120 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ ‘ಪ್ರೇಮದ ಊರಲಿ’ ಚಿತ್ರಕ್ಕೆ ನಾಗತಿಹಳ್ಳಿ ಚಂದ್ರಶೇಖರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೆಂಡತಿಯ ಕಾಲಿಗೆ ಬಿದ್ದು ಕ್ಷಮೆ ಕೇಳುವ ದೃಶ್ಯವನ್ನು ಶ್ಲಾಘಿಸಿದ್ದಾರೆ.

2026ರಲ್ಲಿ ಕನ್ನಡ ಚಿತ್ರರಂಗದ ಪಾಲಿಗೆ ಅಚ್ಚರಿಯ ಗೆಲುವು ತಂದುಕೊಟ್ಟ ಸಿನಿಮಾಗಳಲ್ಲಿ ‘ಪ್ರೇಮದ ಊರಲಿ’ ಕೂಡ ಒಂದು. ಕೇವಲ 2 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣಗೊಂಡ ಈ ಸಿನಿಮಾ 120 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಹೊಸಬರ ಪ್ರಯತ್ನಕ್ಕೆ ಕನ್ನಡ ಪ್ರೇಕ್ಷಕರು ಮನಸಾರೆ ಬೆಂಬಲ ನೀಡಿದ್ದು, ಇದೀಗ ಸಿನಿಮಾ ಒಟಿಟಿಯಲ್ಲಿಯೂ ಬಿಡುಗಡೆಯಾಗಿದೆ.

ಈ ಗೆಲುವಿನ ಸಂಭ್ರಮಕ್ಕೆ ಇದೀಗ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಮೆಚ್ಚುಗೆಯ ಮಾತುಗಳೂ ಸೇರಿಕೊಂಡಿವೆ. ಚಿತ್ರದ ನಿರ್ದೇಶಕ ಮನೋಜ್ ಹಾಗೂ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸಿರುವ ಅವರು, ಸಿನಿಮಾದಲ್ಲಿನ ಒಂದು ನಿರ್ದಿಷ್ಟ ದೃಶ್ಯ ತಮ್ಮ ಮನಸ್ಸಿಗೆ ತಟ್ಟಿದೆ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಆ ದೃಶ್ಯವನ್ನು ಜನಪ್ರಿಯ ನಾಯಕ ನಟರು ಮಾಡುತ್ತಿದ್ದರೇ ಪ್ರೇಕ್ಷಕರು ಅದನ್ನು ಒಪ್ಪಿಕೊಳ್ಳುತ್ತಿದ್ದರಾ ಎಂಬ ಕುತೂಹಲದ ಪ್ರಶ್ನೆಯನ್ನೂ ಮುಂದಿಟ್ಟಿದ್ದಾರೆ.

ಹೆಂಡತಿಯ ಕಾಲಿಗೆ ಬಿದ್ದು ಕ್ಷಮೆ ಕೇಳುವ ದೃಶ್ಯಕ್ಕೆ ಮೆಚ್ಚುಗೆ

ನಾಗತಿಹಳ್ಳಿ ಚಂದ್ರಶೇಖರ್ ಅವರು ಫೇಸ್‌ಬುಕ್‌ನಲ್ಲಿ ‘ಪ್ರೇಮದ ಊರಲಿ’ ಚಿತ್ರದ ನಿರ್ದೇಶಕ ಮನೋಜ್ ಅವರನ್ನು ಉದ್ದೇಶಿಸಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. ಚಿತ್ರ ಒಟಿಟಿಯಲ್ಲಿ ಲಭ್ಯವಿದ್ದರೂ, ಶಿಷ್ಯರೊಂದಿಗೆ ಚಿತ್ರಮಂದಿರಕ್ಕೆ ತೆರಳಿ ದೊಡ್ಡ ಪರದೆಯ ಮೇಲೆ ಸಿನಿಮಾ ವೀಕ್ಷಿಸಿರುವುದಾಗಿ ತಿಳಿಸಿದ್ದಾರೆ. ಅನಿವಾರ್ಯ ಸಂದರ್ಭಗಳ ಹೊರತಾಗಿ ಸಿನಿಮಾಗಳನ್ನು ಚಿತ್ರಮಂದಿರದಲ್ಲೇ ಹಣ ಕೊಟ್ಟು ನೋಡುವುದು ತಮ್ಮ ನಂಬಿಕೆ ಎಂದೂ ಬರೆದುಕೊಂಡಿದ್ದಾರೆ.

ಚಿತ್ರದ ಗೆಲುವು, ತಂಡದ ಶ್ರಮ ಮತ್ತು ಹೊಸಬರ ಪ್ರತಿಭೆಯನ್ನು ಮುಕ್ತವಾಗಿ ಪ್ರಶಂಸಿಸಿರುವ ಅವರು, ನಟರ ಅಭಿನಯದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ರಘು ಅವರ ನಟನೆಯನ್ನು ಶ್ಲಾಘಿಸಿರುವ ನಾಗತಿಹಳ್ಳಿ, ಅವರು ಅದ್ಭುತ ನಟ ಎಂದು ಬಣ್ಣಿಸಿದ್ದಾರೆ. ಆದರೆ, ಸಿನಿಮಾದಲ್ಲಿ ಅವರಿಗೆ ಅತ್ಯಂತ ಇಷ್ಟವಾದದ್ದು ಗಂಡ ತನ್ನ ಹೆಂಡತಿಯ ಕಾಲಿಗೆ ಬಿದ್ದು ಕ್ಷಮೆ ಕೇಳುವ ದೃಶ್ಯವಂತೆ. ಮನುಷ್ಯರು ಮಾಡುವ ಪ್ರತಿಯೊಂದು ತಪ್ಪಿಗೂ ಇದೇ ಪರಿಹಾರ ಎನ್ನಲಾಗದಿದ್ದರೂ, ಆ ದೃಶ್ಯದಲ್ಲಿ ಸ್ತ್ರೀತ್ವಕ್ಕೆ ನೀಡಿರುವ ಗೌರವ ಮತ್ತು ಸಮಾಧಾನದ ಭಾವ ತಮ್ಮನ್ನು ಸೆಳೆದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸ್ಟಾರ್ ನಟರು ಇಂತಹ ದೃಶ್ಯ ಮಾಡುತ್ತಿದ್ದರಾ?

ಈ ದೃಶ್ಯದ ಮೂಲಕ ಕಮರ್ಷಿಯಲ್ ಸಿನಿಮಾದಲ್ಲೂ ನಿರ್ದೇಶಕನ ಮೌಲ್ಯಪ್ರಜ್ಞೆ ಎದ್ದು ಕಾಣುತ್ತದೆ ಎಂದು ನಾಗತಿಹಳ್ಳಿ ಚಂದ್ರಶೇಖರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ, ಜನಪ್ರಿಯ ಹಾಗೂ ಯಶಸ್ವಿ ನಾಯಕ ನಟರೊಬ್ಬರು ಇಂತಹ ದೃಶ್ಯದಲ್ಲಿ ನಟಿಸುತ್ತಿದ್ದರಾ? ಅವರು ಹೆಂಡತಿಯ ಕಾಲಿಗೆ ಬಿದ್ದು ಕ್ಷಮೆ ಕೇಳುವುದನ್ನು ಪ್ರೇಕ್ಷಕರು ಒಪ್ಪಿಕೊಳ್ಳುತ್ತಿದ್ದರಾ? ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ. ‘ಪ್ರೇಮದ ಊರಲಿ’ ತಂಡದ ಸಾಧನೆಯನ್ನು ಅಭಿನಂದಿಸಿರುವ ನಾಗತಿಹಳ್ಳಿ ಚಂದ್ರಶೇಖರ್, ಈ ರೀತಿಯ ಗೆಲುವು ಕನ್ನಡ ಚಿತ್ರರಂಗಕ್ಕೆ ಮತ್ತು ಚಿತ್ರೋದ್ಯಮದ ಎಲ್ಲರಿಗೂ ಅಗತ್ಯವಿತ್ತು ಎಂದು ಹೇಳಿದ್ದಾರೆ.

ಇನ್ನು ನಿರ್ದೇಶಕ ಮನೋಜ್ ಅವರ ಗೆಲುವು ತಮ್ಮ ಗೆಲುವೂ ಹೌದು ಎಂದು ಸಂತಸ ಹಂಚಿಕೊಂಡಿದ್ದಾರೆ. ಕಡಿಮೆ ಬಜೆಟ್‌ನಲ್ಲಿ ಆರಂಭವಾದ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಂಡಿರುವುದು ಈಗಾಗಲೇ ಚರ್ಚೆಯ ವಿಷಯವಾಗಿದೆ. ಅದರ ನಡುವೆ ನಾಗತಿಹಳ್ಳಿ ಚಂದ್ರಶೇಖರ್ ಅವರ ಈ ಮೆಚ್ಚುಗೆಯ ಮಾತುಗಳು ‘ಪ್ರೇಮದ ಊರಲಿ’ ಚಿತ್ರದ ಮತ್ತೊಂದು ವಿಶೇಷ ಕ್ಷಣವಾಗಿ ಗಮನ ಸೆಳೆದಿವೆ.