ಹಿರಿಯ ನಟಿ ಜಯಮಾಲಾ ಅವರು ಸ್ಯಾಂಡಲ್‌ವುಡ್‌ನ ಪ್ರಸ್ತುತ ಸಮಸ್ಯೆಗಳ ಬಗ್ಗೆ ಮಾತನಾಡಿದ್ದು, ಸ್ಟಾರ್‌ಗಳು ಸಂಭಾವನೆ ಕಡಿಮೆ ಮಾಡಬೇಕೆಂಬ ವಾದವನ್ನು ಒಪ್ಪಲಾಗದು ಎಂದಿದ್ದಾರೆ. ನಿರ್ಮಾಪಕರೇ ಹೊಸ ಸ್ಟಾರ್‌ಗಳನ್ನು ಸೃಷ್ಟಿಸಬೇಕು ಮತ್ತು ಬದಲಾದ ಕಾಲಕ್ಕೆ ತಕ್ಕಂತೆ, ಪ್ರೇಕ್ಷಕರನ್ನು ತಲುಪುವಂತಹ ಸಹಜ ಕಥೆಗಳನ್ನು ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಕನ್ನಡಪ್ರಭ’ದ ‘ಸೇವ್‌ ಸ್ಯಾಂಡಲ್‌ವುಡ್‌ ಅಭಿಯಾನ’ವನ್ನು ಗಮನಿಸುತ್ತಿದ್ದೇನೆ. ಸದ್ಯ ಸಂಕಷ್ಟದಲ್ಲಿರುವುದು ಕೇವಲ ಸ್ಯಾಂಡಲ್‌ವುಡ್‌ ಅಷ್ಟೇ ಅಲ್ಲ. ಇಡೀ ಭಾರತೀಯ ಚಿತ್ರರಂಗವೇ ಯಶಸ್ಸಿಗಾಗಿ ಹಪಹಪಿಸುತ್ತಿದೆ. ಸಕ್ಸಸ್‌ ಮರೀಚಿಕೆಯಾಗುತ್ತಿದೆ. ಹೀಗಿರುವಾಗ ಸ್ಯಾಂಡಲ್‌ವುಡ್‌ನ ಸಮಸ್ಯೆಗಳಿಗೆ ಯಾರೋ ಒಬ್ಬರು ಮುಂದಾಳತ್ವ ವಹಿಸಿ ಚಿತ್ರರಂಗವನ್ನು ಉದ್ಧಾರ ಮಾಡುವುದೆಲ್ಲ ಪ್ರಾಕ್ಟಿಕಲ್‌ ಆಗಿ ವರ್ಕೌಟ್‌ ಆಗದ ಮಾತು. ಇಲ್ಲಿರುವ ಪ್ರತಿಯೊಬ್ಬರೂ ವೈಯಕ್ತಿಕ ಲಾಭಕ್ಕಿಂತ ಚಿತ್ರರಂಗದ ಬೆಳವಣಿಗೆಯತ್ತ ಗಮನಕೊಟ್ಟರೆ ಮುಂದೆ ಎಲ್ಲರಿಗೂ ಒಳ್ಳೆಯದಾಗುತ್ತದೆ.

- ಆಗೆಲ್ಲ ಮುಂದಿನ ಬದಲಾವಣೆ ಅಂತ ಥಿಯೇಟರ್‌ಗಳಲ್ಲೇ ಹೊಸ ಸಿನಿಮಾಗಳ ಬಗ್ಗೆ ಮಾಹಿತಿ ಕೊಡಲಾಗುತ್ತಿತ್ತು. ಪೋಸ್ಟರ್‌ಗಳು, ಹೋಲ್ಡಿಂಗ್‌ಗಳಲ್ಲಿ ಪ್ರಚಾರ ನಡೆಯುತ್ತಿತ್ತು. ಈಗ ಪೋಸ್ಟರ್‌ ಹಾಕುವಂತಿಲ್ಲ. ಸೋಷಿಯಲ್‌ ಮೀಡಿಯಾದಂಥಾ ಸಮುದ್ರದಲ್ಲಿ ಕನ್ನಡದ ಸಿನಿಮಾವೊಂದು ರಿಲೀಸ್‌ ಆಗುತ್ತಿದೆ ಎಂಬ ಸುದ್ದಿ ಎಷ್ಟು ಜನರನ್ನು ತಲುಪಬಹುದು. ಒಂದುವೇಳೆ ತಲುಪುತ್ತದೆ ಅಂತಾದರೆ ಜನರು ಯಾಕೆ ಥಿಯೇಟರ್‌ ಕಡೆ ಮುಖ ಮಾಡುತ್ತಿಲ್ಲ.

ಸಂಭಾವನೆ ಕಡಿಮೆ ಮಾಡಬೇಕು?

- ಇದೇ ಅಭಿಯಾನದಲ್ಲಿ ನಿರ್ಮಾಪಕರೊಬ್ಬರು ಸ್ಟಾರ್‌ಗಳು ಶೇ.50ರಷ್ಟು ಸಂಭಾವನೆ ಕಡಿಮೆ ಮಾಡಬೇಕು ಅಂದಿದ್ದರು. ಆ ಮಾತನ್ನು ಒಪ್ಪಲಾಗದು. ಸ್ಟಾರ್‌ ಒಬ್ಬ ಖಾಲಿ ಕೂತಿದ್ದಾಗ ಇವರ್ಯಾರೂ ಅವರಿಗಾಗಿ ಸಿನಿಮಾ ಮಾಡಲ್ಲ. ಈಗ ಇವರಿಗೆ ಕಷ್ಟ ಬಂದಾಗ ಸ್ಟಾರ್‌ಗಳು ಸಂಭಾವನೆ ಇಳಿಸಲೇಬೇಕು ಅಂತ ಪಟ್ಟು ಹಿಡಿಯುವುದು ಸರಿಯಲ್ಲ. ಸ್ಟಾರ್‌ ಮಟ್ಟಕ್ಕೆ ಏರಲು ಅವರು ಬಹಳ ಕಷ್ಟಪಟ್ಟಿರುತ್ತಾರೆ. ಸ್ಟಾರ್‌ಗಳು ವರ್ಷಕ್ಕೆ ಒಂದು ಸಿನಿಮಾ ಮಾಡಲೇ ಬೇಕು ಅಂತಲೂ ಒತ್ತಡ ಹೇರಲಾಗದು. ಏಕೆಂದರೆ ಅವರಿಗೆ ತಮ್ಮ ಸಿನಿಮಾ ಹೀಗೇ ಬರಬೇಕು ಎಂಬ ಸ್ಪಷ್ಟ ಕಲ್ಪನೆ ಇರುತ್ತದೆ. ಅವರ ಡೆಡಿಕೇಶನ್‌ ಅನ್ನು ತಪ್ಪು ಅನ್ನುವುದಕ್ಕಾಗಲ್ಲ.

ನೀವೇ ಸ್ಟಾರ್‌ಗಳನ್ನು ಹುಟ್ಟುಹಾಕಿ

- ನೀವು ಸ್ಟಾರ್‌ ಬಗ್ಗೆ ಇಷ್ಟೆಲ್ಲ ಮಾತನಾಡುವ ಬದಲು ನೀವೇ ಸ್ಟಾರ್‌ಗಳನ್ನು ಹುಟ್ಟುಹಾಕಿ. ಹಿಂದೆ ಪುಟ್ಟಣ್ಣ ಕಣಗಾಲ್‌ ಥರದವರು ಆ ಕೆಲಸ ಮಾಡಿದ್ದಾರೆ. ಈಗಲೂ ಮಾಡಲು ಅವಕಾಶವಿದೆ.

- ಕ್ಯಾರವಾನ್‌ ಬೇಡ ಅನ್ನುವುದಾದರೆ ಸುವ್ಯವಸ್ಥಿತ ವಾಶ್‌ ರೂಂ, ಡ್ರೆಸ್ಸಿಂಗ್‌ ರೂಂ ಇರುವ ಸ್ಟುಡಿಯೋದಲ್ಲಿ ಶೂಟಿಂಗ್‌ ಮಾಡಿ. ಅದರ ಬದಲು ಹೊರಪ್ರದೇಶದಲ್ಲಿ ಶೂಟಿಂಗ್‌ ಇಟ್ಟುಕೊಂಡರೆ ಕಲಾವಿದರು ಹೇಗೆ ಮ್ಯಾನೇಜ್‌ ಮಾಡುತ್ತಾರೆ. ನಮ್ಮ ಕಾಲದಲ್ಲಿ ಜನ ಸಂಭಾವಿತರಾಗಿದ್ದರು. ಈಗ ಎಲ್ಲೆಲ್ಲೂ ಕ್ಯಾಮರಗಳ ಹಾವಳಿ, ವಿಕೃತ ಮನಸ್ಥಿತಿ. ಬದಲಾದ ಕಾಲಕ್ಕೆ ತಕ್ಕಹಾಗೆ ನಾವು ಯೋಚಿಸಬೇಕು.

- ಕಾಂಟ್ರಾಕ್ಟ್‌, ಅಗ್ರಿಮೆಂಟ್‌ ಕಡ್ಡಾಯ. ಅದಿಲ್ಲವಾದರೆ ನಟ, ನಟಿಯರು ಕಾಲ್‌ಶೀಟ್‌ ಕೊಡಲೇ ಹೋಗಬೇಡಿ. 70ರ ದಶಕದಲ್ಲಿ ಇಂಡಸ್ಟ್ರಿಗೆ ಬಂದ ನನ್ನ ಬಳಿ ಪ್ರತಿ ಸಿನಿಮಾದ ಕಾಂಟ್ರಾಕ್ಟ್‌ ಪೇಪರ್‌ ಇವತ್ತಿಗೂ ಇದೆ. ಯಾರೊಬ್ಬ ನಿರ್ಮಾಪಕರಿಂದಲೂ ನನಗೆ ಸಂಭಾವನೆ ವಿಚಾರಕ್ಕೆ ಅನ್ಯಾಯವಾಗಿಲ್ಲ.

- ಪ್ರೇಕ್ಷಕರ ಬದಲಾದ ಅಭಿರುಚಿಯನ್ನು ಅರಿಯುವ ನಿಟ್ಟಿನಲ್ಲಿ ಸರ್ವೆ ಕೆಲಸ ನಡೆಯಬೇಕು. ನಿರ್ದೇಶನ ಮಾಡುವವರು ಆದಷ್ಟು ಸಹಜತೆಗೆ ಹತ್ತಿರವಾದ ಸಿನಿಮಾಗಳನ್ನು ಮಾಡಬೇಕು. ಕಥೆ ಪ್ರೇಕ್ಷಕನಿಗೆ ಕನೆಕ್ಟ್‌ ಆಗಬೇಕು. ಅಲ್ಲೊಂದು ಹೊಸತನ ಬೇಕು, ತಾಜಾತನ ಇರಬೇಕು, ಸಾಕಷ್ಟು ಹೋಂವರ್ಕ್‌ ಮಾಡದಿದ್ದರೆ ಸಿನಿಮಾ ವರ್ಕೌಟ್‌ ಆಗುವುದು ಕಷ್ಟ ಇದೆ. ಶೂಟಿಂಗ್‌ ತಡವಾಗುತ್ತಿದೆ ಎಂದರೆ ನಿರ್ದೇಶಕರೂ ಕಾರಣ. ಅವರು ವ್ಯವಸ್ಥಿತವಾಗಿ ಶೂಟಿಂಗ್‌ ಪ್ಲಾನ್‌ ಮಾಡಿ, ಪ್ರತಿಯೊಂದರಲ್ಲೂ ಸ್ಪಷ್ಟತೆ ತಂದುಕೊಂಡರೆ ಈ ಸಮಸ್ಯೆ ಇರುವುದಿಲ್ಲ.

- ಇಂಥಾ ತಲ್ಲಣಗಳ ಬಳಿಕ ಸ್ಯಾಂಡಲ್‌ವುಡ್‌ಗೆ ಒಳ್ಳೆಯ ದಿನಗಳು ಬಂದೇ ಬರುತ್ತವೆ. ನಾವು ಗತಿಸಬಹುದು, ಚಿತ್ರರಂಗ ಗತಿಸುವುದಿಲ್ಲ. ಅದರ ಹರಿವಿನಲ್ಲಿ ಕೊಂಚ ವ್ಯತ್ಯಾಸ ಇರಬಹುದು, ಆದರೆ ಹರಿವು ನಿಂತುಹೋಗಲಾರದು, ಖಂಡಿತಾ.