆ ಮನೆಗಳಿಗೆ ಹೊಸದಾಗಿ ಒಂದೊಂದೇ ಟೆಲಿವಿಷನ್ ಬರುತ್ತಿರುವಾಗ ನಮ್ಮನೆಗೆ ಕರೆಂಟೂ ಬಂದಿರಲಿಲ್ಲ. ಮೊದಲನೇ ಸಲ ಕರೆಂಟ್ ಬಂದ ಒಂದು ಮಳೆಗಾಲದ ಸಂಜೆ ಅಕ್ಕನ ಜೊತೆ ಸೇರಿ ಬರೀ ಸ್ವಿಚ್ ಒತ್ತಿ ಲೈಟ್ ಆನ್ ಮಾಡುವುದು ಮತ್ತು ಆಫ್ ಮಾಡುವುದನ್ನೇ ಮಾಡುತ್ತಾ ಗಂಟೆಗಟ್ಟಲೇ ಕುಣಿದಾಡಿದ್ದು ನಿನ್ನೆ ಮೊನ್ನೆ ಆದ ಹಾಗೆ ನೆನಪಿದೆ. ಕಾರಣವಿಲ್ಲದೇ ಲೈಟ್ ಆನ್ ಮತ್ತು ಆಫ್ ಮಾಡುವುದೇ ನಮಗೆ ಸುಮಾರು ದಿನಗಳ ಕಾಲ ಎಂಟರಟೇನ್ಮೆಂಟ್ ಆಗಿತ್ತು.

ಧಾರವಾಹಿ ಎಂಬ ಮನೋರಂಜನೆ ಮತ್ತು ಉದ್ಯಮ: ಗುಂಡ್ಕಲ್ ಅವರೊಂದಿಗೆ ಸಂದರ್ಶನ

ಈ ಟೀವಿಯಂಥ ಎಂಟರ್‍ ಟೇನ್ಮೆಂಟ್ ವಾಹಿನಿಗಳು ಕನ್ನಡದಲ್ಲಿ ಕತೆಗಳನ್ನು ಹೇಳತೊಡಗಿದಾಗ ನಮ್ಮನೆಗೆ ಕಲರ್‍ ಟೀವಿ ಬಿಡಿ, ಇನ್ನೂ ಟೀವಿಯೇ ಬಂದಿರಲಿಲ್ಲ. ಗದ್ದೆ, ತೋಟಗಳಲ್ಲಿ ಕೆಲಸ ಮಾಡುತ್ತ, ದನ, ಕರು ಮೇಯಿಸುತ್ತಾ ಅಲೆದಾಡುತ್ತಿರುವಾಗ ನಾಲ್ಕು ಬ್ಯಾಂಡಿನ ರೇಡಿಯೋದಲ್ಲಿ ಧ್ವನಿ ಕೇಳಿಸಿಕೊಳ್ಳುತ್ತಾ ಕಲರ್‍ ಕಲರ್‍ ಚಿತ್ರಗಳನ್ನು ಕಣ್ಮುಂದೆ ತಂದುಕೊಳ್ಳುತ್ತಾ ಯಾವತ್ತಾದರೂ ಒಂದು ದಿನ ಕತೆ ಹೇಳಬೇಕೆಂದು ಕಾತರಿಸುತ್ತಿದ್ದ ಟೈಮ್ ಅದು. ಆ ಅವಕಾಶ ಮೊದಲು ಸಿಕ್ಕಿದ್ದು ಕನ್ನಡ ಪತ್ರಿಕೆಗಳಲ್ಲಿ. ನಂತರ ಸಿಕ್ಕಿದ್ದು ಟೀವಿಯಲ್ಲಿ. ಟೆಲಿವಿಷನ್ ಸೇರಿಕೊಂಡ ಮೊದಮೊದಲು ತುಂಬಾ ಬೆರಗು ಹುಟ್ಟಿಸಿದ್ದ ಕಂಪನಿ ವಯಾಕಾಮ್18. ಸರಿಯಾದ ಟೈಮಲ್ಲಿ ಸರಿಯಾದ ಜಾಗದಲ್ಲಿ ಇದ್ದಿದ್ದರಿಂದಲೋ ಏನೋ. ಒಂದು ದಿನ ಅದೇ ಕಂಪನಿಯ ಕಲರ್ಸ್ ಚಾನೆಲನ್ನು ಕನ್ನಡದಲ್ಲಿ ರೂಪಿಸುವ ಅವಕಾಶ ಸಿಕ್ಕಿಬಿಟ್ಟದ್ದು ಮಾತ್ರ ಬಹುಶಃ ಅದೃಷ್ಟ. ಅಷ್ಟೇ ಅನಿರೀಕ್ಷಿತ.

ಒಟ್ಟಾರೆ ಹತ್ತೂವರೆ ವರ್ಷ! ಅಗ್ನಿಸಾಕ್ಷಿ, ಲಕ್ಷ್ಮೀ ಬಾರಮ್ಮ, ರಾಧಾರಮಣ, ಕನ್ನಡತಿ ಥರದ ಕತೆಗಳು, ಬಿಗ್ ಬಾಸ್, ಡಾನ್ಸಿಂಗ್ ಸ್ಟಾರ್‍, ಸೂಪರ್‍ ಮಿನಿಟ್, ಕನ್ನಡದ ಕೋಟ್ಯಧಿಪತಿ, ಅನುಬಂಧ ಥರದ ಒಂದಿಷ್ಟು ಶೋಗಳು. ರಿಬ್ರಾಂಡಿಂಗ್, ಎಚ್ ಡಿ ಚಾನೆಲ್, ಎರಡನೇ ಚಾನೆಲ್, ಸಿನಿಮಾ ಚಾನೆಲ್, ವೂಟ್ ಹೀಗೆ ಒಂದೊಂದೂ ಕಲರ್‍ ಕಲರ್‍ ಅನುಭವ. ಗೆದ್ದ ಖುಷಿ, ಸೋತ ನೋವು, ತಪ್ಪು ಮಾಡಿ ಕಲಿತ ಪಾಠ, ಅಕಾರಣವಾಗಿ ಸಿಕ್ಕಿದ ಮೆಚ್ಚುಗೆ, ಸಕಾರಣವಾಗಿ ಆದ ಟೀಕೆ ಮತ್ತು ಅವಮಾನ, ಕತೆ ಹುಟ್ಟಿ ಸಂಭ್ರಮಿಸಿದ ದಿನಗಳು, ಕತೆ ಹುಟ್ಟದೇ ಗೊಂದಲಗೊಂಡ ಕ್ಷಣಗಳು, ದಾರಿಯಲ್ಲಿ ಸಿಕ್ಕಿದ ನಕ್ಷತ್ರಗಳು, ಹೆಕ್ಕಿಕೊಂಡ ಭಾವನೆಗಳೆಲ್ಲ ಸೇರಿ ತಿರುಗಿ ನೋಡಿದಾಗ ಸಿಕ್ಕಾಪಟ್ಟೆ ಸಮಾಧಾನ. ಸಂತೃಪ್ತಿ. ಹತ್ತೂವರೆ ವರ್ಷಗಳಲ್ಲಿ ಏನೇನೋ ಆಯಿತು. ಆಗಿದ್ದೆಲ್ಲಾ ಒಳ್ಳೆಯದಕ್ಕೇ.

Bigg Boss Kannada 9; ಮನೆಯ ಫೋಟೋ ರಿವೀಲ್, ಏನೂ ಬದಲಾಗಿಲ್ಲ ಎಂದ ವೀಕ್ಷಕರು

ಮಿಲ್ಲರ್ಸ್ ರೋಡಿನ ಐದನೇ ಫ್ಲೋರಿನ ಆಫೀಸಿನಲ್ಲಿ ಕುಡಿದ ಚಹಾ ಕಪ್ಪುಗಳ ಲೆಕ್ಕ ಗೊತ್ತಿಲ್ಲ. ಅಷ್ಟೆಲ್ಲಾ ಚಹಾ ಕುಡಿದರೂ ಇನ್ನಷ್ಟು ಕುಡಿಯುವ ಆಸೆ ಇದ್ದೇ ಇದೆ. ಸಿಕ್ಕಿದ ಒಬ್ಬಬ್ಬ ವ್ಯಕ್ತಿಯನ್ನೂ ಇನ್ನೊಂದು ಸಲ ಮಾತಾಡಿಸುವ ಮನಸ್ಸಾಗುತ್ತದೆ. ಹೇಳಿದ ಕತೆಗಳನ್ನು ಇನ್ನೊಂದು ಸಲ ಚೂರು ಸರಿಮಾಡಿಕೊಂಡು ಹೇಳಿಬಿಡೋಣ ಎಂಬ ಕನಸು ಬೀಳುತ್ತದೆ.

ಮನಸ್ಸು ಒದ್ದೆಯಾಗಿದೆ. ಒಳ್ಳೇದು ಮಾತ್ರ ಆಗಲಿ ಅಂತ ಹಾರೈಸಬೇಡಿ. ಒಳ್ಳೆಯದು, ಕೆಟ್ಟದ್ದು, ಖುಷಿ, ದುಃಖ, ಗೆಲುವು, ಸೋಲು, ಅಸೂಯೆ, ಸಂಕಟ, ಪ್ರೀತಿ, ಆಘಾತ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಕಲಿಕೆ ಹೀಗೆ ಎಲ್ಲವೂ ಆಗಲಿ ಎಂದು ಹೇಳಿ. ಜೀವನವೇ ಆಗಲಿ ಎಂದು ಹಾರೈಸಿ. ಥ್ಯಾಂಕ್ಯೂ ವಯಾಕಾಮ್18. ಥ್ಯಾಂಕ್ಯೂ ಕಲರ್ಸ್ ಕನ್ನಡ. ಹೋಗಿ ಬರುವೆ. ನಮಸ್ಕಾರ!

 

Follow Us:
Download App:
  • android
  • ios