'ಕಾಟನ್‌ಪೇಟೆ' ಚಿತ್ರದ ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಕನಕಪುರ ಶ್ರೀನಿವಾಸ್, ನಿರ್ದೇಶಕ ಪ್ರೇಮ್ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಪ್ರೇಮ್ ನಿರ್ಮಾಪಕರನ್ನು ಹಾಳುಮಾಡಿದ್ದಾರೆ ಎಂದ ಅವರು, ನಟ ಧ್ರುವ ಸರ್ಜಾ ಹಾಗೂ ಇಂದಿನ ನಟರ ವರ್ತನೆ ಬಗ್ಗೆಯೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರು (ಫೆ.05): 'ನೀನು ಊರಿನಲ್ಲಿ ಎಮ್ಮೆ, ಕುರಿ ಮೇಯಿಸುತ್ತಿದ್ದಿದ್ದು ನನಗೆಲ್ಲಾ ಗೊತ್ತಿದೆ. ಇಂದು ನಿರ್ಮಾಪಕರ ತಲೆ ಹೊಡೆದು ನೂರಾರು ಕೋಟಿ ಆಸ್ತಿ ಮಾಡಿ ಆರಾಮಾಗಿದ್ದೀಯಾ. ಆದರೆ ನಿನಗೆ ಸಿನಿಮಾ ಮಾಡಿದ ಯಾವೊಬ್ಬ ನಿರ್ಮಾಪಕನೂ ಉದ್ದಾರ ಆಗಿಲ್ಲ' ಎಂದು ನಿರ್ದೇಶಕ ಪ್ರೇಮ್ ವಿರುದ್ಧ ನಿರ್ಮಾಪಕ ಕನಕಪುರ ಶ್ರೀನಿವಾಸ್ ಗಂಭೀರ ಆರೋಪ ಮಾಡಿದರು. ಜೊತೆಗೆ, ಹೀರೋಗಳ ಮೇಲೆ ಕೋಟಿ ಕೋಟಿ ಹಣ ಸುರಿದು ಸಿನಿಮಾ ಮಾಡ್ತೇವೆ. ಆದರೆ, ಈಗಿನ ಹೀರೋಗಳು ಬೀದಿಯಲ್ಲಿ ಹೋಗಿ ಜನರ ಮುಂದೆ ಕುಣಿದರೆ, ಯಾವ ಜನರು ತಾನೇ ಹಣ ಕೊಟ್ಟು ಅವರ ಸಿನಿಮಾ ನೋಡುವುದಕ್ಕೆ ಚಿತ್ರಮಂದಿರಕ್ಕೆ ಬರುತ್ತಾರೆ ಹೇಳಿ. ಸಿನಿಮಾ ನಾಯಕರು ಮನೆಯಲ್ಲಿ ಕೂರಬೇಕು ಎಂದು ಹೇಳಿದರು.

Add Asianetnews Kannada as a Preferred SourcegooglePreferred

ಪ್ರೇಮ್ ನಂಬಿ ಸಿನಿಮಾ ಮಾಡಿದವರೆಲ್ಲಾ ಸರ್ವನಾಶ

'ಕಾಟನ್‌ಪೇಟೆ' ಚಿತ್ರದ ಸುದ್ದಿಗೋಷ್ಠಿಯಲ್ಲಿ ಅಕ್ಷರಶಃ ರಂಪಾಟ ನಡೆಸಿದ್ದಾರೆ. ಹಿರಿಯ ನಿರ್ಮಾಪಕ ಎನ್ನುವ ಜವಾಬ್ದಾರಿಯನ್ನು ಮರೆತು ಚಿತ್ರರಂಗದ ಸ್ಟಾರ್ ನಿರ್ದೇಶಕರು, ನಟರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ. 'ಎಕ್ಸ್‌ಕ್ಯೂಸ್ ಮೀ ಚಿತ್ರದ ನಿರ್ಮಾಪಕ, ಕರಿಯಾ ಚಿತ್ರದ ನಿರ್ಮಾಪಕರು ಸೇರಿದಂತೆ ಪ್ರೇಮ್ ನಂಬಿ ಸಿನಿಮಾ ಮಾಡಿದವರೆಲ್ಲರೂ ಸರ್ವನಾಶವಾಗಿದ್ದಾರೆ. ನನ್ನ ಹತ್ತಿರವೇ 10 ಲಕ್ಷ ರೂಪಾಯಿ ಪಡೆದು 18 ವರ್ಷಗಳಾಗಿವೆ, ಇವತ್ತಿನವರೆಗೂ ಹಣ ಹಿಂತಿರುಗಿಲ್ಲ. ಫೋನ್ ಮಾಡಿದರೆ ರಿಸೀವ್ ಮಾಡಲ್ಲ. ನೀನು ಗಂಡಸಾಗಿದ್ದರೆ ನನ್ನ ಎದುರಿಗೆ ಬಾ' ಎಂದು ಬಹಿರಂಗ ಸವಾಲು ಹಾಕಿದರು. ಅಷ್ಟೇ ಅಲ್ಲದೆ, ನಟ ದರ್ಶನ್ ಜೈಲಿಗೆ ಹೋಗಿರುವುದಕ್ಕೂ ಪರೋಕ್ಷವಾಗಿ ಪ್ರೇಮ್ ಅವರೇ ಕಾರಣ ಎಂಬರ್ಥದಲ್ಲಿ ಮಾತನಾಡಿ ಅಚ್ಚರಿ ಮೂಡಿಸಿದರು.

ಸ್ಟಾರ್ ನಟರ ವಿರುದ್ಧವೂ ಗರಂ:

ತಮ್ಮ 'ಕಾಟನ್‌ಪೇಟೆ' ಸಿನಿಮಾ ಬಿಡುಗಡೆಗೆ ಎದುರಾಗಿರುವ ಸಂಕಷ್ಟಗಳ ಬಗ್ಗೆ ಮಾತನಾಡುತ್ತಾ, ನಟ ಧ್ರುವ ಸರ್ಜಾ ಮೇಲೂ ಸಿಟ್ಟಿಗೆದ್ದರು. 'ಧ್ರುವ ಸರ್ಜಾ ಸಿನಿಮಾ ಪ್ರಚಾರಕ್ಕೆ ಬರುತ್ತಿಲ್ಲ. ರಾಜ್‌ಕುಮಾರ್ ಕುಟುಂಬದಿಂದ ಹಿಡಿದು ಇವತ್ತಿನ ನಟರವರೆಗೂ ಯಾರೂ ನಿರ್ಮಾಪಕರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ' ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ದರ್ಶನ್ ಜೈಲಿನಲ್ಲಿರುವಾಗಲೇ ಸಿನಿಮಾ ರಿಲೀಸ್ ಮಾಡುತ್ತಿರುವುದರ ಬಗ್ಗೆಯೂ ಅಸಮಾಧಾನ ಹೊರಹಾಕಿದರು.

ಹೀರೋಗಳು ಮನೆಯಲ್ಲಿ ಕೂರಬೇಕು

ಡಾ. ರಾಜ್ ಕುಮಾರ್ ಅವರು ಸಿನಿಮಾ ಮಾಡುವುದಕ್ಕೆ ಬಿಟ್ಟರೆ ಬೇರೆ ಯಾವ ಸಮಯದಲ್ಲಿಯೂ ಮನೆಯಿಂದ ಹೊರಗೆ ಬರುತ್ತಿರಲಿಲ್ಲ. ಅವರು ಜನ ನನ್ನನ್ನು ಸಿನಿಮಾ ಮಂದಿರದಲ್ಲಿಯೇ ನೋಡಬೇಕು ಎಂದು ಕಾಯುತ್ತಿದ್ದರು. ಆದರೆ, ಇಂದಿನ ಬಹುತೇಕ ಸಿನಿಮಾ ನಟರು ಬೀದಿಯಲ್ಲಿ ಬಂದು ಕುಣಿಯುತ್ತಾರೆ. ಬೀದಿಗಳನ್ನು ಹೀರೋಗಳನ್ನು ನೋಡಿದ ಜನರಿಗ ಅವರನ್ನೇಕೆ ಥಿಯೇಟರ್‌ಗೆ ಹೋಗಿ ನೋಡಬೇಕು ಎಂಬ ಭಾವನೆ ಬರುತ್ತದೆ. ನಾವು ಕೋಟಿ ಕೋಟಿ ಹಾಕಿ ಹೀರೋ ಇಟ್ಟುಕೊಂಡು ಸಿನಿಮಾ ಮಾಡಿದರೆ, ಇವರು ಬೀದಿಯಲ್ಲಿ ಕುಣಿದು ನಿರ್ಮಾಪಕರಿಗೆ ಲಾಸ್ ಮಾಡುತ್ತಾರೆ ಎಂಬ ಗಂಭೀರ ಆರೋಪ ಮಾಡದರು.

ಡಿಕೆಶಿಗೆ ಪೆಟ್ರೋಲ್‌ಗೂ ಕಾಸಿರಲಿಲ್ಲ!

ರಾಜಕೀಯ ನಾಯಕರನ್ನೂ ಬಿಡದ ಶ್ರೀನಿವಾಸ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧವೂ ಹರಿಹಾಯ್ದರು. 'ನಾನೇ ಒರಿಜಿನಲ್ ಕನಕಪುರ ಬಂಡೆ. ನನ್ನ ಹೆಸರು ಫೇಮಸ್ ಆದಮೇಲೆ ಡಿಕೆಶಿ ಆ ಹೆಸರನ್ನು ಬಳಸಿಕೊಂಡರು. ಶಿವಕುಮಾರ್ ತಂದೆ ಕೆಂಪೇಗೌಡರು ಟೆಂಟ್ ಸಿನಿಮಾ ಇಟ್ಟುಕೊಂಡಿದ್ದವರು. ಡಿಕೆಶಿ ಬಳಿ ಜಾವಾ ಬೈಕ್ ಇತ್ತು, ಅದಕ್ಕೆ ಪೆಟ್ರೋಲ್ ಹಾಕಿಸಲೂ ಅವರ ಬಳಿ ಕಾಸಿರುತ್ತಿರಲಿಲ್ಲ. ನಾನೇ ಎಷ್ಟೋ ಬಾರಿ ಪೆಟ್ರೋಲ್‌ಗೆ ಹಣ ಕೊಟ್ಟಿದ್ದೇನೆ' ಎಂದು ಉಪಮುಖ್ಯಮಂತ್ರಿಗಳ ಹಳೆಯ ದಿನಗಳನ್ನು ಕೆದಕಿ ಲೇವಡಿ ಮಾಡಿದರು.

ಒಟ್ಟಾರೆಯಾಗಿ, ಕಾಟನ್‌ಪೇಟೆ ಪತ್ರಿಕಾಗೋಷ್ಠಿಯು ಸಿನಿಮಾ ಪ್ರಚಾರಕ್ಕಿಂತ ಹೆಚ್ಚಾಗಿ, ಕನಕಪುರ ಶ್ರೀನಿವಾಸ್ ಅವರ ವೈಯಕ್ತಿಕ ದ್ವೇಷ ಮತ್ತು ಆಕ್ರೋಶದ ವೇದಿಕೆಯಾಗಿ ಮಾರ್ಪಟ್ಟಿತ್ತು. ವೇದಿಕೆಯ ಮೇಲೆಯೇ ಅವರು ತೋರಿದ ವರ್ತನೆ ಮತ್ತು ಬಳಸಿದ ಭಾಷೆ ಚಿತ್ರರಂಗದ ವಲಯದಲ್ಲಿ ತೀವ್ರ ಮುಜುಗರ ಮತ್ತು ಚರ್ಚೆಗೆ ಕಾರಣವಾಗಿದೆ.