ಕೊಡಗಿನ ನಟಿಯರಲ್ಲಿ ರಶ್ಮಿಕಾ ಮಂದಣ್ಣ ನಂ.1. ಇದೀಗ ಪ್ರೇಮದ ಊರಲಿ ಸಿನಿಮಾ ಮೂಲಕ ಭಾರಿ ಜನಪ್ರಿಯತೆ ಗಿಟ್ಟಿಸಿಕೊಂಡ ಕೊಡಗಿನ ಮತ್ತೊಬ್ಬ ನಟಿ ತಪಸ್ವಿನಿ ಪೂಣಚ್ಚಾ ನಟನೆಗೆ ರಶ್ಮಿಕಾ ಮಂದಣ್ಮ ಫಿದಾ ಆಗಿದ್ದಾರೆ. ಇದು ಆರಂಭವಷ್ಟೇ ಎಂದಿದ್ದಾರೆ.
ಬೆಂಗಳೂರು (ಅ.11) ಪ್ರೇಮದ ಊರಲಿ ಸಿನಿಮಾ ಹಲವು ದಾಖಲೆ ಬ್ರೇಕ್ ಮಾಡಿ ಸಾಗುತ್ತಿದೆ. 2 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾದ ಸಿನಿಮಾ ಇದೀಗ 50 ಕೋಟಿ ರೂಪಾಯಿ ಗಳಿಕೆಯತ್ತ ಸಾಗುತ್ತಿದೆ. ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ಹೆಚ್ಚಿನ ಪ್ರಚಾರ ಮಾಡಿಲ್ಲ, ಆದರೆ ಸಿನಿಮಾ ನೋಡಿದ ಪ್ರೇಕ್ಷಕರೇ ಸಿನಿಮಾಗೆ ಪಬ್ಲಿಸಿಟಿ ನೀಡಿದ್ದಾರೆ. ಹೀಗಾಗಿ ಶೋ ಸಂಖ್ಯೆ ಹೆಚ್ಚಾಗಿದೆ. ಎಲ್ಲಾ ಕಡೆ ಹೌಸ್‌ಫುಲ್ ಶೋ ನಡೆಯುತ್ತಿದೆ. ಈ ಸಿನಿಮಾ ಕುರಿತು ಹಲವು ನಟ ನಟಿಯರು ಕೊಂಡಾಡಿದ್ದಾರೆ. ಇದೀಗ ಪ್ರೇಮದ ಊರಲಿ ಸಿನಿಮಾದಲ್ಲಿನ ನಾಯಕಿ ತಪಸ್ವಿನಿ ಪೂಣಚ್ಚ ನಟನೆಗೆ ರಶ್ಮಿಕಾ ಮಂದಣ್ಣ ಫಿದಾ ಆಗಿದ್ದಾರೆ. ಮತ್ತೊಬ್ಬ ಕೊಡಗಿನ ನಟಿ ಸಾಧನೆಯನ್ನು ರಶ್ಮಿಕಾ ಮಂದಣ್ಣ ಕೊಂಡಾಡಿದ್ದಾರೆ.
ತಪಸ್ವಿನಿ ಪೂಣಚ್ಚಾ ಕುರಿತು ರಶ್ಮಿಕಾ ಮಂದಣ್ಣ ಹೇಳಿದ್ದೇನು
ತಪಸ್ವಿನಿ ಪೂಣಚ್ಚಾ ಕೊಡಗಿನ ಮೂಲದ ನಟಿ. ಪ್ರೇಮದ ಊರಲಿ ತಪಸ್ವಿನಿ ಪೂಣಚ್ಚಾ ಅಭಿನಯ, ಸಿನಿಮಾದ ಯಶಸ್ಸಿನ ಕುರಿತು ರಶ್ಮಿಕಾ ಮಂದಣ್ಣ ಅಭಿಮಾನದಿಂದ ಹೇಳಿಕೊಂಡಿದ್ದಾರೆ. ಕೊಡಗಿನಿಂದ ಬಂದ ನಟಿ ಸಿನಿಮಾ ಮೇಲೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗಳು ಚಿತ್ರಮಂದಿರದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ನನಗೆ ತಪಸ್ವಿನಿ ಪೂಣಚ್ಚಾ ಕುರಿತು ಅತೀವ ಹೆಮ್ಮೆ ಇದೆ. ನನ್ನ ಪ್ರೀತಿಯ ಹಾಗೂ ಸುಂದರ ಹುಡುಗಿಗೆ ನನ್ನ ಪ್ರೀತಿ ಹಾಗೂ ಬೆಚ್ಚಗಿನ ಅಪ್ಪುಗೆ. ಇದು ಕೇವಲ ಆರಂಭವಷ್ಟೆ. ನಿಮ್ಮ ಎಲ್ಲಾ ಕನಸುಗಳು ಈಡೇರಲಿ ಎಂದು ರಶ್ಮಿಕಾ ಮಂದಣ್ಣ ಸ್ಟೋರಿ ಪೋಸ್ಟ್ ಮಾಡಿದ್ದಾರೆ.
ಭಾರತೀಯ ಸಿನಿಮಾ ರಂಗದಲ್ಲಿ ಸದ್ಯ ರಶ್ಮಿಕಾ ಮಂದಣ್ಣ ನಂಬರ್ 1 ನಟಿಯಾಗಿ ಮಿಂಚುತ್ತಿದ್ದಾರೆ. ಬಾಲಿವುಡ್, ಟಾಲಿವುಡ್ ಸೇರಿದಂತೆ ಎಲ್ಲಾ ಕಡೆ ರಶ್ಮಿಕಾ ಮಂದಣ್ಣ ಸೂಪರ್ ಹಿಟ್ ಸಿನಿಮಾ ನೀಡಿದ ಸಾಧನೆ ಮಾಡಿದ್ದಾರೆ. ಇದೀಗ ಕೊಡಗಿನ ಮತ್ತೊಬ್ಬ ನಟಿಯ ಸಾಧನೆಯನ್ನು ರಶ್ಮಿಕಾ ಮಂದಣ್ಣ ಕೊಂಡಾಡಿದ್ದಾರೆ. ತಪಸ್ವಿನಿ ನಟನೆ, ಸಿನಿಮಾದ ಯಶಸ್ಸಿಗೆ ಅಭಿಮಾನ ಪಟ್ಟಿದ್ದಾರೆ.
ತೆಲುಗಿನಲ್ಲಿ ಪ್ರೇಮದ ಊರಲಿ ಬಿಡುಗಡೆ
ಕನ್ನಡದಲ್ಲಿ ಮೂರನೇ ವಾರಕ್ಕೆ ಕಾಲಿಟ್ಟು ಯಶಸ್ಸು ದಾಖಲಿಸಿರುವ ಪ್ರೇಮದ ಊರಲಿ ಸಿನಿಮಾ ಇದೀಗ ತೆಲುಗಿನಲ್ಲಿ ಬಿಡುಗಡೆಯಾಗಿದೆ. ತೆಲುಗು ಸಿನಿ ಪ್ರೇಕ್ಷಕರು ಕೂಡ ಈ ಸಿನಿಮಾಗೆ ಭಾರಿ ಮೆಚ್ಚುಗೆ ಸೂಚಿಸಿದ್ದಾರೆ. ಇದೀಗ ಮತ್ತಷ್ಟು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ.
ಮನೋಜ್ ಕುಮಾರ್ ನಿರ್ದೇಶದನಲ್ಲಿ ಮೂಡಿ ಬಂದಿರುವ ಈ ಪ್ರೇಮದ ಊರಲಿ ಸಿನಿಮಾ ಸೊರಗಿದ್ದ ಕನ್ನಡ ಸಿನಿಮಾಗೆ ಭರ್ಜರಿ ಹಿಟ್ ನೀಡಿದ್ದು ಮಾತ್ರವಲ್ಲ, ಅತೀ ಕಡಿಮೆ ಬೆಜೆಟ್ ಸಿನಿಮಾ ಒಂದು ದೇಶದ ಎಲ್ಲಾ ಸಿನಿಮಾ ಕ್ಷೇತ್ರದಲ್ಲಿ ಸಂಚಲನ ಮೂಡಿಸುವ ಮಟ್ಟಕ್ಕೆ ಬೆಳೆದು ನಿಂತಿದೆ. ಈ ಮೂಲಕ ಸೂಪರ್ ಹಿಟ್ ಸಿನಿಮಾ ಮೂಲಕ ದೇಶದಲ್ಲಿ ಸಂಚಲನ ಮೂಡಿಸಿದ್ದ ಕನ್ನಡ ಸಿನಿಮಾ ಲಿಸ್ಟ್ ಪೈಕಿ ಇದೀಗ ಪ್ರೇಮದ ಊರಲಿ ಸಿನಿಮಾ ಸೇರಿಕೊಂಡಿದೆ.



