ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಕನ್ನಡದ ನಟ ಅನಂತ್‌ನಾಗ್ ಹಾಗೂ ಲಕ್ಷ್ಮೀ ನಟನೆಯಲ್ಲಿ 1979ರಲ್ಲಿ ಬಿಡುಗಡೆಯಾದ ಈ ಹಾರರ್ ಸಿನಿಮಾ ಸೂಪರ್ ಹಿಟ್ ಆಗಿ ಭಾರೀ ಕಲೆಕ್ಷನ್ ಮಾಡಿತ್ತು. ಈ ಕನ್ನಡ ಸಿನಿಮಾವನ್ನು ಹಿಂದಿಯಲ್ಲಿ ಕೂಡ ರೀಮೇಕ್ ಮಾಡಲಾಗಿತ್ತು. ಈ ಸಿನಿಮಾದ ವಿಶೇಷತೆ ಏನು?

ಸೌಮ್ಯ ನಟನಿಂದ ಭಯಾನಕ ಭೂತದವರೆಗೆ! ಅನಂತ್‌ನಾಗ್ ಕಂಡು ಬೆಚ್ಚಿಬಿದ್ದಿದ್ದರು ಪ್ರೇಕ್ಷಕರು; ಈ ಸಿನಿಮಾ ಸೃಷ್ಟಿಸಿತ್ತು ಹೊಸ ದಾಖಲೆ!

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕವೇ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದಿರುವ ನಟ ಅನಂತ್ ನಾಗ್ ಅವರ ಸಿನಿ ಪಯಣವೇ ವಿಶೇಷ. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾಗಿರುವ ಅವರು ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅದರಲ್ಲೂ ಸೌಮ್ಯ ಸ್ವಭಾವದ, ಗಂಭೀರ ವ್ಯಕ್ತಿತ್ವದ ಪಾತ್ರಗಳ ಮೂಲಕ ಮಹಿಳಾ ಅಭಿಮಾನಿಗಳ ದೊಡ್ಡ ಬಳಗವನ್ನೇ ಸಂಪಾದಿಸಿದ್ದರು. ಆದರೆ ಇದೇ ನಟ ಒಮ್ಮೆ ತೆರೆಯ ಮೇಲೆ ಭಯಾನಕ ರೂಪದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ಬೆಚ್ಚಿಬೀಳಿಸಿದ್ದರು. ಆ ಸಿನಿಮಾವೇ 1979ರಲ್ಲಿ ಬಿಡುಗಡೆಯಾದ ‘ನಾ ನಿನ್ನ ಬಿಡಲಾರೆ’.

ಅನಂತ್ ನಾಗ್ ಮತ್ತು ಜೂಲಿ ಲಕ್ಷ್ಮಿ ಜೋಡಿ

ಅನಂತ್ ನಾಗ್ ಮತ್ತು ಜೂಲಿ ಲಕ್ಷ್ಮಿ ಜೋಡಿಯಾಗಿ ನಟಿಸಿದ್ದ ಈ ಹಾರರ್ ಸಿನಿಮಾ ಅಂದಿನ ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡಿತ್ತು. ಸಾಮಾನ್ಯವಾಗಿ ಶಾಂತ ಸ್ವಭಾವದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅನಂತ್ ನಾಗ್, ಈ ಚಿತ್ರದಲ್ಲಿ ಭಯ ಹುಟ್ಟಿಸುವ ಅಭಿನಯದ ಮೂಲಕ ಎಲ್ಲರ ಗಮನ ಸೆಳೆದರು. ಅವರ ಬಾಡಿ ಲ್ಯಾಂಗ್ವೇಜ್, ಕಣ್ಣಿನ ನೋಟ ಮತ್ತು ಡೈಲಾಗ್ ಡೆಲಿವರಿ ಚಿತ್ರಕ್ಕೆ ವಿಶೇಷ ಮೆರುಗು ನೀಡಿದ್ದವು. ಪ್ರತಿಯೊಂದು ದೃಶ್ಯವೂ ಪ್ರೇಕ್ಷಕರಲ್ಲಿ ಕುತೂಹಲ ಹಾಗೂ ಆತಂಕ ಮೂಡಿಸುವಂತಿತ್ತು.

ಸತತ 100 ದಿನಗಳ ಪ್ರದರ್ಶನ

ನಿರ್ದೇಶಕ ವಿಜಯ್, ಎಂ.ಡಿ. ಸುಂದರ್ ಅವರ ಕಥೆಯನ್ನು ಆಧರಿಸಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಸಿ. ಜಯರಾಮ್ ನಿರ್ಮಾಣದ ಹೊಣೆ ಹೊತ್ತಿದ್ದರು. ಚಿತ್ರ ಬಿಡುಗಡೆಯಾದ ಬಳಿಕ ಸಿಕ್ಕ ಜನಪ್ರಿಯತೆ ಸಾಮಾನ್ಯವಾಗಿರಲಿಲ್ಲ. ಕರ್ನಾಟಕದ ಹಲವು ಚಿತ್ರಮಂದಿರಗಳಲ್ಲಿ ಸತತ 100 ದಿನಗಳ ಪ್ರದರ್ಶನ ಕಂಡ ಈ ಸಿನಿಮಾ ದೊಡ್ಡ ಯಶಸ್ಸು ದಾಖಲಿಸಿತು. ಅಂದಿನ ಕಾಲದಲ್ಲಿ ಸುಮಾರು 10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂಬ ಮಾಹಿತಿಯೂ ಚಿತ್ರಕ್ಕೆ ಸಂಬಂಧಿಸಿದಂತೆ ಉಲ್ಲೇಖವಾಗುತ್ತದೆ.

ಈ ಚಿತ್ರದ ಮೂಲಕ ಅನಂತ್ ನಾಗ್ ಮತ್ತು ಜೂಲಿ ಲಕ್ಷ್ಮಿ ಅವರ ಜೋಡಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಬಳಿಕ ಇವರಿಬ್ಬರೂ ಹಲವು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿ ಜನಪ್ರಿಯ ಜೋಡಿಯಾದರು. ‘ನಾ ನಿನ್ನ ಬಿಡಲಾರೆ’ ಕನ್ನಡದ ನೆನಪಿನಲ್ಲಿ ಉಳಿದ ಹಾರರ್ ಚಿತ್ರಗಳಲ್ಲೊಂದಾಗಿದ್ದು, ಹಿಂದಿಗೂ ರಿಮೇಕ್ ಆಯಿತು. ವಿಶೇಷವೆಂದರೆ ಹಿಂದಿ ಆವೃತ್ತಿಯಲ್ಲೂ ಅನಂತ್ ನಾಗ್ ತಮ್ಮ ಪಾತ್ರವನ್ನು ತಾವೇ ನಟಿಸಿದ್ದರು. ಆದರೆ ನಾಯಕಿಯಾಗಿ ನಟಿ ಲಕ್ಷ್ಮೀ (ಜೂಲಿ ಲಕ್ಷ್ಮೀ) ಬದಲು ನಟಿ ರೇಖಾ ಲಕ್ಷ್ಮೀ ನಾಯಕಿಯಾಗಿದ್ದರು. ಹೀಗೆ ಒಂದು ವಿಭಿನ್ನ ಪಾತ್ರದ ಮೂಲಕ ತಮ್ಮ ನಟನಾ ಸಾಮರ್ಥ್ಯದ ಮತ್ತೊಂದು ಮುಖವನ್ನು ಅನಂತ್ ನಾಗ್ ಅನಾವರಣಗೊಳಿಸಿದ್ದರು.