Asianet Suvarna News Asianet Suvarna News

KGF Chapter 2: ಯಶ್‌ ಮೊಸಾಯಿಕ್ ಬುಕ್ ಪ್ರೋಟ್ರೇಟ್ ರಚನೆಗೆ 23 ಸಾವಿರ ನೋಟ್‌ಬುಕ್‌

ಅಖಿಲ ಕರ್ನಾಟಕ ರಾಕಿಂಗ್‌ ಸ್ಟಾರ್‌ ಅಭಿಮಾನಿಗಳ ಸಂಘದ ವತಿಯಿಂದ ಪಟ್ಟಣದ ವೈಟ್‌ ಗಾರ್ಡನ್‌ ಬಳಿ ಇರುವ ಬಿಜಿಎಸ್‌ ವಿದ್ಯಾಸಂಸ್ಥೆಯ ಆವರಣದಲ್ಲಿ 23,000 ನೋಟ್‌ ಪುಸ್ತಕಗಳಿಂದ ಯಶ್‌ ಮೊಸಾಯಿಕ್ ಬುಕ್ ಪ್ರೋಟ್ರೇಟ್ ತಯಾರಿಸಿ ಚಿತ್ರದ ಯಶಸ್ಸಿಗೆ ಹಾರೈಸಲಾಯಿತು.

kgf 2 biggest mosaic portrait of kgf chapter 2 star yash by fans gvd
Author
Bangalore, First Published Apr 11, 2022, 12:14 PM IST

ಮಾಲೂರು (ಏ.11): ಬಹು ನಿರೀಕ್ಷಿತ ರಾಕಿಂಗ್‌ ಸ್ಟಾರ್‌ ಯಶ್‌ (Yash) ಅಭಿನಯದ ಚಲನಚಿತ್ರ 'ಕೆಜಿಎಫ್‌  2' (KGF Chapter 2) ಇದೇ 14ರಂದು ದೇಶ ವಿದೇಶಗಳಲ್ಲಿ ಬಿಡುಗಡೆಯಾಗುತ್ತಿದ್ದು, ಅಖಿಲ ಕರ್ನಾಟಕ ರಾಕಿಂಗ್‌ ಸ್ಟಾರ್‌ ಅಭಿಮಾನಿಗಳ (Rocking Star Fans) ಸಂಘದ ವತಿಯಿಂದ ಪಟ್ಟಣದ ವೈಟ್‌ ಗಾರ್ಡನ್‌ ಬಳಿ ಇರುವ ಬಿಜಿಎಸ್‌ ವಿದ್ಯಾಸಂಸ್ಥೆಯ ಆವರಣದಲ್ಲಿ 23,000 ನೋಟ್‌ ಪುಸ್ತಕಗಳಿಂದ ಯಶ್‌ ಮೊಸಾಯಿಕ್ ಬುಕ್ ಪ್ರೋಟ್ರೇಟ್ (Mosaic Portrait) ತಯಾರಿಸಿ ಚಿತ್ರದ ಯಶಸ್ಸಿಗೆ ಹಾರೈಸಲಾಯಿತು.

ಯಶ್‌ ಮೊಸಾಯಿಕ್ ಬುಕ್ ಪ್ರೋಟ್ರೇಟ್ ವೀಕ್ಷಿಸಿ ಮಾತನಾಡಿದ ಬಿಜೆಪಿ ಪ್ರಕೋಷ್ಠ ಫಲಾನುಭವಿಗಳ ಸಮಿತಿಯ ಸದಸ್ಯ ಹೂಡಿ ವಿಜಯಕುಮಾರ್‌, ಅಖಿಲ ಕರ್ನಾಟಕ ರಾಕಿಂಗ್‌ ಸ್ಟಾರ್‌ ಯಶ್‌ ಅಭಿಮಾನಿಗಳ ಸಂಘದ ಸದಸ್ಯರು ನನ್ನ ಬಳಿ ಬಂದು ನೋಟ್‌ ಪುಸ್ತಕಗಳಿಂದ ಯಶ್‌ ಅವರ ಭಾವಚಿತ್ರ ತಯಾರಿಕೆಗೆ ಆರ್ಥಿಕ ಸಹಕಾರ ಕೇಳಿದರು. ಕನ್ನಡ ಚಲನಚಿತ್ರ ಹಾಗೂ ಕನ್ನಡ ಭಾಷೆ ಬೆಳೆಸಲು ಅವರಿಗೆ ಆರ್ಥಿಕ ಸಹಕಾರ ನೀಡಿದ್ದು, ಯಶ್‌ ಭಾವಚಿತ್ರ ಉತ್ತಮವಾಗಿ ಮೂಡಿ ಬಂದಿದ್ದು, ಗಿನ್ನಿಸ್‌ ದಾಖಲೆಗೆ (Guinness Record) ಅರ್ಹವಾಗಿದೆ ಎಂದು ಹೇಳಿದರು.

KGF2: ಕರ್ನಾಟಕದಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್‌ಗೆ ಮುಗಿಬಿದ್ದ ಫ್ಯಾನ್ಸ್, ಮೊದಲ ಶೋ ಎಷ್ಟೊತ್ತಿಗೆ?

ಈ ಸಂದರ್ಭದಲ್ಲಿ ಜಿಪಂ ಪ್ರಕೋಷ್ಠ ಫಲಾನುಭವಿಗಳ ಸಮಿತಿ ಸದಸ್ಯ ಆರ್‌.ಪ್ರಭಾಕರ್‌, ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ರಾಕೇಶ್‌ ಕುಮಾರ್‌, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮರೇಶ್‌ ರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಹರೀಶ್‌ ಗೌಡ, ನೋಟವೆ ವೆಂಕಟೇಶ್‌ ಗೌಡ, ಇನ್ನಿತರರು ಹಾಜರಿದ್ದರು.

ಕುಕ್ಕೆ, ಧರ್ಮಸ್ಥಳಕ್ಕೆ ಯಶ್‌ ಭೇಟಿ: ಕೆ.ಜಿ.ಎಫ್‌.2 ಚಿತ್ರದ ನಾಯಕ ನಟ ಯಶ್‌, ಭಾನುವಾರ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಹಾಗೂ ಸುರ್ಯ ದೇವಸ್ಥಾನಗಳಿದೆ ಭೇಟಿ ನೀಡಿ ಚಿತ್ರದ ಯಶಸ್ಸಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಧರ್ಮಸ್ಥಳಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಅವರು ರಸ್ತೆ ಮಾರ್ಗವಾಗಿ ಕುಕ್ಕೆ ತೆರಳಿದರು.

ಕೆ.ಜಿ.ಎಫ್‌. ನಿರ್ಮಾಪಕ ವಿಜಯ್‌ ಕಿರಂಗದೂರು ಹಾಗೂ ಇತರ ಸ್ನೇಹಿತರೊಂದಿಗೆ ಕ್ಷೇತ್ರಕ್ಕೆ ಆಗಮಿಸಿದ ಯಶ್‌ ಅವರು, ಸುಬ್ರಹ್ಮಣ್ಯ ಸ್ವಾಮಿ, ಹೊಸಳಿಗಮ್ಮನ ದರುಶನ ಪಡೆದು ಪ್ರಸಾದ ಸ್ವೀಕರಿಸಿ, ಪ್ರಾರ್ಥನೆ ಸಲ್ಲಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್‌ ರಾಂ ಸುಳ್ಳಿ ಯಶ್‌ ಅವರನ್ನು ಬರಮಾಡಿಕೊಂಡು ಗೌರವಿಸಿದರು. ಈ ವೇಳೆ ಯಶ್‌ ದೇವಳದ ವತಿಯಿಂದ ನಡೆಯುವ ಅನ್ನದಾನಕ್ಕಾಗಿ ರು. 3 ಲಕ್ಷ ರೂಪಾಯಿ ದೇಣಿಗೆಯನ್ನು ಅಧ್ಯಕ್ಷರ ಮೂಲ ನೀಡಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್‌ ರಾಂ ಸುಳ್ಳಿ, ಸದಸ್ಯೆ ಶೋಭಾ ಗಿರಿಧರ್‌, ಎಇಒ ಪುಷ್ಪಲತಾ ಮತ್ತಿತರರಿದ್ದರು.

ಕುಕ್ಕೆಯಿಂದ ಆಗಮಿಸಿ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿದ ಅವರು, ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದು ಮಾತುಕತೆ ನಡೆಸಿದರು. ಅನ್ನ ಪ್ರಸಾದ ಸ್ವೀಕರಿಸಿದರು. ಏ.14ರಂದು ಕೆ.ಜಿ.ಎಫ್‌.-2 ಚಿತ್ರವು ದೇಶ ವಿದೇಶಗಳಲ್ಲಿ ತೆರೆ ಕಾಣಲಿದ್ದು, ಚಿತ್ರದ ಯಶಸ್ಸಿಗಾಗಿ ನಾಡಿನ ಪವಿತ್ರ ತೀರ್ಥ ಕ್ಷೇತ್ರಗಳಾದ ಧರ್ಮಸ್ಥಳ, ಸುಬ್ರಹ್ಮಣ್ಯ, ಸುರ್ಯ ದೇವಸ್ಥಾನ ಭೇಟಿ ಮಾಡಿರುವುದಾಗಿ ಯಶ್‌ ತಿಳಿಸಿದರು. ಸಿನಿಮಾ ರಿಲೀಸ್‌ ಸಮೀಪಿಸುತ್ತಿದೆ. ನಾನು ಮತ್ತು ನಿರ್ಮಾಪಕರು ಒಳ್ಳೆ ಕೆಲಸ ಶುರು ಮಾಡುವಾಗ ದೇವರ ದರ್ಶನ ಪಡೆಯುತ್ತೇವೆ. ನಾವು ಪಟ್ಟಶ್ರಮಕ್ಕೆ ದೇವರ ಅನುಗ್ರಹ ಇರಬೇಕಲ್ವಾ. ಹಾಗಾಗಿ ಮಂಜುನಾಥ ಸ್ವಾಮಿ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವರ ಅನುಗ್ರಹ ಪಡೆದಿದ್ದೇವೆ ಎಂದು ಯಶ್‌ ತಿಳಿಸಿದರು.

KGF 2 ಇಂಡಿಯನ್ ಸಿನಿಮಾ, ಒಂದು ಭಾಷೆಗೆ ಸೀಮಿತ ಮಾಡ್ಬೇಡಿ ಅಂದ್ರು ರಾಕಿಂಗ್ ಸ್ಟಾರ್ Yash

ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಹೆಗ್ಗಡೆ ಜೊತೆ ಮಾತನಾಡಿ ಅವರ ಆಶೀರ್ವಾದ ಪಡೆದಿದ್ದೇವೆ. ನಾನು ತುಂಬಾ ವರ್ಷದಿಂದ ಧರ್ಮಸ್ಥಳಕ್ಕೆ ಬರುತ್ತಿದ್ದೇನೆ. ಹೆಗ್ಗಡೆ ಅವರು ನನ್ನ ಬೆಳವಣಿಗೆ ನೋಡುತ್ತಾ ಬಂದವರು. ಅವರು ಖುಷಿ ಪಟ್ಟು ಆಶೀರ್ವಾದ ಮಾಡಿದ್ರು. ಕೆಜಿಎಫ್‌ 2 ರಿಲೀಸ್‌ ಅಭಿಮಾನಿಗಳಿಗೊಂದು ಖುಷಿ. ಟಿಕೆಟ್‌ ಓಪನ್‌ ಆಗಿದೆ, ಎಲ್ಲರೂ ನಮ್ಮನ್ನು ಆಶೀರ್ವದಿಸಿ ಎಂದು ಯಶ್‌ ವಿನಂತಿಸಿದರು. ಬಳಿಕ, ಉಜಿರೆಯ ಮಣ್ಣಿನ ಹರಕೆಯ ಪ್ರಸಿದ್ಧ ಕ್ಷೇತ್ರ ಸುರ್ಯ ಶ್ರೀ ಸದಾಶಿರುದ್ರ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ವೇಳೆ ಕ್ಷೇತ್ರದ ಆನುವಂಶೀಯ ಆಡಳಿತ ಮೊಕ್ತೇಸರ ಸುಭಾಶ್ಚಂದ್ರ ಸುರ್ಯಗುತ್ತು, ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ರಾಜಶೇಖರ ಅಜ್ರಿ, ಸತೀಶ್ಚಂದ್ರ ಸುರ್ಯಗುತ್ತು ಬರಮಾಡಿಕೊಂಡರು.

Follow Us:
Download App:
  • android
  • ios