ನಿತೇಶ್ ತಿವಾರಿ ನಿರ್ದೇಶನದ ಯಶ್ ಅಭಿನಯದ ರಾಮಾಯಣ ಸಿನಿಮಾ ಸದ್ದು ಮಾಡುತ್ತಿರುವಾಗ, 1917ರಲ್ಲೇ ಭಾರತದ ಮೊದಲ ರಾಮಾಯಣ ಸಿನಿಮಾ 'ಲಂಕಾದಹನ' ಬಿಡುಗಡೆಯಾಗಿತ್ತು. ದಾದಾಸಾಹೇಬ್ ಫಾಲ್ಕೆ ನಿರ್ದೇಶನದ ಈ ಮೂಕಿ ಚಿತ್ರದಲ್ಲಿ ರಾಮ ಮತ್ತು ಸೀತೆಯಾಗಿ ಒಬ್ಬರೇ ನಟಿಸಿದ್ದು ವಿಶೇಷವಾಗಿತ್ತು.

ನಿತೇಶ್​ ತಿವಾರಿ ಅವರ ಯಶ್​ ಅಭಿನಯದ ರಾಮಾಯಣ-1 ಚಿತ್ರ ಹಂಗಾಮಾ ಸೃಷ್ಟಿಸುತ್ತಿದೆ. 4 ಸಾವಿರ ಕೋಟಿ ರೂಪಾಯಿ ಬಜೆಟ್​ನಲ್ಲಿ ತಯಾರಾಗಿರುವ ಈ ಸಿನಿಮಾ ಜಗತ್ತಿನಾದ್ಯಂತ ಸದ್ಯ 375 ಕೋಟಿ ರೂಪಾಯಿಗಳನ್ನು ಗಳಿಸಿದೆ. ಅದರಲ್ಲಿಯೂ 3ಡಿ ವರ್ಷನ್​ಗೆ ಸಿಕ್ಕಾಪಟ್ಟೆ ಡಿಮಾಂಡ್​ ಬಂದಿದೆ. ರಣಬೀರ್​ ಕಪೂರ್​,, ಸಾಯಿ ಪಲ್ಲವಿ ಅವರಿಗಿಂತಲೂ ಹೆಚ್ಚಾಗಿ ನಟ ಯಶ್​ ಅವರ ರಾವಣನ ಅವತಾರವನ್ನು ನೋಡಲು ಸಿನಿಮಾಕ್ಕೆ ಕನ್ನಡಿಗರು ಲಗ್ಗೆ ಇಡುತ್ತಿದ್ದಾರೆ. ರಾಮಾಯಣದ ಹೆಸರಿನಲ್ಲಿ ಇದಾಗಲೇ ಸಾಕಷ್ಟು ಸಿನಿಮಾ, ಸಾಕಷ್ಟು ಭಾಷೆಗಳಲ್ಲಿ ಬಂದಿದ್ದರೂ ಎಂದಿಗೂ ಅದಕ್ಕೆ ಬೇಡಿಕೆ ಇದ್ದೇ ಇದೆ.

1917ರಲ್ಲಿ ಮೊದಲ ರಾಮಾಯಣ ಸಿನಿಮಾ

ಆದರೆ ನಿಮಗೆ ಗೊತ್ತಾ? ಮೊದಲ ರಾಮಾಯಣ ಸಿನಿಮಾ ಮಾಡಿದ್ದು ಯಾವಾಗ ಎಂದು. ಬಹುಶಃ ನೀವು ಊಹಿಸಲೂ ಸಾಧ್ಯವಿಲ್ಲ. ಇದು ಮಾಡಿದ್ದು 1917ರಲ್ಲಿ. ಇದರ ಅರ್ಥ 110 ವರ್ಷಗಳ ಹಿಂದೆ. ಆಗ ಅದರ ಬಜೆಟ್​ 15 ಸಾವಿರ ರೂಪಾಯಿ ಆಗಿತ್ತು. ಬಹುಶಃ ಈಗಿನ ಲೆಕ್ಕಾಚಾರದಲ್ಲಿ ಹೇಳುವುದಾದರೆ ಇದು ಸಾವಿರಾರು ಕೋಟಿಗೆ ಸಮವೇ ಹೌದು. ಆದರೆ ಆಗ ಈ ಸಿನಿಮಾದ ಹೆಸರು ಲಂಕಾದಹನ ಎಂದು ಇಡಲಾಗಿತ್ತು. ಭಾರತೀಯ ಚಿತ್ರರಂಗದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಅವರು ಇದನ್ನು ಮಾಡಿದ್ದರು. ವಿಶೇಷವೆಂದರೆ ಈ ಸಿನಿಮಾ ಮೂಕಿ ಸಿನಿಮಾ ಆಗಿತ್ತು. ಬಹುಶಃ ಕೆಲವರಿಗೆ ಗೊತ್ತಿರಲಿಕ್ಕಿಲ್ಲ. ಬ್ಲ್ಯಾಕ್​ ಆ್ಯಂಡ್ ವೈಟ್​ ಸಿನಿಮಾ ಬರುವುದಕ್ಕೂ ಮುನ್ನವೇ ಬಿಡುಗಡೆಯಾಗುತ್ತಿದ್ದುದು ಮಾತು ಇಲ್ಲದ ಕೇವಲ ಅಭಿನಯ ಇರುವ ಮೂಕಿ ಸಿನಿಮಾ. ಆ ಬಳಿಕ ಮಾತನಾಡುವ ಸಿನಿಮಾ ಬಂತು. ಬಳಿಕ ಕಲರ್​ ಸಿನಿಮಾ ಬಂದು, ಈಗ ಬಿಡಿ. ಊಹಿಸಲೂ ಸಾಧ್ಯವಿಲ್ಲದಷ್ಟು ಮಟ್ಟಿಗೆ ಸಿನಿಮಾ ಇಂಡಸ್ಟ್ರಿ ಬೆಳೆದಿದೆ.

ರಾಮ-ಸೀತೆ ಒಬ್ಬನೇ ನಟ

ಆದರೆ, ಇಲ್ಲೊಂದು ವಿಷ್ಯ ಹೇಳಲೇಬೇಕು. ಈ ಸಿನಿಮಾಕ್ಕೆ ನಾಯಕ ನಾಯಕಿ ಒಬ್ಬರೇ. ಅದು ಹೇಗೆ ಸಾಧ್ಯ ಅಂತೀರಾ. ಈ ಸಿನಿಮಾದಲ್ಲಿ ಶ್ರೀರಾಮಚಂದ್ರನಾಗಿ ನಟಿಸಿದ್ದು ನಟ ಅಣ್ಣಾ ಸಾಲುಂಕೆ. ಕುತೂಹಲದ ವಿಷ್ಯ ಎಂದರೆ ಸೀತೆಯೂ ಅವರೇ ಆಗಿದ್ದರು! ಒಬ್ಬರೇ ನಟ ನಾಯಕ ಮತ್ತು ನಾಯಕಿಯ ಪಾತ್ರ ನಿರ್ವಹಿಸಿದ್ದು ಅಂದಿನ ಕಾಲದಲ್ಲಿ ದೊಡ್ಡ ಸಾಹಸವಾಗಿತ್ತು. ನಿಮಗೆ ನೆನಪಿರಬಹುದು. 80ರ ದಶಕದಲ್ಲಿ ರಾಮಾಯಣ ಮತ್ತು ಮಹಾಭಾರತ ಟಿವಿಯಲ್ಲಿ ಪ್ರಸಾರ ಆಗುತ್ತಿದ್ದ ವೇಳೆ ಹಲವು ಮನೆಗಳಲ್ಲಿ ಟಿವಿಗಳಿಗೆ ಪೂಜೆ ಸಲ್ಲಿಸಿ, ಕೆಲವರು ಮಾಲೆ ಹಾಕಿ, ಪ್ರಸಾದವನ್ನೂ ವಿತರಿಸಿ ರಾಮಾಯಣ, ಮಹಾಭಾರತವನ್ನು ವೀಕ್ಷಿಸುತ್ತಿದ್ದರು. ಏಕೆಂದರೆ ಅಲ್ಲಿ ಬರುವುದು ಸಾಕ್ಷಾತ್​ ಶ್ರೀರಾಮಚಂದ್ರ, ಶ್ರೀಕೃಷ್ಣ ಹಾಗೂ ದೇವರ ಅವತಾರಗಳೇ ಎಂದು ನಂಬಿದ್ದರು. ಅದೇ ರೀತಿ, 1917ರ ಈ ಲಂಕಾ ದಹನ ಸಿನಿಮಾಕ್ಕೂ ಪ್ರೇಕ್ಷಕರು ಚಪ್ಪಲಿ ಬಿಟ್ಟು ಒಳಗೆ ಹೋಗುತ್ತಿದ್ದರು ಎಂದು ವರದಿಯಾಗಿದೆ.

ಈಗ ಯಶ್​ ಅವರ ಅಭಿನಯದ ರಾಮಾಯಣ ಭರ್ಜರಿ ಕಲೆಕ್ಷ್​ ಮಾಡುತ್ತಿದ್ದರೆ, ಆಗಲೂ ಆ ಚಿತ್ರ ಅಷ್ಟೇ ಯಶಸ್ಸು ಕಂಡಿತ್ತು. ಜನರು ಮುಗಿಬಿದ್ದು ಥಿಯೇಟರ್​ಗಳಿಗೆ ಬರುತ್ತಿದ್ದರು. ಆಗ ಹಣವನ್ನು ಚಿತ್ರಮಂದಿರಗಳ ಮಾಲೀಕರು ಎತ್ತಿನ ಬಂಡಿಗಳಲ್ಲಿ ತುಂಬಿಕೊಂಡು ಬ್ಯಾಂಕ್‌ಗಳಿಗೆ ಕೊಂಡೊಯ್ಯುತ್ತಿದ್ದರಂತೆ.ಆ ಪರಿಯಲ್ಲಿ ಚಿತ್ರ ಯಶಸ್ಸು ಕಂಡಿತ್ತು. ಈಗ ಬಿಡಿ ತಂತ್ರಜ್ಞಾನದಿಂದ ಏನು ಬೇಕಾದರೂ ಮಾಡಲು ಸಾಧ್ಯ. ಆದರೆ ಅಂದು ಕಲ್ಪಿಸಿಕೊಳ್ಳಿ. ಮಾತನಾಡುವ ಸಿನಿಮಾಮಾಡಲೂ ಬರದ ಕಾಲದಲ್ಲಿ ದಾದಾಸಾಹೇಬ್ ಫಾಲ್ಕೆ ಅವರು ಅದ್ಯಾವ ಪರಿಯಲ್ಲಿ ಅದ್ಭುತ ಸೃಷ್ಟಿಸಿದ್ದರು ಎನ್ನುವುದನ್ನು.