ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ಎಂದೇ ಖ್ಯಾತರಾಗಿರುವ ನಟಿ ರಚಿತಾ ರಾಮ್ ಅವರ ಹುಟ್ಟುಹಬ್ಬದ ಸಂಭ್ರಮ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಟಿಯ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಎದ್ದಿರುವ ಈ ಆಕ್ರೋಶಕ್ಕೆ ಕಾರಣವೇನು? ಈ ಸ್ಟೋರಿ ನೋಡಿ..
Rachita Ram Birthday Controversy: ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ಎಂದೇ ಖ್ಯಾತರಾಗಿರುವ ನಟಿ ರಚಿತಾ ರಾಮ್ ಅವರ ಹುಟ್ಟುಹಬ್ಬದ ಸಂಭ್ರಮ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಟಿಯ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹಾಕಲಾಗಿರುವ ಫ್ಲೆಕ್ಸ್‌ಗಳು ಹಾಗೂ ಬ್ಯಾನರ್‌ಗಳ ಸಂಖ್ಯೆ ಭಾರೀ ಚರ್ಚೆಗೆ ಕಾರಣವಾಗಿದ್ದು, ಪರಿಸರ ಪ್ರೇಮಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಚಿತಾ ರಾಮ್ ನಿವಾಸದ ಸುತ್ತಮುತ್ತ ಮಾತ್ರವಲ್ಲದೆ ವಿದ್ಯುತ್ ಕಂಬಗಳು, ಪಾದಚಾರಿ ಮಾರ್ಗ ಸೇರಿದಂತೆ ವಿವಿಧೆಡೆ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ ಎಂಬ ಆರೋಪ ಕೇಳಿಬಂದಿದೆ.
ರಚಿತಾ ರಾಮ್ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ಶುಭಕೋರಲು ಮುಂದಾಗಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಈ ಸಂಭ್ರಮದ ಹೆಸರಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್ ಅಳವಡಿಸಿರುವುದು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಅದರಲ್ಲೂ ನಟಿಯ ನಿವಾಸದ ಮುಂಭಾಗದ ಮುಖ್ಯ ರಸ್ತೆಯಲ್ಲಿ ಕಸದ ರಾಶಿ ಬಿದ್ದಿರುವ ದೃಶ್ಯವೂ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಹುಟ್ಟುಹಬ್ಬದ ಸಂಭ್ರಮದ ನಡುವೆ ‘ಪರಿಸರ ಕಾಳಜಿ ಎಲ್ಲಿದೆ?’ ಎಂಬ ಪ್ರಶ್ನೆಯೂ ಎದ್ದಿದೆ.
ಈ ಕುರಿತು ಪರಿಸರ ಪ್ರೇಮಿಗಳು ಸಚಿವ ಕೃಷ್ಣ ಬೈರೇಗೌಡ ಅವರಿಗೆ ಮನವಿ ಸಲ್ಲಿಸಿ, ಅನಧಿಕೃತವಾಗಿ ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ಅಳವಡಿಸಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ರಾಜರಾಜೇಶ್ವರಿ ನಗರ ಇದೀಗ ‘RR ನಗರ’ ಎನ್ನುವುದಕ್ಕಿಂತ ‘ರಚಿತಾ ರಾಮ್ ನಗರ’ವಾಗಿ ಕಾಣುತ್ತಿದೆ ಎಂಬ ರೀತಿಯ ಟೀಕೆಗಳೂ ಸಾಮಾಜಿಕ ವಲಯದಲ್ಲಿ ಕೇಳಿಬರುತ್ತಿವೆ.
‘ಸಾಮಾನ್ಯ ಜನರಿಗೆ ಒಂದು ಕಾನೂನು, ಸೆಲೆಬ್ರಿಟಿಗಳಿಗೆ ಮತ್ತೊಂದು ಕಾನೂನುವೇ?’
‘ಸಾಮಾನ್ಯ ಜನರಿಗೆ ಒಂದು ಕಾನೂನು, ಸೆಲೆಬ್ರಿಟಿಗಳಿಗೆ ಮತ್ತೊಂದು ಕಾನೂನುವೇ?’ ಎಂದು ಪರಿಸರ ಪ್ರೇಮಿಗಳು ಪ್ರಶ್ನಿಸಿದ್ದಾರೆ. ಸಾಮಾನ್ಯ ವ್ಯಕ್ತಿಯೊಬ್ಬರು ಇದೇ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿ ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್‌ಗಳನ್ನು ಹಾಕಿದರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಸುಮ್ಮನಿರುತ್ತದೆಯೇ? ಹಾಗಿದ್ದರೆ ಸೆಲೆಬ್ರಿಟಿಗಳ ವಿಚಾರದಲ್ಲಿ ಮಾತ್ರ ಏಕೆ ಬೇರೆ ರೀತಿಯ ನಡೆ ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟಿದ್ದಾರೆ.
ಇದರ ಜೊತೆಗೆ ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳಿಗೆ ಜವಾಬ್ದಾರಿಯುತ ಸಂದೇಶ ನೀಡಬೇಕು ಎಂಬ ಆಗ್ರಹವೂ ಕೇಳಿಬಂದಿದೆ. ಅಭಿಮಾನಿಗಳು ಪ್ರೀತಿಯಿಂದ ಶುಭಕೋರುವುದು ತಪ್ಪಲ್ಲ, ಆದರೆ ಪರಿಸರಕ್ಕೆ ಹಾನಿಯಾಗುವ ರೀತಿಯಲ್ಲಿ ಫ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸುವುದನ್ನು ತಪ್ಪಿಸಬೇಕು ಎಂದು ಪರಿಸರ ಪ್ರೇಮಿಗಳು ಮನವಿ ಮಾಡಿದ್ದಾರೆ.
‘ರಾಜಕಾರಣಿಗಳು ಮಾತು ಕೇಳುವುದಿಲ್ಲ, ಈಗ ಸೆಲೆಬ್ರಿಟಿಗಳ ಸರದಿ’?
‘ರಾಜಕಾರಣಿಗಳು ಮಾತು ಕೇಳುವುದಿಲ್ಲ, ಈಗ ಸೆಲೆಬ್ರಿಟಿಗಳ ಸರದಿ’ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಪರಿಸರ ಹೋರಾಟಗಾರರು, ಜನಪ್ರಿಯ ನಟ-ನಟಿಯರು ತಮ್ಮ ಅಭಿಮಾನಿಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಫ್ಲೆಕ್ಸ್ ಹಾಕದಂತೆ ಮನವಿ ಮಾಡಬೇಕು ಎಂದಿದ್ದಾರೆ. ಫ್ಲೆಕ್ಸ್ ಬ್ಯಾನರ್‌ಗಳ ಅಕ್ರಮ ಅಳವಡಿಕೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶಗಳಿದ್ದು, GBA ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸುವ ಫ್ಲೆಕ್ಸ್‌ಗಳಿಗೆ ದಂಡ ವಿಧಿಸುವ ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.
ಹೀಗಾಗಿ ರಚಿತಾ ರಾಮ್ ಹುಟ್ಟುಹಬ್ಬದ ಸಂಭ್ರಮಕ್ಕೆ ಅಭಿಮಾನಿಗಳ ಪ್ರೀತಿ ಸಿಕ್ಕಿದ್ದರೂ, ಫ್ಲೆಕ್ಸ್ ವಿವಾದ ಮಾತ್ರ ಹೊಸ ಚರ್ಚೆಗೆ ನಾಂದಿ ಹಾಡಿದೆ. ಸೆಲೆಬ್ರಿಟಿಗಳ ಜನಪ್ರಿಯತೆಯಷ್ಟೇ ಅವರ ಸಾಮಾಜಿಕ ಜವಾಬ್ದಾರಿಯೂ ಮುಖ್ಯ ಎಂಬ ಸಂದೇಶವನ್ನು ಪರಿಸರ ಪ್ರೇಮಿಗಳು ಇದೀಗ ಮತ್ತೊಮ್ಮೆ ಮುನ್ನೆಲೆಗೆ ತಂದಿದ್ದಾರೆ.


