ನಮ್ಮವರನ್ನೇ ಜೈಲಿಗೆ ಹಾಕೋದು, ಗಡೀಪಾರು ಮಾಡೋದು ಅತಿರೇಕ ಎಂದು ನಟ ಕಿಶೋರ್, ಚೇತನ್ ಅವರ ಬಂಧನ ಮತ್ತು ವೀಸಾ ರದ್ದು ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಹಿಂದುಗಳನ್ನು ಕೆರಳಿಸುವಂತಹ ಹೇಳಿಕೆ ನೀಡುತ್ತಿರುವ ಆರೋಪದ ಮೇಲೆ ನಟ ಚೇತನ್ ಅಹಿಂಸಾ ಅವರ ಸಾಗರೋತ್ತರ ವೀಸಾವನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ನಟ ಚೇತನ್ ವೀಸಾ ರದ್ದುಗೊಳಿಸಿ ಕೇಂದ್ರ ಗೃಹ ಇಲಾಖೆ ನೋಟಿಸ್ ಜಾರಿ ಮಾಡಿದೆ. ಸಾಗರೋತ್ತರ ಭಾರತೀಯ ನಾಗರೀಕ (ಓಸಿಐ) ವೀಸಾ ಹೊಂದಿದ್ದರು ಚೇತನ್. ಬಲಪಂಥೀಯ ರಾಜಕೀಯವನ್ನು ಟೀಕೆ ಮಾಡುತ್ತಲೇ, ಹಿಂದುತ್ವವನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದಕ್ಕಾಗಿ ಬೆಂಗಳೂರು ಪೊಲೀಸರು ಮಾರ್ಚ್ 21 ರಂದು ಚೇತನ್ ಅವರನ್ನು ಬಂಧಿಸಿದ್ದರು. ಒಂದಲ್ಲೊಂದು ಹೇಳಿಕೆ ಮೂಲಕ ಸದಾ ವಿವಾದ ಮೈ ಮೇಲೆ ಎಳೆದುಕೊಳ್ಳುತ್ತಿರುತ್ತಾರೆ ನಟ ಚೇತನ್. ಈ ಬಗ್ಗೆ ನಟ ಚೇತನ್ ಪತ್ರಿಕಾಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದ್ದರು.
'ದೇಶವಿರೋಧಿ ಚುಟುವಟಿಕೆಯಲ್ಲಿ ನಾನು ಎಲ್ಲಿ ಭಾಗಿಯಾಗಿದ್ದೇನೆ? ಉದ್ದೇಶಪೂರ್ವಕವಾಗಿ ನನ್ನ ಮೇಲೆ ಈ ರೀತಿ ಪಿತೂರಿ ಮಾಡುತ್ತಿದ್ದಾರೆ. ನಾನು ಈ ದೇಶದಲ್ಲಿ ಇರಬಾರದು ಅಂತ ವೀಸಾ ರದ್ದುಗೊಳಿಸಿದ್ದಾರೆ. ವಾಕ್ ಸ್ವಾತಂತ್ರವನ್ನು ಕಿತ್ತು ಹಾಕುವುದಲ್ಲದೇ, ಜೈಲಿಗೆ ಹಾಕಿ ಹಿಂಸೆ ಮಾಡೋದಲ್ಲದೆ ವೀಸಾ ರದ್ದು ಮಾಡಿದ್ದಾರೆ. ಕಾನೂನು ಹೋರಾಟ ಮಾಡುತ್ತೇನೆ' ಎಂದು ಹೇಳಿದ್ದರು. ಇದೀಗ ನಟ ಚೇತನ್ ವಿಚಾರವಾಗಿ ಕಾಂತಾರ ನಟ ಕಿಶೋರ್ ಪ್ರತಿಕ್ರಿಯೆ ನೀಡಿದ್ದಾರೆ.
ನಟ ಚೇತನ್ ಅಹಿಂಸಾ ವೀಸಾ ರದ್ದು ಮಾಡಿದ ಕೇಂದ್ರ ಸರ್ಕಾರ!
ಸಾಮಾಜಿಕ ಜಾಲತಾಣದಲ್ಲಿ ನಟ ಕಿಶೋರ್ ಪ್ರತಿಕ್ರಿಯೆ ನೀಡಿ ದೀರ್ಘ ಪೋಸ್ಟ್ ಶೇರ್ ಮಾಡಿದ್ದಾರೆ. ಕಿಶೋರ್ ಪೋಸ್ಟ್ ಹೀಗಿದೆ.
‘ಹಿಂದುತ್ವ’ ಅನ್ನುವ ಪದ ವರ್ತಮಾನದ ರಾಜಕೀಯ ಪರಿಸ್ಥಿತಿಯಲ್ಲಿ ಹಿಂದೂ ಧರ್ಮ ಅಲ್ಲ. ನಿಜವಾದ ಹಿಂದೂ ಧರ್ಮ, ಸಕಲರನ್ನೂ ಒಳಗೊಂಡ ವಸುಧೆಯೇ ಒಂದು ಕುಟುಂಬವೆಂದು ನೋಡುವ ವಿಶಾಲ ಮನೋಸ್ಥಿತಿ. ಆದರೆ ‘ಹಿಂದುತ್ವ’ ಎನ್ನುವ ಪದ ಬಳಕೆಯಾಗುತ್ತಿರುವುದು ಒಂದು ಪಕ್ಷದ, ಒಂದು ಸಂಘದ, ಅಧಿಕಾರಕ್ಕಾಗಿ ಒಡೆದಾಳುವ, ಪರದ್ವೇಷದ, ಮೂಲಭೂತವಾದಿ ವೈದಿಕ ಸಂಪ್ರದಾಯದ ಸಂಕುಚಿತ ಪರಿಕಲ್ಪನೆಯಾಗಿಯಷ್ಟೆ' ಎಂದು ಕಿಶೋರ್ ಹೇಳಿದ್ದಾರೆ.
Actor Kishore: ಒಕ್ಕಲಿಗರಿಗೂ ದೇಶದ್ರೋಹಿ ಪಟ್ಟಕಟ್ಟುವ ಹುನ್ನಾರವೇ ಎಂದು ಪ್ರಶ್ನಿಸಿದ ಕಿಶೋರ್!
'ಹಾಗಾಗಿ ಈ ಜೀವ ವಿರೋಧಿ ರಾಜಕೀಯದ ಟೀಕೆಯಿಂದ ಹಿಂದೂಗಳಿಗೆಲ್ಲರಿಗೂ ಅಪಮಾನವಾಯಿತೆನ್ನುವುದು ಎಷ್ಟು ಉಚಿತ?? ಹಾಗೆ ಅವಮಾನ ಪಡಲೇಬೇಕೆಂದರೆ ವೈದಿಕ ಪರಂಪರೆ ಇಂದಿಗೂ ಪ್ರತಿಪಾದಿಸುತ್ತಿರುವ ನಮ್ಮಲ್ಲೇ ಇರುವ ಜಾತಿ ಪದ್ಧತಿ, ಅಸ್ಪೃಶ್ಯತೆ, ಲಿಂಗ ಬೇಧ ಇವುಗಳಿಂದಲ್ಲವೇ? ಆ ನಿಟ್ಟಿನಲ್ಲಿ ನಮ್ಮನ್ನು ನಾವು ತಿದ್ದಿಕೊಂಡು ಹಿಂದೂ ಧರ್ಮವನ್ನು ಎಲ್ಲರಿಗೂ ಮಾದರಿಯಾಗಿಸಬೇಕಲ್ಲವೇ?. ನಮ್ಮ ತಪ್ಪುಗಳನ್ನು ಎತ್ತಿ ತೋರಿಸುವ ನಮ್ಮದೇ ಜನರನ್ನು ನಿಂದಿಸುವ, ಆರೋಪಿಸುವ, ಜೈಲಿಗೆ ಹಾಕುವ ಅಥವಾ ಗಡೀಪಾರು ಮಾಡುವ ಅತಿರೇಕಕ್ಕೆ ಹೋಗುವ ಬದಲು??' ಎಂದು ನಟ ಕಿಶೋರ್ ಪ್ರಶ್ನೆ ಮಾಡಿದ್ದಾರೆ.
