ನೆಪೊಟಿಸಂ ಅಂದ್ರೆ ಬಲದಿಂದ ತುಳಿಯೋದು; ಗೇಲಿ ಮಾಡಬೇಡಿ ಎಂದ ಯಶ್
ಹುಟ್ಟುಹಬ್ಬದಂದು ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಘೋಷಣೆ ಸಾಧ್ಯತೆ.ಬಾಲಿವುಡ್ ಗೇಲಿ ಮಾಡುವುದು ಬೇಡ ಎಂದಿದ್ದಾರೆ.

‘ಬಾಲಿವುಡ್ ಇವತ್ತು ಅನುಭವಿಸಿರುವ ಸ್ಥಿತಿಯನ್ನು ಹಿಂದೆ ನಾವೂ ಅನುಭವಿಸಿದ್ದೇವೆ. ಆ ಸಮಸ್ಯೆಯನ್ನು ಮೆಟ್ಟಿನಿಲ್ಲಲು ಹೆಣಗಾಡಿದ್ದೇವೆ. ಇಂದು ಅದರಲ್ಲಿ ಯಶಸ್ವಿ ಆಗಿದ್ದೇವೆ. ಆದರೆ ಇಂದು ಆ ಸ್ಥಿತಿಯಲ್ಲಿರುವ ಬಾಲಿವುಡ್ ಅನ್ನು ನಾವು ಗೇಲಿ ಮಾಡಬಾರದು, ಆ ಇಂಡಸ್ಟ್ರಿಯವರಿಗೆ ಅವಮಾನ ಆಗೋ ಹಾಗೆ ಮಾತಾಡಬಾರದು. ಸೌತ್, ನಾತ್‌ರ್ ಅನ್ನೋ ಈ ವ್ಯತ್ಯಾಸ, ಪೂರ್ವಾಗ್ರಹಗಳನ್ನೆಲ್ಲ ಅಳಿಸಿ ಜಗತ್ತಿಗೆ ಭಾರತ ಚಿತ್ರರಂಗದ ಸಾಮರ್ಥ್ಯ ಏನು ಅನ್ನೋದನ್ನ ತೋರಿಸೋಣ’.
ರಾಕಿಂಗ್ ಸ್ಟಾರ್ ಯಶ್ ಖಾಸಗಿ ಯೂಟ್ಯೂಬ್ ಚಾನಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ ಮಾತುಗಳಿವು. ತನ್ನ ಮುಂದಿನ ಸಿನಿಮಾದ ಬಗ್ಗೆ ಎಂದಿನಂತೆ ಇಲ್ಲೂ ಹಿಂಟ್ ಬಿಟ್ಟುಕೊಡದ ಯಶ್, ‘ಜ.8ರ ನನ್ನ ಜನ್ಮದಿನದಂದು ಹೊಸ ಸಿನಿಮಾ ಅನೌನ್ಸ್ ಮಾಡ್ತೀನಿ ಅಂತ ಜನ ಕಾಯ್ತಿದ್ದಾರೆ. ಅವರ ಆಸೆ ಈಡೇರಿಸೋದು ನನ್ನ ಬಾಧ್ಯತೆ. ಆದರೆ ಕೆಲಸ ಪೂರ್ತಿ ಆಗದೇ ನನ್ನಿಂದ ಏನನ್ನೂ ನಿರೀಕ್ಷಿಸಬೇಡಿ’ ಎಂದೂ ಹೇಳಿದ್ದಾರೆ. ಅವರ ಮಾತುಗಳು ಇಲ್ಲಿವೆ.
- ನನ್ನ ಪ್ರಕಾರ ನೆಪೊಟಿಸಂ ಅಂದರೆ ತನ್ನ ಹಿನ್ನೆಲೆಯ ಬಲದಿಂದ ಉಳಿದವರನ್ನು ತುಳಿಯೋದು. ಅದನ್ನು ಮಾಡದೇ ಪ್ರತಿಭೆ, ಮೆರಿಟ್ ಇದ್ದರೆ ಇಂಡಸ್ಟ್ರಿಯಲ್ಲಿ ಯಾರು ಬೇಕಿದ್ದರೂ ಸಿನಿಮಾ ಮಾಡಬಹುದು.
ಬೇರೆ ಚಿತ್ರರಂಗವನ್ನು ತೆಗಳಬೇಡಿ, ಬಾಲಿವುಡ್‌ಅನ್ನು ಗೌರವಿಸಿ; ಕನ್ನಡ ಅಭಿಮಾನಿಗಳಿಗೆ ಯಶ್ ಮನವಿ
- ನನ್ನ ಸಕ್ಸಸ್ ಅನ್ನು ನಾನೇ ಹೇಳಿಕೊಳ್ಳೋದು ನನಗೆ ಇಷ್ಟಇಲ್ಲ. ಯಶಸ್ವಿ ಆದರೆ ಜನರಿಗೆ ಅದು ತಿಳಿದೇ ತಿಳಿಯುತ್ತದೆ. ಹೀಗಾಗಿ ನಾನು ಸಿನಿಮಾ ಸಕ್ಸಸ್ ಬಗ್ಗೆ ಮಾತಾಡೋದು ಕಡಿಮೆ.
- ಕೆಲವು ಸಿನಿಮಾ ಬಹಳ ಇಷ್ಟಪಡ್ತೀನಿ. ಆದರೆ ಅದರಲ್ಲಿ ನಟನೆ ಮಾಡೋಕೆ ಇಷ್ಟಇಲ್ಲ. ಇಂಥ ಸಿನಿಮಾಗಳನ್ನು ನಿರ್ಮಾಣ ಮಾಡಬಲ್ಲೆ. ನನ್ನ ನಟನೆ ಆಯ್ಕೆ ಬಗ್ಗೆ ನನಗೆ ಸ್ಪಷ್ಟತೆ ಇದೆ. ನನ್ನ ಸಿನಿಮಾ ರೋಲರ್ ಕೋಸ್ಟರ್ ರೈಡ್. ನೀವು ರೆಡಿಯಾಗಿ ಬರ್ಬೇಕು, ಬೆಲ್ಟ್ ಹಾಕ್ಕೊಳ್ಳಬೇಕು.
- ಒಂದು ಕಾಲದಲ್ಲಿ ಇಂಡಿಯನ್ ಕ್ರಿಕೆಟ್ ಟೀಮ್‌ನಲ್ಲಿ ಕರ್ನಾಟಕದ 11 ಆಟಗಾರರು ಇದ್ದರು. ಇಂಡಿಯನ್ ಸಿನಿಮಾ ಇಂಡಸ್ಟ್ರಿಯೂ ಹಾಗಾಗಬೇಕು ಅನ್ನೋದು ನನ್ನ ಕನಸು.ನನ್ನ ಇಂಡಸ್ಟ್ರಿಯ ಪ್ರತೀ ನಟರೂ ಪ್ಯಾನ್ ಇಂಡಿಯಾ ಸ್ಟಾರ್ ಆಗಬೇಕು. ಸ್ವಲ್ಪ ಸಪೋರ್ಚ್, ಮಾರ್ಕೆಂಟಿಂಗ್ ಬೆಂಬಲ ಸಿಕ್ಕರೆ ನಮ್ಮ ಹುಡುಗರು ಭಾರತೀಯ ಸಿನಿಮಾ ಇಂಡಸ್ಟ್ರಿಯನ್ನು ಆಳ್ತಾರೆ.
- ಮುಂದೇನು ಅಂತ ಬಹಳ ಜನ ಕೇಳ್ತಾರೆ. ನನ್ನ ಸ್ನೇಹಿತರೇ ಸುಮ್ನೆ ಏನ್ ಮಾಡ್ತಿದ್ದೀಯಾ, ಈ ಹೆಸರು, ಖ್ಯಾತಿಯನ್ನಿಟ್ಟು ಇನ್ನೊಂದು ಸಿನಿಮಾ ಘೋಷಿಸಬಾರದಾ ಅಂತ ಕೇಳ್ತಾರೆ. ಆದರೆ ಹಣ ಮಾಡೋದು ನನ್ನ ಗುರಿ ಅಲ್ಲ. ಸಿನಿಮಾ ನನ್ನ ಎಕ್ಸೈಟ್ ಮಾಡ್ಬೇಕು. ಜನ ಬಯಸಿದ್ದನ್ನು ನಾನು ಸವ್‌ರ್ ಮಾಡಬೇಕು. ಬಹಳ ಬ್ಯೂಟಿಫುಲ್ ಆಗಿ ಸವ್‌ರ್ ಮಾಡಬೇಕು ಅನ್ನೋದು ಆಸೆ. ಅದಕ್ಕಾಗಿಯೇ ನನ್ನ ಸಿನಿಮಾ ಅರೆಬರೆಯಾಗಿರುವಾಗ ಅನೌನ್ಸ್ ಮಾಡಲ್ಲ. ಒಂದು ಹಂತಕ್ಕೆ ಬಂದ ಮೇಲೆ ಹೇಳುತ್ತೇನೆ.
- ಹಾಲಿವುಡ್ ನನ್ನ ಗುರಿಯಲ್ಲ. ಆದರೆ ಹಾಲಿವುಡ್ ಭಾರತದತ್ತ ತಿರುಗಿ ನೋಡುವಂಥಾ ಸಿನಿಮಾ ಮಾಡೋದು ನನ್ನ ಗುರಿ.
ಕಾಂತಾರ ಗೆಲುವು ರಿಷಬ್‌ಗೆ ಸಲ್ಲಬೇಕಾಗಿದ್ದು
ಒಂದು ಕೆಜಿಎಫ್ ಇಂಡಸ್ಟ್ರಿಯನ್ನು ಬದಲಿಸೋದಿಲ್ಲ. ಕಾಂತಾರ ನೆಕ್ಸ್ಟ್‌ಲೆವೆಲ್‌ಗೆ ಬೆಳೆದಾಗ ಬಹಳ ಖುಷಿ ಆಗಿತ್ತು. ಈ ವಿಜಯ ರಿಷಬ್‌ನಂಥಾ ಪ್ರತಿಭೆಗೆ ಸಲ್ಲಲೇಬೇಕಾದದ್ದು. ಅವರು ಮಾಡಿರೋ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಹಳ ಚೆನ್ನಾಗಿರುವ ಇನ್ನೊಂದು ಚಿತ್ರ. ಲೂಸಿಯಾ, ಗರುಡ ಗಮನದಂಥಾ ಚಿತ್ರಗಳು ಕನ್ನಡ ಚಿತ್ರರಂಗವನ್ನು ಬೆಳೆಸಿವೆ. ಕೆಜಿಎಫ್ ಬಜೆಟ್ ಸಿನಿಮಾಗಳ ಮಿಥ್ ಅನ್ನು ಒಡೆದುಹಾಕಿತು. ಆ ಕೆಲಸ ಮಾಡಿದ ಮತ್ತೊಂದು ಸಿನಿಮಾ ಕಾಂತಾರ. ನಮಗಿಂತ ಕಡಿಮೆ ಬಜೆಟ್‌ನಲ್ಲಿ ಬಂದು ಆ ಸಿನಿಮಾ ಸಾಧನೆ ಮಾಡಿತು.