ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಜೈಲರ್ 2' ಚಿತ್ರ 9 ದಿನಗಳಲ್ಲಿ ವಿಶ್ವಾದ್ಯಂತ ₹628.05 ಕೋಟಿ ಗಳಿಸಿದೆ. ಸಲ್ಮಾನ್ ಖಾನ್, ಪ್ರಭಾಸ್ ಅವರ ಸಾರ್ವಕಾಲಿಕ ಬಾಕ್ಸ್ ಆಫೀಸ್ ದಾಖಲೆ ಮುರಿದು ಹೊಸ ಇತಿಹಾಸ ಬರೆದಿದೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಬೆಂಗಳೂರು; ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ "ಜೈಲರ್ 2" ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ತಮ್ಮ ಅಪಾರ ವರ್ಚಸ್ಸನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಬಿಡುಗಡೆಯಾದ ಒಂಬತ್ತು ದಿನಗಳ ನಂತರವೂ ಭರ್ಜರಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರ, ದಿನದಿಂದ ದಿನಕ್ಕೆ ಹೊಸ ಬಾಕ್ಸ್ ಆಫೀಸ್ ದಾಖಲೆಗಳನ್ನು ನಿರ್ಮಿಸುತ್ತಿದೆ. ನವರಾತ್ರಿ ಮತ್ತು ದಸರಾ ರಜಾದಿನಗಳ ಶುಭ ಸಂದರ್ಭದಲ್ಲಿ ತೆರೆಕಂಡ ಈ ಚಿತ್ರವು ವಿಶ್ವಾದ್ಯಂತ ಪ್ರೇಕ್ಷಕರಿಂದ ಅಭೂತಪೂರ್ವ ಬೆಂಬಲ ಪಡೆಯುತ್ತಿದೆ.

ಮೊದಲ ವಾರದಲ್ಲೇ ₹600 ಕೋಟಿ ಮೈಲಿಗಲ್ಲು!ಬಿಡುಗಡೆಯಾದ ಮೊದಲ ವಾರದಲ್ಲೇ ವಿಶ್ವಾದ್ಯಂತ ₹600 ಕೋಟಿ ಗಳಿಕೆ ಮಾಡಿದ್ದ "ಜೈಲರ್ 2", ಎರಡನೇ ವಾರದಲ್ಲೂ ತನ್ನ ಬಲವಾದ ಹಿಡಿತವನ್ನು ಮುಂದುವರೆಸಿದೆ. 9ನೇ ದಿನವಾದ ಶುಕ್ರವಾರದಂದು ದೇಶಾದ್ಯಂತ 10,484 ಪ್ರದರ್ಶನಗಳನ್ನು ಕಂಡ ಈ ಚಿತ್ರ, ಭಾರತದಲ್ಲಿ ಒಂದೇ ದಿನ ₹14.50 ಕೋಟಿ ನಿವ್ವಳ (Net) ಸಂಗ್ರಹ ಮಾಡಿದೆ.

ಭಾಷಾವಾರು ಗಳಿಕೆಯ ವಿವರ (9ನೇ ದಿನ)!

ಸ್ಯಾಕ್ನಿಲ್ಕ್ ವರದಿಯ ಪ್ರಕಾರ, ವಿವಿಧ ಭಾಷೆಗಳಲ್ಲಿ ಚಿತ್ರದ ಗಳಿಕೆ, ತಮಿಳಿನಲ್ಲಿ 4,885 ಪ್ರದರ್ಶನಗಳಿಂದ ₹9.35 ಕೋಟಿ ಗಳಿಕೆಯಾದರೆ, ತೆಲಗಿನಲ್ಲಿ1,787 ಪ್ರದರ್ಶನಗಳಿಂದ ₹3 ಕೋಟಿ ಗಳಿಸಿದೆ. ಹಿಂದಿಯಲ್ಲಿ 3,624 ಪ್ರದರ್ಶನಗಳಿಂದ ₹1.75 ಕೋಟಿ, ಕನ್ನಡದಲ್ಲಿ 188 ಪ್ರದರ್ಶನಗಳಿಂದ ₹40 ಲಕ್ಷ ಗಳಿಕೆಯನ್ನು ಜೈಲರ್‍‌ ಸಿನೆಮಾ ಕಂಡಿದೆ. ಭಾರತದಲ್ಲಿ ₹408.55 ಕೋಟಿ ಒಟ್ಟು ಗಳಿಕೆಯಾದರೆ, ₹348.85 ಕೋಟಿ ನಿವ್ವಳ ಗಳಿಕೆಯಾಗಿದೆ. ಅದರಲ್ಲಿ ₹219.50 ಕೋಟಿ ವಿದೇಶಿ ಗಳಿಕೆಯಾದರೆ, ವಿಶ್ವಾದ್ಯಂತ ಒಟ್ಟು ₹628.05 ಕೋಟಿ ಗಳಿಕೆಯಾಗಿದೆ.

ಹಲವು ಸೂಪರ್ ಸ್ಟಾರ್‌ಗಳ ದಾಖಲೆ ಧೂಳೀಪಟ!

ಒಂಬತ್ತೇ ದಿನಗಳಲ್ಲಿ ₹628.05 ಕೋಟಿ ಗಳಿಸುವ ಮೂಲಕ "ಜೈಲರ್ 2" ಭಾರತೀಯ ಚಿತ್ರರಂಗದ ಅತಿ ಹೆಚ್ಚು ಗಳಿಕೆ ಮಾಡಿದ ಟಾಪ್ 20 ಚಿತ್ರಗಳ ಪಟ್ಟಿಗೆ ಸೇರ್ಪಡೆಯಾಗಿದೆ. ಈ ಪ್ರಕ್ರಿಯೆಯಲ್ಲಿ ಹಲವು ದಿಗ್ಗಜ ನಾಯಕರ ಚಿತ್ರಗಳ ದಾಖಲೆಯನ್ನು ರಜನಿಕಾಂತ್ ಮುರಿದಿದ್ದಾರೆ. ಅದರಲ್ಲೂ 10 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಸಲ್ಮಾನ್ ಖಾನ್ ಮತ್ತು ಅನುಷ್ಕಾ ಶರ್ಮಾ ಅಭಿನಯದ 'ಸುಲ್ತಾನ್' ಚಿತ್ರದ ₹623 ಕೋಟಿ ಜೀವಮಾನದ ಗಳಿಕೆಯನ್ನು ಮೀರಿದೆ. ಅಲ್ಲದೇ, ಪ್ರಭಾಸ್ ಅಭಿನಯದ 'ಸಲಾರ್' ಚಿತ್ರದ ₹617 ಕೋಟಿ ಕಲೆಕ್ಷನ್ ದಾಟಿದೆ. ಅದರಂತೆ ಕಳೆದ ವರ್ಷ ತೆರೆಕಂಡ ಸೈಯ್ಯಾರಾ ಚಿತ್ರದ ₹578 ಕೋಟಿ ದಾಖಲೆಯನ್ನು ಮರೆಮಾಚಿದೆ. ಅದರೊಂದಿಗೆ ವಿಜಯ್ ಅಭಿನಯದ 'ಲಿಯೋ' ಚಿತ್ರ ಗಳಿಸಿದ್ದ ₹605 ಕೋಟಿ ಜೀವಮಾನದ ಸಂಗ್ರಹವನ್ನು ಹಿಂದಿಕ್ಕಿದೆ.

ತಮಿಳು ಚಿತ್ರರಂಗದಲ್ಲಿ ಎರಡನೇ ಅತಿ ದೊಡ್ಡ ಚಿತ್ರ!

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಚಿತ್ರವು ತನ್ನ ಮೊದಲ ಭಾಗವಾದ 'ಜೈಲರ್' ಗಿಂತಲೂ ಹೆಚ್ಚಿನ ಯಶಸ್ಸು ಕಂಡಿದೆ. ಪ್ರಸ್ತುತ ತಮಿಳು ಚಿತ್ರರಂಗದ ಇತಿಹಾಸದಲ್ಲೇ ಅತಿ ವೇಗವಾಗಿ ₹600 ಕೋಟಿ ಗಡಿ ದಾಟಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದಲ್ಲದೆ, ಸಾರ್ವಕಾಲಿಕ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ತಮಿಳು ಚಿತ್ರವಾಗಿ ಹೊರಹೊಮ್ಮಿದೆ.