ನಮ್ಮ ವಿರುದ್ಧ ಮಾತಾಡೋದು, ಕಿಚ್ಚ ಸುದೀಪ್ ಭವಿಷ್ಯಕ್ಕೆ ಕುತ್ತು: ಸಚಿವ ಕೆ.ಎನ್. ರಾಜಣ್ಣ
ಕಿಚ್ಚ ಸುದೀಪ್ ಪ್ರತಿಭಾನ್ವಿತ ನಟರಾಗಿದ್ದಾರೆ. ಒಂದು ಕ್ಷೇತ್ರದಲ್ಲಿ ಒಂದೇ ಸಮುದಾಯದ ಇಬ್ಬರು ಸ್ಪರ್ಧಿಸಿದಾಗ ನಮ್ಮ ವಿರುದ್ಧ ಕಿಚ್ಚ ಸುದೀಪ್ ಪ್ರಚಾರ ಮಾಡಿದ್ದಕ್ಕೆ ಬೇಸರವಾಗಿದೆ.
ದಾವಣಗೆರೆ (ಜೂ.18): ರಾಜ್ಯದ ವಿಧಾನಸಭಾ ಚುನಾವಣೆಯ ವೇಳೆ ಪ್ರಚಾರದಲ್ಲಿ ಪಾಲ್ಗೊಂಡಿದ್ದ ನಮ್ಮವರೇ ಆದ ಕಿಚ್ಚ ಸುದೀಪ್ ಅವರು ಪ್ರತಿಭಾನ್ವಿತ ನಟರಾಗಿದ್ದಾರೆ. ಆದರೆ, ಒಂದು ಕ್ಷೇತ್ರದಲ್ಲಿ ಇಬ್ಬರೂ ಒಂದೇ ಸಮುದಾಯದವರು ಸ್ಪರ್ಧಿಸಿದಾಗ ನಮ್ಮ ವಿರುದ್ಧವೇ ಮಾತನಾಡಿದರು. ನಮ್ಮ ವಿರುದ್ಧ ಪ್ರಚಾರ ಮಾಡಿದ್ದಕ್ಕೆ ಬೇಸರವಾಗಿದೆ, ಇನ್ನು ಮುಂದೆ ಅರಿತುಕೊಂಡು ಮುಂದುವರಿಯಲಿ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.
ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಿಚ್ಚ ಸುದೀಪ್ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಕಿಚ್ಚಾ ಸುದೀಪ್ ನಮ್ಮ ವಿರುದ್ದವೇ ಭಾಷಣ ಮಾಡಿದ್ದಾರೆ. ಸಾಮಾನ್ಯ ಕ್ಷೇತ್ರದಲ್ಲಿ ಬಂದು ಪ್ರಚಾರ ಮಾಡಿದರೆ ಏನು ಅನ್ನುಸ್ತಾ ಇರ್ಲಿಲ್ಲ. ಪರಿಶಿಷ್ಟ ಪಂಗಡದ (ಎಸ್ಟಿ) ಮೀಸಲು ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದು ನೋವು ಎನ್ನಿಸಿತು. ನಮ್ಮವರು ಎರಡು ಕಡೆ ಸ್ಪರ್ಧಿಸಿದಾಗ ಒಬ್ಬರ ಪರವಾಗಿ, ಇನ್ನೊಬ್ಬರ ವಿರುದ್ಧವಾಗಿ ಪ್ರಚಾರ ಮಾಡಿದರು. ಇದು ನಮಗೆಲ್ಲಾ ಬೇಸರ ತರಿಸಿತು ಎಂದು ಹೇಳಿದರು.
ಹೊರಗಿನವರಿಗೆ ಅರ್ಥವಾಗದಿದ್ದರೂ ಸರಿ ಕನ್ನಡದಲ್ಲೇ ಮಾತಾಡ್ತೀನೆಂದ ಸಿಎಂ ಸಿದ್ದರಾಮಯ್ಯ
ಕಿಚ್ಚ ಸುದೀಪ್ ಭವಿಷ್ಯಕ್ಕೆ ಕುತ್ತು ತರುತ್ತದೆ: ರಾಜ್ಯದಲ್ಲಿ ಒಂದೇ ಸಮುದಾಯದವರ ಸ್ಪರ್ಧೆ ನಡುವೆ ಒಬ್ಬರ ಪರವಾಗಿ ಪ್ರಚಾರ ಮಾಡುವುದು ಪ್ರತಿಭಾನ್ವಿತ ನಟನ ಭವಿಷ್ಯಕ್ಕೆ ಕುತ್ತು ತರುತ್ತದೆ. ಅತನಿಗೆ ಅನುಭವ ಕಡಿಮೆ ಇದೆ. ಶ್ರೇಷ್ಠ ನಟನಾಗಲು ಅವಕಾಶ ಇದೆ. ಆದ್ದರಿಂದ ಅರಿತುಕೊಂಡು ಮುಂದುವರೆಯಲಿ ಎಂದು ಕಿಚ್ಚಾ ಸುದೀಪ್ ವಿರುದ್ದ ಸಹಕಾರ ಸಚಿವ ನೇರವಾಗಿಯೇ ಬೇಸರ ವ್ಯಕ್ತಪಡಿಸಿದರು.
ಬ್ರಾಹ್ಮಣರು ಒಂದು ಊದಿನಕಡ್ಡಿ ತರೋದಿಲ್ಲ: ಬ್ರಾಹ್ಮಣರು ಈಗ ಹೋಮ ಹವನ ಕಡಿಮೆ ಮಾಡಿದ್ದಾರೆ. ಆದರೆ ನಾವೇ ಶೂದ್ರರೇ ಹೆಚ್ಚು ಹೋಮ, ಹವನ ಮಾಡುತ್ತಿದ್ದೇವೆ. ಯಾವ ಬ್ರಾಹ್ಮಣರು ಕೂಡ ಒಂದು ರೂಪಾಯಿ ಕೊಟ್ಟು ಊದಿನಕಡ್ಡಿ ತರೋದಿಲ್ಲ, ಹಚ್ಚೋದಿಲ್ಲ. ಬೇರೆಯವರು ತಂದಿದ್ದದ್ದರಲ್ಲಿ ಪೂಜೆ ಮಾಡುತ್ತಾರೆ. ಹೀಗೆ ಹೇಳ್ದೆ ಅಂತ ನಾನು ಬ್ರಾಹ್ಮಣ ವಿರೋಧಿ ಅಂತ ಅಲ್ಲ. ಮಾಧ್ಯಮಗಳು ನಾಳೆ ಬೆಳಗ್ಗೆ ಬ್ರೇಕಿಂಗ್ ನ್ಯೂಸ್ ಅಂತ ಹಾಕಬೇಡಿ. ಅದು ನಾನು ಹೇಳಿದ್ದಲ್ಲ, ನನ್ನ ಸ್ನೇಹಿತರು ಹೇಳಿದ್ದು ಎಂದು ನಗೆ ಚಟಾಕಿ ಹಾರಿಸಿದರು.
ನಕಲಿ ಪ್ರಮಾಣ ಪತ್ರ ಪಡೆಯೋದನ್ನು ತಡೀಬೇಕು: ದಾವಣಗೆರೆ ಜಿಲ್ಲೆ, ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ರಾಜಣ್ಣ ಅವರು, ಎಸ್ಟಿ ಸಮುದಾಯದ ಹೆಸರಲ್ಲಿ ನಕಲಿ ಜಾತಿ ಪ್ರಮಾಣ ಪಡೆಯುತ್ತಿದ್ದಾರೆ. ಅದು ಎಲ್ಲರಿಗೂ ಗೊತ್ತು, ಏನೂ ಮಾಡಲಾಗದ ಸ್ಥಿತಿಯಲ್ಲಿದ್ದೇವೆ. ನಕಲಿ ಜಾತಿ ಪತ್ರ ವ್ಯವಸ್ಥೆ ತಪ್ಪಿಸದಿದ್ದರೆ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಆಗತ್ತದೆ. ರಾಜಕಾರಣಿಗಳಿಗೆ ಸುಳ್ಳೇ ಬಂಡವಾಳವಾಗಿದೆ. ನಕಲಿ ಜಾತಿ ಪತ್ರ ತಪ್ಪಿಸುವ ಕೆಲಸ ಮಾಡುತ್ತೇವೆ. ಮೀಸಲಾತಿ ಶೇ.50 ರಷ್ಟು ದಾಟಿರೋದ್ರಿಂದ ಎಸ್ಟಿ ಮೀಸಲು 9 ಶೆಡ್ಯೂಲ್ ಗೆ ಸೇರಿಸಲು ಮನವಿ ಮಾಡಿದ್ದೇವೆ ಎಂದರು.
ಮತ್ತೆ ರಾಜಕೀಯ ಸನ್ಯಾಸತ್ವದ ಬಗ್ಗೆ ಡಿ.ಕೆ. ಸುರೇಶ್ ಮಾತು: ಡಿಕೆಶಿ ತಮ್ಮನಿಗಿರುವ ಕೊರಗಾದ್ರೂ ಏನು?
ಮೇಲ್ವರ್ಗದವರೇನು ಮೇಲಿಂದ ಬಂದಿಲ್ಲ: ನಾನು ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದು, ನನ್ನ ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯ 100ಕ್ಕೆ 100 ನನಗೆ ಮತ ಹಾಕಿದೆ. ಮೇಲ್ವರ್ಗ ಅಂತ ಯಾರೂ ಬಳಸಬೇಡಿ. ಅವರನ್ನು ಮುಂದುವರಿದ ವರ್ಗ ಅಂತ ಬಳಸಿ. ಅವ್ರನ್ನ ಮೇಲ್ವರ್ಗ ಅಂತ ಕರೆದರೆ, ನಾವೇನು ಕೆಳವರ್ಗದವರಾ...?! ನಾವು ಯಾವುದರಲ್ಲಿ ಕಡಿಮೆ ಇದ್ದೇವೆ, ನಾವು ಯಾವತ್ತೂ ಕೆಳವರ್ಗದವರಲ್ಲ. ಅವರೇನು ಮೇಲಿಂದ ಬಂದಿಲ್ಲ, ಅವ್ರು ನಮ್ಮಂಗೆ ಬಂದವರು. ಇನ್ಮುಂದೆ ಮುಂದುವರಿದವರು, ಹಿಂದುಳಿದವರು ಅಂತ ಮಾತ್ರ ಕರೀಬೇಕು. ಮೇಲ್ವರ್ಗದಿಂದ ಅನ್ಯಾಯ ಎನ್ನಬಾರದು. ಮುಂದುವರಿದ ವರ್ಗದಿಂದ ಅನ್ಯಾಯ ಎನ್ನಬೇಕು ಎಂದು ಹೇಳಿದರು.
ಚುನಾವಣೆ ಮುಗಿದ ನಂತರ ರಾಜಕೀಯ ಬೇಡ: ಚುನಾವಣೆ ವೇಳೆ ನಮ್ಮ ನಮ್ಮ ಮಧ್ಯೆ ಪೈಪೋಟಿ ಇರತ್ತದೆ. ಆದರೆ, ಚುನಾವಣೆ ಮುಗಿದ ಬಳಿಕ ದ್ವೇಷ ರಾಜಕಾರಣ ಮಾಡಬಾರದು. ಸಮಾಜದ ಅಭಿವೃದ್ಧಿಗೆ ಎಲ್ಲರೂ ಒಂದಾಗಬೇಕು. ರಾಜ್ಯದ 15 ಎಸ್ಟಿ ಕ್ಷೇತ್ರದಲ್ಲಿ ನಮ್ಮ ನಮ್ಮ ಮಧ್ಯೆಯೇ ಹೋರಾಟ ಇರತ್ತದೆ. ದೇವದಾಸಿ ಪದ್ಧತಿ ನಿರ್ಮೂಲನೆಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಕೆ.ಎನ್. ರಾಜಣ್ಣ ಹೇಳಿದರು.