ಕೋಮಲ್ ಕುಮಾರ್, ಮೇಘನಾ ರಾಜ್ ಹಾಗೂ ಅನುಷಾ ರೈ ನಟನೆಯ ‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಚಿತ್ರದ ಫಸ್ಟ್ ಲುಕ್ ರಿಲೀಸ್. ಸಿನಿಮಾದ ಎರಡು ಟೈಟಲ್, ಪಾತ್ರಗಳು ಮತ್ತು ವಿಶೇಷತೆ ಇಲ್ಲಿದೆ.
ಕೋಮಲ್ ಕುಮಾರ್, ಮೇಘನಾ ರಾಜ್ ಹಾಗೂ ಅನುಷಾ ರೈ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ‘ಇದು ದೇವರ ತಾಣ’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಗಮನ ಸೆಳೆಯುತ್ತಿರುವ ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ.
‘ಕೋಣ’ ಚಿತ್ರದ ಬಳಿಕ ಕೋಮಲ್ ಕುಮಾರ್ ಅಭಿನಯಿಸಿರುವ ಈ ಸಿನಿಮಾಗೆ ‘ಗುಂಮ್ಟಿ’ ನಿರ್ದೇಶಿಸಿದ್ದ ಸಂದೇಶ್ ಶೆಟ್ಟಿ ಆಜ್ರಿ ಆ್ಯಕ್ಷನ್-ಕಟ್ ಹೇಳಿದ್ದಾರೆ. ಚಿತ್ರದ ಫಸ್ಟ್ ಲುಕ್ ಬಿಡುಗಡೆ ಕಾರ್ಯಕ್ರಮದಲ್ಲಿ ಕೋಮಲ್ ಕುಮಾರ್, ಮೇಘನಾ ರಾಜ್, ಅನುಷಾ ರೈ, ನಿರ್ದೇಶಕ ಸಂದೇಶ್ ಶೆಟ್ಟಿ, ನಿರ್ಮಾಪಕ ವಿಕಾಸ್ ಶೆಟ್ಟಿ ಸೇರಿದಂತೆ ಚಿತ್ರತಂಡದ ಹಲವು ಸದಸ್ಯರು ಉಪಸ್ಥಿತರಿದ್ದರು.
ಒಂದೇ ಸಿನಿಮಾದಲ್ಲಿ ಎರಡು ಟೈಟಲ್!
‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಎಂಬ ಶೀರ್ಷಿಕೆ ಕೇಳಿದರೆ ಇದು ಬಾರ್ ಸುತ್ತ ನಡೆಯುವ ಕಥೆ ಎಂದೆನಿಸಬಹುದು. ಆದರೆ ಈ ಸಿನಿಮಾದ ವಿಶೇಷತೆ ಅದಕ್ಕಿಂತ ಭಿನ್ನವಾಗಿದೆ. ಚಿತ್ರದಲ್ಲಿ ಎರಡು ವಿಭಿನ್ನ ಜಗತ್ತುಗಳಿದ್ದು, ಅವುಗಳಿಗೆ ಪ್ರತ್ಯೇಕ ಶೀರ್ಷಿಕೆಗಳನ್ನೇ ಚಿತ್ರತಂಡ ನೀಡಿದೆ.
ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಈ ಕುರಿತು ಮಾತನಾಡಿ, ಚಿತ್ರದ ಮೊದಲಾರ್ಧ ‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಸುತ್ತ ನಡೆಯುತ್ತದೆ. ಕಥೆಯ ದ್ವಿತೀಯಾರ್ಧ ಸಂಪೂರ್ಣವಾಗಿ ‘ದೇವರ ತಾಣ’ದ ಸುತ್ತ ಸಾಗುತ್ತದೆ. ಹೀಗಾಗಿ ಸಿನಿಮಾದ ಎರಡೂ ಭಾಗಗಳಿಗೂ ವಿಭಿನ್ನ ಟೈಟಲ್‌ಗಳಿವೆ. ಆದರೆ ಸೆನ್ಸಾರ್ ನಿಯಮಗಳ ಪ್ರಕಾರ ಒಂದು ಸಿನಿಮಾಕ್ಕೆ ಒಂದೇ ಶೀರ್ಷಿಕೆ ಇರಬೇಕಾಗಿರುವುದರಿಂದ ‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಹೆಸರಿನಲ್ಲೇ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ ಎಂದು ವಿವರಿಸಿದರು.
ಕೋಮಲ್‌ಗೆ ಡಬಲ್ ಶೇಡ್
ಚಿತ್ರದಲ್ಲಿ ಕೋಮಲ್ ಕುಮಾರ್ ಎರಡು ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದು ಪಾತ್ರದಲ್ಲಿ ಆಸ್ಥಾನದ ವರ್ಣಚಿತ್ರ ಕಲಾವಿದನಾಗಿ ಕಾಣಿಸಿಕೊಳ್ಳುವ ಅವರು, ಮತ್ತೊಂದು ಪಾತ್ರದಲ್ಲಿ ಸಿನಿಮಾ ನಿರ್ದೇಶಕನ ಪಾತ್ರ ನಿರ್ವಹಿಸಿದ್ದಾರೆ. ಸುಮಾರು 30 ವರ್ಷಗಳಿಂದ ಚಿತ್ರರಂಗದಲ್ಲಿರುವ ಕೋಮಲ್, ಚಿತ್ರದ ಬಗ್ಗೆ ಮಾತನಾಡುತ್ತಾ, ನಿರ್ದೇಶಕ ಸಂದೇಶ್ ಶೆಟ್ಟಿ ಕಡಿಮೆ ಬಜೆಟ್‌ನಲ್ಲಿಯೇ ಏಳು ವಿಭಿನ್ನ ಸೆಟ್‌ಗಳನ್ನು ನಿರ್ಮಿಸಿರುವುದು ತಮ್ಮ ಗಮನ ಸೆಳೆದಿದೆ ಎಂದರು. ಚಿತ್ರತಂಡ ಸಿನಿಮಾವನ್ನು ಬಹಳ ಇಷ್ಟಪಟ್ಟು ಮಾಡಿದ್ದು, ಸಿನಿಮಾ ಚೆನ್ನಾಗಿ ಮೂಡಿಬಂದಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕೇರಳದ ರಾಣಿಯಾಗಿ ಮೇಘನಾ ರಾಜ್
ಮೇಘನಾ ರಾಜ್ ಈ ಸಿನಿಮಾದಲ್ಲಿ ಕೇರಳದ ರಾಣಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಕನ್ನಡದ ಜೊತೆಗೆ ಮಲಯಾಳಂ ಭಾಷೆಯನ್ನೂ ಮಾತನಾಡಿರುವ ಮೇಘನಾ, ಮೊದಲ ಬಾರಿಗೆ ಕೋಮಲ್ ಕುಮಾರ್ ಜೊತೆ ಸ್ಕ್ರೀನ್ ಹಂಚಿಕೊಂಡಿದ್ದಾರೆ. ಕೋಮಲ್ ಅವರ ಕಾಮಿಡಿ ಟೈಮಿಂಗ್ ಮತ್ತು ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮೇಘನಾ, ಚಿತ್ರದ ಕಥೆ ಮತ್ತು ನಿರ್ದೇಶಕ ಸಂದೇಶ್ ಶೆಟ್ಟಿ ಅವರ ನಿರೂಪಣೆಯ ಬಗ್ಗೆ ಭರವಸೆ ವ್ಯಕ್ತಪಡಿಸಿದರು.
ಅನುಷಾ ರೈಗೆ ಎರಡು ವಿಭಿನ್ನ ಪಾತ್ರ
ಅನುಷಾ ರೈ ಕೂಡ ಸಿನಿಮಾದಲ್ಲಿ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೋಮಲ್ ಕುಮಾರ್ ಜೊತೆ ಸ್ಕ್ರೀನ್ ಹಂಚಿಕೊಂಡಿರುವ ಅನುಷಾ, ಮೇಘನಾ ರಾಜ್ ಸೇರಿದಂತೆ ಇಡೀ ತಂಡದ ಜೊತೆ ಶೂಟಿಂಗ್ ಸಮಯದಲ್ಲಿ ಉತ್ತಮ ಅನುಭವವಾಗಿತ್ತು ಎಂದು ಹೇಳಿದರು.
ಕಾಮಿಡಿ, ಆ್ಯಕ್ಷನ್, ಎಮೋಶನ್ ಜೊತೆಗೆ ಸ್ಪಿರಿಚುವಲ್ ಕಥೆ
‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಕೇವಲ ಒಂದೇ ಜಾನರ್‌ಗೆ ಸೀಮಿತವಾಗಿಲ್ಲ ಎಂಬುದು ಚಿತ್ರತಂಡದ ಮಾತು. ಸಿನಿಮಾದಲ್ಲಿ ನಾಲ್ಕು ವಿಭಿನ್ನ ಹಾಡುಗಳು, ಫೈಟ್ಸ್, ಕಾಮಿಡಿ, ಎಮೋಷನ್ ಹಾಗೂ ಸ್ಪಿರಿಚುವಲ್ ಕಥಾಹಂದರ ಕೂಡ ಇರಲಿದೆ.
ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದಕ್ಕೂ ಬಣ್ಣ ಹಚ್ಚಿದ್ದಾರೆ. ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡ್, ವಜ್ರಧೀರ್ ಜೈನ್, ಉತ್ಸವ್, ಕಾರ್ತಿಕ್ ರಾವ್, ರಾಘು ರಾಮನಕೊಪ್ಪ, ಸಿರಿಜಾ, ವರ್ಧನ್, ಕರಣ್, ರಾಧಿಕಾ ರಾವ್ ದಿವ್ಯಶ್ರೀ, ಅಕ್ಷತಾ, ಅರಸು, ಮಹೇಶ್, ನಾಗರಾಜ್, ಚಿತ್ರಕಲಾ, ಉಮೇಶ್ ಕಿನ್ನಾಳ್, ಮನೀಶ್ ಶೆಟ್ಟಿ, ರಾಧಾಕೃಷ್ಣ, ಮಹಾಬಲೇಶ್ವರ ಭಟ್ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.
ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಮುಂದಿನ ದಿನಗಳಲ್ಲಿ ಚಿತ್ರದ ಟ್ರೈಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ಇನ್ನು ಬಾರ್‌ನಿಂದ ಆರಂಭವಾಗುವ ಕಥೆ ದೇವರ ತಾಣದವರೆಗೆ ಸಾಗುವ ‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಸಿನಿಮಾ ಪ್ರೇಕ್ಷಕರಿಗೆ ಯಾವ ರೀತಿಯ ಅನುಭವ ನೀಡಲಿದೆ ಎಂಬ ಕುತೂಹಲ ಇದೀಗ ಹೆಚ್ಚಾಗಿದೆ.


