ಕಾಟೇರ ಯಶಸ್ಸಿನ ಬಳಿಕ ಪ್ಯಾರಿಸ್ಗೆ ಹಾರಿದ ಆರಾಧನಾ: ಅಮ್ಮ ಮಾಲಾಶ್ರಿ ಜೊತೆ ಸಕತ್ ಸ್ಟೆಪ್- ವಿಡಿಯೋ ವೈರಲ್
ಕಾಟೇರ ಚಿತ್ರದಲ್ಲಿ ಭರ್ಜರಿ ಯಶಸ್ಸು ಕಂಡಿರುವ ಮಾಲಾಶ್ರಿ ಪುತ್ರಿ ಆರಾಧನಾ ಅವರು ಇದೀಗ ಪ್ಯಾರಿಸ್ಗೆ ಪ್ರಯಾಣ ಬೆಳೆಸಿದ್ದಾರೆ. ಅಮ್ಮ-ಮಗಳ ರೀಲ್ಸ್ ವೈರಲ್ ಆಗಿದೆ.
ನಟ ದರ್ಶನ್ ಮತ್ತು ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಅವರ ನಟನೆಯ ಚಿತ್ರ ಭರ್ಜರಿಯಾಗಿ ಓಡುತ್ತಿದೆ. ಕಳೆದ ಶುಕ್ರವಾರ ಬಿಡುಗಡೆಯಾದ ಚಿತ್ರವು ಬಿಡುಗಡೆಯಾದ 3 ದಿನಗಳಲ್ಲಿ 50 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಇನ್ನೊಂದು ವಾರದಲ್ಲಿ 100 ಕೋಟಿ ಕ್ಲಬ್ ಸೇರಲಿದೆ ಎಂಬ ಲೆಕ್ಕಾಚಾರವೂ ಇದೆ. ಮಾಲಾಶ್ರೀ ಅವರ ಪುತ್ರಿ ಆರಾಧನಾ ಅವರು ತಮ್ಮ ಚೊಚ್ಚಲ ಚಿತ್ರದಲ್ಲಿಯೇ ಭರ್ಜರಿ ಯಶಸ್ಸು ಕಂಡಿದ್ದಾರೆ. ಈ ಕುರಿತು ಸಕ್ಸಸ್ ಮೀಟ್ ಹಮ್ಮಿಕೊಂಡಿದ್ದ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು ಚಿತ್ರ ಎಷ್ಟು ಗಳಿಸಲಿದೆ ಎಂಬ ಲೆಕ್ಕಾಚಾರ ಹೇಳಲಾಗುವುದಿಲ್ಲ. ಆದರೆ ಒಂದಂತೂ ಸತ್ಯ,ಚಿತ್ರ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ಇದು ಖುಷಿಯ ವಿಷಯ ಎಂದಿದ್ದರು.
ಈ ಚಿತ್ರದ ಯಶಸ್ಸಿನ ಬೆನ್ನಲ್ಲೇ ಆರಾಧನಾ ಅವರು ಅಮ್ಮ ಮಾಲಾಶ್ರೀ ಜೊತೆ ಪ್ಯಾರಿಸ್ಗೆ ಪ್ರಯಾಣ ಬೆಳೆಸಿದ್ದಾರೆ. ಚಿತ್ರ ಒಳ್ಳೆ ಓಪನಿಂಗ್ ಜೊತೆಗೆ ಒಳ್ಳೆ ಕಲೆಕ್ಷನ್ ಕೂಡ ಮಾಡಿರುವ ಬಗ್ಗೆ ಪ್ಯಾರಿಸ್ನಲ್ಲಿ ಅಮ್ಮ-ಮಗಳು ಸೆಲೆಬ್ರೇಟ್ ಮಾಡಿದ್ದಾರೆ. ಇಲ್ಲಿರುವ ಹಲವು ತಾಣಗಳಿಗೆ ಭೇಟಿ ಕೊಟ್ಟಿರುವ ಅಮ್ಮ-ಮಗಳು ಇದೀಗ ಪಸಂದಾಗವ್ನೆ ಹಾಡಿಗೆ ರೀಲ್ಸ್ ಮಾಡಿ ಅದನ್ನು ಶೇರ್ ಮಾಡಿಕೊಂಡಿದ್ದಾರೆ. ಪ್ಯಾರಿಸ್‌ನ ದಿ ಅನಿಸೋ ಲೋಕಷನ್‌ನಲ್ಲಿ ನಿಂತು ಈ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಕಾಟೇರ ಚಿತ್ರದ ಈ ಹಾಡು ಸದ್ಯ ಸಕತ್ ಟ್ರೆಂಡಿಂಗ್ನಲ್ಲಿದೆ. ಇದಕ್ಕೆ ಇಬ್ಬರೂ ಸ್ಟೆಪ್ ಹಾಕಿದ್ದಾರೆ.
ಹೊಸ ವರ್ಷಕ್ಕೆ ಹೊಸ ಸರ್ಪ್ರೈಸ್: ಅಯೋಧ್ಯೆ ಪುಣ್ಯಭೂಮಿಯಲ್ಲಿ ಡಾ.ಬ್ರೋ- ರಾಮಾಯಣ ನಂಟಿರೋ ನೇಪಾಳಕ್ಕೂ ಭೇಟಿ
ಈ ರೀಲ್ಸ್ಗೆ ಥರಹೇವಾರಿ ಕಮೆಂಟ್ಸ್ ಸುರಿಮಳೆಯಾಗುತ್ತಿದೆ. ಮಗಳು ಅಮ್ಮನನ್ನು ಮೀರಿಸುತ್ತಾಳೆ ಎಂದು ಹಲವರು ಹೇಳಿದ್ದಾರೆ. ಇದೇ ಹೊತ್ತಿನಲ್ಲಿ ಅಮ್ಮ-ಮಗಳ ಹೋಲಿಕೆಯೂ ಆಗುತ್ತಿದೆ. 1989ರಲ್ಲಿ ನಟಿ ಮಾಲಾಶ್ರೀ ಅವರು ನಂಜುಂಡಿ ಕಲ್ಯಾಣ ಸಿನಿಮಾ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟು ಮೊದಲ ಚಿತ್ರದಲ್ಲಿಯೇ ಭರ್ಜರಿ ಯಶಸ್ಸು ಗಳಿಸಿದ್ದರು. ಇದಾದ ಬಳಿಕ ಗಜಪತಿ ಗರ್ವಭಂಗ ಮತ್ತು ಪೊಲೀಸ್ ಹೆಂಡತಿ, ಹ್ಯಾಟ್ರಿಕ್ ಹೀರೋ ಶಿವಣ್ಣ ಜೊತೆ ಮೃತ್ಯುಂಜಯ ಹೀಗೆ ಸಾಲು ಸಾಲು ಸಿನಿಮಾಗಳು ಯಶಸ್ಸು ಕಂಡವು. ಇದೀಗ ಆರಾಧನಾ ಕೂಡ ಮೊದಲ ಸಿನಿಮಾ ಕಾಟೇರದಲ್ಲಿ ಯಶಸ್ಸು ಕಂಡಿರುವ ಹಿನ್ನೆಲೆಯಲ್ಲಿ ಅಮ್ಮನ ಹಾದಿಯನ್ನೇ ತುಳಿಯುತ್ತಿದ್ದಾರೆ ಎನ್ನುತ್ತಿದ್ದಾರೆ ಫ್ಯಾನ್ಸ್. ಅಂದಹಾಗೆ, 2002 ರಲ್ಲಿ ಜನಿಸಿದ ಆರಾಧನಾ ವಯಸ್ಸು 22 ವರ್ಷ ಹಾಗೂ ದರ್ಶನ್ ಅವರ ವಯಸ್ಸು 46 ವರ್ಷ.
ಇನ್ನು ಕಾಟೇರ ಚಿತ್ರದ ಬಗ್ಗೆ ಹೇಳುವುದಾದರೆ, 'ಕಾಟೇರ' ಸಿನಿಮಾಗೆ ತರುಣ್ ಕಿಶೋರ್ ಸುಧೀರ್ ಅವರು ನಿರ್ದೇಶನ ಮಾಡಿದ್ದು, ರಾಕ್‌ಲೈನ್ ವೆಂಕಟೇಶ್ ಅವರು ಹಣ ಹಾಕಿದ್ದಾರೆ. ಹಾಡುಗಳಿಗೆ ವಿ ಹರಿಕೃಷ್ಣ ಸಂಗೀತ ನೀಡಿದ್ದು, ಸುಧಾಕರ್ ಎಸ್ ರಾಜ್ ಛಾಯಾಗ್ರಹಣ ಮಾಡಿದ್ದಾರೆ. ಕೆ ಎಂ ಪ್ರಕಾಶ್ ಅವರ ಸಂಕಲನ ಈ ಸಿನಿಮಾಕ್ಕಿದೆ. ದರ್ಶನ್ ಮತ್ತು ಆರಾಧನಾ ನಟನೆಗೆ ಜನರು ಮೆಚ್ಚಿಕೊಂಡಿದ್ದಾರೆ. ಜಾತಿ ಪದ್ಧತಿ, ರೈತರ ಸಮಸ್ಯೆಗಳನ್ನು ಸಿನಿಮಾದಲ್ಲಿ ಹೇಳಲಾಗಿದೆ. ಇಮೇಜ್ ಹಂಗನ್ನು ಬದಿಗೊತ್ತಿ ಎರಡು ಶೇಡ್‌ನಲ್ಲಿ ನಟ ದರ್ಶನ್ ಕಾಣಿಸಿಕೊಂಡಿದ್ದಾರೆ. ವೃದ್ಧನ ಪಾತ್ರದಲ್ಲಿ ದರ್ಶನ್ ಮಿಂಚಿದ್ದು, ಇದು ಅಭಿಮಾನಿಗಳಿಗೆ ಇಷ್ಟವಾಗಿದೆ. ಶ್ರುತಿ, ಕುಮಾರ್ ಗೋವಿಂದ್, ಅವಿನಾಶ್, ಧ್ರುವನ್, ಮಾ. ರೋಹಿತ್, ವೈಜನಾಥ್ ಬಿರಾದಾರ್, ಪದ್ಮಾ ವಾಸಂತಿ, ರವಿಚೇತನ್, ಜಗಪತಿ ಬಾಬು, ವಿನೋದ್ ಆಳ್ವಾ, ಅಚ್ಯುತ್ ಕುಮಾರ್, ದೊಡ್ಡಣ್ಣ, ಶ್ರೀನಿವಾಸಮೂರ್ತಿ ಮುಂತಾದವರು 'ಕಾಟೇರ' ಸಿನಿಮಾದಲ್ಲಿ ನಟಿಸಿದ್ದಾರೆ.
ಮತ್ತೆ ಮುನ್ನೆಲೆಗೆ ಬಂತು ಮೀ ಟೂ: ಕಮಲ ಹಾಸನ್ ವಿರುದ್ಧ ಖ್ಯಾತ ಗಾಯಕಿ ಚಿನ್ಮಯಿ ಕೆಂಡಾಮಂಡಲ!