ಮಂಗಳೂರಿನ ಪ್ರೀಮಿಯರ್ ಶೋನಲ್ಲಿ ಭರ್ಜರಿ ಸಕ್ಸಸ್ ಕಂಡಿರುವ 'ಕರಾವಳಿ' ಚಿತ್ರ ಜುಲೈ 24ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ ಮತ್ತು ಮಿತ್ರ ಅವರ ತ್ರಿವೇಣಿ ಸಂಗಮವನ್ನು ದೊಡ್ಡ ಪರದೆಯ ಮೇಲೆ ನೋಡಲು ಸಿನಿರಸಿಕರು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.
‘ಕರಾವಳಿ’ಯ ಗರ್ಜನೆಗೆ ಮಂಗಳೂರು ಮಂದಿ ಫಿದಾ: ರಿಲೀಸ್‌ಗೂ ಮುನ್ನವೇ ಬಾಕ್ಸಾಫೀಸ್‌ನಲ್ಲಿ ಸುನಾಮಿ ಎಬ್ಬಿಸುವ ಮುನ್ಸೂಚನೆ ನೀಡಿದ 'ಮಹಾವೀರ-ಮಹಾಬಲ' ಜೋಡಿ!
ಸ್ಯಾಂಡಲ್‌ವುಡ್‌ನಲ್ಲಿ ಸದ್ಯ 'ಕರಾವಳಿ' ಚಿತ್ರದ್ದೇ ಹವಾ! ಮಣ್ಣಿನ ವಾಸನೆ, ಕಡಲ ತಡಿಯ ಕಥೆ ಮತ್ತು ಅದ್ಧೂರಿ ಮೇಕಿಂಗ್‌ನಿಂದ ಗಮನ ಸೆಳೆದಿರುವ ಈ ಸಿನಿಮಾ, ಈಗ ತನ್ನ ಮೊದಲ ಪ್ರೀಮಿಯರ್ ಶೋ ಮೂಲಕವೇ ದೊಡ್ಡ ಸದ್ದು ಮಾಡುತ್ತಿದೆ. ಜುಲೈ 19ರ ಭಾನುವಾರ ಮಂಗಳೂರಿನಲ್ಲಿ ನಡೆದ ಸ್ಪೆಷಲ್ ಪ್ರೀಮಿಯರ್ ಶೋನಲ್ಲಿ ಕರಾವಳಿ (Karawali) ಸಿನಿಮಾ ನೋಡಿದ ಪ್ರೇಕ್ಷಕರು ಥಿಯೇಟರ್‌ನಿಂದ ಹೊರಬರುವಾಗ ಅಕ್ಷರಶಃ ಎಮೋಷನಲ್ ಆಗಿದ್ದರು. ಕರಾವಳಿ ಭಾಗದ ಜನರು ತಮ್ಮ ಮಣ್ಣಿನ ಕಥೆಯನ್ನು ತೆರೆಯ ಮೇಲೆ ಕಂಡು ಸಂಭ್ರಮಿಸಿದ್ದಲ್ಲದೆ, ಚಿತ್ರದ ಬಗ್ಗೆ ಮೆಚ್ಚುಗೆಯ ಸುರಿಮಳೆಯನ್ನೇ ಸುರಿಸಿದ್ದಾರೆ. ಈ ಸುದ್ದಿಯೀಗ ಭಾರೀ ವೈರಲ್ ಆಗುತ್ತಿದೆ.
ನಟ ಮಿತ್ರ ಅವರಿಗೆ ಇದು 'ಲೈಫ್ ಟೈಮ್' ರೋಲ್!
ಈ ಚಿತ್ರದಲ್ಲಿ ಅತಿ ಹೆಚ್ಚು ಸುದ್ದಿಯಾಗುತ್ತಿರುವುದು ನಟ ಮಿತ್ರ ಅವರ 'ಮಹಾಬಲ' ಎಂಬ ಪಾತ್ರ. ಸಾಮಾನ್ಯವಾಗಿ ಕಾಮಿಡಿ ರೋಲ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಿತ್ರ, ಇಲ್ಲಿ ಗಂಭೀರವಾದ ಮತ್ತು ತೂಕವುಳ್ಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ನಟನೆಗೆ ಮಂಗಳೂರು ಮಂದಿ ಫುಲ್ ಮಾರ್ಕ್ಸ್ ನೀಡಿದ್ದಾರೆ. "ನನ್ನ ಸಿನಿಮಾ ಜೀವನದಲ್ಲಿ ಇಂತಹ ಒಂದು ಅದ್ಭುತ ಪ್ರತಿಕ್ರಿಯೆಗಾಗಿ ನಾನು ಕಾಯುತ್ತಿದ್ದೆ, ಅದು ಇಂದು ಕರಾವಳಿ ಚಿತ್ರದಿಂದ ಸಿಕ್ಕಿದೆ" ಎಂದು ಮಿತ್ರ ಅವರು ಭಾವುಕರಾಗಿ ಹೇಳಿಕೊಂಡಿದ್ದಾರೆ. ಕಣ್ಣಲ್ಲೇ ಕಥೆ ಹೇಳುವ ಮಹಾಬಲನ ಪಾತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಕರಾವಳಿಯಲ್ಲಿ ಮಿತ್ರನೇ ಪಾತ್ರವೇ ಹೈಲೈಟ್ ಆಗ್ತಿದ್ಯಾ? ಕಾದು ನೋಡಬೇಕಿದೆ!
ರಾಜ್ ಬಿ ಶೆಟ್ಟಿ ಎಂಬ ಮ್ಯಾಜಿಕ್!
ಇನ್ನು ಮಂಗಳೂರಿನ ಹೆಮ್ಮೆಯ ನಟ ರಾಜ್ ಬಿ ಶೆಟ್ಟಿ ಅವರ ಬಗ್ಗೆ ಕೇಳಬೇಕೆ? ಈ ಚಿತ್ರದಲ್ಲಿ ಅವರು 'ಮಹಾವೀರ' ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿತ್ರದುದ್ದಕ್ಕೂ ಅವರ ಸ್ಕ್ರೀನ್ ಪ್ರೆಸೆನ್ಸ್ ಮತ್ತು ಪರ್ಫಾರ್ಮೆನ್ಸ್ ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ನಿಲ್ಲಿಸುತ್ತದೆ. ಚಿತ್ರದ ಪ್ರೀಮಿಯರ್ ಶೋಗೆ ಬಂದಿದ್ದ ಯುವತಿಯೊಬ್ಬಳು, "ನಾನು ಈ ಸಿನಿಮಾ ನೋಡಲು ಬಂದಿದ್ದೇ ರಾಜ್ ಬಿ ಶೆಟ್ಟಿ ಅವರಿಗಾಗಿ. ಅವರ ಪಾತ್ರವಂತೂ ಅದ್ಭುತವಾಗಿದೆ" ಎಂದು ಖುಷಿಯಿಂದ ಹಂಚಿಕೊಂಡಿದ್ದಾರೆ. ಮಹಾವೀರ ಮತ್ತು ಮಹಾಬಲ ಎಂಬ ಈ ಎರಡು ಪಾತ್ರಗಳ ಜುಗಲ್ಬಂದಿಯೇ ಸಿನಿಮಾದ ಹೈಲೈಟ್.
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹೊಸ ಅವತಾರ!
ನಟ ಪ್ರಜ್ವಲ್ ದೇವರಾಜ್ ಈ ಚಿತ್ರದಲ್ಲಿ ಬಹಳ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಕರಾವಳಿ ಸಂಸ್ಕೃತಿಯ ಹಿನ್ನೆಲೆಯಲ್ಲಿ ಅವರ ಪಾತ್ರ ಮೂಡಿಬಂದಿರುವ ರೀತಿ ಪ್ರೇಕ್ಷಕರಿಗೆ ಇಷ್ಟವಾಗಿದೆ. ಪ್ರಜ್ವಲ್ ಅವರ ನಟನೆ ಮತ್ತು ಗತ್ತು ಸಿನಿಮಾಗೆ ದೊಡ್ಡ ಬಲ ನೀಡಿದೆ ಎಂಬುದು ಅಭಿಮಾನಿಗಳ ಮಾತು. ಫಸ್ಟ್ ಹಾಫ್‌ನಲ್ಲಿ ಕುತೂಹಲ ಕೆರಳಿಸುವ ಸಿನಿಮಾ, ಸೆಕೆಂಡ್ ಹಾಫ್‌ನಲ್ಲಿ ಪ್ರೇಕ್ಷಕರ ಕಣ್ಣಾಲಿಗಳನ್ನು ಒದ್ದೆ ಮಾಡುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಪ್ರೀಮಿಯರ್ ವಿಡಿಯೋಗಳಲ್ಲಿ ಜನರು ಸಿನಿಮಾ ನೋಡಿ ಭಾವುಕರಾಗಿ ಕಣ್ಣೀರು ಹಾಕುತ್ತಿರುವುದು ಕಂಡುಬಂದಿದೆ. ಕರಾವಳಿ ಸಿನಿಮಾ ಚೆನ್ನಾಗಿ ಮೂಡಿಬಂದಿದೆ ಎಂಬ ಮಾತಂತೂ ಹರಿದಾಡತೊಡಗಿದೆ.
ಸಚಿನ್ ಬಸ್ರೂರು ಮ್ಯೂಸಿಕ್ ಪವರ್!
ನಿರ್ದೇಶಕ ಗುರುದತ್ತ ಗಾಣಿಗ ಅವರ ಅದ್ಭುತ ವಿಷನ್ ಮತ್ತು ಸಚಿನ್ ಬಸ್ರೂರು ಅವರ ಕಿವಿಗಡಚಿಕ್ಕುವ ಹಿನ್ನೆಲೆ ಸಂಗೀತ ಚಿತ್ರದ ತೂಕವನ್ನು ಹೆಚ್ಚಿಸಿದೆ. ಕರಾವಳಿಯ ನೈಜತೆಯನ್ನು ಕಿಂಚಿತ್ತೂ ಕಮ್ಮಿಯಾಗದಂತೆ ತೆರೆಯ ಮೇಲೆ ತರುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ. ಸಂಪದ ಅವರ ಅಭಿನಯವೂ ಅಚ್ಚುಕಟ್ಟಾಗಿ ಮೂಡಿಬಂದಿದೆ.
ಜುಲೈ 24ಕ್ಕೆ ರಾಜ್ಯಾದ್ಯಂತ ಹಬ್ಬ!
ಮಂಗಳೂರಿನ ಪ್ರೀಮಿಯರ್ ಶೋನಲ್ಲಿ ಭರ್ಜರಿ ಸಕ್ಸಸ್ ಕಂಡಿರುವ 'ಕರಾವಳಿ' ಚಿತ್ರ ಜುಲೈ 24ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ ಮತ್ತು ಮಿತ್ರ ಅವರ ತ್ರಿವೇಣಿ ಸಂಗಮವನ್ನು ದೊಡ್ಡ ಪರದೆಯ ಮೇಲೆ ನೋಡಲು ಸಿನಿರಸಿಕರು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಸದ್ಯದ ಟ್ರೆಂಡ್ ನೋಡಿದರೆ, ಈ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಹೊಸ ದಾಖಲೆ ಬರೆಯುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಕರಾವಳಿಯ ಕಡಲ-ಅಬ್ಬರವನ್ನು ಬೆಳ್ಳಿತೆರೆಯ ಮೇಲೆ ನೋಡಲು ಕನ್ನಡ ಸಿನಿರಸಿಕರು ಕಾಯುತ್ತಿದ್ದಾರೆ.


