ಗಾಯಕಿ ಅರ್ಚನಾ ಉಡುಪ ಅವರು ತಮ್ಮ ಗುರು ಹಾಗೂ ದಿಗ್ಗಜ ಶಾಸ್ತ್ರೀಯ ಗಾಯಕಿ ಡಾ. ಶಕುಂತಲಾ ನರಸಿಂಹನ್ ಅವರ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಶಕುಂತಲಾ ಅವರು ಪತ್ರಕರ್ತೆ, ಗ್ರಾಹಕ ಹಕ್ಕುಗಳ ಹೋರಾಟಗಾರ್ತಿ ಮತ್ತು ಸ್ತ್ರೀವಾದಿಯಾಗಿದ್ದರು.
ಬೆಂಗಳೂರು (ನ.19): ಕನ್ನಡ ಚಿತ್ರರಂಗ ಮತ್ತು ಶಾಸ್ತ್ರೀಯ ಸಂಗೀತ ಲೋಕದ ಖ್ಯಾತ ಗಾಯಕಿ ಅರ್ಚನಾ ಉಡುಪ (Archana Udupa) ಅವರು ತಮ್ಮ ಸಂಗೀತ ಗುರು ಹಾಗೂ ದಾರಿ ದೀಪವಾಗಿದ್ದ ದಿಗ್ಗಜ ಶಾಸ್ತ್ರೀಯ ಗಾಯಕಿ ಡಾ. ಶಕುಂತಲಾ ನರಸಿಂಹನ್ (Dr. Shakunthala Narasimhan) ಅವರ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿ ಹೃದಯಸ್ಪರ್ಶಿ ಪೋಸ್ಟ್ ಹಂಚಿಕೊಂಡಿದ್ದಾರೆ. "ನನ್ನ ಹೃದಯದ ಒಂದು ಭಾಗವೇ ಕಿತ್ತು ಹೋದಂತಾಗಿದೆ, ಕೊನೆ ಉಸಿರು ಇರುವವರೆಗೆ ನಿಮ್ಮನ್ನು ಮರೆಯಲು ಸಾಧ್ಯವಿಲ್ಲ" ಎಂದು ಅರ್ಚನಾ ಬರೆದುಕೊಂಡಿದ್ದಾರೆ. ತಮ್ಮ ಗುರುಗಳಾದ ಡಾ. ಶಕುಂತಲಾ ನರಸಿಂಹನ್ ಅವರೊಂದಿಗಿನ ಅವಿನಾಭಾವ ಸಂಬಂಧವನ್ನು ಸ್ಮರಿಸಿರುವ ಅರ್ಚನಾ ಉಡುಪ, ಸೋಶಿಯಲ್ ಮೀಡಿಯಾದಲ್ಲಿ ಇಂಗ್ಲಿಷ್ ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ಭಾವುಕ ನುಡಿನಮನ ಸಲ್ಲಿಸಿದ್ದಾರೆ.
ಗುರುಗಳನ್ನು ನೆನೆದು ಅರ್ಚನಾ ಉಡುಪ ಬರೆದ ಭಾವುಕ ಸಾಲುಗಳಿವು
ನನ್ನ ದಾರಿ ದೀಪ, ನನ್ನ ಗುರುಗಳು, ಡಾ. ಶಕುಂತಲಾ ನರಸಿಂಹನ್ ಇನ್ನಿಲ್ಲ.. 8 ನೆಯ ತರಗತಿಯಲ್ಲಿ ಇದ್ದಾಗ ಅವರಲ್ಲಿ ಸಂಗೀತದ ಕಲಿಕೆ ಪ್ರಾರಂಭ ಮಾಡಿದ್ದು. ಅಂದಿನಿಂದ ಕಲಿಕೆ ನಿಂತಿರಲೇ ಇಲ್ಲ. ಪ್ರತೀ ದಿನವೂ ನನ್ನನ್ನು ತಿದ್ದಿ ತೀಡಿ ನುರಿತ ಗಾಯಕಿಯನ್ನಾಗಿ ಮಾಡಿದ್ದಾರೆ. ತಾಯಿಯ ಪ್ರೀತಿ ನೀಡಿದ್ದಾರೆ. ನಾನು ಇಂದು ಏನೇ ಆಗಿದ್ದರೂ ಅವರ ಮಾರ್ಗದರ್ಶನದ ಫಲವೇ. ನನ್ನ ಹೃದಯದ ಒಂದು ಭಾಗವೇ ಕಿತ್ತು ಹೋದಂತೆ ಆಗಿದೆ.. ಕೊನೆ ಉಸಿರು ಇರುವವರೆಗೆ ನಿಮ್ಮನ್ನು ಮರೆಯಲು ಸಾಧ್ಯವಿಲ್ಲ ಎಂದು ಅವರು ಬರೆದಿದ್ದಾರೆ.
ಗುರುಗಳ ಅಸಾಧಾರಣ ವ್ಯಕ್ತಿತ್ವ ಬಣ್ಣಿಸಿದ ಅರ್ಚನಾ ಉಡುಪ
ನನ್ನ ಗುರು, ನನ್ನ ಮಾರ್ಗದರ್ಶಕಿ, ನನ್ನ ದಾರಿ ದೀಪ ಇನ್ನಿಲ್ಲ. ಡಾ. ಶಕುಂತಲಾ ನರಸಿಂಹನ್ ಒಬ್ಬ ದಿಗ್ಗಜ ಶಾಸ್ತ್ರೀಯ ಗಾಯಕಿ, ಖ್ಯಾತ ಪತ್ರಕರ್ತೆ, ಗ್ರಾಹಕ ಹಕ್ಕುಗಳ ಹೋರಾಟಗಾರ್ತಿ ಮತ್ತು ಸ್ತ್ರೀವಾದಿಯಾಗಿದ್ದರು. 'ಇಲ್ಲ' (NO) ಮತ್ತು 'ಸಾಧ್ಯವಿಲ್ಲ' (CAN'T) ಎಂಬ ಪದಗಳು ಅವರ ನಿಘಂಟಿನಲ್ಲೇ ಇರಲಿಲ್ಲ. ಅವರೊಳಗೆ ಸದಾ ಒಂದು ಕಿಚ್ಚು ಇರುತ್ತಿತ್ತು. ಇಚ್ಛಾಶಕ್ತಿ, ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವ ಅವರ ಎರಡನೇ ಹೆಸರಾಗಿತ್ತು. ಅವರು ಹುಟ್ಟು ಹೋರಾಟಗಾರ್ತಿಯಾಗಿದ್ದರು.
ಕರ್ನಾಟಕ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಎರಡರಲ್ಲೂ ಪ್ರಭುತ್ವ ಸಾಧಿಸಿದ್ದ ಕಾರಣ, 'ಸೆಲ್ಫ್ ಜುಗಲ್ಬಂದಿ' (Self jugalbandi - ತಾವೇ ಎರಡೂ ಶೈಲಿಯಲ್ಲಿ ಜುಗಲ್ಬಂದಿ ಹಾಡುವ) ಕಛೇರಿಗಳನ್ನು ನೀಡಿದ ಏಕೈಕ ಕಲಾವಿದೆ ಅವರಾಗಿದ್ದರು. ಅತ್ಯಂತ ಅಪರೂಪದ ತಾಳಗಳಲ್ಲಿ ಅತ್ಯಂತ ಕಷ್ಟಕರವಾದ ತರಾನಾಗಳನ್ನು (Taranas) ಅವರು ಹಾಡುತ್ತಿದ್ದರು. ಅವರು ಅಪರೂಪದ ಮಾನವೀಯ ವ್ಯಕ್ತಿಯಾಗಿದ್ದರು. ಎರಡು ಬಾರಿ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದಿದ್ದರು ಎಂದು ಅರ್ಚನಾ ನೆನೆದಿದ್ದಾರೆ.
'ನಾನು 8 ಅಥವಾ 9ನೇ ತರಗತಿಯಲ್ಲಿದ್ದಾಗ ಅವರು ನನ್ನನ್ನು ತಮ್ಮ ಆಶ್ರಯಕ್ಕೆ ಪಡೆದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿಸಿದರು. ಅಂದಿನಿಂದ ನಾನು ಅವರೊಂದಿಗೇ ಇದ್ದೆ, ಕಲಿಕೆ ಎಂದಿಗೂ ನಿಲ್ಲಲಿಲ್ಲ. ಪ್ರತಿದಿನ ನನ್ನನ್ನು ತಿದ್ದಿ ತೀಡಿ ಇಂದು ನಾನು ಏನಾಗಿದ್ದೇನೋ ಅದನ್ನಾಗಿ ರೂಪಿಸಿದ್ದಾರೆ. ನಾನು ಸಂಪೂರ್ಣವಾಗಿ ಅವರಿಗೆ ಋಣಿಯಾಗಿದ್ದೇನೆ. ಅವರು ನನ್ನನ್ನು ತಾಯಿಯಂತೆ ಪ್ರೀತಿಸಿ ಪೋಷಿಸಿದ್ದಾರೆ. ಸರಳ ಪದಗಳಲ್ಲಿ ವಿವರಿಸಲು ಸಾಧ್ಯವಾಗದಷ್ಟು ರೀತಿಯಲ್ಲಿ ಅವರು ನನಗೆ ಸ್ಫೂರ್ತಿ ನೀಡಿದ್ದಾರೆ. ಮೇಡಂ... ನನ್ನ ಕೊನೆಯ ಉಸಿರಿರುವವರೆಗೂ ಪ್ರತಿದಿನ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ" ಎಂದು ಅರ್ಚನಾ ಬರೆದುಕೊಂಡಿದ್ದಾರೆ.
47 ವರ್ಷದ ಅರ್ಚನಾ ಉಡುಪ, ಭಕ್ತಿಗೀತೆ, ಶಾಸ್ತ್ರೀಯ ಸಂಗೀತ ಮತ್ತು ಚಲನಚಿತ್ರ ಗೀತೆಗಳ ಮೂಲಕ ನಾಡಿನ ಮನೆಮಾತಾಗಿದ್ದಾರೆ: ಆಕಾಶವಾಣಿ (All India Radio) ಮತ್ತು ದೂರದರ್ಶನದ ಶ್ರೇಣೀಕೃತ (Graded) ಕಲಾವಿದೆಯಾಗಿರುವ ಅರ್ಚನಾ, 1998ರಲ್ಲಿ ಜೀ ಟಿವಿಯ (Zee TV) ಖ್ಯಾತ 'ಟಿವಿಎಸ್ ಸರಿಗಮಪ' (TVS Sa Re Ga Ma Pa) ಗಾಯನ ಸ್ಪರ್ಧೆಯಲ್ಲಿ ವಿಜೇತರಾಗಿದ್ದರು. ಹಿಂದಿ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆಯನ್ನು ಗೆದ್ದ ದಕ್ಷಿಣ ಭಾರತ ಮೂಲದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.














