ಚಲನಚಿತ್ರ ನಿರ್ಮಾಪಕ ಕನಕಪುರ ಶ್ರೀನಿವಾಸ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ತಾವೇ ಮೂಲ 'ಕನಕಪುರ ಬಂಡೆ' ಎಂದಿರುವ ಅವರು, ಹಿಂದೆ ಡಿಕೆಶಿಗೆ ಪೆಟ್ರೋಲ್‌ಗೂ ಹಣವಿರಲಿಲ್ಲ, ನಾನೇ ಕೊಡುತ್ತಿದ್ದೆ ಎಂದು ಹೇಳಿದ್ದಾರೆ.

ಬೆಂಗಳೂರು (ಫೆ.05): ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಹಿರಿಯ ಚಲನಚಿತ್ರ ನಿರ್ಮಾಪಕ ಹಾಗೂ ವಿತರಕ ಕನಕಪುರ ಶ್ರೀನಿವಾಸ್ ಅವರು ಸ್ಫೋಟಕ ಹೇಳಿಕೆಗಳನ್ನು ನೀಡುವ ಮೂಲಕ ಹೊಸ ವಿವಾದದ ಕಿಡಿ ಹೊತ್ತಿಸಿದ್ದಾರೆ. ಡಿಕೆಶಿ ಅವರ ಹಳೆಯ ದಿನಗಳನ್ನು ಕೆದಕಿರುವ ಶ್ರೀನಿವಾಸ್, 'ಒಂದು ಕಾಲದಲ್ಲಿ ಡಿ.ಕೆ. ಶಿವಕುಮಾರ್ ಅವರ ಬಳಿ ಜಾವಾ ಬೈಕಿಗೆ ಪೆಟ್ರೋಲ್ ಹಾಕಿಸಲೂ ಹಣವಿರಲಿಲ್ಲ. ಆಗ ನಾನೇ ಅವರಿಗೆ ಹಣ ನೀಡಿದ್ದೆ' ಎಂದು ಬಹಿರಂಗಪಡಿಸಿದ್ದಾರೆ.

ನಾನೇ ಒರಿಜಿನಲ್ 'ಕನಕಪುರ ಬಂಡೆ':

ಕಾಟನ್‌ಪೇಟೆ ಸಿನಿಮಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಡಿಕೆಶಿ ಕುಟುಂಬದ ಹಿನ್ನೆಲೆ, ಅವರ ಆರ್ಥಿಕ ಪರಿಸ್ಥಿತಿ ಹಾಗೂ 'ಕನಕಪುರ ಬಂಡೆ' ಎಂಬ ಬಿರುದಿನ ಬಗ್ಗೆಯೂ ಅಚ್ಚರಿಯ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು 'ಕನಕಪುರ ಬಂಡೆ' ಎಂದು ಕರೆಯಲಾಗುತ್ತದೆ. ಆದರೆ, ಈ ಬಿರುದಿನ ಅಸಲಿ ಹಕ್ಕುದಾರ ನಾನೇ ಎಂದು ಶ್ರೀನಿವಾಸ್ ಹೇಳಿಕೊಂಡಿದ್ದಾರೆ. 'ನಾನು 55 ವರ್ಷಗಳಿಂದ ಸಾಹುಕಾರನಾಗಿದ್ದೇನೆ. ಕನಕಪುರದಲ್ಲಿ ಮೊದಲ 'ಬಂಡೆ' ನಾನೇ. ಡಿ.ಕೆ. ಶಿವಕುಮಾರ್ ಎರಡನೇ ಬಂಡೆ. ನನ್ನ ಹೆಸರು ಪ್ರಚಲಿತವಾದ ನಂತರ, ಅವರಿಗೆ ಹಣ ಮತ್ತು ಅಧಿಕಾರ ಬಂದ ಮೇಲೆ ನನ್ನ ಹೆಸರನ್ನು ಅವರು ಬಳಸಿಕೊಂಡು ಬಂಡೆಯಾಗಿದ್ದಾರೆ' ಎಂದು ಶ್ರೀನಿವಾಸ್ ಲೇವಡಿ ಮಾಡಿದ್ದಾರೆ.

ಪೆಟ್ರೋಲ್‌ಗೂ ಕಾಸಿರಲಿಲ್ಲ:

ಡಿಕೆಶಿ ಅವರ ಹಳೆಯ ದಿನಗಳನ್ನು ಮೆಲುಕು ಹಾಕಿದ ಶ್ರೀನಿವಾಸ್, 'ಇವತ್ತು ಅವರು ಡೆಪ್ಯೂಟಿ ಸಿಎಂ ಆಗಿರಬಹುದು. ಆದರೆ, ರಾಜಕೀಯಕ್ಕೆ ಬರುವ ಮುಂಚೆ ಅವರ ಪರಿಸ್ಥಿತಿ ಹೀಗಿರಲಿಲ್ಲ. ಜಾವಾ ಗಾಡಿ ಇಟ್ಟುಕೊಂಡಿದ್ದ ಅವರಿಗೆ ಅದಕ್ಕೆ ಪೆಟ್ರೋಲ್ ಹಾಕಿಸಲು ಕಾಸು ಇರುತ್ತಿರಲಿಲ್ಲ. ಆಗೆಲ್ಲ ನಾನೇ ಅವರಿಗೆ ಸಹಾಯ ಮಾಡಿದ್ದೆ. ನಾನು ಯಾರಿಗೂ ಹೆದರುವುದಿಲ್ಲ, ಧೈರ್ಯವಾಗಿ ಸತ್ಯ ಹೇಳುತ್ತೇನೆ. 'ಶಿವಕುಮಾರ್ ಅವರ ತಂದೆ ಕೆಂಪೇಗೌಡರು ಟೆಂಟ್ ಸಿನಿಮಾ ಇಟ್ಟುಕೊಂಡಿದ್ದರು. ಅವರು ಸಿನಿಮಾ ಹಿನ್ನೆಲೆಯಿಂದಲೇ ಬಂದವರು. ಟೆಂಟ್‌ನಲ್ಲಿ 'ಸೆಕ್ಸ್ ಪಿಕ್ಚರ್'ಗಳನ್ನು (ವಯಸ್ಕರ ಚಿತ್ರ) ಹಾಕುತ್ತಿದ್ದರು. ಇದನ್ನು ನಾನು ಕಣ್ಣಾರೆ ನೋಡಿದ್ದೇನೆ' ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ.

ನಟರಿಗೆ ಬೆದರಿಕೆ ಬಗ್ಗೆ ಆಕ್ರೋಶ:

ಇತ್ತೀಚೆಗೆ ಡಿಸಿಎಂ ಅವರು ಸಿನಿಮಾ ಕಲಾವಿದರ 'ನಟ್ ಬೋಲ್ಟ್ ಟೈಟ್ ಮಾಡುತ್ತೇನೆ' ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಶ್ರೀನಿವಾಸ್, 'ನಟ್ ಬೋಲ್ಟ್ ಟೈಟ್ ಮಾಡ್ತೀನಿ ಅಂದ್ರೆ ಕಾಲನ್ನೇ ಕಟ್ಟಿ ಹಾಕ್ತೀನಿ' ಎಂದರ್ಥ. ಅವರು ಹೀಗೆ ಬೆದರಿಕೆ ಹಾಕಿದಾಗ ನಮ್ಮ ಫಿಲ್ಮ್ ಚೇಂಬರ್‌ನವರು ಏನು ಮಾಡುತ್ತಿದ್ದರು? ಯಾರಿಗೂ ಧೈರ್ಯ ಇರಲಿಲ್ವಾ?' ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಡಿಕೆಶಿ ಅವರ ಭಾವಮೈದನ ಬಗ್ಗೆಯೂ ಪ್ರಸ್ತಾಪಿಸಿದ ಶ್ರೀನಿವಾಸ್, 'ಮೆರವಣಿಗೆ' ಎಂಬ ಸಿನಿಮಾ ಮಾಡಿ ಊರೆಲ್ಲಾ ಸಾಲ ಮಾಡಿಕೊಂಡು ಅವರು ವಾಪಸ್ ಬರಲೇ ಇಲ್ಲ. ಈಗಲೂ ಸಾಲಗಾರರು ಬಂದು ನಿಮ್ಮ ಫ್ರೆಂಡ್ ಎಲ್ಲಿದ್ದಾರೆ ಎಂದು ನನ್ನನ್ನು ಕೇಳುತ್ತಾರೆ' ಎಂದು ವ್ಯಂಗ್ಯವಾಡಿದ್ದಾರೆ.

ರಮೇಶ್ ಭಟ್ ಮನೆ ಖರೀದಿಸಿದ್ದೆ:

ತಮ್ಮ ಸಿರಿವಂತಿಕೆಗೆ ಉದಾಹರಣೆ ನೀಡಿದ ಅವರು, '40 ವರ್ಷಗಳ ಹಿಂದೆಯೇ ಹಿರಿಯ ನಟ ರಮೇಶ್ ಭಟ್ ಅವರು ಕನಕಪುರದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಮನೆ ಕಟ್ಟಿದ್ದರು. ಆ ವೇಳೆ ಅವರಿಗೆ ಅಲ್ಲಿರಲು ಸಾಧ್ಯವಾಗದೆ, ನನಗೆ ಆಫರ್ ನೀಡಿದರು. ಆಗ ನಾನು 14 ಲಕ್ಷ ರೂಪಾಯಿ ಕೊಟ್ಟು ಆ ಮನೆಯನ್ನು ಖರೀದಿಸಿ, ಅವರು ಬೆಂಗಳೂರಿಗೆ ಸೆಟ್ಲ್ ಆಗಲು ಸಹಾಯ ಮಾಡಿದ್ದೆ. ರಮೇಶ್ ಭಟ್ ಈಗಲೂ ನನ್ನ ಫೋಟೋವನ್ನು ಮನೆಯಲ್ಲಿ ಇಟ್ಟುಕೊಂಡಿದ್ದಾರೆ' ಎಂದು ಸ್ಮರಿಸಿದರು.