'ಟಗರು ಪಲ್ಯ' ಖ್ಯಾತಿಯ ನಟಿ ಅಮೃತಾ ಪ್ರೇಮ್ ಅಭಿನಯದ 'ಪಬ್ಬಾರ್' ಸಿನಿಮಾ ಡಿಸೆಂಬರ್ 11ರಂದು ಬಿಡುಗಡೆಯಾಗಲಿದೆ. ಈ ವೇಳೆ ಸ್ಟಾರ್ ಕಿಡ್ಗಳ ಮೇಲಿನ ಜವಾಬ್ದಾರಿ ಹಾಗೂ ಚಿತ್ರರಂಗದ ಅವಕಾಶಗಳ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಇದೊಂದು ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ಶಿವರಾಜ್ಕುಮಾರ್ ವಿಶೇಷ ಪಾತ್ರದಲ್ಲಿದ್ದಾರೆ.
ಬೆಂಗಳೂರು: 'ಟಗರು ಪಲ್ಯ' ಚಿತ್ರದ ಮೂಲಕ ಸ್ಯಾಂಡಲ್ವುಡ್ನಲ್ಲಿ ಗಮನ ಸೆಳೆದ ನಟಿ ಅಮೃತಾ ಪ್ರೇಮ್. ಇದೀಗ 'ಪಬ್ಬಾರ್' ಸಿನಿಮಾದ ಬಿಡುಗಡೆಗೆ ಸಜ್ಜಾಗಿದ್ದಾರೆ. ಡಿಸೆಂಬರ್ 11 ರಂದು ಸಿನಿಮಾ ರಿಲೀಸ್ ಆಗಲಿದ್ದು, ಚಿತ್ರದ ಪ್ರಮೋಷನ್ನಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ನಡೆದ ಸಂದರ್ಶನ ಒಂದರಲ್ಲಿ ಮಾತನಾಡಿದ ಅಮೃತಾ ಪ್ರೇಮ್, ಚಿತ್ರರಂಗದಲ್ಲಿ ಸೆಲೆಬ್ರಿಟಿ ಮಕ್ಕಳಿಗೆ ಸುಲಭವಾಗಿ ಅವಕಾಶ ಸಿಗುತ್ತದೆ ಎಂಬ ಚರ್ಚೆ ಹಾಗೂ ಸ್ಟಾರ್ ಕಿಡ್ಗಳ ಮೇಲಿರುವ ಜವಾಬ್ದಾರಿಯ ಬಗ್ಗೆ ಮುಕ್ತವಾಗಿ ಅನಿಸಿಕೆ ಹಂಚಿಕೊಂಡಿದ್ದಾರೆ.
ಏನಂದ್ರು ಅಮೃತಾ ಪ್ರೇಮ್?
ಸಿನಿಮಾ ಹಿನ್ನೆಲೆ ಇರುವ ಕುಟುಂಬದಿಂದ ಬಂದವರಿಗೆ ಅವಕಾಶಗಳು ಸುಲಭವಾಗಿ ಸಿಗುತ್ತವೆ. ಆದರೆ ಪ್ರತಿಭೆ ಇದ್ದರೂ ಹೊರಗಿನವರಿಗೆ ಅಷ್ಟು ಅವಕಾಶ ಸಿಗುವುದಿಲ್ಲ ಎಂಬ ನೆಪೋಟಿಸಂ ಮಾತುಗಳ ಕುರಿತು ಪ್ರತಿಕ್ರಿಯಿಸಿದ ಅಮೃತಾ, ನಾನು ವರ್ಕ್ಶಾಪ್ ಹಾಗೂ ಥಿಯೇಟರ್ಗಳಿಗೆ ಹೋದಾಗ ಸಿನಿಮಾ ಹಿನ್ನೆಲೆ ಇಲ್ಲದೆ ಬಂದವರು ಎಷ್ಟೋ ಕಷ್ಟಪಡುತ್ತಿರುವುದನ್ನು ನೋಡಿದ್ದೇನೆ. ಎಲ್ಲರಿಗೂ ಕಷ್ಟ ಇದ್ದೇ ಇರುತ್ತದೆ.
ನಮ್ಮದು ಒಂದು ಪ್ಲಸ್ ಪಾಯಿಂಟ್ ಏನೆಂದರೆ.. ನಾವು ಸೆಲೆಬ್ರಿಟಿ ಮಕ್ಕಳು. ಹೀಗಾಗಿ ಎಲ್ಲರಿಗೂ ಬೇಗ ಕಾಣಿಸಿಕೊಳ್ಳುತ್ತೇವೆ. ಅಷ್ಟೇ ವ್ಯತ್ಯಾಸ ಅನಿಸುತ್ತದೆ. ಅವರವರ ರೀತಿಯಲ್ಲಿ ಅವರವರದೇ ಆದ ಕಷ್ಟ ಪಡುತ್ತಿರುತ್ತಾರೆ ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ.
ಪ್ರೇಮ್ ಅವರ ಪುತ್ರಿಯಾಗಿದ್ದರೂ ನಿಮಗೆ ಸ್ಟ್ರಗಲ್ ಇತ್ತಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು.. ಸ್ಟ್ರಗಲ್ ಎಂದರೆ ನಮ್ಮ ಮೇಲೆ ಹೆಚ್ಚುವರಿ ಜವಾಬ್ದಾರಿ ಇರುತ್ತದೆ. ಇವರಪ್ಪ ಹೀರೋ, ಹೀರೋ ಮಗಳು ಇವಳು ಎಂಬ ಹೋಲಿಕೆ ಇರುತ್ತದೆ. ಕೆಲಸದ ನಡುವೆ ಈ ನಿರೀಕ್ಷೆಯನ್ನೂ ನಿಭಾಯಿಸಬೇಕಾದ ಜವಾಬ್ದಾರಿ ಇದೆ ಎಂದು ಪ್ರಬುದ್ಧವಾಗಿ ಮಾತನ್ನಾಡಿದ್ದಾರೆ.
ಇದೇ ವೇಳೆ ತಮ್ಮ ಸಿನಿಮಾ ಪಯಣದಲ್ಲಿ ತಂದೆ-ತಾಯಿ ಹಾಗೂ 'ಪಬ್ಬಾರ್' ಚಿತ್ರತಂಡದ ಸಂಪೂರ್ಣ ಬೆಂಬಲ ತಮಗಿದೆ ಎಂದು ತಿಳಸಿದ್ದಾರೆ. ಟಗರು ಪಲ್ಯ ಬಳಿಕ ಪ್ರೇಕ್ಷಕರು ತಮ್ಮ ಮೇಲಿಟ್ಟಿರುವ ನಂಬಿಕೆಯಿಂದಲೇ ಒಳ್ಳೆಯ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದಾಗಿ ಅವರು ತಿಳಿಸಿದರು.
'ಪಬ್ಬಾರ್' ಸಿನಿಮಾ ಬಗ್ಗೆ ಮಾತನಾಡಿ.. ಇದೊಂದು ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಡಿಸೆಂಬರ್ 11ರಂದು ತೆರೆಗೆ ಬರಲಿದೆ. ಧೀರನ್ ನಾಯಕರಾಗಿರುವ ಈ ಚಿತ್ರದಲ್ಲಿ ಅಮೃತಾ ಆಯುರ್ವೇದಿಕ್ ವೈದ್ಯೆಯ ಪಾತ್ರದಲ್ಲಿ ನಟಿಸಿದ್ದಾರೆ. 'ಶಾಖಾಹಾರಿ' ಖ್ಯಾತಿಯ ಸಂದೀಪ್ ನಿರ್ದೇಶನದ ಈ ಸಿನಿಮಾದಲ್ಲಿ ಶಿವರಾಜ್ಕುಮಾರ್ ವಿಶೇಷವಾಗಿ 'ಬಳೆಗಾರ'ನಾಗಿ ಕಾಣಿಸಿಕೊಂಡಿದ್ದು, ಅವರೊಂದಿಗೆ ತೆರೆ ಹಂಚಿಕೊಂಡಿದ್ದು ಜೀವನದ ಅದ್ಭುತ ಅವಕಾಶ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಸಿನಿಮಾ ತಂಡವು ಚಿತ್ರದ ಲಾಲಿ ಹಾಡು ಸಾಂಗ್ ರಿಲೀಸ್ ಮಾಡಿದೆ. ಇದರಲ್ಲಿ ಶಿವಣ್ಣ ಹಾಗೂ ಅಮೃತಾ ತುಂಬಾ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ.















