‘ನನಗೆ ವೈಯಕ್ತಿಕವಾಗಿ ಹೆಮ್ಮೆಯ ಮತ್ತು ವಿಶೇಷ ಕ್ಷಣವೆಂದರೆ, ನನ್ನ ಸಹೋದರನ ಮಗಳು ಅಮಿತಾ ಸುಗುಣಾ ಈ ಅಸಾಧಾರಣ ಸಿನಿಮೀಯ ಪಯಣದ ಭಾಗವಾಗಿರುವುದು. ಚಿತ್ರದ ಕೆಲವು ದೃಶ್ಯ ಪರಿಣಾಮಗಳ (VFX) ಕೆಲಸಗಳಲ್ಲಿ ಕೊಡುಗೆ ನೀಡಿರುವ ಆಕೆ, ಇಷ್ಟೊಂದು ಬೃಹತ್ ಮಟ್ಟದ ಸಿನಿಮಾದೊಂದಿಗೆ ಗುರುತಿಸಿಕೊಳ್ಳುವ ಅದ್ಭುತ ಅವಕಾಶವನ್ನು ಗಳಿಸಿದ್ದಾಳೆ’ ಎಂದಿದ್ದಾರೆ ಸುಮಲತಾ. ಯಶ್ ಬಗ್ಗೆ ಏನಂದ್ರು ನೋಡಿ!

ರಾಮಾಯಣ & ಯಶ್ ಬಗ್ಗೆ ಸುಮಲತಾ ಅಂಬರೀಷ್ ಹೇಳಿದ್ದೇನು? ನೋಡಿ..

ದಕ್ಷಿಣ ಭಾರತದ ಒಂದು ಕಾಲದ ಖ್ಯಾತ ಸ್ಟಾರ್ ನಟಿ, ಕನ್ನಡದ ರೆಬಲ್ ಸ್ಟಾರ್ ಅಂಬರೀಷ್ ಪತ್ನಿ ಹಾಗೂ ಮಾಜಿ ಸಂಸದೆ ಸುಮಲತಾ ಅಂಬರೀಷ್ (Sumaklatha Ambareesh) ಅವರು 'ರಾಮಾಯಣ' ಸಿನಿಮಾ (Ramayana) ನೋಡಿ ತಮ್ಮ ಅಭಿಪ್ರಾಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸುಮಲತಾ ಅಂಬರೀಷ್ ಅವರು ಮಂಡ್ಯದ ಸಂಸದೆ ಆಗುವಲ್ಲಿ ಪ್ರಚಾರಕಾರ್ಯದ ದೃಷ್ಟಿಯಿಂದ ನಟರಾದ ಯಶ್ ಹಾಗೂ ದರ್ಶನ್ ಅವರಿಬ್ಬರೂ ಪ್ರಮುಖ ಪಾತ್ರ ವಹಿಸಿದ್ದರು. ಅಂದು 'ಜೋಡೆತ್ತು' ಎನಿಸಿದ್ದ ಈ ಇಬ್ಬರೂ ನಟರಲ್ಲಿ ಒಬ್ಬರಾದ ಯಶ್ (Rocking Star Yash) ಬಗ್ಗೆ ರಾಮಯಣ ಸಿನಿಮಾ ನೋಡಿದ ಬಳಿಕ ಸುಮಲತಾ ಅಂಬರೀಷ್ ಅವರು ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಉಲ್ಲೇಖಿಸಿ ಬರೆದಿದ್ದಾರೆ. ಅದೇನು ಅಂತ ನೋಡಿ..

ಸುಮಲತಾ ಅಂಬರೀಷ್ ಹೀಗೆ ಬರೆದಿದ್ದಾರೆ-

'ನಮ್ಮ ಅತ್ಯಂತ ಪ್ರೀತಿಯ ಮಹಾಕಾವ್ಯಗಳಲ್ಲಿ ಒಂದಾದ ರಾಮಾಯಣದ ಅದ್ಭುತ ದೃಶ್ಯ ವೈಭವದ ಸಂಭ್ರಮ!

ಕಾಲಾತೀತ ಕಥೆಯಾಗಿರುವ ರಾಮಾಯಣವನ್ನು ಇಷ್ಟೊಂದು ಅದ್ಭುತವಾದ ಸಿನಿಮೀಯ ಕ್ಯಾನ್ವಾಸ್‌ನಲ್ಲಿ ಜೀವಂತಗೊಳಿಸಿರುವುದು ನಿಜಕ್ಕೂ ಕಣ್ಣಿಗೆ ಹಬ್ಬ. ಚಿತ್ರದ ಅದ್ದೂರಿ ತಯಾರಿಕೆ, ವೈಭವ, ಬೃಹತ್ ಪ್ರಮಾಣ ಮತ್ತು ಅತ್ಯುನ್ನತ ಗುಣಮಟ್ಟದ ದೃಶ್ಯ ಪರಿಣಾಮಗಳು (VFX) ನಿಜಕ್ಕೂ ಬೆರಗುಗೊಳಿಸುವಂತಿವೆ.

ನಮ್ಮ ಪ್ರೀತಿಯ ಯಶ್ ಅವರಿಗೆ ವಿಶೇಷ ಅಭಿನಂದನೆಗಳು. ರಾವಣನ ಪಾತ್ರದಲ್ಲಿ ಅವರು ಅದ್ಭುತವಾಗಿ ನಟಿಸಿದ್ದು, ಈ ಐತಿಹಾಸಿಕ ಪಾತ್ರಕ್ಕೆ ಅಪಾರ ಗಾಂಭೀರ್ಯ ಮತ್ತು ತೀವ್ರತೆಯನ್ನು ತುಂಬಿದ್ದಾರೆ. ಅವರ ಅಭಿನಯ ಮತ್ತು ಪಾತ್ರದ ಪ್ರಭಾವ ನಿಜಕ್ಕೂ ಮೆಚ್ಚುವಂತಿದೆ.

ಇನ್ನು ನನಗೆ ವೈಯಕ್ತಿಕವಾಗಿ ಹೆಮ್ಮೆಯ ಮತ್ತು ವಿಶೇಷ ಕ್ಷಣವೆಂದರೆ, ನನ್ನ ಸಹೋದರನ ಮಗಳು ಅಮಿತಾ ಸುಗುಣಾ ಈ ಅಸಾಧಾರಣ ಸಿನಿಮೀಯ ಪಯಣದ ಭಾಗವಾಗಿರುವುದನ್ನು ನೋಡುವುದು. ಚಿತ್ರದ ಕೆಲವು ದೃಶ್ಯ ಪರಿಣಾಮಗಳ (VFX) ಕೆಲಸಗಳಲ್ಲಿ ಕೊಡುಗೆ ನೀಡಿರುವ ಆಕೆ, ಇಷ್ಟೊಂದು ಬೃಹತ್ ಮಟ್ಟದ ಸಿನಿಮಾದೊಂದಿಗೆ ಗುರುತಿಸಿಕೊಳ್ಳುವ ಅದ್ಭುತ ಅವಕಾಶವನ್ನು ಗಳಿಸಿದ್ದಾಳೆ. ಆಕೆಯ ವೃತ್ತಿಜೀವನದ ಪಯಣದಲ್ಲಿ ಇದೊಂದು ಹೆಮ್ಮೆಯ ಮತ್ತು ಸದಾ ನೆನಪಿನಲ್ಲಿ ಉಳಿಯುವ ಮೈಲಿಗಲ್ಲು!

ಇಂತಹ ಮಹತ್ವದ ಸಿನಿಮೀಯ ಅನುಭವವನ್ನು ಸೃಷ್ಟಿಸಿರುವ ಇಡೀ ಚಿತ್ರತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಈ ಅದ್ಭುತ ಪ್ರಯತ್ನಕ್ಕಾಗಿ ಚಿತ್ರತಂಡದ ಪ್ರತಿಯೊಬ್ಬರಿಗೂ ಮೆಚ್ಚುಗೆ ಮತ್ತು ಅಭಿನಂದನೆಗಳು. ಅದರಲ್ಲೂ ಕರ್ನಾಟಕದ ಹೆಮ್ಮೆಯ ಪುತ್ರ ನಮ್ಮ ಯಶ್ ಅವರಿಗೆ ವಿಶೇಷ ಅಭಿನಂದನೆಗಳು!

ಹೌದು, ಯಶ್ ನಟನೆ ಹಾಗೂ ಸಹ-ನಿರ್ಮಾಣದ ರಾಮಾಯಣ ಸಿನಿಮಾ ಜಗತ್ತಿನಾದ್ಯಂತ ಬಿಡುಗಡೆ ಕಂಡು ಬ್ಲಾಕ್ ಬಸ್ಟರ್ ಹಿಟ್ ಎನ್ನಿಸಿಕೊಂಡಿದೆ. ಕೇವಲ 17 ದಿನಗಳಲ್ಲಿ 1600 ಕೋಟಿ ರೂಪಾಯಿಗೂ ಹೆಚ್ಚಿನ ಕಲೆಕ್ಷನ್ ಕಂಡು ಸಿನಿಲೋಕದಲ್ಲಿ 10 ಹೊಸ ದಾಖಲೆ ಬರೆದಿದೆ.

ಅತಿ ವೇಗವಾಗಿ ₹1,500 ಕೋಟಿ ಗಳಿಸಿದ ದಾಖಲೆ!

‘ರಾಮಾಯಣ: ಭಾಗ 1’ ಚಿತ್ರವು ಬಿಡುಗಡೆಯಾದ ಕೇವಲ 14 ದಿನಗಳಲ್ಲಿ ವಿಶ್ವದಾದ್ಯಂತ ₹1,500 ಕೋಟಿ ಗಳಿಕೆಯ ಗಡಿಯನ್ನು ದಾಟಿದೆ. ಈ ಮೂಲಕ ಅತಿ ವೇಗವಾಗಿ ಈ ಸಾಧನೆ ಮಾಡಿದ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ರೇಸ್‌ನಲ್ಲಿ 16 ದಿನ ತೆಗೆದುಕೊಂಡಿದ್ದ 'ಧುರಂಧರ್ 2', 17 ದಿನ ತೆಗೆದುಕೊಂಡಿದ್ದ 'ಪುಷ್ಪ 2' ಹಾಗೂ 20 ದಿನ ತೆಗೆದುಕೊಂಡಿದ್ದ 'ಬಾಹುಬಲಿ 2' ಚಿತ್ರಗಳ ದಾಖಲೆಯನ್ನು ರಾಮಾಯಣ ಅಳಿಸಿಹಾಕಿದೆ.

ಜಾಗತಿಕ ಟಾಪ್-5 ಭಾರತೀಯ ಸಿನಿಮಾಗಳ ಲಿಸ್ಟ್‌ ಸೇರ್ಪಡೆ!

ವಿಶ್ವಾದ್ಯಂತ ₹1,500 ಕೋಟಿಗೂ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾಗಳ ಸಾಲಿನಲ್ಲಿ ಇದು ಐದನೇ ಚಿತ್ರವಾಗಿ ಹೊರಹೊಮ್ಮಿದೆ. 'ಧುರಂಧರ್', 'ಆರ್ಆರ್ಆರ್' ಮತ್ತು 'ಕೆಜಿಎಫ್ 2' ಚಿತ್ರಗಳ ಗಳಿಕೆಯನ್ನು ಈಗಾಗಲೇ ಹಿಂದಿಕ್ಕಿರುವ ರಾಮಾಯಣ, ಪ್ರಸ್ತುತ 1,742.1 ಕೋಟಿ ರೂ. ಗಳಿಸಿರುವ 'ಪುಷ್ಪ 2' ಸಾರ್ವಕಾಲಿಕ ದಾಖಲೆಯನ್ನು ಮೀರುವುದು ಪಕ್ಕಾ ಎನ್ನಿಸಿದೆ.

ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ₹1,000 ಕೋಟಿ ಕ್ಲಬ್!

ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ₹1,000 ಕೋಟಿ ನಿವ್ವಳ ಗಳಿಕೆ ಸಾಧಿಸಿದ ಆರನೇ ಭಾರತೀಯ ಸಿನಿಮಾ ಇದಾಗಿದೆ. ಈ ಹಿಂದೆ 'ಬಾಹುಬಲಿ 2', 'ಕೆಜಿಎಫ್ 2', 'ಪುಷ್ಪ 2', 'ಧುರಂಧರ್' ಮತ್ತು 'ಧುರಂಧರ್ 2' ಮಾತ್ರ ಈ ಐತಿಹಾಸಿಕ ಮೈಲಿಗಲ್ಲು ತಲುಪಿದ್ದವು. ರಣಬೀರ್, ಸಾಯಿ ಪಲ್ಲವಿ ಹಾಗೂ ನಿತೇಶ್ ತಿವಾರಿಗೆ ವೃತ್ತಿಜೀವನದ ಬಿಗ್ಗೆಸ್ಟ್ ಓಪನಿಂಗ್ ಚಿತ್ರವು ಮೊದಲ ದಿನವೇ ಭಾರತದಲ್ಲಿ ₹64.85 ಕೋಟಿ ನಿವ್ವಳ ಗಳಿಕೆ ಮಾಡುವ ಮೂಲಕ ರಣಬೀರ್ ಕಪೂರ್ ವೃತ್ತಿಜೀವನದ ಅತಿದೊಡ್ಡ ಓಪನಿಂಗ್ ಪಡೆದ ಸಿನಿಮಾ ಎನಿಸಿಕೊಂಡಿದೆ. ಈ ಹಿಂದೆ ₹63.80 ಕೋಟಿ ಗಳಿಸಿದ್ದ ಅವರ 'ಅನಿಮಲ್' ದಾಖಲೆ ಮುಳುಗಿದೆ. ಜೊತೆಗೆ ನಟಿ ಸಾಯಿ ಪಲ್ಲವಿ ಹಾಗೂ ನಿರ್ದೇಶಕ ನಿತೇಶ್ ತಿವಾರಿ ಅವರಿಗೂ ಇದು ವೃತ್ತಿಜೀವನದ ಸಾರ್ವಕಾಲಿಕ ಗರಿಷ್ಠ ಓಪನಿಂಗ್ ಆಗಿದೆ.

ಒಂದೇ ದಿನದಲ್ಲಿ ₹100 ಕೋಟಿ ದಾಟಿದ 2ನೇ ಭಾರತೀಯ ಚಿತ್ರ!

ಬಿಡುಗಡೆಯಾದ 5ನೇ ದಿನದಂದು (ಭಾನುವಾರ) ಬರೋಬ್ಬರಿ ₹107.50 ಕೋಟಿ ನಿವ್ವಳ ಗಳಿಕೆ ಮಾಡುವ ಮೂಲಕ, ರಣವೀರ್ ಸಿಂಗ್ ಅವರ 'ಧುರಂಧರ್ 2' ನಂತರ ಒಂದೇ ದಿನದಲ್ಲಿ ₹100 ಕೋಟಿ ನಿವ್ವಳ ಗಳಿಕೆಯ ಗಡಿ ದಾಟಿದ ಭಾರತದ 2ನೇ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಎರಡನೇ ವಾರಾಂತ್ಯದಲ್ಲಿ ಸಾರ್ವಕಾಲಿಕ ಗರಿಷ್ಠ ಕಲೆಕ್ಷನ್!

ಎರಡನೇ ವಾರಾಂತ್ಯದಲ್ಲಿ ಎಲ್ಲಾ ಭಾಷೆಗಳಿಂದ ಒಟ್ಟು ₹196 ಕೋಟಿ ನಿವ್ವಳ ಗಳಿಕೆ ಕಾಣುವ ಮೂಲಕ 'ಧುರಂಧರ್ 2' ಹೆಸರಿನಲ್ಲಿದ್ದ ದಾಖಲೆಯನ್ನು ಧೂಳೀಪಟ ಮಾಡಿದೆ. ದಕ್ಷಿಣ ಭಾರತದಲ್ಲಿ ₹50 ಕೋಟಿ ಗಳಿಸಿದ ಪ್ರಥಮ ಬಾಲಿವುಡ್ ಚಿತ್ರ ರಾಮಾಯಣ ಆಗಿದೆ. ಹಿಂದಿ ಬೆಲ್ಟ್‌ನಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತೆಲಂಗಾಣ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದಲ್ಲೂ ತಲಾ ₹50 ಕೋಟಿಗೂ ಹೆಚ್ಚು ಗಳಿಸಿದ ಮೊದಲ ಬಾಲಿವುಡ್ ಚಿತ್ರ ಎಂಬ ಐತಿಹಾಸಿಕ ಹೆಗ್ಗಳಿಕೆ ಪಡೆದುಕೊಂಡಿದೆ.