ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ, ಸುಮಂತ್ ಭಟ್ ನಿರ್ದೇಶನದ ಮತ್ತು ರಕ್ಷಿತ್ ಶೆಟ್ಟಿ ನಿರ್ಮಾಣದ 'ಮಿಥ್ಯ' 3 ಪ್ರಶಸ್ತಿ ಗೆದ್ದುಕೊಂಡಿದೆ. ಈ ಪೈಕಿ, ರೂಪಶ್ರೀ ವರ್ಕಾಡಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದು, ಕನ್ನಡ ಚಿತ್ರರಂಗದಲ್ಲಿ ಈ ಗೌರವ ಪಡೆದ ಮೊದಲ ನಟಿ ಎಂಬ ಇತಿಹಾಸ ನಿರ್ಮಿಸಿದ್ದಾರೆ.

ನವದೆಹಲಿ/ಬೆಂಗಳೂರು (ಜು.19): ಪ್ರತಿಷ್ಠಿತ ರಾಷ್ಟ್ರಿಯ ಚಲನಚಿತ್ರ ಪ್ರಶಸ್ತಿಗಳು ಶನಿವಾರ ಪ್ರಕಟಗೊಂಡಿದ್ದು, ಕನ್ನಡಕ್ಕೆ 4 ಹಾಗೂ ತುಳುವಿಗೆ ಒಂದು ಪ್ರಶಸ್ತಿ ಸಂದಿವೆ. ಈ ಪೈಕಿ ‘ಮಿಥ್ಯ’ ಸಿನಿಮಾದಲ್ಲಿನ ನಟನೆಗೆ ರೂಪಶ್ರೀ ವರ್ಕಾಡಿಯವರಿಗೆ ಅತ್ಯುತ್ತಮ ಪೋಷಕ ನಟಿ ರಾಷ್ಟ್ರ ಪ್ರಶಸ್ತಿ ಸಂದಿದೆ. ಇದು ಕನ್ನಡ ಚಿತ್ರರಂಗಕ್ಕೆ ದೊರೆತ ಮೊದಲ ‘ಅತ್ಯುತ್ತಮ ಪೋಷಕ ನಟಿ’ ರಾಷ್ಟ್ರ ಪ್ರಶಸ್ತಿ.

2024ರಲ್ಲಿ ತೆರೆಕಂಡ, ಅನಾಥ ಬಾಲಕನೊಬ್ಬನ ನೋವಿನ ಕತೆಯನ್ನು ತೆರೆದಿಟ್ಟ ಕನ್ನಡದ ‘ಮಿಥ್ಯ’ ಎಂಬ ಸಿನಿಮಾಗೆ 3 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಲಭಿಸಿವೆ. ಕೆಂಚನೂರು ಪ್ರದೀಪ್‌ ಕುಮಾರ್‌ ಶೆಟ್ಟಿ ಅವರ ‘ನಾನಿರುವುದೆ ನಿಮಗಾಗಿ ನಾಡಿರುವುದೇ ನನಗಾಗಿ: ಕನ್ನಡ ಸಿನಿಮಾದ ತತ್ವ ಮತ್ತು ರಾಜಕೀಯ’ ಸಿನಿಮಾ ಬಗೆಗಿನ ಉತ್ತಮ ಪುಸ್ತಕವೆಂಬ ಗೌರವಕ್ಕೆ ಪಾತ್ರವಾಗಿದೆ. ಇನ್ನು ಕರಾವಳಿಯ ಭಾಷೆಯಾದ ತುಳುವಿನ ‘ಇಂಬು’ ಉತ್ತಮ ತುಳು ಚಿತ್ರ ಎನಿಸಿಕೊಂಡಿದೆ.

ಮಿಥ್ಯಕ್ಕೆ 3 ಪ್ರಶಸ್ತಿಗಳ ಗರಿ

ಮಿಥ್ಯವನ್ನು ರಕ್ಷಿತ್‌ ಶೆಟ್ಟಿ ಅವರ ಪರಂವಃ ಸ್ಟುಡಿಯೋಸ್​ ನಿರ್ಮಾಣ ಮಾಡಿದ್ದು, ಸುಮಂತ್ ಭಟ್ ಅವರ ನಿರ್ದೇಶನವಿದೆ. ಇದರಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ಆತಿಶ್‌ ಎಸ್‌. ಶೆಟ್ಟಿ ಅವರಿಗೆ ಉತ್ತಮ ಬಾಲಕ ನಟ ಪ್ರಶಸ್ತಿ ಹಾಗೂ ಜ್ಯೋತಿ ಪಾತ್ರದಲ್ಲಿ ಕಾಣಿಸಿಕೊಂಡ ರೂಪಶ್ರೀ ವರ್ಕಾಡಿ ಅವರಿಗೆ ಉತ್ತಮ ಪೋಷಕ ನಟಿ ಪ್ರಶಸ್ತಿ ಲಭಿಸಿದೆ.

‘ಮಿಥ್ಯ’ ಸಿನಿಮಾದ ಪ್ರಧಾನ ಪಾತ್ರದ ಚಿಕ್ಕಮ್ಮನ ಪಾತ್ರದಲ್ಲಿ ರೂಪಶ್ರೀ ವರ್ಕಾಡಿ ನಟಿಸಿದ್ದಾರೆ. ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಸಂದಿರುವುದು, ಕನ್ನಡ ಚಿತ್ರರಂಗಕ್ಕೆ ದೊರೆತ ಮೊದಲ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ.

ಈ ಹಿಂದೆ ಅರುಂಧತಿ ನಾಗ್ ಅವರಿಗೆ ಬಾಲಿವುಡ್‌ನ ‘ಪಾ’ ಚಿತ್ರದ ನಟನೆಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ದೊರಕಿತ್ತು. ಆದರೆ ಕನ್ನಡ ಚಿತ್ರಕ್ಕೆ ದೊರೆತಿದ್ದು ಇದೇ ಮೊದಲು. ರೂಪಶ್ರೀ ವರ್ಕಾಡಿಯವರು ಮಂಜೇಶ್ವರ ವರ್ಕಾಡಿಯವರಾಗಿದ್ದು, ಹಲವಾರು ಕನ್ನಡ ಮತ್ತು ತು‍ಳು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಮೂಲತಃ ರಂಗಭೂಮಿ ನಟಿ.

ಮಿಥ್ಯದಲ್ಲೇನಿದೆ?

ಅನಿರೀಕ್ಷಿತವಾಗಿ ಹೆತ್ತವರನ್ನು ಕಳೆದುಕೊಂಡ 11 ವರ್ಷದ ಮಿಥುನ್, ಮುಂಬೈನಿಂದ ಕರಾವಳಿ ಉಡುಪಿಗೆ ಸ್ಥಳಾಂತರಗೊಂಡು, ಚಿಕ್ಕಮ್ಮನ ಮನೆಯಲ್ಲಿ ಹೊಸ ಬದುಕಿಗೆ ಹೊಂದಿಕೊಳ್ಳಲು ಹೆಣಗಾಡುವ ಭಾವನಾತ್ಮಕ ಹೋರಾಟವನ್ನು ಈ ಚಿತ್ರದ ಕತೆಯಾಗಿದೆ.

ಇಂಬು ಚಿತ್ರದಲ್ಲೇನಿದೆ?

ತುಳು ಚಿತ್ರ ''ಇಂಬು'', ಕರಾವಳಿಯ ದೈವಾರಾಧನೆ ಮತ್ತು ಸಾಂಪ್ರದಾಯಿಕ ನಂಬಿಕೆಗಳ ಹಿನ್ನೆಲೆಯಲ್ಲಿ ಹೆಣೆದ ಭಾವನಾತ್ಮಕ ಕತೆ.

ನಿರೀಕ್ಷೆ ಇಲ್ಲದೆ ದಕ್ಕಿದ ಖುಷಿ

ನಾನು ಈ ಪ್ರಶಸ್ತಿ ನಿರೀಕ್ಷಿಸಿರಲಿಲ್ಲ. ರಾಷ್ಟ್ರಪ್ರಶಸ್ತಿ ಬರಬಹುದು ಎಂಬ ಕನಸೂ ಇರಲಿಲ್ಲ. ಸುದ್ದಿ ತಿಳಿದು ಆಘಾತವಾಯಿತು ಮತ್ತು ಸಂತೋಷವಾಯಿತು. ಪಾತ್ರ ಸಣ್ಣದಾದರೂ ಅದನ್ನು ರಾಷ್ಟ್ರ ಪ್ರಶಸ್ತಿಗೆ ಪರಿಗಣಿಸಿದ್ದು ಅಪಾರ ಸಂತೋಷ ತಂದಿದೆ. ಉತ್ತಮ ಸಿನಿಮಾವೊಂದನ್ನು ಗುರುತಿಸಿದ ಸಾರ್ಥಕತೆ ಇದೆ. ಈ ಪ್ರಶಸ್ತಿ ಬಂದಿರುವುದಕ್ಕೆ ನನ್ನ ಸಹ ಪಾತ್ರಧಾರಿ ಪ್ರಕಾಶ್ ತೂಮಿನಾಡು ಅವರೂ ಕಾರಣ.

- ರೂಪಶ್ರೀ ವರ್ಕಾಡಿ, ಮಿಥ್ಯ, ಪೋಷಕ ನಟಿ

ಪೋಷಕ ನಟಿಗೆ ಪ್ರಶಸ್ತಿ ಬಂದಿದ್ದು ಧನ್ಯತೆ

ನಿಸ್ವಾರ್ಥವಾಗಿ ಒಂದು ಒಳ್ಳೆಯ ಕತೆಯನ್ನು ಹೇಳಲು ಫಲಾಪೇಕ್ಷೆಯಿಲ್ಲದೆ ಜೊತೆ ನಿಂತ ರಕ್ಷಿತ್‌ ಶೆಟ್ಟಿ ಎಂಬ ಗೆಳೆಯನಿಗೆ ಇದರ ಶ್ರೇಯ ಸಲ್ಲಬೇಕು. ನನಗೆ ವಿಶೇಷವಾಗಿ ಪೋಷಕ ನಟಿ ರೂಪಶ್ರೀಯವರಿಗೆ ಪ್ರಶಸ್ತಿ ಸಿಕ್ಕಿದ್ದು ಹೆಚ್ಚು ಸಂತೋಷ ತಂದಿದೆ. ಸಾಮಾನ್ಯವಾಗಿ ಪೋಷಕ ನಟರನ್ನು ಜಗತ್ತು ಕಡಿಮೆ ಗುರುತಿಸುತ್ತದೆ. ಅವರ ಪ್ರಯತ್ನಕ್ಕೆ ಪ್ರಶಸ್ತಿ ಸಿಕ್ಕಿದ್ದಕ್ಕೆ ಧನ್ಯತೆಯಿದೆ. ಅದ್ಭುತವಾಗಿ ನಟಿಸಿ ಶ್ರೇಷ್ಠ ಬಾಲನಟ ಪ್ರಶಸ್ತಿ ಗೆದ್ದ ಆತಿಶ್‌ಗೂ ಅಭಿನಂದನೆ.

- ಸುಮಂತ್‌ ಭಟ್‌, ಮಿಥ್ಯ ನಿರ್ದೇಶಕ

ಪ್ರಾಮಾಣಿಕವಾಗಿ ಹೇಳಿದ ಕತೆ ಗೆಲ್ಲುತ್ತೆ

ಕನಸು ಕಾಣುವುದು ಸುಲಭ, ಸುಂದರ. ಆದರೆ ನೀವು ನಂಬಿದ ಒಂದು ಕಥೆ ಜನರ ಹೃದಯ ಗೆದ್ದು, ಈಗ ಭಾರತೀಯ ಸಿನಿಮಾದ ಇತಿಹಾಸ ಸೇರುವುದನ್ನು ಕಣ್ಣಾರೆ ನೋಡುವ ಸುಖವೇ ಬೇರೆ. 3 ರಾಷ್ಟ್ರಪ್ರಶಸ್ತಿಗಳನ್ನು ಗೆದ್ದ ನಿರ್ದೇಶಕ ಸುಮಂತ್ ಭಟ್, ಕಲಾವಿದರಾದ ಆತಿಶ್ ಶೆಟ್ಟಿ, ರೂಪಶ್ರೀ ವರ್ಕಾಡಿ ಮತ್ತು ಇಡೀ ‘ಮಿಥ್ಯ’ ಚಿತ್ರತಂಡಕ್ಕೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ಪ್ರಾಮಾಣಿಕವಾಗಿ ಹೇಳುವ ಕಥೆಗಳು ಯಾವತ್ತೂ ಸೋಲುವುದಿಲ್ಲ ಅನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಕ್ಕೆ ನಿಮಗೊಂದು ದೊಡ್ಡ ಥ್ಯಾಂಕ್ಸ್. ಈ ಸಿನಿಮಾ ಮ್ಯಾಜಿಕ್ ಹೀಗೆಯೇ ಮುಂದುವರಿಯಲಿ.

- ರಕ್ಷಿತ್‌ ಶೆಟ್ಟಿ, ಮಿಥ್ಯ ಸಿನಿಮಾದ ನಿರ್ಮಾಪಕ

ಕನ್ನಡ ಸಿನ್ಮಾ ಅಧ್ಯಯನ ಹೆಚ್ಚಾಗಲಿ

ಕನ್ನಡದಲ್ಲಿ ಕನ್ನಡ ಸಿನಿಮಾಗೆ ಸಂಬಂಧಿಸಿ ಅಕಾಡೆಮಿಕ್‌ ಬರಹಗಳು ಬಹಳ ಕಡಿಮೆ ಇವೆ. ಸಿನಿಮಾಗಳು ರೂಪುಗೊಳ್ಳುವ ಬಗೆ ಹೇಗೆ, ಇದರ ಹಿಂದಿನ ರಾಜಕೀಯಗಳೇನು ಎಂಬಂಥ ಗಂಭೀರ ಕೃತಿಗಳು ಸಿಗುವುದಿಲ್ಲ. ಅದಕ್ಕೊಂದು ಮೆಥಡಾಲಜಿ ಇಲ್ಲ, ಸಿನಿಮಾ ಅಧ್ಯಯನ ಸಿಗುವುದಿಲ್ಲ. ಸಿನಿಮಾ ಓದು, ಆಸಕ್ತಿ ಇದ್ದ ಕಾರಣ 1930ರಿಂದ ಇಲ್ಲಿಯವರೆಗಿನ ಒಟ್ಟು ಕನ್ನಡ ಸಿನಿಮಾಗಳ ಐಡಿಯಾಲಜಿ, ಫಿಲಾಸಫಿ, ಸಾಂಸ್ಕೃತಿಕ ಪ್ರಶ್ನೆಗಳೇನು, ಸಮಾಜಕ್ಕೆ ಏನು ಸಂಬಂಧ ಇದೆ ಎಂಬ ಪ್ರಶ್ನೆ ಇಟ್ಟು ಅಧ್ಯಯನ ಮಾಡಿದ್ದೆ. ಅದಕ್ಕೆ ಪ್ರಶಸ್ತಿ ಬಂದಿರುವುದಕ್ಕೆ ಖುಷಿ ಇದೆ. ಕನ್ನಡ ಸಿನಿಮಾಗಳ ಅಧ್ಯಯನ ಹೆಚ್ಚಾಗಬೇಕು ಎಂಬ ತುಡಿತವೂ ಇದೆ.

- ಡಾ.ಕೆಂಚನೂರು ಪ್ರದೀಪ್‌ ಕುಮಾರ್‌ ಶೆಟ್ಟಿ (‘ನಾನಿರುವುದೆ ನಮಗಾಗಿ ನಾಡಿರುವುದೇ ನನಗಾಗಿ: ಕನ್ನಡ ಸಿನಿಮಾದ ತತ್ವ ಮತ್ತು ರಾಜಕೀಯ’ ಪುಸ್ತಕಕ್ಕೆ ಅತ್ಯುತ್ತಮ ಸಿನಿಮಾ ಪುಸ್ತಕ ವಿಭಾಗದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ)

ತುಳು ಭಾಷೆ ಅಂತಾರಾಷ್ಟ್ರೀಯ ಮಟ್ಟಕ್ಕೆ

ಅವಿದ್ಯಾವಂತ ಬಡ ದೈವ ಪಾತ್ರಿಯ ಬದುಕು ಒಂದು ಫೋನ್‌ನಿಂದ ಬದಲಾಗುತ್ತ ಹೋಗುವ ಪಲ್ಲಟವನ್ನು ಸಮಕಾಲೀನ ನೆಲೆಯಲ್ಲಿ ನಮ್ಮ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದೇವೆ. ನವೀನ್‌ ಡಿ.ಪಡೀಲ್‌ ಗಂಭೀರ ಪಾತ್ರದಲ್ಲಿ ನಟಿಸಿದ್ದಾರೆ. 18 ವರ್ಷದ ಹಿಂದೆ ‘ಗಗ್ಗರ’ ಚಿತ್ರಕ್ಕೆ ಅವಾರ್ಡ್‌ ಬಂದ ಮೇಲೆ ಅನೇಕ ತುಳು, ಸಿನಿಮಾ ಮಾಡಿದ್ದೆ. ಈ ಚಿತ್ರ ಎಂಟಕ್ಕೂ ಹೆಚ್ಚು ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ತುಳು ಭಾಷೆ ಇದೆ ಎಂದೇ ದೇಶದಲ್ಲಿ ಅನೇಕರಿಗೆ ಗೊತ್ತಿಲ್ಲ. ಈ ಭಾಷೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಲ್ಲಿಸಬೇಕು ಎನ್ನುವುದು ನನ್ನ ಕನಸು.

-ಶಿವಧ್ವಜ್‌, ಇಂಬು ಸಿನಿಮಾದ ನಿರ್ದೇಶಕ