ಅಪ್ಪ ಸೂಪರ್‌ಸ್ಟಾರ್‌ ಆಗಿರುವುದು ವರವೂ ಹೌದು, ಆತಂಕವೂ ಹೌದು. ಬೇಕೆಂದಾಗಲೆಲ್ಲಾ ಸಿಗುವುದಿಲ್ಲ ಎಂಬ ಬೇಸರವೂ ಹೌದು. ಅವೆಲ್ಲಾ ಕಾರಣದಿಂದಲೇ ಮಗಳು ಏನಾದರೂ ಒಳ್ಳೆಯ ಕೆಲಸ ಮಾಡಿದಾಗ ಅಪ್ಪ ಏನು ಹೇಳಬಹುದು ಎಂಬ ಕಾತರ, ಕುತೂಹಲ ಇದ್ದೇ ಇರುತ್ತದೆ. ಆ ಕಾತರ ಸುದೀಪ್ ಅ‍ವರ ಮಗಳು ಸಾನ್ವಿಗೂ ಇತ್ತು.

ಬೆಂಗಳೂರು (ಜೂ.26): ಕಿಚ್ಚ ಸುದೀಪ್‌ ಸೋದರಳಿಯ ಸಂಚಿತ್ ಸಂಜೀವ್ ನಟನೆ, ನಿರ್ದೇಶನದ ‘ಜಿಮ್ಮಿ’ ಚಿತ್ರದ ಕ್ಯಾರೆಕ್ಟರ್ ಗ್ಲಿಂಪ್ಸ್ ಬಿಡುಗಡೆಯಾಗಿದೆ. ಅದರಲ್ಲಿ ಒಂದು ಪುಟ್ಟ ಇಂಗ್ಲಿಷ್ ಹಾಡು ಬರುತ್ತದೆ. ಆ ಹಾಡನ್ನು ಬರೆದು, ಹಾಡಿದ್ದು ಸಾನ್ವಿ ಸುದೀಪ್. ಆ ಹಾಡಿಗೆ ಈಗ ವ್ಯಾಪಕ ಮೆಚ್ಚುಗೆ ಸಿಕ್ಕಿದೆ. ಆದರೆ ಆ ಹಾಡು ಹಾಡನ್ನು ಕೇಳಿ ಸುದೀಪ್ ಏನೆಂದರು ಎಂಬ ಕತೆ ಕುತೂಹಲಕರವಾಗಿದೆ.

ಈ ಕುರಿತು ಸಾನ್ವಿ ತುಂಬಾ ಪ್ರೀತಿಯಿಂದ ಕ್ಯೂಟ್ ಆಗಿ ಉತ್ತರಿಸುತ್ತಾರೆ. ‘ಅಪ್ಪನಿಗೆ ತುಂಬಾ ಒಳ್ಳೆಯ ಜಡ್ಜ್‌ಮೆಂಟ್ ಇದೆ. ಹಾಗಾಗಿ ಅವರಿಗೆ ಮೊದಲ ಸಲ ಹಾಡು ಕೇಳಿಸುವಾಗ ತುಂಬಾ ಆತಂಕ ಇತ್ತು. ನಮ್ಮ ಮನೆಯ ಟೆರೇಸ್‌ನಲ್ಲಿ ಎಲ್ಲರೂ ಸೇರಿದ್ದರು. ಅಪ್ಪನಿಗೆ ಹಾಡು ಇಷ್ಟವಾಗಲಿ ಎಂದು ಮನಸ್ಸಲ್ಲೇ ಬೇಡಿಕೊಳ್ಳುತ್ತಿದ್ದೆ. ವಿಡಿಯೋ ಮತ್ತು ಹಾಡು ಪ್ಲೇ ಆಯಿತು. ಅದು ಮುಗಿದಾಗ ಅಪ್ಪ ಬಂದು ನನ್ನನ್ನು ತಬ್ಬಿಕೊಂಡರು. ಅದು ಅತ್ಯಂತ ಖುಷಿಯ ಕ್ಷಣ ನನಗೆ. ಅವರು ಸಾಮಾನ್ಯವಾಗಿ ಕರೆಕ್ಷನ್‌ಗಳನ್ನು ಹೇಳುತ್ತಾರೆ. ಆದರೆ ಅವತ್ತು ಅವರು ಏನೂ ಹೇಳಲಿಲ್ಲ. ಅದು ನನಗೆ ಬೆಸ್ಟ್ ಮೊಮೆಂಟ್’ ಎನ್ನುತ್ತಾರೆ ಸಾನ್ವಿ.

ತಂದೆ ಸುದೀಪ್‌ಗೆ ಮಗಳು ಸಾನ್ವಿ ಹಾಡುತ್ತಾಳೆ ಎಂದು ಗೊತ್ತಾಗಿದ್ದು ಕೂಡ ಚಂದದ ಕತೆ. ಶಾಲೆಯಲ್ಲಿ ಗಾಯನ ಕಾರ್ಯಕ್ರಮಕ್ಕೆ ಸಾನ್ವಿ ಹೆಸರು ಕೊಟ್ಟಿರುತ್ತಾರೆ. ಆ ಕಾರ್ಯಕ್ರಮಕ್ಕೆ ಬಂದಾಗಲೇ ಕಿಚ್ಚ ಸುದೀಪ್ ಅವರಿಗೆ ತನ್ನ ಮಗಳು ಹಾಡುತ್ತಾಳೆ ಎಂಬ ಸತ್ಯ ಗೊತ್ತಾಗಿದ್ದು. ಅವರಿಗೆ ಖುಷಿಯಾಗಿತ್ತು. ಯಾಕೆಂದರೆ ಮಗಳು ಸಾನ್ವಿಯದು ಕೊಂಚ ಸಂಕೋಚದ ಸ್ವಭಾವ. ನಾಚಿಕೆ ಸ್ವಭಾವ. ಆಕೆ ಹಾಡಿದ್ದು ತಂದೆಯಾಗಿ ಅವರಿಗೆ ಹೆಮ್ಮೆಯಾಗಿತ್ತು.

ಸೋದರಳಿಯನ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ ಕಿಚ್ಚ ಸುದೀಪ್: ಸೆಟ್ಟೇರಿತು ಸಂಚಿತ್ ನಟನೆಯ 'ಜಿಮ್ಮಿ'

ಅಲ್ಲಿಂದ ಇಲ್ಲಿಯವರೆಗೆ ಮಗಳ ಹಾಡಿನ ಪ್ರೀತಿಯನ್ನು ಬೆಳೆಸಲು ಏನೇನು ಮಾಡಬೇಕೋ ಅದನ್ನೆಲ್ಲವನ್ನೂ ಸುದೀಪ್ ಮಾಡುತ್ತಿರುತ್ತಾರೆ. ವಿಕ್ರಾಂತ್ ರೋಣ ಚಿತ್ರದ ರಾ ರಾ ರಕ್ಕಮ್ಮಾ ಹಾಡಿನ ಟ್ರ್ಯಾಕ್ ಅನ್ನೂ ಸಾನ್ವಿ ಬಳಿ ಹಾಡಿಸಿದ್ದಾರೆ. ಇದೀಗ ಸಾನ್ವಿ ಸುದೀಪ್ ಅವರು ಸಂಚಿತ್ ಸಂಜೀವ್ ನಿರ್ದೇಶನದ ಸಿನಿಮಾದಲ್ಲಿ ಒಂದು ಚಂದದ ಹಾಡನ್ನೇ ಹಾಡಿದ್ದಾರೆ. 

ನಮ್ಮ ವಿರುದ್ಧ ಮಾತಾಡೋದು, ಕಿಚ್ಚ ಸುದೀಪ್‌ ಭವಿಷ್ಯಕ್ಕೆ ಕುತ್ತು: ಸಚಿವ ಕೆ.ಎನ್. ರಾಜಣ್ಣ

ತಂದೆ ಎಷ್ಟೇ ದೊಡ್ಡ ಸೂಪರ್‌ಸ್ಟಾರ್ ಆದರೂ ತನ್ನ ಮಗಳು ಸಣ್ಣದೊಂದು ಸಾಧನೆ ಮಾಡಿದಾಗಲೂ ಹಿಗ್ಗುತ್ತಾನೆ, ಬೀಗುತ್ತಾನೆ. ಈಗ ಸುದೀಪ್ ವಿಚಾರದಲ್ಲಿ ಆಗಿದ್ದೂ ಅದೇ. ಮಗಳು ವೇದಿಕೆಯಲ್ಲಿ ನಿಂತು ಹಾಡುತ್ತಿದ್ದರೆ ಹಿರಿಹಿರಿ ಹಿಗ್ಗುವುದೇ ತಂದೆಯ ಕೆಲಸ. ಈ ತಂದೆ ಮಗಳ ಬಾಂಧವ್ಯದ ಖುಷಿ ಹೀಗೇ ಇರಲಿ.