ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಸೊಂಟದ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ತಮ್ಮ ದೈನಂದಿನ ಜೀವನದ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು…

ಸೊಂಟದ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ನಟಿ ರಶ್ಮಿಕಾ ಮಂದಣ್ಣ, ಇನ್‌ಸ್ಟಾಗ್ರಾಂನಲ್ಲಿ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ವಿಶ್ರಾಂತಿ, ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದು, ತನ್ನ ದೇಹವನ್ನು ಯಂತ್ರದಂತೆ ಬಳಸಬಾರದು ಎಂದು ಕಲಿತಿದ್ದೇನೆ ಎಂದಿದ್ದಾರೆ. ಜೊತೆಗೆ, ಮದುವೆಯ ಫೋಟೋಗಳನ್ನು ನೋಡುತ್ತಾ ಸಮಯ ಕಳೆಯುತ್ತಿರುವುದಾಗಿಯೂ ಹೇಳಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಸೊಂಟದ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ತಮ್ಮ ದೈನಂದಿನ ಜೀವನದ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ಸದ್ಯ ತಮ್ಮ ದಿನಗಳು ನಿಧಾನವಾಗಿ ಕಳೆಯುತ್ತಿವೆ, ವಿಶ್ರಾಂತಿ, ಸ್ವ-ಆರೈಕೆ ಮತ್ತು ಕುಟುಂಬದೊಂದಿಗೆ ಸಮಯ ಕಳೆಯುವುದಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದೇನೆ ಎಂದಿದ್ದಾರೆ. "ನನ್ನ ದಿನಗಳು ಚೆನ್ನಾಗಿ ಕಳೆಯುತ್ತಿವೆ... ಹೆಚ್ಚು ನಿದ್ದೆ ಮತ್ತು ಚೇತರಿಕೆಯಲ್ಲೇ ಸಮಯ ಹೋಗುತ್ತಿದೆ. ಪಜಲ್ಸ್, ಸ್ವಲ್ಪ ಓದು, ಕೆಲವು ಶೋಗಳನ್ನು ನೋಡುವುದು, ಕೂದಲಿನ ಮತ್ತು ಚರ್ಮದ ಆರೈಕೆ, ಮೀಟಿಂಗ್‌ಗಳು ಮತ್ತು ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದೇನೆ!" ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.

ನಿಧಾನಗತಿಯ ಜೀವನ

ತಮ್ಮ ಮದುವೆಯ ಫೋಟೋಗಳು ಮತ್ತು ವಿಡಿಯೋಗಳನ್ನು ನೋಡಲು ಕೊನೆಗೂ ಸಮಯ ಸಿಕ್ಕಿದೆ ಎಂದು ರಶ್ಮಿಕಾ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ. "ಇಲ್ಲಿಯವರೆಗೂ ಸರಿಯಾದ ಸಮಯ ಸಿಕ್ಕಿರಲಿಲ್ಲ, ಈಗ ಮದುವೆಯ ಫೋಟೋ ಮತ್ತು ವಿಡಿಯೋಗಳನ್ನು ನೋಡುತ್ತಿದ್ದೇನೆ," ಎಂದು ಅವರು ಬರೆದಿದ್ದಾರೆ.

ತಮ್ಮ ಸದ್ಯದ ದಿನಚರಿ ಬಗ್ಗೆ ವಿವರಿಸಿದ ರಶ್ಮಿಕಾ, ಈಗ ಅಲಾರಂ ಇಟ್ಟುಕೊಂಡು ಏಳುವುದಿಲ್ಲ, ಬದಲಿಗೆ ದೇಹ ಹೇಳಿದಾಗ ಎಚ್ಚರಗೊಳ್ಳುತ್ತೇನೆ ಎಂದಿದ್ದಾರೆ. "ನನ್ನ ದಿನಚರಿ ಎಂದರೆ, ಅಲಾರಂ ಇಲ್ಲದೆ ಏಳುವುದು (ಖುಷಿ!), ದೇಹ ಹೇಳಿದಾಗ ಎಚ್ಚರಗೊಳ್ಳುವುದು, ದಿನಕ್ಕೆ ಎರಡು ಹೊತ್ತು ಊಟ ಮಾಡುವುದು ಮತ್ತು ಅತಿಯಾಗಿ ತಿನ್ನದಿರಲು ಪ್ರಯತ್ನಿಸುವುದು," ಎಂದು ಅವರು ತಿಳಿಸಿದ್ದಾರೆ. ಜೊತೆಗೆ ಪಜಲ್ಸ್ ಆಡುವುದು, ಪುಸ್ತಕ ಓದುವುದು, ಶೋ ನೋಡುವುದು ಮತ್ತು ಬೇಗ ಮಲಗುವುದನ್ನು ರೂಢಿಸಿಕೊಂಡಿದ್ದಾರಂತೆ.

ಆರೋಗ್ಯದ ಬಗ್ಗೆ ರಶ್ಮಿಕಾ ಮಾತು

ರಶ್ಮಿಕಾ ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ, ರಶ್ಮಿಕಾ ತಮ್ಮ ಆರೋಗ್ಯದ ಬಗ್ಗೆ ಒಂದು ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದರು. ಆಗ ತಮ್ಮ ದೇಹವನ್ನು ಒಂದು ಯಂತ್ರದಂತೆ ಬಳಸುತ್ತಿದ್ದೆ, ಅದಕ್ಕೆ ಸರಿಯಾದ ವಿಶ್ರಾಂತಿ ಮತ್ತು ಆರೈಕೆಯ ಮಹತ್ವ ಈಗ ತಿಳಿಯಿತು ಎಂದು ಹೇಳಿಕೊಂಡಿದ್ದರು.

"ಹಾಯ್ ಗೆಳೆಯರೇ! ಗಾಯಗಳೆಂದರೆ ಯಾರಿಗೆ ತಾನೇ ಇಷ್ಟ ಹೇಳಿ.. ಈ ವಿಷಯ ಯಾರಿಗೂ ತಿಳಿಯಬಾರದು ಅಂದುಕೊಂಡಿದ್ದೆ. ಆದರೆ, ಕ್ಷಮಿಸಿ, ನಾನು ಸ್ವಲ್ಪ ದಿನಗಳಿಂದ ದೂರ ಇದ್ದೆ, ಈಗ ಬಂದಿದ್ದೇನೆ! ಈ ಗಾಯ ಆಗಿ ಸ್ವಲ್ಪ ದಿನವಾಯ್ತು, ಇದು ನನ್ನ ಮೂರನೇ ಸತತ ಗಾಯ. ನನ್ನ ದೇಹವನ್ನು ಮನುಷ್ಯರ ದೇಹದಂತೆ ನೋಡಿಕೊಳ್ಳುವುದನ್ನು ಕಲಿಯಬೇಕು, ಯಂತ್ರದಂತೆ ಅಲ್ಲ," ಎಂದು ಪೋಸ್ಟ್‌ನ ಒಂದು ಭಾಗದಲ್ಲಿ ಬರೆದಿದ್ದರು.

ಸಿನಿಮಾ ರಂಗದಲ್ಲಿ ರಶ್ಮಿಕಾ

ಸಿನಿಮಾ ವಿಚಾರಕ್ಕೆ ಬಂದರೆ, ರಶ್ಮಿಕಾ ಮಂದಣ್ಣ ಕೈಯಲ್ಲಿ ಹಲವು ಅತ್ಯಾಕರ್ಷಕ ಚಿತ್ರಗಳಿವೆ. ಇದರಲ್ಲಿ 'ಮೈಸಾ', 'ರಣಬಾಲಿ', 'ಪುಷ್ಪ 3', 'ಅನಿಮಲ್ ಪಾರ್ಕ್' ಮತ್ತು 'ರಕ್ಕಾ' ಸೇರಿವೆ.