ಗಾಳಿಪಟ 2 ಚಿತ್ರದ ಕಾಯ್ಕಿಣಿ ಬರೆದ ಹಾಡು ಬಿಡುಗಡೆ ಗಣೇಶ್, ಯೋಗರಾಜ್ ಭಟ್, ಸೋನು ಕಾಂಬಿನೇಷನ್‌ನ ಜಾದೂ
ಗೋಲ್ಡನ್‌ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಕಾಂಬಿನೇಶನ್‌ನ ‘ಗಾಳಿಪಟ 2’ ಚಿತ್ರದ ‘ನಾನಾಡದ ಮಾತೆಲ್ಲವ’ ಹಾಡು ಬಿಡುಗಡೆ ಆಗಿದೆ. ಸಾಹಿತ್ಯ ನೀಡಿರುವುದು ಜಯಂತ್ ಕಾಯ್ಕಿಣಿ. ಹಾಡಿರುವುದು ಸೋನು ನಿಗಮ್. ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ. ಸಂತೋಷ್ ರೈ ಪಾತಾಜೆ ಕ್ಯಾಮೆರಾ ಕಣ್ಣು ಹಾಡಿನ ಅಂದವನ್ನು ಹೆಚ್ಚಿಸಿದರೆ, ಪಂಡಿತ್ ಅವರ ಕಲಾ ನಿರ್ದೇಶನ ಹಾಡಿಗೊಂದು ಅಚ್ಚುಕಟ್ಟಾದ ಬಣ್ಣ ತುಂಬಿದೆ.
ಕುದುರೆಮುಖದ ಹಸಿರು, ನೀರು, ಕಾಡಿನ ಮಧ್ಯೆ ಚಿತ್ರೀಕರಣ ಆಗಿರುವ ಎಲ್ಲರಿಗೂ ಆಪ್ತವಾಗುಂತೆ ಮೂಡಿ ಬಂದಿದೆ. ಜು.2ರಂದು ಗಣೇಶ್ ಹುಟ್ಟು ಹಬ್ಬ. ಈ ಹಿನ್ನೆಲೆಯಲ್ಲಿ ಹಾಡನ್ನು ಪ್ರದರ್ಶನ ಮಾಡುವ ಮೂಲಕ ಅವರ ಹುಟ್ಟುಹಬ್ಬ ಆಚರಿಸಿದೆ ಚಿತ್ರತಂಡ. ಆನಂದ್ ಯೂಟ್ಯೂಬ್‌ನಲ್ಲಿ ಈ ಹಾಡನ್ನು ನೋಡಬಹುದಾಗಿದೆ.
ಭಟ್ರು-ಗಣಿ ಕಾಂಬಿನೇಷನ್‌ನ ಬಹುನಿರೀಕ್ಷಿತ 'ಗಾಳಿಪಟ 2' ಸಿನಿಮಾ ಆಗಸ್ಟ್ನಲ್ಲಿ ಬಿಡುಗಡೆ!
‘ನಾನು ಬರೆಯುವ ಸಾಲುಗಳಿಗೆ ತೆರೆ ಮೇಲೆ ಗಣೇಶ್ ಅದ್ಭುತವಾಗಿ ನ್ಯಾಯ ಒದಗಿಸುತ್ತಾರೆ. ಯೋಗರಾಜ್ ಭಟ್ ಸಿನಿಮಾಗಳಿಗೆ ಹಾಡು ಬರೆಯುವುದು ಎಂದರೆ ಹೊಸ ಉತ್ಸಾಹ ತುಂಬಿಕೊಳ್ಳುತ್ತದೆ’ ಎಂದು ಚಿತ್ರಕ್ಕೆ ಶುಭ ಕೋರಿದ್ದು ಜಯಂತ್ ಕಾಯ್ಕಿಣಿ. ‘ಇದು ನೈಜ ಪ್ರೇಮಿಗಳ ಹಾಡು. ಮನಸ್ಸಿಗೆ ಹಿಡಿಸುವ ಮತ್ತು ಆಪ್ತ ಎನಿಸುವ ತುಂಟತನದ ಹಾಡು ಇದು. ಪ್ರೀತಿ, ಪ್ರಪೋಸ್, ಶೃಂಗಾರ, ಹುಡುಗಿಯ ಅಂದ, ಪ್ರಕೃತಿಯ ಸೌಂದರ್ಯ, ಜಯಂತ್ ಕಾಯ್ಕಿಣಿ ಸಾಹಿತ್ಯ ಇದ್ದರೆ ಯಶಸ್ಸಿಗೆ ಇನ್ನೇನೂ ಬೇಕು ಅನಿಸಲ್ಲ. ನಿರ್ಮಾಪಕ ರಮೇಶ್ ರೆಡ್ಡಿ ಯಾವುದಕ್ಕೂ ಕೊರತೆ ಮಾಡದೆ ಕೇಳಿದ್ದೆಲ್ಲ ಕೊಟ್ಟಿದ್ದಕ್ಕೆ ಈ ಹಾಡು ಇಷ್ಟುಅದ್ದೂರಿಯಾಗಿ ಮೂಡಿ ಬಂದಿದೆ’ ಎಂದರು ಗಣೇಶ್.
![]()
ನಿರ್ದೇಶಕ ಯೋಗರಾಜ್ ಭಟ್ ಹಾಡಿನ ಒಂದೊಂದು ಸಾಲನ್ನೂ ಓದಿ ಅರ್ಥ ಹೇಳಿದರು. ‘ನಮ್ಮ ಚಿತ್ರದಲ್ಲಿ ಇಂಥದ್ದೊಂದು ಹಾಡು ಇರುವುದಕ್ಕೆ ಖುಷಿ ಆಗುತ್ತಿದೆ. ನನ್ನ ನಿರ್ಮಾಣದ ಎಲ್ಲ ಚಿತ್ರಗಳಂತೆ ಈ ಚಿತ್ರವನ್ನೂ ನೀವು ಗೆಲ್ಲಿಸಿ’ ಎಂದು ನಿರ್ಮಾಪಕ ರಮೇಶ್ ರೆಡ್ಡಿ ಹೇಳಿಕೊಂಡರು.
ಆಪ್ತವಾದ ತಂಡವೊಂದು ಮತ್ತೆ ಜೊತೆಗೂಡಿ ಸಿನಿಮಾ ಮಾಡಿದರೆ ಆ ತಂಡದ ಬಾಂಧವ್ಯ ಎಷ್ಟುಮಧುರವಾಗಿರುತ್ತದೆ ಎಂಬುದಕ್ಕೆ ಸಾಕ್ಷಿ ಗಾಳಿಪಟ 2 ತಂಡ. ಯೋಗರಾಜ ಭಟ್ಟರ ಸಿನಿಮಾ ಚಿತ್ರಮಂದಿರಕ್ಕೆ ಬರಲು ತಯಾರಾಗುತ್ತಿದೆ. ಈ ಮಧ್ಯೆ ಎಕ್ಸಾಮ್ ಹಾಡಿನ ಬಿಡುಗಡೆಗೆ ಜೊತೆಯಾಗಿದ್ದ ಗಾಳಿಪಟ 2 ತಂಡದ ಎಲ್ಲರೂ ಆಪ್ತವಾಗಿ, ಮನಸ್ಸು ತಾಕುವ ಹಾಗೆ ಮಾತನಾಡಿದರು.
ಮತ್ತೆ ಗಾಳಿಪಟ ಹಾರಿಸಲು ಸಜ್ಜು ಭಟ್ರ ಹುಡುಗ್ರು! ಈ ಭಾರಿ ಹೇಗಿರುತ್ತೆ ಗಾಳಿಪಟ-2?
ಮನೆಯ ಹಿರಿಯನಂತೆ ಮಾತನಾಡಿದ ಅನಂತ್‌ನಾಗ್, ‘ಯೋಗರಾಜ ಭಟ್ಟರಿಗೆ ಸುಧಾಮೂರ್ತಿ ಗಾಡ್ ಮದರ್ ಇದ್ದಂತೆ. ಅವರೇ ಈ ಸಿನಿಮಾ ಆಗಲು ಕಾರಣಕರ್ತರು. ಈ ಸಿನಿಮಾ ಆಗುವಾಗಲೇ ಭಟ್ರಿಗೆ ಮುಂಗಾರು ಮಳೆ ಸಿನಿಮಾ ಸಂದರ್ಭದಲ್ಲಿ ಕಷ್ಟಪಟ್ಟಂತೆ ಕೆಲಸ ಮಾಡಬೇಕು ಎಂದು ಹೇಳಿದ್ದೆ. ಅವರು ಮನಸ್ಸು ಕೊಟ್ಟು ಕೆಲಸ ಮಾಡಿದರೆ ಯಾವ ಥರ ಸಿನಿಮಾ ಮಾಡಬಹುದು ಅನ್ನುವುದಕ್ಕೆ ಈ ಸಿನಿಮಾ ಪುರಾವೆ. ಅವರಲ್ಲಿ ಕನ್ನಡದ ನಿಷ್ಠೆ ಇದೆ. ನನಗೆ ಒಂದು ಅದ್ಭುತ ಪಾತ್ರ ಇದೆ. ಕನ್ನಡತನ ಉಳಿಸಿಕೊಳ್ಳಬೇಕಾದರೆ ಏನು ಮಾಡಬೇಕು ಎಂದು ತೋರಿಸಿಕೊಟ್ಟಿದ್ದಾರೆ. ಪ್ರಸ್ತುತ ಕಾಲಕ್ಕೆ ಬೇಕಾದ ಅತ್ಯುತ್ತಮ ಸಿನಿಮಾ ಇದು’ ಎಂದರು.

