ಡಾ ರಾಜ್ಕುಮಾರ್ ಅವರು ಕೇವಲ ನಟರಾಗಿ ಮಾತ್ರವಲ್ಲದೇ ತಮ್ಮ ಅಪರೂಪದ ವ್ಯಕ್ತಿತ್ವದ ಮೂಲಕವೂ 'ಅನ್ಣಾವ್ರು' ಎನ್ನಿಸಿಕೊಳ್ಳುವಂತೆ ಬೆಳೆದರು. ಇಡೀ ನಾಡು, ದೇಶ ಅಷ್ಟೇ ಏಕೆ, ಇಂದು ಪ್ರಪಂಚದಾದ್ಯಂತ ಅವರ ಹೆಸರಿಗೆ ಇರುವ ಖ್ಯಾತಿ ಹಾಗೂ ಭಕ್ತಿಭಾವ ಅವರ ಅಪರಂಜಿಯಂಥ ಮೇರುಗುಣದಿಂದಲೇ ಬಂದಿದ್ದು.
ಮೇರುನಟ ಡಾ ರಾಜ್ಕುಮಾರ್ ಕಿಸೆಯಲ್ಲಿ ಒಂದು ರೂಪಾಯಿಯೂ ಇರುತ್ತಿರಲಿಲ್ಲವಂತೆ!
ಕನ್ನಡದ ವರನಟ ಡಾ ರಾಜ್ಕುಮಾರ್, ಕರ್ನಾಟಕ ರತ್ನ ಅಣ್ಣವ್ರು (Dr Rajkumar) ಯಾರಿಗೆ ತಾನೇ ಗೊತ್ತಿಲ್ಲ. ಕನ್ನಡನಾಡಿನ ಹೊರಗೂ ಕೂಡ ಇಡೀ ದೇಶದಲ್ಲಿ ಅವರ ಹೆಸರು ಹೇಳಿದರೆ ಸಾಕು, ಹಲವು ಘಟನೆಗಳು, ನೆನಪುಗಳು ಹಿರಿಯ ತಲೆಮಾರಿನ ಜನರ ಬಾಯಿಂದ ಹೊರಬರುತ್ತವೆ. ಅಂಥ ಅಣ್ಣಾವ್ರು ಎಂದೂ ದುಡ್ಡಿನ ಹಿಂದೆ ಹೋಗಿರಲಿಲ್ಲ, ಹಣದ ವ್ಯಾಮೋಹ ಬೆಳೆಸಿಕೊಂಡಿರಲಿಲ್ಲ ಅನ್ನೋದು ಕೆಲವರಿಗೆ ಗೊತ್ತು, ಹಲವರಿಗೆ ಗೊತ್ತಿಲ್ಲ!
ಕನ್ನಡದ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಅಮೋಘ ನಟ
ಹೌದು, ಡಾ ರಾಜ್ಕುಮಾರ್ ಅವರು ಕನ್ನಡದ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಅಮೋಘ ನಟ. ಇಂಥ ನಟ ಅಣ್ಣಾವ್ರಿಗೆ ಇಡೀ ಜಗತ್ತಿನ ತುಂಬೆಲ್ಲಾ ಅಭಿಮಾನಿಗಳು ಇದ್ದಾರೆ ಎಂಬುದು ಕೂಡ ಹೊಸ ಸಂಗತಿಯೇನೂ ಅಲ್ಲ. ಡಾ ರಾಜ್ಕುಮರ್ ಅವರು ತಾವು ನಟಿಸಿದ ಸಿನಿಮಾಗಳಿಗೆ ಹೆಚ್ಚು ಸಂಭಾವನೆ ಕೂಡ ತೆಗೆದುಕೊಂಡವರಲ್ಲ. ಆದರೆ, ಅವರ ಪತ್ನಿ ಶ್ರೀಮತಿ ಪಾರ್ವತಮ್ಮನವರು ತಮ್ಮದೇ ಹೋಮ್ಬ್ಯಾನರ್ (ವಜ್ರೇಶ್ವರಿ ಕಂಬೈನ್ಸ್) ಮಾಡಿ, ಆ ಮೂಲಕ ಸಿನಿಮಾ ನಿರ್ಮಾಣ ಮಾಡಿ ಸಾಕಷ್ಟು ಹಣ ಸಂಪಾದನೆ ಮಾಡಿ ಕುಟುಂಬದ ನಿರ್ವಹಣೆ ಹಾಗೂ ಲಾಭ ಗಳಿಸುತ್ತಿದ್ದರು. ಆದರೆ, ಡಾ ರಾಜ್ಕುಮಾರ್ ಅವರು ಯಾವತ್ತೂ ಸಿನಿಮಾ ನಟನೆ ಬಿಟ್ಟರೆ ಕಾಸನ್ನು ಕೈನಲ್ಲಿ ಹೆಚ್ಚಾಗಿ ಮುಟ್ಟುತ್ತಲೇ ಇರಲಿಲ್ಲ ಎಂದು ಅವರ ಸಹಕಲಾವಿದರು ಹಾಗೂ ಆಪ್ತರು ಹೇಳುತ್ತಾರೆ.
ಮೊದಲೆಲ್ಲಾ ಬೇರೆ ನಿರ್ಮಾಪಕರ ಸಿನಿಮಾಗಳಲ್ಲಿ ನಟಿಸುತ್ತಿದ್ದ ನಟ ಡಾ ರಾಜ್ಕುಮಾರ್ ಸಿಕ್ಕ ಹಣದಲ್ಲೇ ತೃಪ್ತರಾಗಿ ಇರುತ್ತಿದ್ದರು. ಚಿತ್ರರಂಗದ ಕೆಲವು ಅನಗತ್ಯ ಬೆಳವಣಿಗೆಗಳನ್ನು ಗಮನಸಿದ ಅವರ ಧರ್ಮಪತ್ನಿ ಪಾರ್ವತಮ್ಮನವರು ತಾವೇ ಸ್ವತಃ ನಿರ್ಮಾಣ ಸಂಸ್ಥೆ ಮಾಡಿ ಚಿತ್ರನಿರ್ಮಾಣಕ್ಕೆ ಇಳಿದರು. ಸಿನಿಮಾಗಳ ಮೂಲಕ ಚಿತ್ರರಂಗವನ್ನು ಬೆಳೆಸುವುದರ ಜೊತೆಗೆ ತಮ್ಮ ಸಂಸ್ಥೆಯನ್ನೂ ಕಟ್ಟಿ ಬೆಳೆಸಿದರು. ಡಾ ರಾಜ್ಕುಮಾರ್ ಸೇರಿದಂತೆ ಮುಂದೆ ಮಕ್ಕಳಾದ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಅವರುಗಳಿಗೆ ಸಿನಿಮಾ ನಿರ್ಮಾಣ ಮಾಡುತ್ತ ಕನ್ನಡದ ಖ್ಯಾತ ನಿರ್ಮಾಪಕಿ ಎನ್ನಿಸಿಕೊಂಡರು ಪಾರ್ವತಮ್ಮನವರು.
ಜೇಬಿನಲ್ಲಿ ಒಂದು ಬಿಡಿಗಾಸನ್ನೂ ಕೂಡ ಇಟ್ಟುಕೊಳ್ಳುತ್ತಿರಲಿಲ್ಲ ಏಕೆ?
ಆದರೆ, ಡಾ ರಾಜ್ಕುಮಾರ್ ಅವರು ಯಾವತ್ತೂ ತಮ್ಮ ಜೇಬಿನಲ್ಲಿ ಒಂದು ಬಿಡಿಗಾಸನ್ನೂ ಕೂಡ ಇಟ್ಟುಕೊಳ್ಳುತ್ತಿರಲಿಲ್ಲವಂತೆ. ದೇವಸ್ಥಾನಕ್ಕೆ ಹಾಗೂ ಕೆಲವು ಕಡೆ ಹೋದಾಗ ಅಗತ್ಯವಿದ್ದರೆ ತಮ್ಮ ಜೊತೆಗಿದ್ದವರು ಕೊಟ್ಟ ಕಾಸನ್ನು ಬಳಸಿಕೊಂಡು ತಮ್ಮ ಕೆಲಸ ಮುಗಿಸಿಕೊಳ್ಳುತ್ತಿದ್ದರಂತೆ. ಆದರೆ, ಬೇರೆಯವರಿಂದ ತಾವು ತೆಗೆದುಕೊಂಡ ಕಾಸನ್ನು ತಾವು ಮನೆಗೆ ಮರಳಿದ ತಕ್ಷಣ ವಾಪಸ್ ಕೊಡುವುದನ್ನು ಎಂದೂ ಮರೆಯುತ್ತಿರಲಿಲ್ಲ ಎಂಬುದು ಅವರಿಗೆ ಅಂದು ಸಹಾಯ ಮಾಡಿದ ಪ್ರತಿಯೊಬ್ಬರೂ ಹೇಳಿದ್ದಾರೆ.
ಡಾ ರಾಜ್ಕುಮಾರ್ ಅವರು ಕೇವಲ ನಟರಾಗಿ ಮಾತ್ರವಲ್ಲದೇ ತಮ್ಮ ಅಪರೂಪದ ವ್ಯಕ್ತಿತ್ವದ ಮೂಲಕವೂ 'ಅನ್ಣಾವ್ರು' ಎನ್ನಿಸಿಕೊಳ್ಳುವಂತೆ ಬೆಳೆದರು. ಇಡೀ ನಾಡು, ದೇಶ ಅಷ್ಟೇ ಏಕೆ, ಇಂದು ಪ್ರಪಂಚದಾದ್ಯಂತ ಅವರ ಹೆಸರಿಗೆ ಇರುವ ಖ್ಯಾತಿ ಹಾಗೂ ಭಕ್ತಿಭಾವ ಅವರ ಅಪರಂಜಿಯಂಥ ಮೇರುಗುಣದಿಂದಲೇ ಬಂದಿದ್ದು. ಇಂದು ಡಾ ರಾಜ್ಕುಮಾರ್ ಅವರು ದೈಹಿಕವಾಗಿ ನಮ್ಮೊಂದಿಗಿಲ್ಲ. ಆದರೆ, ಅವರ ಸಿನಿಮಾಗಳು, ಮೇರು ವ್ಯಕ್ತಿತ್ವ ಹಾಗೂ ಅವರೊಂದಿಗೆ ಒಡನಾಡಿದ ಹಲವರ ಮಾತುಗಳ ಮೂಲಕ ಜೀವಂತವಾಗಿದ್ದಾರೆ.
















